ತುಂಬೆ ಹೂವಿಗೊಲಿವ ಹೂ ಮನದ ಶಂಕರ ನಾರಾಯಣ:~ ಪೂರ್ಣಿಮಾ ಜನಾರ್ದನ

ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ ….ಲಿಂಗಾಷ್ಟಕದ ಈ ಸಾಲುಗಳು ಕಿವಿಗೆ ಬಿದ್ದಾಗೆಲ್ಲ ಮನಮಂಟಪದ ತುಂಬಾ ಶಂಕರನ ಅನುಗ್ರಹದ ಭಾವ ಲಹರಿ. ಕರ್ಣಗಳಿಗೆ ಇಂಪು ,ಮನಕ್ಕೆ ತಂಪು,ತನುವಿಗೆ ಶಾಂತಿ ನೀಡುವ ಈ ಲಿಂಗಾಷ್ಟಕದ ಸಾಲುಗಳೆಂದರೆ ಬಾಲ್ಯದಿಂದಲೂ ತುಂಬು ಪ್ರೀತಿ.

ಕೊಡವೂರು ಶ್ರೀ ಶಂಕರನಾರಾಯಣದೇವಳದ ಮುಂದಿನ ಅಗ್ರಹಾರದ ಆರಂಭದಲ್ಲೇ ಇರುವ ಅಜ್ಜಿ ಮನೆಯಲ್ಲಿದ್ದಾಗಿನಿಂದ ಇದೀಗ ಅಲ್ಲೇ ಮನೆಮಾಡಿಕೊಂಡಿರುವ ನಮಗೆ ಒಡೆಯ ಶಂಕರನಾರಾಯಣನೆಂದರೆ ವಿಶೇಷ ಭಕ್ತಿ ಬಾಂಧವ್ಯ. ಶ್ರೀ ದೇವಳದಲ್ಲಿ ನಡೆಯುವ ಹಬ್ಬ ಹರಿದಿನಗಳು, ಪ್ರತಿ ಸೋಮವಾರಗಳು ,ನವರಾತ್ರಿ ,ರಾಯರ ಆರಾಧನೆ, ಲಕ್ಷದೀಪೋತ್ಸವ, ಸೋಣಾರತಿ ಇವೆಲ್ಲ ನಮ್ಮ ಬಾಲ್ಯವನ್ನು ಸ್ಮರಣೀಯಗೊಳಿಸಿ , ನೆನಪಾದಾಗೆಲ್ಲಾ ಕೃತಾರ್ಥ ಭಾವ ಹೊಮ್ಮಿಸುವ ಬದುಕಿನ ಸುವರ್ಣ ದಿನಗಳು.

 

ಆ ವಿಶೇಷ ದಿನಗಳಲ್ಲಿ ಸ್ನೇಹಿತೆಯರೊಂದಿಗೆ ದೇವಳದಲ್ಲೇ ಠಿಕಾಣಿ ಹೊಡೆದು ಮನೆಮಂದಿಯಿಂದ ಬೈಯಿಸಿ ಕೊಂಡದ್ದಕ್ಕೆ ಲೆಕ್ಕವಿಲ್ಲ. ಅದರಲ್ಲೂ ಶ್ರೀ ದೇವಳದ ವಾರ್ಷಿಕ ರಥೋತ್ಸವಕ್ಕಾಗಿ ವರುಷವಿಡೀ ಕಾತರದಿಂದ ಕಾಯುವ ನಾವು ಉತ್ಸವದ ಏಳು ದಿನಗಳಲ್ಲಿ ನಿತ್ಯ ಯಾವ ಯಾವ ತರದ ಹೊಸ ಉಡುಗೆ ತೊಡಬೇಕು ಹೇಗೆ ಅಲಂಕರಿಸಿಕೊಳ್ಳಬೇಕೆಂದು ಸ್ನೇಹಿತೆಯರೊಂದಿಗೆ ಸಮಾಲೋಚಿಸಿ ಸಂಭ್ರಮಿಸುವ ಆ ದಿನಗಳ ಸಡಗರ ಮಾತ್ರ ಇಷ್ಟು ವರ್ಷವಾದರೂ ಕಡಿಮೆಯಾಗಿಲ್ಲ.

 

ಆದರೆ ಈಗ ಹೆಚ್ಚಿನ ಸಂಭ್ರಮಕ್ಕೆ ವಯಸ್ಸಿನ ಬೇಲಿ, ಸಮಯದ ಅಭಾವ ,ಅದಕ್ಕಿಂತ ಹೆಚ್ಚಾಗಿ ಜೀವನ ಪಯಣದಲ್ಲಿ ಹತ್ತು ಹಲವು ಜವಾಬ್ದಾರಿಗಳ ಸಾಲು ಸಾಲು ಸೇರ್ಪಡೆ ಇವೆಲ್ಲ ನಮ್ಮ ಅಂದಿನ ಒಂದಷ್ಟು ಸಂಭ್ರಮವನ್ನು ಮೊಟಕುಗೊಳಿಸಿದರೂ ಮನದಲ್ಲಿ ನಮ್ಮೊಡೆಯನ ತೇರು ಅಂದರೆ ಅದು ಬಲು ಜೋರಿನ ಸಂಭ್ರಮ.. ಹಬ್ಬ ಹರಿದಿನ ಅಂದಾಗಲೆಲ್ಲ ಶಂಕರನಾರಾಯಣನ ಪದತಲದಲ್ಲಿ ಮನೆ ಮಾಡಿಕೊಂಡಿರುವ ಭಕ್ತ ಜನತೆಗೆ ಶಿವರಾತ್ರಿ ದೊಡ್ಡ ಹಬ್ಬ.

 

ನಮ್ಮಲ್ಲಿ ಉಪವಾಸದ ಪರಿಕಲ್ಪನೆ ಇಲ್ಲದಿದ್ದರೂ ಅಂದು ರವೆ ಇಡ್ಲಿ ,ಸಜ್ಜಿಗೆ ಕಡುಬು, ಅವಲಕ್ಕಿ , ಹೆಸರುಬೇಳೆ ಪಾಯಸ, ಹಣ್ಣು ಹಂಪಲು ಹೀಗೆ ಕೆಲವೊಂದು ಸಾತ್ವಿಕ ಆಹಾರ ಸೇವನೆ ರೂಢಿಯಲ್ಲಿತ್ತು. ಬೆಳಿಗ್ಗೆ ಎದ್ದು ಶಂಕರನಾರಾಯಣನಿಗೆ ನಿತ್ಯದಂತೆ ಪ್ರದಕ್ಷಿಣೆ ಬಂದು ಎಲ್ಲವೂ ಎಲ್ಲರಿಗೂ ಒಳಿತಾಗಲೆಂದು ಪ್ರಾರ್ಥಿಸಿ, ಮತ್ತೆ ಅಲ್ಲೇ ಮಂಟಪದಲ್ಲಿ ಭಜನೆ ಇದ್ದಲ್ಲಿ ಸ್ವಲ್ಪ ಹೊತ್ತು ಹಾಡುಗಳನ್ನು ಕೇಳುತ್ತಾ ಕೆಲವೊಮ್ಮೆ ಅವರೊಂದಿಗೆ ಸೇರಿ ಹಾಡಿ ಮತ್ತೆ ಮನೆ ಕಡೆ ಸವಾರಿ. ಆದರೆ ನಮಗೆಲ್ಲಾ ಬಾಲ್ಯದಲ್ಲಿ ನಿಜವಾದ ಶಿವರಾತ್ರಿ ಹಬ್ಬ ಆರಂಭವಾಗುವುದೇ ಸಂಜೆ ಐದು ಗಂಟೆಗೆ.ಆ ದಿನಗಳಲ್ಲಿ ನಮ್ಮ ಪ್ರಕಾರ ಶಿವನಿಗೆ ಇಷ್ಟವಾದ ತುಂಬೆ ಹೂವುಗಳನ್ನು ತಂದು ಅವನಿಗೆ ಅರ್ಪಣೆ ಮಾಡುವುದೇ ಶಿವರಾತ್ರಿಯ ವಿಶೇಷ.

 

ಪುರಾಣದ ಪ್ರಕಾರ ನೀಲಕಂಠ ಶಿವನ ಕೊರಳಲ್ಲಿ ವಿಷ ಸೇರಿದಾಗ ಅದರ ನಿವಾರಣೆಗೆ ತುಂಬೆ ಹೂಗಳನ್ನು ಬಳಸಿದ್ದರು ಎಂಬ ಪುರಾಣ ಪ್ರಸಿದ್ಧ ಕಥೆಯಿಂದಾಗಿ ಇಂದಿಗೂ ಶಿವನಿಗೆ ತುಂಬೆ ಪುಷ್ಪ ಅತಿಪ್ರಿಯ ಎಂದು ಭಕ್ತರ ನಂಬಿಕೆ. ಸಂಸ್ಕೃತದಲ್ಲಿ ದ್ರೋಣ ಪುಷ್ಪ , ಚಿತ್ರಕ್ಷುಪ ಎಂದು ಕರೆಯಲ್ಪಡುವ ತುಂಬೆ ಹೂವು ವಿಷನಿವಾರಕ. ಆಗಾಗ ಎಡಬಿಡದೆ ಕಾಡುವ ಜ್ವರ, ಆಯಾಸ ,ಕಣ್ಣಿನ ಸುತ್ತ ಕಪ್ಪಿನ ಸಮಸ್ಯೆ , ಅಜೀರ್ಣ, ಹೊಟ್ಟೆ ನೋವು, ತಲೆಸುತ್ತು , ವಾಂತಿ ಹೀಗೆ ಎಲ್ಲಕ್ಕೂ ಈ ತುಂಬೆ ಹೂವು ರಾಮಬಾಣವೆಂದು ನಮಗೆ ಬಾಲ್ಯದಲ್ಲಿ ಗೊತ್ತಿರಲಿಲ್ಲ. ಶಿವನಿಗೆ ವಿಶೇಷ ಎಂಬುದೊಂದೆ ಆಗ ನಮಗೆ ಗೊತ್ತಿದ್ದ ವಿಷಯ.

 

ಕೊಡವೂರು ಅಗ್ರಹಾರದ ಕೆಳಗೆ ಕಲ್ಮಾಡಿಗೆ ಹೋಗುವ ಮಾರ್ಗ ಬದಿಯ ಗದ್ದೆಗಳೆಲ್ಲೆಲ್ಲಸ ಒತ್ತಾಗಿ ಬೆಳೆದ ತುಂಬೆ ಹೂವಿನ ಗಿಡಗಳು,ಅದರ ತುಂಬಾ ಹತ್ತಿ ಹರಡಿದಂತೆ ಬಿಳಿಯ ಪುಟ್ಟ ಪುಟ್ಟ ತುಂಬೆ ಪುಷ್ಪಗಳು. ಸಂಜೆ ಗಂಟೆ ಐದು ಆಗುತ್ತಿದ್ದಂತೆ ನಾವು ಪುಟ್ಟ ಮಕ್ಕಳು ಒಂದೊಂದು ಸ್ಟೀಲ್ ಇಲ್ಲವೇ ತಾಮ್ರದ ತಟ್ಟೆ ಅಥವಾ ಬೆತ್ತದ ಪುಟ್ಟ ಬುಟ್ಟಿಯನ್ನು ಹಿಡಿದುಕೊಂಡು ತುಂಬೆ ಹೂಗಳನ್ನು ಕೊಯ್ದು ತರಲು ಸಾಲು ಸಾಲಾಗಿ ಹೋಗುವ ಸಂಭ್ರಮವೇ ಸಂಭ್ರಮ. ಆ ಇಳಿ ಬಿಸಿಲಿನಲ್ಲಿ ತುಂಬೆ ಹೂ ಕೊಯ್ಯುವ ಕಾಯಕ ಆರಂಭವಾಗಿ ಮುಸ್ಸಂಜೆ ನೇಸರ ಪಡುವಣದಲ್ಲಿ ಮುಳುಗಲು ಹೋಗುವ ಸಮಯದಲ್ಲಿ ನಮ್ಮ ಕಾಯಕ ಮುಕ್ತಾಯ.

 

ಸುಮಾರು ಎರಡು ಗಂಟೆಗಳ ಕಾಲ ಒಂದು ಗದ್ದೆ ತುಂಬಾ ಇದ್ದ ಹೂಗಳನ್ನು ಕೊಯ್ದು ಇನ್ನೊಂದು ಗದ್ದೆಗೆ ಹಾರಿ, ಗದ್ದೆಪುಣಿಯಲ್ಲಿ ಎದ್ದು ಬಿದ್ದು ಗಾಳಿಗೆ ಚೆಲ್ಲಾಟವಾಡುವ ಹಗುರವಾದ ತುಂಬೆ ಹೂಗಳು ಗದ್ದೆಗೆ ಪುನಃ ಬೀಳದಂತೆ ತಟ್ಟೆ ಮೇಲೆ ಅಂಗೈ ಭದ್ರವಾಗಿ ಮುಚ್ಚಿ ಜಾಗ್ರತೆ ವಹಿಸಿ ನಡೆದಾಡುತ್ತಾ ಇಡೀ ಊರಿನ ಸಮಾಚಾರವನ್ನು ಒಬ್ಬ ರಿಂದ ಒಬ್ಬರಿಗೆ ಹರಡುತ್ತಾ ಘನ ಪಟ್ಟಾಂಗದ ಮಧ್ಯಮಧ್ಯ ದೇವರ ನಾಮ ಸ್ತುತಿಗಳನ್ನು ಹಾಡುತ್ತಾ ಶ್ಲೋಕ ಗಳನ್ನು ಗುನುಗುತ್ತಾ ಸ್ತೋತ್ರಗಳನ್ನು ಪಟಿಸುತ್ತಾ ಕತ್ತಲೆ ಕವಿಯುವ ಪರಿವೆ ಇಲ್ಲದೆ ನಮ್ಮದೇ ಲೋಕದಲ್ಲಿ ವ್ಯಸ್ತರಾಗುತ್ತಿರುವ ಆ ದಿನಗಳ ಸವಿ ನೆನಪು ಯಾವತ್ತೂ ಬೆಲೆ ಕಟ್ಟಲಾಗದು, ಎಂದಿಗೂ ಮರೆಯಲಾಗದು ,ಆರು
ವರುಷದ ಪುಟ್ಟ ಮಕ್ಕಳಿಂದ ಹಿಡಿದು ಅರವತ್ತು ವರ್ಷದವರೆಗಿನ ನಮ್ಮ ಆ ಒಂದು ತಂಡದ ಮಾತುಕತೆಯಲ್ಲಿ ಉಳಿಯದೆ ಬಿಟ್ಟ ವಿಚಾರಗಳೇ ಇಲ್ಲ.

 

ಆ ಕಾಲದಲ್ಲಿ ಪ್ರಚಲಿತವಿದ್ದ ರೇಡಿಯೋ, ದೂರದರ್ಶನಗಳಿಗಿಂತಲೂ ವೇಗವಾಗಿ ಊಹಾಪೂಹಗಳನ್ನು ವೈವಿಧ್ಯಮಯ ಅಲಂಕಾರದೊಂದಿಗೆ ನೆರಮನೆಯ ಅಂಗಳದಿಂದ ಆರಂಭವಾಗಿ ಇಡೀ ಪ್ರಪಂಚದ ವಿಷಯಗಳ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು . ಅದರ ಮಧ್ಯೆ ಮಧ್ಯೆ ಯಾರು ಹೆಚ್ಚು ತುಂಬೆ ಹೂ‌ ಕೊಯ್ದಿರಬಹುದು, ಯಾರ ತಟ್ಟೆ ದೊಡ್ಡದಿದೆ ,ಯಾರ ತಟ್ಟೆಯಲ್ಲಿ ಜಾಸ್ತಿ ಹೂ ತುಂಬಿದೆ ಎಂಬ ಕುತೂಹಲದಿಂದ ಇಣುಕಿ ನೋಡುತ್ತಾ ತನ್ನದೇ ಜಾಸ್ತಿ ಆಗಬೇಕೆಂಬ ಆಸೆಯಿಂದ ಪುನಃ ಮೌನಕ್ಕೆ ಶರಣಾಗಿ ಇನ್ನಷ್ಟು ವೇಗವಾಗಿ ಹೂವನ್ನು ಕೊಯ್ದು ತಟ್ಟೆ ಭರ್ತಿ ಮಾಡುತ್ತಿದ್ದ ಆ ಹುಮ್ಮಸ್ಸೆ ಒಂದು ಗಮ್ಮತ್ತು.

 

ಹಿರಿಯರು ಕತ್ತಲಾಯಿತು ಇನ್ನು ಸಾಕು ಹೋಗೋಣ ಎಂದು ಎಷ್ಟು ಕೂಗಿ ಹೇಳಿದರೂ ಆರಿಸಿಬಿಟ್ಟ ಗಿಡದಲ್ಲಿ ಕಂಡ ಒಂದೆರಡು ಹೂಗಳನ್ನು ಮೆಲ್ಲಗೆ ನಾಜೂಕಾಗಿ ಕೊಯ್ದು ತಟ್ಟೆಗೇರಿಸಿಕೊಳ್ಳುವುದರಲ್ಲಿ ಮಕ್ಕಳು ಮಗ್ನ .ಅಂತೂ ಇಂತೂ ಕಪ್ಪೆಗಳನ್ನು ಒಟ್ಟು ಮಾಡಿದಂತೆ ಬಲು ಪ್ರಯಾಸದಿಂದ ಎಲ್ಲರನ್ನೂ ಕೂಡಿಕೊಂಡು ತಟ್ಟೆ ತುಂಬಾ ತುಂಬೆ ಹೂಗಳನ್ನು ಶಂಕರನಾರಾಯಣನಿಗೆ ಅರ್ಪಿಸಲು ಸಾಲು ಸಾಲಾಗಿ ಹೋಗುವುದೇ ಚೆಂದ. ಅದರಲ್ಲೂ ಒಟ್ಟಿಗೆ ಇದ್ದ ಎಲ್ಲರ ತುಂಬಿದ ತಟ್ಟೆಗಳನ್ನು ಕಣ್ಣಿನಲ್ಲಿಯೇ ಪರೀಕ್ಷಿಸುತ್ತಾ ಎಲ್ಲರಿಗಿಂತ ನಾನೇ ಜಾಸ್ತಿ ಹೂ ಆರಿಸಿದೆ ಎಂಬ ಭಂಡ ಸಮಾಧಾನದೊಂದಿಗೆ ಕೈ ಕಾಲು ತೊಳೆದು‌ ಹೂವಿಗೆ ನೀರು ಚಿಮುಕಿಸಿ ದೇವಳದ ಒಳ ಹೊಕ್ಕು ಅಲ್ಲಿ ಇಟ್ಟ ದೊಡ್ಡ ಹರಿವಾಣಕ್ಕೆ ಹೂಗಳನ್ನ ಹಾಕಿ ಶಂಕರನಾರಾಯಣಾ ಅನುಗ್ರಹಿಸು ನಮ್ಮನು ಎಂದು ಪ್ರಾರ್ಥಿಸಿದರೆ ನಮ್ಮ ಅರ್ಧ ಶಿವರಾತ್ರಿ ಗೌಜಿ ಮುಗಿದಂತೆ.

 

ಊರಿನ ಜನರೆಲ್ಲ ಸೇರಿ ತರುವ ತುಂಬೆ ಹೂಗಳ ರಾಶಿಯನ್ನು ಅರ್ಚನೆ ಮಾಡುತ್ತಾ ಶ್ರೀ ದೇವರಿಗೆ ಅರ್ಚಕರು ಅರ್ಪಿಸಿ ಮತ್ತೆ ರಾತ್ರಿ ನಡೆಯುವ ರಂಗ ಪೂಜೆಯ ಸಂದರ್ಭದಲ್ಲಿ ಮಧ್ಯೆಮಧ್ಯೆ ವಿಧವಿಧ ಬಣ್ಣದ ಹೂಗಳಿಂದ ಅಲಂಕೃತನಾಗಿ ಭಕ್ತರ ಅನುಗ್ರಹಿಸುವ ನಮ್ಮೊಡೆಯ ಶಂಕರನಾರಾಯಣನ ಬಿಂಬವನ್ನು ನೋಡುವ ಸೌಭಾಗ್ಯ ನಮ್ಮದು. ವರುಷಕೊಮ್ಮೆ ರಾಶಿ ತುಂಬೆ ಹೂಗಳಿಂದ ಅಲಂಕೃತನಾಗುವ ನಮ್ಮೊಡೆಯನ ಸೌಂದರ್ಯ ಯಾವತ್ತೂ ಮನದಲ್ಲಿ ಹಸಿರು. ರಾತ್ರಿ ಶಿವರಾತ್ರಿ ಪ್ರಯುಕ್ತ ರಂಗ ಪೂಜೆ ನಡೆದು ಮನೆಗೆ ಹೋಗಿ ಮಲಗಿದರೂ ಮರುದಿನ ಬೆಳಿಗ್ಗೆ ಬೇಗನೆ ದೇವಳಕ್ಕೆ ಹಾಜರು. ಮುಂಚಿನ ದಿನ ಶ್ರೀ ದೇವರಿಗೆ ಅರ್ಪಿಸಿದ ತುಂಬೆ ಹೂಗಳು ಹಾಗೂ ಚೆಂದ ಚೆಂದದ ಗುಲಾಬಿ, ಸಂಪಿಗೆ ,ಸೇವಂತಿಗೆ ಮಲ್ಲಿಗೆ ಹೂಗಳನ್ನು ನೈರ್ಮಲ್ಯ ವಿಸರ್ಜನೆ ವೇಳೆ ಒಳಸತ್ತಿನ ಬಲಿಕಲ್ಲಿನ ಬಳಿ ಇರುವ ಶಿವಲಿಂಗಕ್ಕೆ ಸುರಿಯುತ್ತಿದ್ದರು.

 

ಬೇಗನೆ ಹೋದ ನಮಗೋ ನಮಗಿಷ್ಟವಾದ ಹೂಗಳನ್ನು ಆರಿಸಿ ತಂದು ಜಡೆಗೆ ಸಿಕ್ಕಿಸುವ ತರಾತುರಿ .ಮನೆ ಮಂದಿ ಬೈದರೂ ಶಾಲೆಯಲ್ಲಿ ಸಹಪಾಠಿಗಳು ಸೀತು ಸೀತು( ಸೀತು ಎಂದರೆ ಆ ಸಮಯದಲ್ಲಿ ಕೊಡವೂರಿ ನಲ್ಲಿದ್ದ ಅತಿ ಹೂ ಮುಡಿದು ,ಕೈ ತುಂಬಾ ಕೆಂಪು ಬಳೆಗಳನ್ನು ಸುರಿದುಕೊಂಡು, ಹಣೆ ತುಂಬ ಕುಂಕುಮ ಇಡುತ್ತಿದ್ದ ಸ್ವಲ್ಪ ಮಾನಸಿಕ ಅಸ್ವಸ್ಥತೆ) ಎಂದು ಕಿಚಾಯಿಸಿದರೂ ಗುಲಾಬಿಯ ಚೆಂದಕ್ಕೆ , ಮಲ್ಲಿಗೆಯ ಸುವಾಸನೆಗೆ, ಸಂಪಿಗೆಯ ಕಂಪಿಗೆ ಮಾರುಹೋಗಿ ತಲೆನೋವು ಬಂದರೂ ಸಹಿಸಿಕೊಂಡು ಶಾಲೆ ಇಡೀ ತಿರುಗುತ್ತಿದ್ದ ಆ ದಿನಗಳ ನೆನಪಾದಾಗಲೆಲ್ಲ ಮೊಗದಗಲ ನಗೆ ಹಾದು ಹೋಗುತ್ತದೆ.

 

ಕೆಲವು ಹುಡುಗರು ಶಿವರಾತ್ರಿಯಂದು ತಮಾಷೆಗಾಗಿ ಆಚೀಚೆ ಮನೆಗಳಿಗೆ ಕಲ್ಲು ಬಿಸಾಡುವ, ಪುಟ್ಟ ವಸ್ತುಗಳ ಜಾಗ ಬದಲಿಸಿಡುವ ,ರಸ್ತೆಗೆ ಮರದ ತುಂಡುಗಳನ್ನು ಅಡ್ಡ ಇಡುವ, ಪಕ್ಕದ ಮನೆಯವರ ಎಳನೀರು ಕದಿಯುವುದರಲ್ಲಿ ವ್ಯಸ್ತರಾದರೆ ಹೆಣ್ಣು ಮಕ್ಕಳಿಗೆ ಹಬ್ಬದ ಗಮ್ಮತ್ತೇ ಬೇರೆ. ಒಟ್ಟಾರೆ ಶಿವರಾತ್ರಿ ಎಂದರೆ ಆಬಾಲ ವೃದ್ಧರಾದಿಯಾಗಿ ಎಲ್ಲರೂ ಸಂಭ್ರಮಿಸುವ, ಮಂಗಳಮಯ ಶಿವನನ್ನು ಭಜಿಸುವ ಆ ಮೂಲಕ ಅವನ ಅನುಗ್ರಹಕ್ಕೆ ಪಾತ್ರರಾಗುವ ಹಬ್ಬ ಎಂಬುದರಲ್ಲಿ ಎರಡು ಮಾತಿಲ್ಲ .

 

ದಿನಗಳಂತೆ, ವರ್ಷ ಸರಿದಂತೆ, ನಾವು ಮಾಡುವ ಆಚರಣೆಗಳಲ್ಲಿ ವ್ಯತ್ಯಾಸ ಇರಬಹುದು, ಆದರೆ ಭಾವನೆಗಳಿಗೆ ಬರಲಿಲ್ಲ ಅಂದಿನ ದಿನಗಳ ನೆನಪಿನ ದಿಬ್ಬಣ ಮನದೊಳಗೆ ಪ್ರತಿ ಶಿವರಾತ್ರಿಯಂದು ಹಾದು ಹೋಗುತ್ತಲಿದ್ದು ಈ ಶಿವರಾತ್ರಿಯಂದು ನಮ್ಮೊಡೆಯನಿಗೆ ಅರ್ಪಿಸಲು ಎಲ್ಲಿಯಾದರೂ ತಟ್ಟೆ ತುಂಬ ಅಲ್ಲದಿದ್ದರೂ ಒಂದ್ಹತ್ತು ತುಂಬೆ ಹೂಗಳಾದರೂ ಸಿಗಬಹುದೇ ಎಂದು ಮನೆಯ ಬದಿಯ ಕಾಲು ಜಾಗದಲ್ಲಿ ಅರಸಿ ಬಂದೆ. ತುಂಬೆ ಹೂವಿಗೊಲಿವ ಹೂ ಮನದ ಶಂಕರನಾರಾಯಣಾ ಅನುಗ್ರಹಿಸು ನಮ್ಮೆಲ್ಲರನ್ನು ಎಂದು ಪ್ರಾರ್ಥಿಸುತ್ತಾ ಸರ್ವರಿಗೂ ಶಿವರಾತ್ರಿಯ ಶುಭಾಶಯಗಳು~ ಪೂರ್ಣಿಮಾ ಜನಾರ್ದನ

 
 
 
 
 
 
 
 
 
 
 

Leave a Reply