ಏನಿದು ಡಿಐಸಿಜಿಸಿ ತಿದ್ದುಪಡಿ ಕಾಯ್ದೆ? ~ಗಿರೀಶ್ ಐತಾಳ್ ಕರಂಬಳ್ಳಿ

ಇತ್ತೀಚೆಗೆ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್(ಪಿ.ಎಂ. ಸಿ) ಯೆಸ್ ಬ್ಯಾಂಕ್, ಲಕ್ಮೀ ವಿಲಾಸ ಬ್ಯಾಂಕ್, ಗುರು ರಾಘವೇಂದ್ರ ಬ್ಯಾಂಕ್ ಮುಂತಾದ ಬ್ಯಾಂಕ್ ಗಳು ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ಆರ್ .ಬಿ. ಐ ನಿಷೇಧದ ಅವಧಿಯನ್ನು ವಿಧಿಸಿದಾಗ ಈ ಬ್ಯಾಂಕ್ ಗಳಲ್ಲಿ ಠೇವಣಿ ಇರಿಸಿದ ಠೇವಣಿದಾರರು ತಮ್ಮ ಖಾತೆಗಳಿಂದ ಕೇವಲ ಕನಿಷ್ಠ ಮೊತ್ತದ ಹಣವನ್ನು ಮಾತ್ರ ಒಂದು ದಿನಕ್ಕೆ ತೆಗೆಯುವ, ಅಥವಾ ನಿರ್ದಿಷ್ಟ ಸಮಯದವರೆಗೆ ತಮ್ಮ ಖಾತೆಯಿಂದ ಹಣವನ್ನು ತೆಗೆಯಲು ನಿರ್ಬಂಧಿಸುವ ನಿಯಮವನ್ನು ಆರ್ ಬಿಐ ವಿಧಿಸಿತ್ತು ಇದರಿಂದಾಗಿ ಠೇವಣಿದಾರರು ಸಂಕಷ್ಟಕ್ಕೆ ಒಳಗಾಗಿ, ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು.

ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಠೇವಣಿದಾರರು ವಿಶ್ವಾಸವಿರಿಸುವ ಹಾಗೂ ಠೇವಣಿದಾರರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಬ್ಯಾಂಕಿಂಗ್ ವಲಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕೇಂದ್ರ ಸರಕಾರವು ನಾನಾ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಮಾಡಿದೆ. ಅದರಲ್ಲಿ ಮುಖ್ಯವಾಗಿ ಈ ಬಾರಿಯ ಸಂಸತ್ ಅಧಿವೇಶನದಲ್ಲಿ ‘ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್ ಕಾಯ್ದೆ’ಗೆ (ಡಿಐಸಿಜಿಸಿ ಕಾಯ್ದೆ) ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಈ ತಿದ್ದುಪಡಿಯು ಕಾಯ್ದೆಯಲ್ಲಿ ಒಂದು ಭಾಗವಾದ ನಂತರ, ಬ್ಯಾಂಕ್‌ ನ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದರೆ ಠೇವಣಿದಾರರಿಗೆ 90 ದಿನಗಳಲ್ಲಿ ₹5 ಲಕ್ಷದವರೆಗೆ ವಿಮಾ ಪರಿಹಾರ ಮೊತ್ತ ಸಿಗಲಿದೆ. ಈ ಮಸೂದೆಯಿಂದಾಗಿ 98.3% ರಷ್ಟು ಬ್ಯಾಂಕ್ ನ ಠೇವಣಿದಾರರು ವಿಮಾ ರಕ್ಷಣೆಯನ್ನು ಪಡೆಯುತ್ತಾರೆ ಹಾಗೂ ಇದು ಒಟ್ಟಾರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 50.9% ರಷ್ಟು ಠೇವಣಿ ಮೌಲ್ಯವನ್ನು ಒಳಗೊಂಡಿರುತ್ತದೆ.

ಅನ್ವಯ:
1.ಇದು ಸಾರ್ವಜನಿಕ ರಂಗದ ,ಖಾಸಗಿ ರಂಗದ ವಾಣಿಜ್ಯ ಬ್ಯಾಂಕ್ ,ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಪೆಮೆಂಟ್ ಬ್ಯಾಂಕ್, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಬ್ಯಾಂಕ್, ಸಣ್ಣ ಬ್ಯಾಂಕ್, ಸಹಕಾರಿ ಬ್ಯಾಂಕುಗಳಿಗೆ ಅನ್ವಯಿಸುತ್ತದೆ
2.ಇದು ಈಗಾಗಲೇ ನಿಷೇಧದ (ಮೊರಟೋರಿಯಂ) ಅಡಿಯಲ್ಲಿರುವ ಬ್ಯಾಂಕುಗಳು ಮತ್ತು ನಿಷೇಧದ ಅಡಿಯಲ್ಲಿ ಬರಬಹುದಾದ ಬ್ಯಾಂಕುಗಳಿಗೆ ಅನ್ವಯಿಸುತ್ತದೆ.
3. ಉಳಿತಾಯ ಖಾತೆ, ಚಾಲ್ತಿ ಖಾತೆ, ಸಂಚಿತ ಠೇವಣಿ ಖಾತೆ, ನಿರಖು ಠೇವಣಿ ಗಳಿಗೆ ಅನ್ವಯಿಸುತ್ತದೆ ಆದರೆ ಈ ಕೆಳಗಿನ ಠೇವಣಿ ಗಳನ್ನು ಬಿಟ್ಟು
• ವಿದೇಶಿ ಸರ್ಕಾರದ ಠೇವಣಿಗಳು
• ಅನ್ಯ ಬ್ಯಾಂಕ್ ಗಳ ಠೇವಣಿಗಳು
• ಕೇಂದ್ರ/ರಾಜ್ಯ ಸರ್ಕಾರದ ಠೇವಣಿಗಳು
• ರಾಜ್ಯ ಸಹಕಾರಿ ಬ್ಯಾಂಕ್ ನೊಂದಿಗೆ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಗಳ ಠೇವಣಿಗಳು.
• ಭಾರತದ ಹೊರಗಿನಿಂದ ಸ್ವೀಕರಿಸಿದ ಖಾತೆಗೆ ಮತ್ತು ಠೇವಣಿಯ ಯಾವುದೇ ಮೊತ್ತ

ವಿಮಾ ಕವರ್: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಿಧಿಸಿದ ನಿಷೇಧದ ಅಡಿಯಲ್ಲಿ ಬ್ಯಾಂಕ್ ಬಂದರೆ ಅದು 90 ದಿನಗಳೊಳಗೆ ಖಾತೆದಾರರಿಗೆ 5 ಲಕ್ಷದವರೆಗೆ ಹಣವನ್ನು ಒದಗಿಸುತ್ತದೆ. ಈಗಿರುವ ನಿಯಮಗಳ ಅನ್ವಯ, ಬ್ಯಾಂಕ್‌ನ ಪರವಾನಗಿ ರದ್ದಾಗಿ, ಬ್ಯಾಂಕಿಂಗ್‌ ಕಂಪನಿಯನ್ನು ಪರಿಸಮಾಪ್ತಿಗೊಳಿಸಿ, ಅದರ ಆಸ್ತಿಗಳನ್ನು ಹಕ್ಕುದಾರರಿಗೆ ವರ್ಗಾಯಿಸುವ ಪ್ರಕ್ರಿಯೆ ಶುರುವಾದ ನಂತರ ವಿಮಾ ಪರಿಹಾರ ಮೊತ್ತವು ಸಿಗುತ್ತದೆ. ಅಂದರೆ ಬಹಳ ವರ್ಷಗಳವರೆಗೆ ಕಾಯಬೇಕಾಗಿತ್ತು.

ಆದರೆ ತಿದ್ದುಪಡಿ ಯಾದ ನಂತರ ಬ್ಯಾಂಕ್ ಅನ್ನು ಮೊರಟೋರಿಯಂಗೆ ಒಳಪಡಿಸಿದ ಮೊದಲ 45 ದಿನಗಳಲ್ಲಿ, ಡಿಐಸಿಜಿಸಿ ಯು ಠೇವಣಿ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತದೆ. ಮುಂದಿನ 45 ದಿನಗಳಲ್ಲಿ, ಇದು ಮಾಹಿತಿಯನ್ನು ಪರಿಶೀಲಿಸುತ್ತದೆ ಮತ್ತು ಗರಿಷ್ಠ 90 ದಿನಗಳಲ್ಲಿ ಠೇವಣಿದಾರರಿಗೆ ಮರುಪಾವತಿ ಮಾಡುತ್ತದೆ.

ವಿಮಾ ಪ್ರೀಮಿಯಂ: ಇದು ಠೇವಣಿ ವಿಮಾ ಪ್ರೀಮಿಯಂ ಅನ್ನು ತಕ್ಷಣವೇ 20% ಮತ್ತು ಗರಿಷ್ಠ 50% ರಷ್ಟು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಪ್ರೀಮಿಯಂ ಅನ್ನು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮಕ್ಕೆ ವಿಮೆ ಮಾಡಿದ ಬ್ಯಾಂಕುಗಳು ತನ್ನ ಠೇವಣಿದಾರರಿಂದ ಇದಕ್ಕಾಗಿ ಯಾವುದೇ ಹಣವನ್ನು ಸ್ವೀಕರಿಸದೇ, ಪ್ರತಿ ಹಣಕಾಸು ಅರ್ಧ ವರ್ಷದ ಆರಂಭದಿಂದ ಎರಡು ತಿಂಗಳೊಳಗೆ ಅರೆ ವಾರ್ಷಿಕವಾಗಿ ನಿಗಮಕ್ಕೆ ಮುಂಗಡ ವಿಮಾ ಕಂತುಗಳನ್ನು ಪಾವತಿಸುತ್ತವೆ, ಅವುಗಳ ಹಿಂದಿನ ಅರ್ಧ ವರ್ಷದ ಅಂತ್ಯದ ಠೇವಣಿಗಳ ಆಧಾರದ ಮೇಲೆ ಇದನ್ನು ಪ್ರತಿ 100 ರೂ.ಗೆ 10 ಪೈಸೆಯಿಂದ 12 ಪೈಸೆಗಳಿಗೆ ಹೆಚ್ಚಿಸಲಾಗಿದೆ ಮತ್ತು 15 ಪೈಸೆ ಮಿತಿಯನ್ನು ವಿಧಿಸಲಾಗಿದೆ.

ಇದು ಕೇವಲ ಒಂದು ಸಕ್ರಿಯಗೊಳಿಸುವ ನಿಬಂಧನೆಯಾಗಿದೆ ಮತ್ತು ಪಾವತಿಸಬೇಕಾದ ಪ್ರೀಮಿಯಂ ಹೆಚ್ಚಳವನ್ನು ನಿರ್ಧರಿಸುವುದು ಆರ್‌ಬಿಐ ಜೊತೆ ಸಮಾಲೋಚನೆಗಳನ್ನು ಒಳಗೊಂಡಿರುತ್ತದೆ ಮತ್ತು ಸರ್ಕಾರದ ಅನುಮೋದನೆಯ ಅಗತ್ಯವಿರುತ್ತದೆ. ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ಕುರಿತು: ಠೇವಣಿ ವಿಮಾ ನಿಗಮ (ಡಿಐಸಿ) ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಸಿಜಿಸಿಐ) ವಿಲೀನದ ನಂತರ 1978 ರಲ್ಲಿ ಸಂಸತ್ತಿನಿಂದ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಕಾಯಿದೆ ಜಾರಿಗೆ ಬಂದ ನಂತರ ಇದು ಅಸ್ತಿತ್ವಕ್ಕೆ ಬಂದಿತು.

ಇದು ಭಾರತದ ಬ್ಯಾಂಕುಗಳಿಗೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆಯಾಗಿದೆ ಮತ್ತು ಇದನ್ನು ಆರ್‌ಬಿಐ ನಿಯಂತ್ರಿಸುತ್ತದೆ.

ವ್ಯಾಪ್ತಿ: ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು, ಭಾರತದಲ್ಲಿ ಶಾಖೆಗಳನ್ನು ಹೊಂದಿರುವ ವಿದೇಶಿ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು ಸೇರಿದಂತೆ ಬ್ಯಾಂಕುಗಳು ಡಿಐಸಿಜಿಸಿಯಲ್ಲಿ ಠೇವಣಿ ವಿಮಾ ರಕ್ಷಣೆಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

 

 
 
 
 
 
 
 
 
 
 
 

Leave a Reply