“ರಜನಿಯ ಮನೆಯಿಂದ ರವಿ ಬಂದ”~ರಾರಾ.

ಗೈರಿಕೆ ಕೊಳದಲಿ ಮುಳುಮುಳುಗೇಳುವ
ಕೆಂಪನೆ ಮೋರೆಯ ಚೆಲುರಾಯ/
ನಿದ್ದೆಯ ನಿಮಿಷವ ಅರೆಬರೆ ತೆರೆಸುವ
ಹೊಳೆಯುವ ಹೇಮದ ಸಿರಿಕಾಯ//1//

ಪಂಚಮ ಸರದಲಿ ಮರ ಮರ ಮರೆಯಲಿ
ಕಿರಣದ ಜಾಲವ ಬೀಸಿರುವ/
ಜಾರಿದ ನಿಶೆಯಲಿ ಹೊರಳುವ ಲತೆಯಲಿ
ಹೂವಿನ ಕಣ್ಣನು ತೆರೆಸಿರುವ//2//

ಮೌನದ ಮನೆಯ ರಜನಿಯ ಮಡಿಲಲಿ
ಚರಣವ ಚಾಚಿ ಮಲಗಿರುವ/
ನೀರವ ರಾಗದ ತಿಳಿವಿನ ತೊರೆಯಲಿ
ಕಚಗುಳಿ ಖೇಳಿಯ ಆಡಿರುವ//3//

ಹನಿ ಹನಿ ಇಬ್ಬನಿ ಮುತ್ತಿನ ಮಣಿಯಲಿ
ರಮಣಿಯ ಮನವನು ಕದ್ದಿರುವ/
ಮೋಹಕ ಇರುಳಿನ ಕೋಮಲ ತನುವಲಿ
ಬೆವರಿನ ಮಾಲೆಯ ಕಟ್ಟಿರುವ//4//

ಘಣ ಘಣ ಘಂಟೆಯ ಪ್ರಣವದ ನಾದಕೆ
ಮೆತ್ತನೆ ಹಾಸಿಗೆ ಬಿಟ್ಟಿರುವ/
ಜಾರನ ತೆರದಲಿ ವಂಚಿಸಿ ಮುಗುದೆಗೆ
ಕದವನು ತೆರೆದು ಬಂದಿರುವ//5//

 
 
 
 
 
 
 
 
 
 
 

Leave a Reply