ಪ್ರಥಮ ಏಕಾದಶಿ ವ್ರತದ ಸುತ್ತ ಒಂದು‌ ಪುಟ್ಟ ಸುತ್ತು~ ಪೂರ್ಣಿಮಾ ಜನಾರ್ದನ್ ಕೊಡವೂರು

ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವಾದ ಇಂದು ಸರ್ವ ಪಾಪವನ್ನು ಪರಿಹರಿಸುವ ಪ್ರಥಮ ಏಕಾದಶಿಯ ವ್ರತವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವು ಪ್ರಥಮ ಏಕಾದಶಿ, ಶಯನೀ ಏಕಾದಶಿ, ದೇವ ಶಯನೀ ಏಕಾದಶಿ, ಪದ್ಮಾ ಏಕಾದಶಿ ಎಂದೂ‌ ಕೂಡಾ ಪ್ರಸಿದ್ಧವಾಗಿದೆ.

ಹಿಂದೂ ಪಂಚಾಂಗದಲ್ಲಿ ದಿನಗಳನ್ನು ತಿಥಿಗಳೆಂದು ಕರೆಯುತ್ತಾರೆ .ತಿಥಿ ಎಂದರೆ ಚಂದ್ರನು ಭೂಮಿ ಯನ್ನು ಸುತ್ತಲು ತೆಗೆದುಕೊಳ್ಳುವ ಅವಧಿ. ತಿಂಗಳಲ್ಲಿ ಮೂವತ್ತು ತಿಥಿಗಳು ಇದ್ದು ಶುಕ್ಲ ಪಕ್ಷದಲ್ಲಿ ಹದಿನೈದು ತಿಥಿಗಳು ಹಾಗೂ ಕೃಷ್ಣಪಕ್ಷದಲ್ಲಿ ಹದಿನೈದು ತಿಥಿಗಳನ್ನು ಗುರುತಿಸಲಾಗುತ್ತದೆ.

ಪ್ರತಿಯೊಂದು ಶುಕ್ಲ ಪಕ್ಷ ಹಾಗೂ ಕೃಷ್ಣಪಕ್ಷದ ಹನ್ನೊಂದನೆಯ ತಿಥಿಯನ್ನು ಅಥವಾ ದಿನವನ್ನು ಏಕಾದಶಿ ಎಂದು ಕರೆಯಲಾಗುವುದು. ಸಂಸ್ಕೃತದಲ್ಲಿ ಏಕಾದಶ ಎಂದರೆ ಹನ್ನೊಂದು. ಒಂದು ಮಾಸದಲ್ಲಿ ಅಂದರೆ ಒಂದು ತಿಂಗಳಲ್ಲಿ ಶುಕ್ಲ ಪಕ್ಷದಲ್ಲೊಂದು ಹಾಗೂ ಕೃಷ್ಣಪಕ್ಷದಲ್ಲೊಂದು ಹೀಗೆ ಎರಡು ಏಕಾದಶಿ ತಿಥಿ ಬರುತ್ತದೆ. ಒಂದು ವರ್ಷಕ್ಕೆ ಈ ರೀತಿ ಒಟ್ಟು ಇಪ್ಪತ್ತನಾಲ್ಕು ಏಕಾದಶಿಗಳಿದ್ದು ಏಕಾದಶಿ ಎಂಬುದು ಒಂದು ವ್ರತವಾಗಿದ್ದು ಏಕಾದಶಿ ದಿನವನ್ನು ಹರಿದಿನ ಅಂದರೆ ಭಗವಂತ ಶ್ರೀಹರಿಗೆ ಪ್ರಿಯವಾದ ದಿನವೆಂದು ಪರಿಗಣಿಸಲಾಗುವುದು. ಆ ದಿನ ಉಪವಾಸ ಮಾಡುವುದು ಶ್ರೇಷ್ಠ.

ಉಪವಾಸ ಎಂದರೆ ಕೇವಲ ಆಹಾರ ತ್ಯಜಿಸುವುದು ಎಂದರ್ಥವಲ್ಲ. ಉಪ ಎಂದರೆ ಹತ್ತಿರ, ವಾಸ ಅಂದರೆ ಇರುವುದು ಎಂಬ ಅರ್ಥದಲ್ಲಿ ಪರಮಾತ್ಮನ ಹತ್ತಿರದಲ್ಲಿ ಇದ್ದುಕೊಂಡು ಅವನ ಉಪಾಸನೆಗೆ ಶ್ರೇಷ್ಠವಾದ ದಿನ ಹರಿದಿನ ಅಂದರೆ ಏಕಾದಶಿ ಎಂದು ಪ್ರಚಲಿತವಾಗಿದೆ. ಆಹಾರವನ್ನು ತ್ಯಜಿಸಿ ದೇಹದ ಸ್ವಾಸ್ಥ್ಯದೊಂದಿಗೆ ಭಗವಂತನ ಆರಾಧನೆಯಿಂದ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಧರ್ಮ ಸಾಧನೆ ಮಾಡಲು ಏಕಾದಶಿ ದಿನ ಬಲು ಪ್ರಶಸ್ತವಾಗಿದೆ. 

ಒಳಗಿನಿಂದ ಭಗವಂತನ ಆರಾಧನೆ ಮಾಡುತ್ತಾ ಅವನ ಸಾನಿಧ್ಯದ ಕಲ್ಪನೆ ಯೊಂದಿಗೆ ದೇಹದ ಹೊರಗಿನಿಂದ ಆಹಾರದ ವರ್ಜನೆ ಇವೆಲ್ಲವೂ ಉಪವಾಸ ಎಂಬ ಅನ್ವರ್ಥ ಪದಕ್ಕೆ ಸಾಮೀಪ್ಯದಲ್ಲಿದೆ . ದೇಹಕ್ಕೆ ಆಹಾರ ತ್ಯಾಗ ಮಾಡಿ ಮನಸ್ಸಿಗೆ ಹೆಚ್ಚು ಆಹಾರ ನೀಡಲು ಏಕಾದಶಿ ದಿನವು ಸೂಕ್ತವಾಗಿದೆ.

ಪದ್ಮಾ ಪುರಾಣದ ಪ್ರಕಾರ ಏಕಾದಶಿ ಉಪವಾಸದ ಆಚರಣೆಯಿಂದ ನೂರಾರು ಜನ್ಮಾಂತರಗಳ ಪಾಪವೆಂಬ ಸೌದೆ ಭಸ್ಮವಾಗಿ ಬಿಡುತ್ತದೆ. ಗರುಡ ಪುರಾಣದ ಪ್ರಕಾರ ಪ್ರಥ್ವಿಯ ದಾನದ ಫಲ ಹಾಗೂ ಏಕಾದಶಿಯ ಫಲವನ್ನು ತುಲನೆ ಮಾಡಿದಾಗ ಏಕಾದಶಿಯ ಫಲವೇ ಹೆಚ್ಚು ಪುಣ್ಯಕರ ಎಂದು ಉಲ್ಲೇಖವಿದೆ. ವಸಿಷ್ಠ ಮಹರ್ಷಿಗಳ ಪ್ರಕಾರ ಹನ್ನೊಂದು ಇಂದ್ರಿಯಗಳಿಂದ (ಐದು ಜ್ಞಾನೇಂದ್ರಿಯಗಳು , ಐದು ಕರ್ಮೇಂದ್ರಿಯಗಳು ಒಂದು ಉಭಯೇಂದ್ರಿಯ) ಉಂಟಾದ ಸಕಲ ಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ.

ಆತ್ಮದ ಶುದ್ಧೀಕರಣ ಹಾಗೂ ಮೋಕ್ಷಕ್ಕೆ ಕಾರಣವಾದ ಅತ್ಯಂತ ಪವಿತ್ರ ಶ್ರೇಷ್ಠ ವೃತ ಇದಾಗಿದೆ. ವಿಷ್ಣು ಭಕ್ತ ರಾಜಾ ಅಂಬರೀಷನ ಏಕಾದಶಿ ವೃತಾಚರಣೆಯ ಮಹತ್ವವನ್ನು ಶುಕ್ರಾಚಾರ್ಯರು ಭಾಗವತದಲ್ಲಿ ಸವಿವರಾಗಿ ವಿವರಿಸಿದ್ದಾರೆ. ವೈಜ್ಞಾನಿಕವಾಗಿಯೂ ಏಕಾದಶಿಯ ಉಪವಾಸದ ಮಹತ್ವ ದೃಢೀಕರಿ ಸಲ್ಪಟ್ಟಿದೆ.

ಹದಿನೈದು ದಿನಗಳಿಗೊಮ್ಮೆ ಉಪವಾಸ ಮಾಡುವುದರಿಂದ ನಮ್ಮ ದೇಹದಲ್ಲಿರುವ ರೂಪಾಂತರ ಗೊಂಡಿರುವ ಜೀವಕೋಶಗಳನ್ನು ನಾಶಪಡಿಸಿ ರೋಗಗಳನ್ನು ತಪ್ಪಿಸಬಹುದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ .ಉಪವಾಸ ಮಾಡಿದಾಗ ದೇಹದಲ್ಲಿರುವ ಅನುಪಯುಕ್ತವಾದಂಹ ಪ್ರೋಟೀನ್ಗಳು ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಗಳನ್ನು ನಮ್ಮ ಮೆದುಳು ಮರುಬಳಕೆ ಮಾಡಿ ಹೊಸ ಜೀವಕೋಶಗಳನ್ನು ಸೃಷ್ಟಿ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆ. ಪ್ರತಿಯೊಬ್ಬರೂ ಜಾತಿ ಜಾತಿ ಮತ ಪಂಥದ ಭೇದವಿಲ್ಲದೆ ಈ ವೃತ್ತಾಚರಣೆಯನ್ನು ಮಾಡಿ ಭಗವಂತನ ಕೃಪೆಗೆ ಪಾತ್ರರಾಗಬಹುದು.

ಏಕಾದಶಿ ದಿನದಂದು ಅನ್ನದಲ್ಲಿ ಪಾಪ ಪುರುಷನ ವಾಸವಿರುವುದರಿಂದ ಆ ದಿನದಂದು ಅನ್ನವನ್ನು ತ್ಯಜಿಸುವುದರಿಂದ ಪಾಪ ಪುರುಷನ ಪ್ರಭಾವದಿಂದ ಹೊರ ಬರಬಹುದು ಎಂದು ನಂಬಲಾಗುತ್ತದೆ. ಏಕಾದಶಿಯ ಮುಂಚಿನ ದಿನವಾದ ದಶಮಿಯ ದಿನದಂದು ಒಂದು ಹೊತ್ತಿನ ಆಹಾರ ಅಂತೆಯೇ ಏಕಾದಶಿಯ ದಿನ ಸಂಪೂರ್ಣ ನಿರಾಹಾರ ಹಾಗೂ ದ್ವಾದಶಿ ತಿಥಿಯಂದು ಪ್ರಾತಃಕಾಲ ಪಾರಣೆ ಭೋಜನ ಇವೆಲ್ಲ ಆಚರಣೆಗಳಿಂದಾಗಿ ದಶಮಿ, ಏಕಾದಶಿ ಹಾಗು ದ್ವಾದಶಿ ತಿಥಿಗಳನ್ನು ಹರಿದಿನ ಎಂದು ಕರೆಯಲಾಗುತ್ತದೆ.

ಇಂದು ಪ್ರಥಮ ಏಕಾದಶಿಯ ದಿನಭ ಗವಂತ ಮಹಾವಿಷ್ಣು ಈ ದಿನದಿಂದ ನಾಲ್ಕು ಮಾಸಗಳ ಪರ್ಯಂತ ಶಯನಾವಸ್ಥೆಯಲ್ಲಿ ಇರುವುದರಿಂದ ಈ ಏಕಾದಶಿಯು ಶಯನಿ ಏಕಾದಶಿ ,ದೇವಶಯನಿ ಏಕಾದಶಿ ಎಂದು ಪ್ರಸಿದ್ಧವಾಗಿದೆ.

ಈ ದಿನದಿಂದ ನಾಲ್ಕು ಮಾಸದ ಅವಧಿಯನ್ನು ಚಾತುರ್ಮಾಸ್ಯ ಎಂದು ಪರಿಗಣಿಸಲಾಗುತ್ತದೆ. ಇಂದಿನ ದಿನ ಮಹಾವಿಷ್ಣುವಿನ ಪ್ರತೀಕವಾದ ಶಂಖ ಚಕ್ರದ ಚಿಹ್ನೆ ಇರುವ ಮುದ್ರೆಯನ್ನು ಶಾಸ್ತ್ರ ಬದ್ಧ ಹೋಮದ ಬೆಂಕಿಯಲ್ಲಿ ಕಾಯಿಸಿ ಗುರು ಮುಖೇನ ದೇಹದಲ್ಲಿ ಧರಿಸುವ ತಪ್ತ ಮುದ್ರಾ ಧಾರಣೆ ಸಂಪ್ರದಾಯ ಮಹತ್ವವಾಗಿದೆ . ಭವಿಷ್ಯೋತ್ತರ ಪುರಾಣದಲ್ಲಿ ಹೇಳಿದಂತೆ ನಮ್ಮ ಪಾಪ ಕರ್ಮಗಳನ್ನು ಪರಿಹರಿಸಿ ಕೊಳ್ಳಲು ವಿಶೇಷವಾದ ಅವಕಾಶ ಇಂದಿನ ದಿನದ ಏಕಾದಶಿ ಆಚರಣೆ.

ಪದ್ಮ ಪುರಾಣದಲ್ಲಿ ಉಲ್ಲೇಖವಿರುವಂತೆ ಪಾಪಿಗಳ ಪಾಪವನ್ನು ಪರಿಹರಿಸಲು ವಿಶೇಷವಾದ ವೃತವೇ ಪ್ರಥಮ ಏಕಾದಶಿ ವೃತ. ಪುರಾಣಗಳಲ್ಲಿ ಉಲ್ಲೇಖವಿರುವಂತೆ ಮಾಂಧಾತಾ ರಾಜನ ರಾಜ್ಯಭಾರದಲ್ಲಿ ಭಯಂಕರ ಕ್ಷಾಮ ತಲೆದೋರಿದಾಗ ನೀರಿಗೆ ಆಶ್ರಯವಾಗಿರುವ ನೀರಿನಿಂದ ಆವೃತ್ತ ನಾಗಿರುವ ಶ್ರೀ ಮನ್ನಾರಾಯಣನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡಾಗ ಆಂಗೀರಸ ಮುನಿಗಳ ಆಶೀರ್ವಾದದಂತೆ ಮಳೆಗಾಲದ ಆರಂಭದಲ್ಲಿ ಬರುವ ಈ ಏಕಾದಶಿಯನ್ನು ಶ್ರದ್ಧೆ ಭಕ್ತಿಯಿಂದ ರಾಜನೊಂದಿಗೆ ಇಡೀ ರಾಜ್ಯದ ಜನತೆ ಆಚರಣೆ ಮಾಡಿದಾಗ ಘೋರ ಕ್ಷಾಮ ತೊಲಗಿ ಇಡೀ ರಾಜ್ಯಕ್ಕೆ ಸುಭಿಕ್ಷವಾದ ಮಹತ್ವದ ವಿವರವಿದೆ.

ಪದ್ಮ ಪುರಾಣದ ಪ್ರಕಾರ ವಾಮನ ರೂಪಿ ಭಗವಂತನು ತ್ರಿವಿಕ್ರಮನಾದ ಸಂದರ್ಭದಲ್ಲಿ ಬಲೀಂದ್ರನಿಗೆ ಅನುಗ್ರಹ ಮಾಡಿ ಸುತಳದಲ್ಲಿ ಕಳುಹಿಸಿ ತಾನು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಮಲಗಿದ ಭಗವಂತ ಯೋಗ ನಿದ್ರೆಗೆ ಜಾರಿದ ಶಯನೀ ಏಕಾದಶಿ ಎಂಬ ಪರ್ವಕಾಲ ಇದು. ದೇವತೆಗಳಿಗೆ ರಾತ್ರಿ ಎಂದೆನಿಸುವ ಈ ದಕ್ಷಿಣಾಯನದ ಆರಂಭ ಇಂದು.

ಮುಂದಿನ ನಾಲ್ಕು ತಿಂಗಳುಗಳ ಕಾಲ ಚಾತುರ್ಮಾಸ್ಯ ಎಂದು ಪ್ರಸಿದ್ಧವಾಗಿದ್ದು ದೇವರ ಅನುಗ್ರಹಕ್ಕಾಗಿ ಅಗತ್ಯವಾದ ಸಾಧನೆ ಮಾಡಲು ಯೋಗ್ಯವಾದ ಈ ಕಾಲದಲ್ಲಿ ನಾಲ್ಕು ತಿಂಗಳಿನ ಚಾತುರ್ಮಾಸ ಪರ್ಯಂತ ಭಗವಂತನಿಗೆ ಸಂಪ್ರೀತವಾದ ಆರಾಧನೆ, ಭಜನೆ, ಔಪಾಸನೆ, ಪ್ರಾರ್ಥನೆ ಇನ್ನಿತರ ದೇವತಾ ಕಾರ್ಯಗಳನ್ನು ಮಾಡುವುದರಿಂದ ಅವನ ಅನುಗ್ರಹ ಪಡೆಯಲು ಪರ್ವಕಾಲವಾದ ಈ ದೇವ ಶಯನಿ ಏಕಾದಶಿ , ಪದ್ಮಾ ಏಕಾದಶಿ ,ಪ್ರಥಮ ಏಕಾದಶಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸೋಣ. ಭಗವಂತನ ಕೃಪೆಗೆ ಪಾತ್ರರಾಗೋಣ.

 
 
 
 
 
 
 
 
 
 
 

Leave a Reply