ಭಾರತದ ಹೆಮ್ಮೆಯ ಸಿನೆಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಈ ವಾರಾಂತ್ಯ ಉಡುಪಿಗೆ.

ಭಾರತೀಯ ಸಿನಿಮಾರಂಗದ ದಂತಕತೆಗಳಾದ ಸತ್ಯಜಿತ್ ರೇ ಮತ್ತು ಮೃಣಾಲ್ ಸೇನ್ ಮೊದಲಾದವರ ಜೊತೆಗೆ ಹೋಲಿಸಲು ಸಾಧ್ಯವಾಗುವ ಒಬ್ಬರೇ ಒಬ್ಬ ಕನ್ನಡದ ಸಿನೆಮಾ ನಿರ್ದೇಶಕ ಎಂದರೆ ಅದು ಗಿರೀಶ್ ಕಾಸರವಳ್ಳಿ ಅನ್ನುವುದರಲ್ಲಿ ಎರಡನೇ ಮಾತಿಲ್ಲ!

ತನ್ನ 30 ವರ್ಷಗಳ ಸುದೀರ್ಘವಾದ ಸಿನೆಮಾ ಜೀವನದಲ್ಲಿ ಈಗಾಗಲೆ 14 ಹೊಳೆಯುವ ರಾಷ್ಟ್ರ ಪ್ರಶಸ್ತಿಗಳು ಅವರ ಕಿರೀಟಕ್ಕೆ ಸೇರ್ಪಡೆಯಾಗಿವೆ ಎಂದರೆ ಅವರು ನಿಜವಾಗಿ  ಗ್ರೇಟ್ ! ಸತ್ಯಜಿತ್ ರೇ ಅವರನ್ನು ಹೊರತುಪಡಿಸಿದರೆ( 6 ಸ್ವರ್ಣ ಕಮಲ ಪ್ರಶಸ್ತಿ) ಇಡೀ ಭಾರತ ಸಿನೆಮಾರಂಗದಲ್ಲಿ  ಗಿರೀಶ್ ಕಾಸರವಳ್ಳಿ ಅವರದ್ದೇ ದೊಡ್ಡ ಪ್ರಾಪ್ತಿ( 4 ಸ್ವರ್ಣ ಕಮಲ)! ಅವರು ಕನ್ನಡಿಗ ಅನ್ನುವುದೇ ನಮಗೆಲ್ಲಾ ಒಂದು ಹೆಮ್ಮೆ! ಒಂದು ರೋಮಾಂಚನ!

ಗಿರೀಶ್ ಕಾಸರವಳ್ಳಿ ಹುಟ್ಟಿದ್ದು ನಮ್ಮ ನೆರೆಯ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೆಸಲೂರು ಎಂಬ ಸಣ್ಣ  ಗ್ರಾಮದಲ್ಲಿ. ಅವರ ತಂದೆ ಮೂಲತಃ ಕೃಷಿಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರು. ಅದರ ಜೊತೆಗೆ ಹವ್ಯಾಸೀ ಯಕ್ಷಗಾನ ಕಲಾವಿದರು. ತಾಯಿ ಲಕ್ಷ್ಮೀದೇವಿ ಮಗನಲ್ಲಿ ಓದುವ ಅಭ್ಯಾಸವನ್ನು ಬೆಳೆಸಿದವರು. ನೀನಾಸಂ ಸ್ಥಾಪಕ ಕೆ ವಿ ಸುಬ್ಬಣ್ಣ ಅವರು ಗಿರೀಶರ ಸೋದರ ಮಾವ.

ತನ್ನ ಹಳ್ಳಿಯ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದುತ್ತಾ, ಟೂರಿಂಗ್ ಟಾಕೀಸಲ್ಲಿ ಸಿನೆಮಾ ನೋಡುತ್ತಾ, ಕುವೆಂಪು, ಕಾರಂತರ ಕಾದಂಬರಿಗಳನ್ನು ಓದುತ್ತಾ ಬೆಳೆದವರು ಗಿರೀಶ್  ಅವರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ನಂತರ ಅವರು ಫಾರ್ಮಸಿ ಪದವಿ  ಪಡೆದದ್ದು ಮಣಿಪಾಲದಲ್ಲಿ.

ಅದೇ ಹೊತ್ತಿಗೆ ಸಿನೆಮಾ, ನಾಟಕ ರಂಗದಲ್ಲಿ ಆಸಕ್ತಿಯು ಹೆಚ್ಚಾದ ಕಾರಣ ದೊರೆತ ಉದ್ಯೋಗಗಳನ್ನು ನಿರಾಕರಿಸಿ  ಅವರು ಸಿನೆಮಾ ನಿರ್ದೇಶಕ ಆಗುವ ಕನಸು ಕಟ್ಟಿಕೊಂಡು ಪೂನಾ ಫಿಲ್ಮ್ ಇನ್ಸಟಿಟ್ಯುಟ್ ಸೇರಿದರು.

ಆಗ ವಿದೇಶದ, ಅದರಲ್ಲಿಯೂ ರಷ್ಯಾದ ವೃತ್ತಿಪರ ಸಿನೆಮಾ  ನಿರ್ದೇಶಕರಿಂದ ಭಾರೀ ಪ್ರಭಾವಿತರಾದರು. ಆಗ ಅವರು ನಿರ್ದೇಶನ ಮಾಡಿದ ಒಂದು ಶಾರ್ಟ್ ಫಿಲ್ಮ್ ರಾಷ್ಟ್ರಪತಿಗಳ ಪದಕವನ್ನು ಪಡೆಯಿತು. ಪೂನಾ ಫಿಲ್ಮ್ ಸಂಸ್ಥೆಯಿಂದ ಚಿನ್ನದ ಪದಕವನ್ನು ಪಡೆದು ಅವರು ಹೊರಬಂದರು. ಅದೇ ಸಂದರ್ಭದಲ್ಲಿ ಬಿ. ವಿ.ಕಾರಂತರ ಚೋಮನ ದುಡಿ ಮತ್ತು ನಾಗಾಭರಣ ಅವರ ಗ್ರಹಣ ಮೊದಲಾದ ಪ್ರಶಸ್ತಿ ಪಡೆದ ಸಿನೆಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಅವರು ಅನುಭವ ಪಡೆದರು.

1977ರಲ್ಲಿ ಅವರು ತಮ್ಮ ಚೊಚ್ಚಲ ಚಿತ್ರವನ್ನು ನಿರ್ದೇಶನ ಮಾಡಿದರು. ಅದು ತೀರಾ ಸಂಕೀರ್ಣ ಕಥೆಯುಳ್ಳ ಸಿನೆಮಾ. ಹೆಸರು ಘಟಶ್ರಾದ್ಧ. ಅದಕ್ಕೆ ಅತ್ಯುತ್ತಮ ಫೀಚರ್ ಫಿಲ್ಮ್ ರಾಷ್ಟ್ರ ಪ್ರಶಸ್ತಿ (ಸ್ವರ್ಣ ಕಮಲ)ಯು ಒಲಿಯಿತು.

ಸ್ವರ್ಣಕಮಲ ಪ್ರಶಸ್ತಿಯನ್ನು ಗೆದ್ದ ಅತೀ ಕಿರಿಯ ವಯಸ್ಸಿನ ನಿರ್ದೇಶಕ ಎಂಬ ಕೀರ್ತಿ ಅವರಿಗೆ ದೊರೆಯಿತು. ಆಗ ಅವರಿಗೆ ಕೇವಲ 27 ವರ್ಷ! ಮುಂದೆ ಪೂರ್ಣಚಂದ್ರ ತೇಜಸ್ವಿ ಬರೆದ ಒಂದು ಸಣ್ಣ ಕತೆ ಆಧರಿಸಿ ತಬರನ ಕತೆ (1987) ಸಿನೆಮಾವನ್ನು ನಿರ್ದೇಶನ ಮಾಡಿದರು. ಒಬ್ಬ ನಿವೃತ್ತ ಸರಕಾರಿ ನೌಕರ ತನ್ನ ಪಿಂಚಣಿ ಪಡೆಯಲು ಕಚೇರಿಯಿಂದ ಕಚೇರಿಗೆ ಅಡ್ಡಾಡುವ ಅತ್ಯಂತ ಕರುಣಾಜನಕ ಕತೆ ಹೊತ್ತ ಸಿನೆಮಾ ಅದು.

ಚಾರುಹಾಸನ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ  ಜೊತೆಗೆ ಕಾಸರವಳ್ಳಿ ಅವರಿಗೆ ಎರಡನೆಯ ಸ್ವರ್ಣ ಕಮಲ ಪ್ರಶಸ್ತಿಯು ಈ ಸಿನೆಮಾ ಮೂಲಕ ದೊರೆಯಿತು. 1998ರಲ್ಲಿ ಜಯಮಾಲ ನಿರ್ಮಿಸಿದ ‘ ತಾಯಿ ಸಾಹೇಬ’  ಅವರಿಗೆ ಮೂರನೇ ಸ್ವರ್ಣ ಕಮಲ ಪ್ರಶಸ್ತಿ ತಂದುಕೊಟ್ಟರೆ, 2002ರಲ್ಲೀ ಸೌಂದರ್ಯ ನಿರ್ಮಾಣ ಮಾಡಿದ ‘ ದ್ವೀಪ ‘ ಸಿನೆಮಾ ಅವರಿಗೆ ನಾಲ್ಕನೇ ಸ್ವರ್ಣಕಮಲ ಪ್ರಶಸ್ತಿ ತಂದು ಕೊಟ್ಟಿತು.

ಭಾರತೀಯ ಸಿನಿಮಾ ರಂಗದಲ್ಲಿ ನಾಲ್ಕು ಸ್ವರ್ಣಕಮಲ ಪ್ರಶಸ್ತಿಗಳನ್ನು ಗೆದ್ದ ಇಬ್ಬರು ನಿರ್ದೇಶಕರು ಮಾತ್ರ ಇದ್ದಾರೆ. ಒಬ್ಬರು ಬೆಂಗಾಲಿ ಮೃಣಾಲ್ ಸೇನ್ ಆದರೆ ಇನ್ನೊಬ್ಬರು ಕನ್ನಡದ ಗಿರೀಶ್ ಕಾಸರವಳ್ಳಿ!

ಅದರ ಜೊತೆಗೆ ಅವರ ಎರಡು ಸಿನೆಮಾಗಳು ‘ಕನಸೆಂಬ ಕುದುರೆಯನೇರಿ’ ( 2010) ಮತ್ತು ‘ಕೂರ್ಮಾವತಾರ ( 2012) ರಜತ ಕಮಲ ಪ್ರಶಸ್ತಿಗಳನ್ನು ಗೆದ್ದಿವೆ. ಮೂರು ದಶಕಗಳ ಅವಧಿಯಲ್ಲಿ 14 ರಾಷ್ಟ್ರಪ್ರಶಸ್ತಿಗಳನ್ನು  ಪಡೆದ ಇನ್ನೊಬ್ಬ ಸಿನೆಮಾ ನಿರ್ದೇಶಕ ಖಂಡಿತವಾಗಿ ಭಾರತದಲ್ಲಿ ಇಲ್ಲ ಅನ್ನುವುದು ಅವರ ಹೆಗ್ಗಳಿಕೆ! ಮತ್ತು ಅವರು ಒಬ್ಬ ಕನ್ನಡಿಗ ಅನ್ನುವಾಗ ಮತ್ತೆ ನಮ್ಮ ಎದೆ ಉಬ್ಬುತ್ತದೆ!

ಆಕ್ರಮಣ( 1979), ಮೂರು ದಾರಿಗಳು( 1981), ಬಣ್ಣದ ವೇಷ ( 1988) ಮನೆ ( 1990) ಕ್ರೌರ್ಯ ( 1992), ಹಸೀನಾ ( 2005) ನಾಯಿ ನೆರಳು( 2006) ಗುಲಾಬಿ ಟಾಕೀಸ್ ( 2008)…..ಹೀಗೆ ಸಾಗುತ್ತದೆ ಅವರ ಯಶಸ್ವೀ ಸಿನೆಮಾಗಳ ಮೆರವಣಿಗೆ.  

ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ( 2020) ಕಾಸರವಳ್ಳಿ ಅವರು ಇತ್ತೀಚೆಗೆ ನಿರ್ದೇಶನ ಮಾಡಿದ ಸಿನೆಮಾ.

ಕಾಸರವಳ್ಳಿ ಸಿನೆಮಾಗಳ ವಿಶೇಷತೆ ಎಂದರೆ ತುಂಬಾನೆ ಗಟ್ಟಿಯಾದ ಚಿತ್ರಕತೆ ಮತ್ತು ವಿಭಿನ್ನವಾದ ನಿರೂಪಣೆ. ಸಿನೆಮಾ ಭಾಷೆ ಅವರಿಗೆ ತುಂಬಾ ಗಟ್ಟಿಯಾಗಿ ಕರಗತ ಆಗಿರುವ ಕಾರಣ ಅವರು ತುಂಬಾ ನವಿರಾಗಿ ಕಥೆಯನ್ನು ನಮಗೆ ಒಪ್ಪಿಸುತ್ತಾರೆ ಮತ್ತು ಪಾತ್ರಗಳನ್ನು ಮನಸಲ್ಲಿ ಗಟ್ಟಿ ಕಡೆದು ನಿಲ್ಲಿಸುತ್ತಾರೆ. ಹಲವು ವರ್ಷಗಳ ಧ್ಯಾನಮಗ್ನವಾಗಿ ಕುಳಿತು ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆಯುವ ಕಾರಣ ಅವರ ಸಿನೆಮಾಗಳು ಬೇರೆಯವರಿಗಿಂತ ಭಿನ್ನವಾಗಿ ನಿಲ್ಲುತ್ತವೆ.

ಎಸ್. ಎಲ್. ಭೈರಪ್ಪ ಅವರ ಕತೆಯನ್ನು ಆಧರಿಸಿ ಅವರು ನಿರ್ದೇಶನ ಮಾಡಿದ ‘ನಾಯಿ ನೆರಳು’ ಕನ್ನಡದ ಅತ್ಯುತ್ತಮ ಪ್ರಯೋಗಾತ್ಮಕ ಸಿನೆಮಾ ಎಂದು ಕರೆದುಕೊಂಡಿದೆ. ಅವರ ಸಿನೆಮಾಗಳಲ್ಲಿ ಅಮೂರ್ತ ಕಲ್ಪನೆಗಳು ಹೆಚ್ಚಿಲ್ಲದೆ ಮೂರ್ತ ಮತ್ತು ವಾಸ್ತವದ ನೆಲೆಗಟ್ಟು ಇರುವುದು ಕಾಸರವಳ್ಳಿ ಅವರ ಹೆಚ್ಚುಗಾರಿಕೆ.

ಅತ್ಯಂತ ಪ್ರಬಲವಾದ ಸ್ತ್ರೀ ಪಾತ್ರಗಳು ಅವರ ಸಿನೆಮಾಗಳ ಇನ್ನೊಂದು ಅನನ್ಯತೆ. ತಾಯಿ ಸಾಹೇಬದ ಜಯಮಾಲ ಅವರ ಪಾತ್ರ, ಹಸೀನಾ ಸಿನೆಮಾದ ತಾರಾ ಅಭಿನಯಿಸಿದ ಪಾತ್ರ, ದ್ವೀಪ ಸಿನೆಮಾದಲ್ಲಿ ಭಾರಿ ಮಿಂಚಿದ ಸೌಂದರ್ಯ ಅಭಿನಯದ ಪಾತ್ರ ಇವೆಲ್ಲವೂ ನಿಜವಾದ ಮಾಸ್ಟರಪೀಸ್ ಪಾತ್ರಗಳು. ವೈದೇಹಿ ಕಾದಂಬರಿ ಆಧಾರಿತವಾದ ಗುಲಾಬಿ ಟಾಕೀಸ್ ಸಿನೆಮಾದ ಉಮಾಶ್ರೀ ಅವರ ಪಾತ್ರವನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ!

ಅವರ ಪತ್ನಿ ವೈಶಾಲಿ ಕಾಸರವಳ್ಳಿ ಕೂಡ ಅದ್ಭುತವಾದ ನಟಿ ಮತ್ತು ನಿರ್ದೇಶಕಿ. ಮಕ್ಕಳಾದ ಅನನ್ಯ ಮತ್ತು ಅಪೂರ್ವ ಇಬ್ಬರೂ ಸಿನೆಮಾ ರಂಗದಲ್ಲಿ ಈಗಾಗಲೇ ಹೆಜ್ಜೆ ಗುರುತು ಮೂಡಿಸಿದ್ದಾರೆ.

ಅಂತಹ ಗಿರೀಶ್ ಕಾಸರವಳ್ಳಿ ಅವರು ಈ ರವಿವಾರದಂದು ಉಡುಪಿಗೆ ಆಗಮಿಸಲಿದ್ದಾರೆ (ಜನವರಿ 31). ಅಂದು ಸಂಜೆ ಎಂ. ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಅವರಿಗೆ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾಪನಾ ಸಂಸ್ತೆ( ರಿ)ಯ  ವತಿಯಿಂದ ‘ವಿಶ್ವಪ್ರಭಾ’ ಪ್ರಶಸ್ತಿಯೊಂದಿಗೆ ಗೌರವದ ಸನ್ಮಾನ.

ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾಪನಾ ಸಂಸ್ಥೆಯ ಸ್ಥಾಪಕರು ಮತ್ತು ಗೌರವ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಶೆಣೈ ಅವರ ಕೊಡುಗೆಯಾಗಿ ಒಂದು ಲಕ್ಷ ರೂ. ಗೌರವಧನ. ಆ ದಿನ ಗಿರೀಶ್ ಕಾಸರವಳ್ಳಿ ಅವರನ್ನು ಭೇಟಿ ಆಗುವುದೇ ನಮ್ಮ ಪಾಲಿನ ಸುಯೋಗ!

ಕನ್ನಡ ಸಿನೆಮಾದ ಲೆಜೆಂಡ್ ನಿರ್ದೇಶಕರಿಗೆ ಉಡುಪಿಗೆ ಸ್ವಾಗತ ಮತ್ತು ಇದಕ್ಕೆ ಕಾರಣರಾದ ಹಿರಿಯರಾದ ವಿಶ್ವನಾಥ ಶೆಣೈ ಅವರಿಗೆ ಕೂಡ ಧನ್ಯವಾದಗಳು.

 

 
 
 
 
 
 
 
 
 
 
 

Leave a Reply