ರಾಷ್ಟ್ರಕ್ಕೆ ನವನವೀನ ಪರಿಕಲ್ಪನೆಗಳನ್ನು ಪರಿಚಯಿಸಿದ ರಾಷ್ಟ್ರದ ಮಹೋನ್ನತ ಆಸ್ತಿ ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರು

ಸಮಾಜದ ಸಮಗ್ರ ಅಭಿವೃದ್ಧಿಯನ್ನೆ ಮನದಲ್ಲಿಟ್ಟುಕೊಂಡು ಸಮಾಜ ಸುಧಾರಣೆಗಾಗಿ ಹಗಲಿರುಳು ಕಾಯಕಯೋಗಿಯಂತೆ ದುಡಿಯುವ, ಚಿಂತಿಸುವ, ಯೋಚಿಸುವ ಹಾಗೂ ನವನವೀನ ಪರಿಕಲ್ಪನೆಗಳ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಪ್ರಾಮಾಣಿಕ ಕೊಡುಗೆಯನ್ನು ನೀಡುತ್ತಿರುವ ಈ ರಾಷ್ಟ್ರದ ಮಹೋನ್ನತ ಆಸ್ತಿ, ಶ್ರೀ.ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಚತುರ್ವಿದ ಧಾನಗಳ ಮೂಲಕ ವಿಶ್ವದ ಗಮನ ಸೆಳೆದ ಚೇತನ, ದಾರ್ಶನಿಕ ವ್ಯಕ್ತಿತ್ವದ ಪರಮಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರಿಗೆ ಇಂದು 73ನೇ ಜನ್ಮದಿನದ ಸಂಭ್ರಮ.ಪರಮಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರ ಬಗ್ಗೆ ಬರೆಯಲು ಅತ್ಯಂತ ಹೆಮ್ಮೆ ಅನಿಸ್ತದೆ. ಅವರ ಬಗ್ಗೆ ಬರೆಯಲು ಪುಟಗಳೆ ಸಾಲದು, ಸಮಯವೂ ಸಾಕಾಗದೂ ಎನ್ನುವ ಅರಿವು ನನಗಿದ್ದರೂ, ಅವರ ಕೈಕೆಳಗಡೆ ಸೇವೆ ಮಾಡಿದ ಹೆಮ್ಮೆಯಿಂದ ನನಗನಿಸಿದ್ದನ್ನು ಬರೆಯಲು ಪ್ರಾರಂಭಿಸುವ ಮುಂಚೆ, ಲೋಕಕ್ಕೆ ಜ್ಞಾನ, ಆರೋಗ್ಯ, ಶಿಕ್ಷಣ, ಸಾಮಾಜಿಕ, ಧಾರ್ಮಿಕ ಬೆಳಕನ್ನು ನೀಡುತ್ತಿರುವ ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ನಮಿಸಿ ಸಲ್ಲಿಸಬಯಸುತ್ತೇನೆ.ದೇಶ-ವಿದೇಶಗಳ ಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಶ್ರೀ.ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ಪೂಜ್ಯ ಡಾ: ಹೆಗ್ಗಡೆಯವರು ಅಂದಿನ ಕ್ಷೇತ್ರದ ಧರ್ಮಾಧಿಕಾರಿಗಳಾದ ಕೀರ್ತಿಶೇಷ ಶ್ರೀ. ರತ್ನವರ್ಮ ಹೆಗ್ಗಡೆ ಹಾಗೂ ಮಾತೃಶ್ರೀ ರತ್ಮಮ್ಮ ಹೆಗ್ಗಡೆ ದಂಪತಿಗಳ ಜೇಷ್ಟಪುತ್ರ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದ್ದ ಶ್ರೀ.ಕ್ಷೇತ್ರ ಧರ್ಮಸ್ಥಳದ ಭಂಡಶಾಲೆ ಮನೆಯಲ್ಲಿ ದಿನಾಂಕ:25.11.1948 ರಲ್ಲಿ ಜನ್ಮವೆತ್ತಿ ಬಂದವರು ಇದೇ ನಮ್ಮ ಪೂಜ್ಯ ಹೆಗ್ಗಡೆಯವರು.

ಅಂದ ಹಾಗೆ ಪೂಜ್ಯ ಹೆಗ್ಗಡೆಯವರಿಗೆ ಮಾನ್ಯ.ಸುರೇಂದ್ರಕುಮಾರ್, ಮಾನ್ಯ ಹರ್ಷೇಂದ್ರ ಕುಮಾರ್, ಶ್ರೀಮತಿ. ಪದ್ಮಲತಾ ಹಾಗೂ ಮಾನ್ಯ ಶ್ರೀ ರಾಜೇಂದ್ರಕುಮಾರ್ ಎಂಬ ಸಹೋದರರು ಹಾಗೂ ಸಹೋದರಿ ಇದ್ದಾರೆ. ತಮ್ಮಂದಿರರ ಹಾಗೂ ತಂಗಿಯ ಜೊತೆ ಆಡಿ ಬೆಳೆದ ಪೂಜ್ಯ ಹೆಗ್ಗಡೆಯವರು ಬಾಲ್ಯದಲ್ಲೆ ಚುರುಕು ವ್ಯಕ್ವಿತ್ವ ಹಾಗೂ ದಾರ್ಶನಿಕ ವಿಚಾರಗಳನ್ನು ಮೈಗೂಡಿಸಿಕೊಂಡವರು.ಒಂದು ಕಾಲದಲ್ಲಿ ನಮ್ಮ ಹಳ್ಳಿ ಕಡೆ ಎಲ್ಲ ಮನೆಯಲ್ಲೂ ಬೆಳೆಯುವ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಆದರ್ಶತನವನ್ನು ಕಲಿಸುವ ಜವಾಬ್ದಾರಿ ಅಜ್ಜಿಯಂದಿರದ್ದೇ ಆಗಿತ್ತು. ಪೂಜ್ಯ ಹೆಗ್ಗಡೆಯವರ ವಿಷ್ಯದಲ್ಲೂ ಇದೇ ಆಗಿತ್ತು. ಅವರ ಅಕ್ಕರೆಯ ಅಜ್ಜಿ ಕಮಲಾವತಿ ಅಮ್ಮನವರು ಚಾಚುತಪ್ಪದೇ ಪ್ರತಿದಿನ ಪೂಜ್ಯ ಹೆಗ್ಗಡೆಯವರಿಗೆ ಸಾಮಾಜಿಕ, ಧಾರ್ಮಿಕ, ಪೌರಾಣಿಕ ಕಥೆಗಳನ್ನು ಹಾಗೂ ತನ್ನ ಜೀವನಾನುಭವಗಳನ್ನು ಹಾಗೂ ಸಂಸ್ಕಾರಯುತ ಕಥೆಗಳನ್ನು ಉಣಬಡಿಸುತ್ತಿದ್ದರು. ಅಜ್ಜಿಯವರ ನೀತಿಪಾಠಗಳೆ ಪೂಜ್ಯ ಡಾ: ಹೆಗ್ಗಡೆಯವರ ಗುಣಧರ್ಮ ಹಾಗೂ ಗುಣಸ್ವಭಾವವನ್ನು ಇಮ್ಮಡಿಗೊಳಿಸಿತ್ತಲ್ಲದೇ, ಅಜ್ಜಿಯವರ ಉದಾತ್ತ ಗುಣಗಳೆ ಅವರನ್ನು ಪ್ರಭಾವಿತರನ್ನಾಗಿಸಿತ್ತು.ಹೀಗೆ ಬೆಳೆದ ಪೂಜ್ಯ ಹೆಗ್ಗಡೆಯವರು ಬಂಟ್ವಾಳದ ಬೋರ್ಡ್ ಶಾಲೆ, ಉಜಿರೆಯಲ್ಲಿರುವ ಸಿದ್ದವನ ಗುರುಕುಲದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದರು. ಬಳಿಕ ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ ಹಾಗೂ ಅಲ್ಲೆ ಇದ್ದ ಸೈಂಟ್ ಜೋಸೆಪ್ ಶಾಲೆಗಳಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ಸೈಂಟ್ ಜೋಸೆಪ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಓದಿ, ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ.ಎ ಪದವಿಯನ್ನು ಉನ್ನತ ಅಂಕಗಳೊಂದಿಗೆ ಪಡೆದರು.ಮುಂದೆ ಓದಬೇಕೆಂಬ ಉತ್ಕಟ ಬಯಕೆ ಇತ್ತಾದರೂ, ಕಾಲಚಕ್ರ ಬದಲಾದಂತೆ ಅದೇ ಸಮಯದಲ್ಲಿ ಅವರಪ್ಪ ಇಹಲೋಕವನ್ನು ತ್ಯಜಿಸಿದ ಕಾರಣ ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿ ಪಟ್ಟಾಭಿಷಿಕ್ತರಾಗಬೇಕಾಯ್ತು. ಅದು ದಿನಾಂಕ: 24.10.1968 ರಂದು ಧರ್ಮಸ್ಥಳದ 21 ನೇ ಧರ್ಮಾಧಿಕಾರಿಗಳಾಗಿ ಕೇವಲ 20 ನೇ ವಯಸ್ಸಿನಲ್ಲಿ ಅಧಿಕಾರವನ್ನು ಸ್ವೀಕರಿಸಿದ ಕಾಲಘಟ್ಟವದು.

ಚಿಗುರು ಮೀಸೆಯ ಯುವಕನ ಕೈಗೆ ಶ್ರೀ.ಕ್ಷೇತ್ರದ ಧರ್ಮಾಧಿಕಾರಿ ಎಂಬ ಮಹೋನ್ನತ ಜವಾಬ್ದಾರಿ: ಮುಂದೆ ಇನ್ನೂ ಹೆಚ್ಚು ಓದಬೇಕೆಂಬ ಹಂಬಲವಿದ್ದರೂ ಅದು ಅಸಾಧ್ಯವಾದರೂ, ವಹಿಸಿದ ಕಷ್ಟಕರವಾದ ಧರ್ಮಾಧಿಕಾರಿ ಜವಾಬ್ದಾರಿಯನ್ನು ತನ್ನ ತಾಯಿ ಮಾತೃಶ್ರೀ ರತ್ಮಮ್ಮ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಿರ್ವಹಿಸಿ ಎಲ್ಲರ ಮನಗೆದ್ದಿದ್ದು ಇತಿಹಾಸ. ಇದು ಎಲ್ಲರಿಗೂ ಬರಲು ಸಾಧ್ಯವೆ ಇಲ್ಲ. ಮಹಾನ್ ಪುರುಷರಿಗಷ್ಟೆ ಇಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯಿರುವುದೆನ್ನುವುದನ್ನು ಪೂಜ್ಯ ಹೆಗ್ಗಡೆಯವರ ಬದ್ದತೆ ಹಾಗೂ ಕಾರ್ಯವೈಖರಿಗೆ ಬೇಕಾದ ಸಿದ್ದತೆಯಿಂದ ತಿಳಿಯಬಹುದಾಗಿದೆ.ಎಳೆಯ ಪ್ರಾಯದಲ್ಲೆ ಒಂದು ಮನೆಯನ್ನು ನಿರ್ವಹಿಸಲು ಹೆಣಗಾಡುವ ನಾವು, ಪೂಜ್ಯ ಹೆಗ್ಗಡೆಯವರು ಚತುರ್ವಿದ ದಾನಗಳ ಮೂಲಕ ಗಮನ ಸೆಳೆದಿದ್ದ ಶ್ರೀ.ಕ್ಷೇತ್ರ ಧರ್ಮಸ್ಥಳದ ಎಲ್ಲ ಕೆಲಸ ಕಾರ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದು ಮಾತ್ರ ಅದ್ಬುತವಲ್ಲದೇ ಮತ್ತೇನು ಅಲ್ಲವೆ.
ತಂದೆಯಾದಿಯಾಗಿ ಬಂದ ಪರಂಪರೆಯನ್ನು ಉಳಿಸಿ, ಮತ್ತೇ ಅದನ್ನು ವೈಭವಿಕರಣಗೊಳಿಸಿ, ಶ್ರೀ.ಕ್ಷೇತ್ರ ಧರ್ಮಸ್ಥಳಕ್ಕೆ ಹೊಸ ಸ್ವರೂಪ, ಹೊಸ ಆಕಾರವನ್ನು ಕೊಡುವ ಮೂಲಕ ವಿಶ್ವಮಟ್ಟದಲ್ಲಿ ಧರ್ಮಸ್ಥಳಕ್ಕೆ ಮನ್ನಣೆ ಕೊಡಿಸಿದ ಕೀರ್ತಿ ಮಾತ್ರ ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲಲೆಬೇಕು. ಅನ್ನದಾನ, ಅಭಯದಾನ, ಶಿಕ್ಷಣ, ಆರೋಗ್ಯ ಹೀಗೆ ಇವೆಲ್ಲವುಗಳನ್ನು ಸದೃಢಗೊಳಿಸಿ, ಬೆಳೆಸಿದ ಶ್ರೇಯಸ್ಸು ಹೆಗ್ಗಡೆಯವರಿಗೆ ಸಲ್ಲಲೆಬೇಕು.ಕ್ಷೇತ್ರದ ಧರ್ಮಾಧಿಕಾರಿಗಳಾಗಿ ಅಲ್ಪಾವಧಿಯಲ್ಲೆ ಜನಖ್ಯಾತಿ ಪಡೆದ ಪೂಜ್ಯ ಹೆಗ್ಗಡೆಯವರು ಪೇರಾಡಿಬೀಡಿನ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರನ್ನು ದಿನಾಂಕ: 26.12.1972 ರಲ್ಲಿ ಜೀವನಸಂಗಾತಿಯಾಗಿ ಸ್ವೀಕರಿಸಿದರು. ಪತಿಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಆರೋಗ್ಯ ಮತ್ತು ಶಿಕ್ಷಣ ಹೀಗೆ ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಜ್ಜೆಗೆ ಹೆಜ್ಜೆಯಾಗಿ ಪೂಜ್ಯ ಹೆಗ್ಗಡೆಯವರ ಮಡದಿ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಹೆಜ್ಜೆಯನ್ನೂರಿದರು.ಪೂಜ್ಯ ಹೆಗ್ಗಡೆಯವರು ಧರ್ಮಾಧಿಕಾರಿಯಾಗಿ ಶ್ರೀ.ಕ್ಷೇತ್ರದ ಪುರೋ ಅಭಿವೃದ್ಧಿಗಾಗಿ ತನ್ನನ್ನು ತಾನು ಸಮರ್ಪಣಾಭಾವದಿಂದ ಸಮರ್ಮಿಸಿಕೊಂಡಿದ್ದಾರೆ. ಅದರ ಫಲಶೃತಿಯಾಗಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಉಳಿದುಕೊಳ್ಳಲು ಒಂದಿಷ್ಟು ತೊಂದರೆಯಾಗಬಾರದೆಂದು ಸಂಕಲ್ಪಸಿ ಹೆಜ್ಜೆ, ಹೆಜ್ಜೆಗೆ ಅತಿಥಿಗೃಹಗಳನ್ನು ನಿರ್ಮಿಸಿದರು. ಇವತ್ತು ಕ್ಷೇತ್ರಕ್ಕೆ ಎಷ್ಟೆ ಭಕ್ತರು ಬಂದರೂ ಬಂದಂಥಹ ಭಕ್ತರಿಗೆ ಸಕಲ ವ್ಯವಸ್ಥೆಯೊಂದಿಗೆ ಉಳಿದುಕೊಳ್ಳುವ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ವಿಶಾಲವಾದ ಮತ್ತು ಅಷ್ಟೇ ಸುಸಜ್ಜಿತವಾದ ಅತಿಥಿಗೃಹಗಳು ಭಕ್ತರನ್ನು ಕೈ ಬೀಸಿ ಕರೆಯುತ್ತಿವೆ.ಪೂಜ್ಯ ಹೆಗ್ಗಡೆಯವರ ಅಮ್ಮ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಕನಸನ್ನು ನನಸು ಮಾಡುವ ಸಂಕಲ್ಪವನ್ನು ತೊಟ್ಟ ಪೂಜ್ಯ ಹೆಗ್ಗಡೆಯವರು 1982 ರಲ್ಲಿ ಶ್ರೀ.ಕ್ಷೇತ್ರ ಧರ್ಮಸ್ಥಳದಲ್ಲಿ 39 ಅಡಿ ಎತ್ತರದ ಶ್ರೀ ಭಗವಾನ್ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಟಾಪಿಸಿದರು. ಇದು ಪೂಜ್ಯ ಹೆಗ್ಗಡೆಯವರ ಜೀವನದಲ್ಲಿ ನಡೆದ ಮಹತ್ಸಾಧನೆ ಎಂದರೇ ಅತಿಶಯೋಕ್ತಿ ಎನಿಸದು. ಅಷ್ಟೇತ್ತರದ ಮೂರ್ತಿಯನ್ನು ಪ್ರತಿಷ್ಟಾಪಿಸುವ ಕಾರ್ಯವಿದೆಯಲ್ಲಾ ಅದು ಅಷ್ಟು ಸುಲಭದ ಕೆಲಸವಲ್ಲ. ಇಂತಹ ಸಾಹಸ ಕಾರ್ಯವನ್ನು ಸಲೀಸಾಗಿ ನಿರ್ವಹಿಸಿದ ಪೂಜ್ಯರ ಜಾಣ್ಮೆಗೆ ಕೈಮುಗಿಯಲೆಬೇಕು.1982 ನೇ ವರ್ಷ ಪೂಜ್ಯ ಹೆಗ್ಗಡೆಯವರ ಪಾಲಿಗೆ ಮಹತ್ವದ ವರ್ಷ: ಭಗವಾನ್ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಸವಿನೆನಪಿಗಾಗಿ ಪೂಜ್ಯ ಹೆಗ್ಗಡೆಯವರು ಲೋಕಸುಭೀಕ್ಷೆ ಹಾಗೂ ಸ್ವಸ್ಥ ಸಮಾಜ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಪ್ರಾರಂಭಿಸಿದ ಸಂಸ್ಥೆಯೆ ಶ್ರೀ.ಕ್ಷೇತ್ರ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.

ವಿಶ್ವಮಟ್ಟದಲ್ಲಿ ಗಮನ ಸೆಳೆದ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪೂಜ್ಯ ಹೆಗ್ಗಡೆಯವರು ತನ್ನ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಏಕಾಏಕಿ ಪ್ರಾರಂಭಿಸಿಲ್ಲ. ಮೊದಲಾಗಿ ಅತ್ಯಂತ ಹಿಂದುಳಿದಿದ್ದ ಮತ್ತು ಬಡತನದ ದಾರಿದ್ರ್ಯದಲ್ಲಿ ಬಸವಳಿದಿದ್ದ ಬೆಳ್ತಂಗಡಿ ತಾಲೂಕಿನ ರೈತರನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಬೇಕೆಂದು ಸಂಕಲ್ಪಿಸಿ, ಕಾರ್ಯಕರ್ತರನ್ನು ನೇಮಿಸಿಕೊಂಡರು. ಅಂದಿನ ಊಟಕ್ಕೆ ಪರದಾಡುತ್ತಿದ್ದ ನಮ್ಮೂರಿನ ರೈತರಿಗೆ ಬದುಕಿಗೆ ಅಗತ್ಯವಾಗಿ ಬೇಕಾದ ಮೂಲಸೌಕರ್ಯಗಳನ್ನು ವಿತರಿಸುವ ಕಾರ್ಯಕ್ಕೆ ಇಳಿದ ಡಾ: ಹೆಗ್ಗಡೆಯವರು, ಅಕ್ಕಿ, ಬೆಳೆ, ಚಾಪೆ, ಚಾದರ, ಬಟ್ಟೆ, ಬರೆ, ಪಾತ್ರೆ-ಪಗಡೆಗಳನ್ನು ಹಾಗೂ ಇನ್ನಿತರ ನಿತ್ಯೋಪಯೋಗಿ ವಸ್ತುಗಳನ್ನು ಕೊಟ್ಟು ಆರಂಭದ ಧೈರ್ಯವನ್ನು ನೀಡಿದರು.ಜಗತ್ತಿಗೆ ಹೊಸ ಪರಿಕಲ್ಪನೆ-ಶ್ರಮ ವಿನಿಮಯ ಗುಂಪಿಗೆ ಚಾಲನೆ ನೀಡಿದ ಪೂಜ್ಯ ಹೆಗ್ಗಡೆಯವರು: ಪೂಜ್ಯ ಹೆಗ್ಗಡೆಯವರು ಯಾವುದೇ ಯೋಜನೆ, ಕಾರ್ಯಕ್ರಮಗಳನ್ನು ಜಾರಿಮಾಡುವ ಮುಂಚೆ ಸ್ವತ: ಚಿಂತಿಸುತ್ತಾರೆ. ಕಾರ್ಯಕ್ರಮಗಳ ಅನುಷ್ಟಾನ ಯಾಕೆ? ಹೇಗೆ ಎಂಬುವುದನ್ನು ಅವರೇ ಸಿದ್ದತೆ ಮಾಡಿಕೊಂಡು ಮಾರ್ಗದರ್ಶನ ನೀಡುತ್ತಾರೆ. ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 1982 ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ರೈತರ ಸಮಸ್ಯೆಗಳಿಗೆ ಬೆಳಕು ಚೆಲ್ಲಬೇಕೆಂದು ಸಂಕಲ್ಪಿಸಿಕೊಂಡು ಐದರಿಂದ ಹತ್ತು ಜನರ ರೈತರುಗಳ ಗುಂಪುಗಳನ್ನು ಕಟ್ಟಲು ಪ್ರೇರಣೆಯಾದರು.

ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಮೂಲಕ ಬೆಳ್ತಂಗಡಿ ತಾಲೂಕಿನೆಲ್ಲೆಡೆ ಹಳ್ಳಿ ಹಳ್ಳಿಗಳಲ್ಲಿ 5 ರಿಂದ 10 ಜನರ ಗುಂಪುಗಳನ್ನು ಕಟ್ಟಿ ಅದಕ್ಕೆ ಪ್ರಗತಿಬಂಧು ತಂಡ ಎಂದು ಹೆಸರನ್ನು ನೀಡಿ, ಪ್ರತಿ ವಾರ ಒಬ್ಬೊಬ್ಬರ ಮನೆಯಲ್ಲಿ ಕೃಷಿ ಕೆಲಸ ಮಾಡುವ ಹೊಸ ಪರಿಕಲ್ಪನೆಯೆ ಶ್ರಮ ವಿನಿಮಯ. ಹೀಗೆ ಮುಂದುವರೆದ ಈ ತಂಡಗಳ ಸದಸ್ಯರುಗಳು ಶ್ರಮ ವಿನಿಮಯದ ಮೂಲಕ ತಮ್ಮ ಬರಡು ಭೂಮಿಯನ್ನು ಹಸಿರಾಗಿಸಿಕೊಳ್ಳಲು ಮುಂದಡಿಯಿಟ್ಟರು.ಈ ಶ್ರಮವಿನಿಮಯದ ದಿನದಂದು ಕನಿಷ್ಟವೆಂದರೂ: ರೂ:10 ನ್ನು ಉಳಿತಾಯ ಮಾಡಿಕೊಳ್ಳುವುದರ ಮೂಲಕ ಮುಂದೆ ಆರು ತಿಂಗಳ ಬಳಿಕ ಅವರದ್ದೇ ಜಮೆಯಾದ ಉಳಿತಾಯ ಹಣವನ್ನು ಆಂತರಿಕ ಸಾಲವಾಗಿ ನೀಡುವಂತಹ ಕಾರ್ಯ ಮುಂದುವರಿಯಿತು. ಹೀಗೆ ಬೆಳೆದ ಪ್ರಗತಿ ಬಂಧು ತಂಡಗಳಿಗೆ ಮುಂದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಮಾಹಿತಿ, ತರಬೇತಿಗಳನ್ನು ನೀಡಿ, ಆರ್ಥಿಕವಾಗಿ ಲಾಭಗಳಿಕೆಯ ಕೃಷಿ ಚಟುವಟಿಕೆಗಳನ್ನು ಮಾಡಲು ಉತ್ತೇಜಿಸಲಾಯಿತು.

ಹೀಗೆ ಬೆಳೆದ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯದಿಂದ ಪ್ರಭಾವಿತರಾದ ನಮ್ಮ ತಾಲೂಕಿನ ರೈತರು ಮುಂದೆ ಬೆಳೆಯುತ್ತಾ, ಕೃಷಿ ಚಟುವಟಿಕೆಯನ್ನು ಇನ್ನಷ್ಟು ವಿಸ್ತಾರಗೊಳಿಸುವಂತಾಗಬೇಕೆಂದು, ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನೇರವಾಗಿ ಹಾಗೂ ಬ್ಯಾಂಕ್ ಮೂಲಕ ಆಯಾಯ ಸಂಘಗಳಿಗೆ ಸಾಲ ನೀಡುವ ವ್ಯವಸ್ಥೆಯನ್ನು ಮಾಡಿಕೊಡಲಾಯಿತು.

ಇದರ ಪರಿಣಾಮವಾಗಿ ಸಹಸ್ರ ಸಂಖ್ಯೆಯಲ್ಲಿ ರೈತರು ನೀರಾವರಿ ವ್ಯವಸ್ಥೆಯನ್ನು ಮಾಡಿದರು. ನೀರಿನ ಪಂಪ್, ಬೋರ್ ವೆಲ್, ಗೊಬ್ಬರ್ ಗ್ಯಾಸ್ ಘಟಕ, ಖಾಲಿಯಿರುವ ಜಾಗದಲ್ಲಿ ಅಡಿಕೆ ಹೀಗೆ ಇನ್ನಿತರ ವಾಣಿಜ್ಯ ಬೆಳೆಗಳನ್ನು ಬೆಳೆಸಲು ಮುಂದಾದರು. ಹರುಕು-ಮುರುಕು ಮನೆಯನ್ನು ಕೆಡವಿ ಹೊಚ್ಚ ಹೊಸ ಮನೆಯನ್ನು ನಿರ್ಮಿಸಿಕೊಳ್ಳಲಾರಂಭಿಸಿದರು. ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಲಾರಂಭಿಸಿದರು.

ಹೊಲ ಚಟುವಟಿಕೆಯ ಜೊತೆಗೆ ಉಪಕಸುಬುಗಳಾದ ಹೈನುಗಾರಿಕೆ, ಆಡು ಸಾಕಾಣಿಕೆ, ತರಕಾರಿ ಕೃಷಿ, ಬಾಳೆ, ಹೂವು ಹೀಗೆ ಇನ್ನೂ ಅನೇಕ ಉಪ ಕಸುಬುಗಳ ಸಮಗ್ರ ಮಾಹಿತಿಯನ್ನು ನೀಡಿ, ದುಡ್ಡಿಲ್ಲದೇ ದೀಪಾವಳಿಯನ್ನೆ ಆಚರಿಸದ ಮನೆಗಳಲ್ಲೂ ದೀಪಾವಳಿ ಆಚರಿಸುವಂತಾಗಲೂ ಪೂಜ್ಯ ಹೆಗ್ಗಡೆಯವರ ಕನಸಿನ ಕೂಸು ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖ ಕಾರಣವಾಯ್ತು.

ಮನೆಯಿಂದ ಹೊರಬೀಳದ ಅದೆಷ್ಟೊ ಮಹಿಳೆಯರು ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ, ಸ್ವಸಹಾಯ ಸಂಘಗಳಲ್ಲಿ ಸೇರಿಕೊಂಡು ಮನೆಗೆ ಆರ್ಥಿಕ ಲಕ್ಷ್ಮಿಯಾಗತೊಡಗಿದರು. ನಿರಂತರ ತರಬೇತಿ, ಮಾರ್ಗದರ್ಶನದ ಫಲವಾಗಿ ನಿರುದ್ಯೋಗಿಗಳು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಯಶಸ್ವಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡ ಪರಿ ನಿಜಕ್ಕೂ ಗ್ರೇಟ್. ಡಾ: ಹೆಗ್ಗಡೆಯವರ ಕಲ್ಪನೆಯಲ್ಲಿ ಹೊರಬಂದ ಈ ಯೋಜನೆ ಶರವೇಗದಲ್ಲಿ ಸಾಧನೆಗೈದು ಬೆಳ್ತಂಗಡಿಯಿಂದ ಕಾರ್ಕಳ, ಪುತ್ತೂರು ಹೀಗೆ ರಾಜ್ಯದಲ್ಲೆಡೆ ಕಾರ್ಯ ನಿರ್ವಹಿಸುತ್ತಿದೆ.

ಲಕ್ಷಾಂತರ ಜನರು ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕತ್ತಲಿನಿಂದ ಬೆಳಕಿನಡೆಗೆ ಯಶಸ್ವಿ ಹೆಜ್ಜೆಯನ್ನಿಟ್ಟಿದ್ದಾರೆ. ಲಕ್ಷಾಂತರ ಜನರು ರಾಜ್ಯದೆಲ್ಲೆಡೆ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಾಗಿ ಯೋಜನೆಯ ಮಾರ್ಗದರ್ಶನದಲ್ಲಿ ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯುತ್ತಿದ್ದಾರೆ. ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸರಿ ಸುಮಾರು ಎಂದರೂ 20 ರಿಂದ 25 ಸಾವಿರ ಕಾರ್ಯಕರ್ತರು ಉದ್ಯೋಗವನ್ನು ಪಡೆದು ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.

ಪರಂಪರಾಗತವಾಗಿ ಬಂದ ಕೃಷಿಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿರುವುದರ ಜೊತೆಗೆ ಸಾವಯವ ಕೃಷಿಗೆ ಒತ್ತು ನೀಡುತ್ತಾ ಬಂದಿರುವ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನ ಅಮೂಲಾಗ್ರ ಹಾಗೂ ವೈಶಿಷ್ಟ್ಯಪೂರ್ಣ ಕಾರ್ಯಚಟುವಟಿಕೆಗಳಿಂದಾಗಿ ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರಗತಿ ಬಂಧು ತಂಡ, ಜ್ಞಾನವಿಕಾಸ, ಸ್ವಸಹಾಯ ಸಂಘಗಳನ್ನು ಮುನ್ನಡೆಸುತ್ತಿರುವುದಲ್ಲದೇ, ಸಂಘಗಳ ಸದಸ್ಯರಿಗೆ ಅನುಕೂಲವಾಗಲೆಂದು ಹಾಗೂ ಅವರ ಆರೋಗ್ಯ ಸಂರಕ್ಷಣೆಗಾಗಿ ಸಂಪೂರ್ಣ ಸುರಕ್ಷಾ ಎಂಬ ಹೆಮ್ಮೆಯ ಆರೋಗ್ಯ ವಿಮಾ ಯೋಜನೆ ಲಕ್ಷಾಂತರ ಜನರ ಬದುಕಿಗೆ ಮತ್ತು ಜೀವನಕ್ಕೆ ನೆರವಾಗಿದೆ. ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳ ಮಕ್ಕಳಿಗಾಗಿ ವಿದ್ಯಾರ್ಥಿ ವೇತನ, ಅನಾಥರಿಗೆ, ದುರ್ಬಲರಿಗೆ ಮಾಶಸಾನ ಹೀಗೆ ಇನ್ನೂ ಅನೇಕ ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ.

ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಬರಡು ಭೂಮಿ ಹಚ್ಚ ಹಸಿರಾಗಿ ರೈತನ ಬೆವರ ಹನಿಗೆ ನಿಜವಾದ ಫಲವನ್ನು ನೀಡುವಂತಾಗಿದೆ. ಅದೇಷ್ಟೊ ಮಕ್ಕಳು ಉನ್ನತ ಶಿಕ್ಷಣ ಪಡೆದು ರಾಷ್ಟ್ರದ ಆಸ್ತಿಗಳಾಗಿದ್ದಾರೆ ಮತ್ತು ಆಸ್ತಿಗಳಾಗುತ್ತಿದ್ದಾರೆ. ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರಂತರ ಮಾರ್ಗದರ್ಶನ, ಜಾಗೃತಿಯ ಫಲಶೃತಿಯಾಗಿ ಅಪರಾಧ ಚಟುವಟಿಕೆಗಳು ಕ್ಷೀಣಗೊಂಡು ಸ್ವಸ್ಥ ಸಮಾಜ ನಿರ್ಮಾಣವಾಗಿದೆ, ನಿರ್ಮಾಣವಾಗುತ್ತಿದೆ.

ಮಹಿಳಾ ಸ್ವಾವಲಂಬನೆಗಾಗಿ ಮೊಳಕೆಯೊಡೆದ ಸಿರಿ ಗ್ರಾಮೋದ್ಯೋಗ ಘಟಕ: ಪೂಜ್ಯ ಡಾ: ಹೆಗ್ಗಡೆಯವರ ಕನಸಿನ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನನ್ನದೊಂದು ಪಾಲಿರಲಿ ಎಂಬ ಅಭಿಮಾನ ಹಾಗೂ ಮನಸ್ಸಿನಿಂದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಪ್ರಾರಂಭಿಸಿದ ದೇಶದಲ್ಲೆ ಮೊದಲ ಎನ್ನಬಹುದಾದ ಹಳ್ಳಿ ಹಳ್ಳಿಗಳಲ್ಲಿ 30 ರಿಂದ 60 ರವರೆಗೆ ಮಹಿಳೆಯರನ್ನು ಒಳಗೊಂಡ ಜ್ಞಾನವಿಕಾಸ ಮಹಿಳಾ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಮಹಿಳೆಯರನ್ನು ಉಳಿತಾಯ, ಸಾಲ ಚಟುವಟಿಕೆ ಹಾಗೂ ವಿವಿಧ ಜಾಗೃತಿ ತರಬೇತಿಗಳನ್ನು ನೀಡಿ ಅವರನ್ನು ಸಶಸಕ್ತರನ್ನಾಗಿಸಲಾಯಿತು.

ಇದರ ಮುಂದುವರಿದ ಭಾಗವಾಗಿ ಜ್ಞಾನವಿಕಾಸ ಕೇಂದ್ರದ ಸದಸ್ಯರನ್ನು ಸ್ವ ಉದ್ಯೋಗದ ಕಡೆಗೆ ಕೊಂಡೊಯ್ದು, ಸ್ವ ಉದ್ಯೋಗ ತರಬೇತಿಗಳನ್ನು ನೀಡಿ ಅವರಿಂದ ವಿವಿಧ ಆಹಾರ ಹಾಗೂ ಮನೆ ಬಳಕೆ ವಸ್ತುಗಳನ್ನು ತಯಾರಿಸುವ ಘಟಕವನ್ನು ಮಾಡಿಸಿಕೊಂಡು, ಅವರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸಲೆಂದೆ ಸಿರಿ ಗ್ರಾಮೋದ್ಯೋಗ ಘಟಕವನ್ನು ಪ್ರಾರಂಭಿಸಲಾಯಿತು. ಈಗಾಗಲೆ 16-17 ವರ್ಷಗಳಿಂದ ಸಿರಿ ಗ್ರಾಮೋದ್ಯೋಗ ಘಟಕ ರಾಜ್ಯವ್ಯಾಪಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ.

ಗ್ರಾಮೀಣ ಶ್ರೇಷ್ಟತಾ ಕೇಂದ್ರ : ವಿವಿಧ ತರಬೇತಿಗಳನ್ನು ನೀಡುವ ನಿಟ್ಟಿನಲ್ಲಿ ತನ್ನದೇ ಆದ ಪರಿಕಲ್ಪನೆಯಲ್ಲಿ ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ಗ್ರಾಮೀಣ ಶ್ರೇಷ್ಟತಾ ಕೇಂದ್ರವನ್ನು ಪೂಜ್ಯ ಹೆಗ್ಗಡೆಯವರು ಸ್ಥಾಪಿಸಿದ್ದಾರೆ. ಈ ಕೇಂದ್ರದ ಮೂಲಕ ವಿವಿಧ ಸ್ವ ಉದ್ಯೋಗ, ವ್ಯಕ್ತಿತ್ವ ವಿಕಸನ, ಉದ್ಯಮಶೀಲತಾ ತರಬೇತಿ ಸೇರಿದಂತೆ ಸರಕಾರದ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಇಲ್ಲಿ ಅನುಷ್ಟಾನ ಪಡಿಸಲಾಗುತ್ತಿದೆ.

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆ: ರೈತರು ಮದ್ಯಪಾನದಂತಹ ದುಶ್ಚಟಕ್ಕೆ ಬಲಿಯಾಗುತ್ತಿರುವುದರಿಂದ ಅಭಿವೃದ್ಧಿ ಮರೀಚಿಕೆ ಅಂದುಕೊಂಡ ಪೂಜ್ಯ ಡಾ: ಹೆಗ್ಗಡೆಯವರು ಮೊತ್ತ ಮೊದಲ ಬಾರಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಜನಜಾಗೃತಿ ವೇದಿಕೆ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಆ ಸಂಸ್ಥೆಯ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಂಡು ಕುಡುಕರನ್ನು ಕುಡಿತದ ಚಟದಿಂದ ಬಿಡಿಸಿ ಅವರುಗಳು ಸನ್ಮಾರ್ಗದತ್ತ ಜೀವನ ನಡೆಸುವಂತಾಗಲೂ ಪ್ರಾಮಾಣಿಕ ಪ್ರಯತ್ನಿಸಲಾಗುತ್ತಿದೆ.

ಇಂದು ಜನಜಾಗೃತಿ ವೇದಿಕೆ ಇಡೀ ರಾಜ್ಯದೆಲ್ಲಡೆ ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಟೊಂಕಕಟ್ಟಿ ನಿಂತಿದೆ. ಜನಜಾಗೃತಿ ವೇದಿಕೆ ಪೂಜ್ಯ ಹೆಗ್ಗಡೆಯವರ ದೂರದರ್ಶಿತ್ವದ ಕನಸಿನ ಕೂಸು. ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಬರೆಯಲು ಹೋದರೇ ಪುಟಗಳೆ ಸಾಲದು, ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಭೂತಪೂರ್ವ ಸಾಧನೆಗಳೆಲ್ಲವನ್ನು ಬಹುತೇಕ ರಾಜ್ಯದ ಜನತೆ ಹತ್ತಿರದಿಂದ ಬಲ್ಲವರಾಗಿದ್ದಾರೆ. ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳೆ ಸರಕಾರದ ವಿವಿಧ ಕಾರ್ಯಕ್ರಮಗಳಿಗೂ ಪ್ರೇರಣೆಯೆ ಆಗಿದೆ.

ಶ್ರೀ.ಕ್ಷೇತ್ರ ಧರ್ಮಸ್ಥಳ ಸಮುದಾಯಾಭಿವೃದ್ಧಿ ಕಾರ್ಯಕ್ರಮ: ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲೆ ಕಾರ್ಯನಿರ್ವಹಿಸುವ ಇನ್ನೊಂದು ಮಹತ್ತರ ಕಾರ್ಯಕ್ರಮ ಶ್ರೀ.ಕ್ಷೇತ್ರ ಧರ್ಮಸ್ಥಳ ಸಮುದಾಯಾಭಿವೃದ್ಧಿ ಕಾರ್ಯಕ್ರಮ. ರಾಜ್ಯದ ವಿವಿಧ ದೇವಸ್ಥಾನಗಳ ಜೀರ್ಣೋಧ್ದಾರ, ನಿರ್ಮಾಣ, ಶಾಲಾ/ಕಾಲೇಜುಗಳ ಕಟ್ಟಡ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ಭಜನಾ ಮಂದಿರಗಳ ನಿರ್ಮಾಣ, ಕುಡಿಯುವ ನೀರಿನ ಘಟಕ, ಆವರಣ ಗೋಡೆ, ಸೇತುವೆ, ಮುಕ್ತಿಧಾಮಗಳ ನಿರ್ಮಾಣ, ಉದ್ಯಾನವನಗಳ ನಿರ್ಮಾಣ, ಕಿರು ಆಣೆಕಟ್ಟುಗಳ ನಿರ್ಮಾಣ, ಕೆರೆಗಳ ಹೂಳೆತ್ತುವಿಕೆ ಹೀಗೆ ವಿವಿಧ ಜನಪಯೋಗಿ ಮತ್ತು ಸಮಾಜೋಪಯೋಗಿ ಮೂಲಭೂತ ಸೌಕರ್ಯಗಳ ಜೊಡಣೆಗಾಗಿ ಆರ್ಥಿಕ ನೆರವಿನ ಹಸ್ತವನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಗುತ್ತಿದೆ. ಈ ಕಾರ್ಯಕ್ರಮಗಳು ಸಹ ಪೂಜ್ಯ ಹೆಗ್ಗಡೆಯವರ ಸಕಲ ಮಾರ್ಗದರ್ಶನದಲ್ಲೆ ನಡೆಯುತ್ತಿದೆ ಎನ್ನುವುದು ಅಭಿಮಾನದ ವಿಚಾರ.

ಹೊಟ್ಟೆ ತುಂಬ ಊಟ-ಆಹಾ ಏನು ರುಚಿ, ಏನು ಸ್ವಚ್ಚತೆ: ಅತ್ಯಂತ ಸ್ವಚ್ಚತೆ ಹಾಗೂ ರುಚಿಕರವಾದ ಅನ್ನಪ್ರಸಾಧವನ್ನು ನೀಡುತ್ತಿರುವ ಶ್ರೀ.ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಛತ್ರಕ್ಕೆ ಅನ್ನಪೂರ್ಣ ಛತ್ರವೆ ಸಾಟಿ. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಹೀಗೆ ಎರಡು ಹೊತ್ತು ಹೊಟ್ಟೆತುಂಬ ಅನ್ನಪ್ರಸಾಧವನ್ನು ಭಕ್ತಾಧಿಗಳಿಗೆ ಗೌರವದಿಂದ ಉಣಬಡಿಸಲಾಗುತ್ತಿದೆ. ಏಕಕಾಲದಲ್ಲಿ ಮೂರುಸಾವಿರ ಜನರಿಗೆ ಊಟ ಮಾಡುವ ಅವಕಾಶದೊಂದಿಗೆ ಅತ್ಯಾಧುನೀಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿರುವುದು ಅನ್ನಪೂರ್ಣ ಛತ್ರದ ವಿಶೇಷ.

ಭಕ್ತರಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಶಿಸ್ತಿನ ಸರತಿ ಸಾಲಿಗೆ ಅಗತ್ಯ ವ್ಯವಸ್ಥೆ: ಕ್ಷೇತ್ರದಲ್ಲಿ ಪ್ರತಿದಿನವೂ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಾರೆ. ಪ್ರತಿಯೊಬ್ಬರಿಗೂ ತೊಂದರೆಯಾಗದಿರಲೆಂದು ಅದೂ ಮಳೆಯಿರಲಿ, ಬೇಸಿಗೆಯಿರಲಿ, ಯಾವುದಕ್ಕೂ ತೊಂದರೆಯಾಗದಿರಲೆಂದು ಸರತಿ ಸಾಲಿನಲ್ಲಿ ಭಗವಂತನ ಸನ್ನಿಧಿಗೆ ಹೋಗಲು ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲಿಯವರೆಗೆ ಅಂದ್ರೆ ಭಕ್ತರ ಚಪ್ಪಲು ಸಹಿತ ಮಿಸ್ ಆಗದಿರಲೆಂದು ಪಾದರಕ್ಷೆ ಇಡುವ ಭದ್ರತಾ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ.

ನೇತ್ರಾವತಿಯಲ್ಲಿಯೂ ವಿಶೇಷ ಭದ್ರತೆ-ಮೂಲಸೌಕರ್ಯ: ಮಂಜುನಾಥನ ದರ್ಶನ ಪಡೆಯುವ ಮುಂಚೆ ನೇತ್ರಾವತಿಯಲ್ಲಿ ಮಿಂದು ದರ್ಶನ ಪಡೆಯುವ ವಾಡಿಕೆಯನ್ನು ಸಾಕಷ್ಟು ಭಕ್ತರು ಪಾಲಿಸಿಕೊಂಡು ಬಂದಿರುತ್ತಾರೆ. ನೇತ್ರಾವತಿ ನದಿಯಲ್ಲಿ ಏನು ಅನಾಹುತ ನಡೆಯದಿರಲೆಂದು ಅಲ್ಲಿಯೂ ಸಾಕಷ್ಟು ಭದ್ರತಾ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಿದ ಶ್ರೇಯಸ್ಸು ನಮ್ಮ ಹೆಗ್ಗಡೆಯವರಿಗೆ ಸಲ್ಲಲೆಬೇಕು.

ಶೈಕ್ಷಣಿಕ ಕ್ಷೇತ್ರಕ್ಕೆ ಅಗ್ರಣೀಯ ಕೊಡುಗೆ ನೀಡುತ್ತಿರುವ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳು: ಧಾರ್ಮಿಕವಾಗಿ ತನ್ನದೇ ಆದ ಛಾಪನ್ನು ಮೂಡಿಸಿರುವ ಡಾ: ಡಿ.ವೀರೇಂದ್ರ ಹೆಗ್ಗಡೆಯವರು ಶೈಕ್ಷಣಿಕ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವುದು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಬಹುದೊಡ್ಡ ಕೊಡುಗೆ ಎಂದೆ ಹೇಳಬಹುದು. ಶ್ರೀ.ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಹೆಸರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಸೇರಿ 10 ಶಾಲೆಗಳು, 3 ಪಿಯು ಕಾಲೇಜುಗಳು, 2 ಪದವಿ ಕಾಲೇಜುಗಳು, ಸ್ನಾತಕೋತ್ತರ ಪದವಿ ಕಾಲೇಜು, ಮಂಗಳೂರಿನಲ್ಲಿ ಕಾನೂನು ಪದವಿ ಕಾಲೇಜು, 6 ಮೆಡಿಕಲ್ ಕಾಲೇಜ್, 3 ವಾಣಿಜ್ಯ ವಿಷಯ ಕಾಲೇಜುಗಳು, 5 ತಾಂತ್ರಿಕ ಕಾಲೇಜುಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ.

ಅಂಗವಿಕಲರ ಕಲ್ಯಾಣ ಸಂಸ್ಥೆಗಳನ್ನು ಪ್ರಾರಂಭಿಸಿ ಅಂಗವಿಕಲ ವಿದ್ಯಾರ್ಥಿಗಳಿಗೆ ಡಾ: ಹೆಗ್ಗಡೆಯವರು ಶೈಕ್ಷಣಿಕವಾಗಿ ಬೆಳಕು ನೀಡಿದ್ದಾರೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಪ್ರಮುಖವಾಗಿ ದಕ್ಷಿಣ ಕನ್ನಡ, ಉಡುಪಿ, ಹಾಸನ, ಧಾರವಾಡ, ಮೈಸೂರು ಮೊದಲಾದ ಕಡೆಗಳಲ್ಲಿ ಶಿಕ್ಷಣ ಸೇವೆಯನ್ನು ನೀಡಲಾಗುತ್ತಿದೆ. ಒಟ್ಟಿನಲ್ಲಿ ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 5 ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷವಾಗಿ ಹೇಳುವುದಾದರೇ ಉಚಿತ ವಸತಿಯೊಂದಿಗೆ ಶಿಕ್ಷಣವನ್ನು ನೀಡುವ ರತ್ನಮಾನಸಾ ಕೇಂದ್ರ, ಅತ್ಯಂತ ಕಡಿಮೆ ಪ್ರವೇಶ ಶುಲ್ಕದೊಂದಿಗೆ ಉಚಿತ ಊಟ ವಸತಿ ನೀಡುವ ಗುರುಕುಲ ಮಾದರಿಯ ಸಿದ್ದವನ ಗುರುಕುಲ ಕೇಂದ್ರಗಳು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಮೈಲಿಗಲ್ಲುಗಳಾಗಿ ಗಮನ ಸೆಳೆದಿವೆ.

ಆರೋಗ್ಯ ಸೇವೆಗೈಯುವ ಎಸ್.ಡಿ.ಎಂ ಆಸ್ಪತ್ರೆಗಳು: ಆರೋಗ್ಯ ಕ್ಷೇತ್ರಕ್ಕೂ ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರು ವಿಶೇಷ ಮುತುವರ್ಜಿ ವಹಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಎಸ್.ಡಿ.ಎಂ ಆಸ್ಪತ್ರೆಗಳು ಆರೋಗ್ಯ ಸೇವೆಯನ್ನು ನೀಡುತ್ತಿದೆ. ಸುಸಜ್ಜಿತ ಕಟ್ಟಡ, ಅತ್ಯಾಧುನೀಕ ತಂತ್ರಜ್ಞಾನವನ್ನು ಆಳವಡಿಸಿರುವ ಎಸ್.ಡಿ.ಎಂ ಆಸ್ಪತ್ರೆಗಳು ಇಂದು ಸೇವಾಗುಣಮಟ್ಟದಲ್ಲಿ ತನ್ನ ಹೆಸರನ್ನು ಭದ್ರವಾಗಿಸಿಕೊಂಡಿವೆ.

ಶ್ರೀ.ಧರ್ಮಸ್ಥಳ ಮೆಡಿಕಲ್ ಟ್ರಸ್ಟ್ : ಪೂಜ್ಯ ಹೆಗ್ಗಡೆಯವರು ವಿಶಿಷ್ಟ ವ್ಯಕ್ತಿತ್ವದ ಸರ್ವಜ್ಞ ಎಂಬಂತಿದ್ದಾರೆ. ಅವರ ಮತ್ತೊಂದು ವಿಶಿಷ್ಟ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಮೆಡಿಕಲ್ ಟ್ರಸ್ಟ್ ಎಂಬ ಸಂಸ್ಥೆ. ಈ ಸಂಸ್ಥೆಯ ಮೂಲಕ ಹಲವಾರು ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಖ್ಯಾತಿ ಪೂಜ್ಯ ಹೆಗ್ಗಡೆಯವರಿಗಿದೆ. ಒಂದು ಕಾಲದಲ್ಲಿ ಇ.ಬಿ ಕಾಯಿಲೆಯಿಂದ ಬಾಧಿತರಾದವರಿಗೆ ಉಚಿತ ಆರೋಗ್ಯ ಸೇವೆ ನೀಡಬೇಕೆಂಬ ಸದುದ್ದೇಶದಿಂದ ಉಜಿರೆ ಸಮೀಪದ ಹಳೆಪೇಟೆ ರಸ್ತೆಯಲ್ಲಿ ಒಳಗೆ ಸ್ವಲ್ಪ ಮುಂದೆ ಎಸ್.ಡಿ.ಎಂ ಟಿ.ಬಿ ಆಸ್ಪತ್ರೆಯನ್ನು ಪ್ರಾರಂಭಿಸಿದರು. ಈ ಆಸ್ಪತ್ರೆಯಿಂದ ಲಕ್ಷಾಂತರ ರೋಗಿಗಳಿಗೆ ನೆಮ್ಮದಿಯ ಮರುಜನ್ಮ ಪ್ರಾಪ್ತವಾಗಿದೆ.

ಸಂಚಾರಿ ಆರೋಗ್ಯ ಸೇವಾ ಘಟಕ : ಅದ್ಬುತ ಮತ್ತು ಅನನ್ಯವಾದ ಸೇವಾ ಘಟಕವಿದು. ಪೂಜ್ಯ ಡಾ: ವೀರೇಂದ್ರ ಹೆಗ್ಗಡೆಯವರು ತನ್ನ ಶ್ರೀ.ಧರ್ಮಸ್ಥಳ ಮೆಡಿಕಲ್ ಟ್ರಸ್ಟ್ ಮೂಲಕ ಸಂಚಾರಿ ಆರೋಗ್ಯ ಸೇವಾ ಘಟಕನ್ನು ಪ್ರಾರಂಭಿಸಿ, ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ನೀಡುವ ಅಪ್ರತಿಮ ಕಾರ್ಯವನ್ನು ಪ್ರಾರಂಭಿಸಿ ಇಪ್ಪತ್ತರಿಂದ ಇಪ್ಪತೈದು ವರ್ಷಗಳೆ ಸಂದಿವೆ.

ನನಗಿನಿಸಿದ ಪ್ರಕಾರ ಪೂಜ್ಯ ಡಾ: ಹೆಗ್ಗಡೆಯವರ ಸಂಚಾರಿ ಆರೋಗ್ಯ ಸೇವಾ ಘಟಕವನ್ನು ನೋಡಿಯೆ ರಾಜ್ಯ ಸರಕಾರ 108 ಆರೋಗ್ಯ ಸೇವಾ ಘಟಕವನ್ನು ಪ್ರಾರಂಭಿಸಿರಬಹುದು. ಹಳ್ಳಿ ಹಳ್ಳಿಗೆ ನಿಗದಿತ ದಿನಾಂಕದಂದು ಹೋಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಉಚಿತ ಆರೋಗ್ಯ ಸೇವೆ ನೀಡುವ ಈ ಸಂಚಾರಿ ಆರೋಗ್ಯ ಸೇವಾ ಬಸ್ ಬಡವರ ಪ್ರೀತಿಯ, ನಲ್ಮೆಯ ಆಸ್ಪತ್ರೆಯಾಗಿ ಚಿರಪರಿಚಿತವಾಗಿದೆ.

ಶಾಂತಿವನ ಟ್ರಸ್ಟ್: ಶಾಂತಿವನ ಟ್ರಸ್ಟ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ರಾಜ್ಯದಲ್ಲೆಡೆ ನೈತಿಕ ಹಾಗೂ ಯೋಗ ಶಿಕ್ಷಣವನ್ನು ನೀಡುವ ಎಸ್.ಡಿ.ಎಂ ಯೋಗ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ರಾಜ್ಯದ ವಿವಿದೆಡೆಗಳ ಶಿಕ್ಷಕರುಗಳಿಗೆ ಯೋಗ ತರಬೇತಿಯನ್ನು ನೀಡಿ, ಯೋಗವನ್ನು ಜನಮಾನಸಕ್ಕೆ ಪರಿಚಯಿಸುವ ಕೆಲಸವನ್ನು ಪೂಜ್ಯ ಹೆಗ್ಗಡೆಯವರು ಕಳೆದ ಹಲವು ವರ್ಷಗಳಿಂದ ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ. ಇದೇ ಶಾಂತಿವನ ಟ್ರಸ್ಟಿನಿಂದ ರಾಜ್ಯದ ವಿವಿಧ ಶಾಲೆ/ಕಾಲೇಜುಗಳಿಗೆ ನೈತಿಕ ಸಂಸ್ಕಾರಗಳ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಶಾಂತಿವನ ಟ್ರಸ್ಟ್ ಅಡಿಯಲ್ಲಿ ಉಜಿರೆಯಲ್ಲಿ ಯೋಗ ಮತ್ತು ನ್ಯಾಚುರಪತಿ ಕಾಲೇಜು ಹಾಗೂ ಧರ್ಮಸ್ಥಳದ ಸನಿಹದಲ್ಲೆ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ತೆರೆಯಲಾಗಿದ್ದು, ಆ ಮೂಲಕ ನೈಸರ್ಕಿಕ ಔಷಧಿಗಳ ಸದ್ಬಳಕೆಗೆ ಒತ್ತನ್ನು ನೀಡಲಾಗುತ್ತಿದೆ. ಶಾಂತಿವನದಲ್ಲಿರುವ ನ್ಯಾಚುರೋಪತಿ ಆಸ್ಪತ್ರೆಗೆ ರಾಷ್ಟ್ರದ ದಿಗ್ಗಜರೆಲ್ಲ ಬಂದು ಆರೋಗ್ಯ ಸೇವೆಯನ್ನು ಪಡೆದುಕೊಂಡು ಹೋಗಿರುವುದು ಆ ಆಸ್ಪತ್ರೆಯ ಗುಣಮಟ್ಟದ ಸೇವೆಗೆ ಸಂದ ಜಯ ಎಂದೆ ಹೇಳಬಹುದು.

ಧರ್ಮೋತ್ತಾನ ಟ್ರಸ್ಟ್: ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರ ಮತ್ತೊಂದು ಮಹತ್ವದ ಕಾರ್ಯಕ್ರಮ ಧರ್ಮೋತ್ಥಾನ ಟ್ರಸ್ಟ್ ಸ್ಥಾಪನೆ. ಈ ಟ್ರಸ್ಟ್ ಮೂಲಕ ನಾಡಿನ ಶಿಲ್ಪ ಕಲೆಗಳು ಹಾಗೂ ಸಾಂಸ್ಕೃತಿಕ ವೈಭವವನ್ನು ಸಾರುವ ಪ್ರಾಚೀನ ದೇವಾಲಯಗಳ ಮೂಲಸ್ವರೂಪ ರಕ್ಷಣೆಗಾಗಿ ಪಣ ತೊಡಲಾದ ಪರಿಣಾಮವಾಗಿ ಈವರೇಗೆ ರಾಜ್ಯವ್ಯಾಪಿ ಒಟ್ಟು 234 ಕ್ಕಿಂತಲೂ ಹೆಚ್ಚು ದೇವಾಲಯಗಳ ಜೀರ್ಣೋದ್ದಾರ ಕಾರ್ಯವನ್ನು ಮಾಡಲಾಗಿದೆ. ಈ ಟ್ರಸ್ಟಿನ ಮೂಲಕ ಧರ್ಮಸಂಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿರುವುದು ಗಮನಾರ್ಹ.

ದೇಶದಲ್ಲೆ ಮೊದಲು ಪೂಜ್ಯ ಹೆಗ್ಗಡೆಯವರ ರುಡ್ಸೆಟ್ ಸಂಸ್ಥೆ: ನಿರುದ್ಯೋಗ ಸಮಸ್ಯೆಗೆ ಇತೀಶ್ರೀ ಹಾಡಬೇಕೆಂದು ಬಯಸಿ ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರು ಪ್ರಪ್ರಥಮ ಬಾರಿಗೆ ಉಜಿರೆಯಲ್ಲಿ ಸ್ವ ಉದ್ಯೋಗ ತರಬೇತಿ ನೀಡುವ ರುಡ್ಸೆಟ್ ಸಂಸ್ಥೆಯನ್ನು ಪ್ರಾರಂಭಿಸಿದರು. ಕೆನರಾ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಗಳ ಸಹಭಾಗಿತ್ವದಲ್ಲಿ ಆರಂಭಿಸಿದ ಈ ಸಂಸ್ಥೆ ಸ್ವ ಉದ್ಯೋಗ ತರಬೇತಿ ನೀಡುವ ದೇಶದಲ್ಲೆ ಮೊದಲ ವಿಶಿಷ್ಟ ಸಂಸ್ಥೆಯಾಗಿ ಗಮನ ಸೆಳೆದಿದೆ. ಈ ಸಂಸ್ಥೆ ನನಗಿರುವ ಮಾಹಿತಿಯ ಪ್ರಕಾರ ಇದೀಗ ಅಂದರೆ ದೇಶದ 17 ರಾಜ್ಯಗಳಲ್ಲಿ 27 ಶಾಖೆಗಳನ್ನು ತೆರೆದು ನಿರುದ್ಯೋಗ ನಿವಾರಣೆಗೆ ಶ್ರಮಿಸುತ್ತಿದೆ.

ಈ ಸಂಸ್ಥೆಯಿಂದ ಕತ್ತಲಲ್ಲಿದ್ದ ಲಕ್ಷಾಂತರ ಯುವ ಜನತೆಯ ಬದುಕಿನಲ್ಲಿ ನೆಮ್ಮದಿಯ ನಿಟ್ಟುಸಿರು ದೊರೆತಿದೆ. ನಾಲ್ಕುವರೆ ಲಕ್ಷಕ್ಕೂ ಅಧಿಕ ಯುವ ಜನರು ಸ್ವ ಉದ್ಯೋಗಿಗಳಾಗಿ ಆರ್ಥಿಕ ಪ್ರಗತಿ ಸಾಧಿಸಿದ್ದಾರೆ. ಈ ಸಂಸ್ಥೆಯಲ್ಲಿ ಯುವಜನತೆ ತರಬೇತಿ ಪಡೆದು ಯಶಸ್ವಿ ಸ್ವಾವಲಂಬಿಗಳಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆಯಿಂದಾದ ಪ್ರಯೋಜನ ಅದು ದೇಶದ ಆರ್ಥಿಕತೆಗೆ ನೀಡಿದ ಬಹುದೊಡ್ಡ ಕೊಡುಗೆ ಎಂದೆ ವ್ಯಾಖ್ಯಾನಿಸಬಹುದಾಗಿದೆ.

ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಟಾಪನಾ ಕೇಂದ್ರ: ಪುರಾತನ ಸಂಸ್ಕೃತಿ, ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸಬೇಕು ಮತ್ತು ಅವುಗಳ ಅಧ್ಯಯನವಾಗಬೇಕೆಂಬ ಇರಾದೆಯಿಂದ ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಟಾಪನಾ ಕೇಂದ್ರವನ್ನು ಪ್ರಾರಂಭಿಸಿ, ಹಸ್ತಪ್ರತಿಗಳ ಸಂರಕ್ಷಣೆಯಲ್ಲಿ ತೊಡಗಿ, ಅದನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದುವರಿದಿರುವುದು ಅವರ ಜೀವನಸಂಸ್ಕೃತಿಗೊಂದು ಶ್ರೇಷ್ಟ ಉದಾಹರಣೆ ಎಂದೆ ಹೇಳಬಹುದು. ಈ ಕೇಂದ್ರದಲ್ಲಿ ಈಗಾಗಲೇ 5938 ಪ್ರಾಚೀನ ಹಸ್ತಪ್ರತಿಗಳಿದೆ. ಈ ಪೈಕಿ 1995 ಪ್ರಾಚೀನ ಕನ್ನಡದ ಹಸ್ತಪ್ರತಿಗಳಿವೆ ಎನ್ನುವುದು ಉಲ್ಲೇಖನೀಯ.

ಸಾಮೂಹಿಕ ವಿವಾಹ ಎಂಬ ಮಹತ್ಕಾರ್ಯ: ಪೂಜ್ಯ ಹೆಗ್ಗಡೆಯವರು ಬಡ -ಬಗ್ಗರು ತಮ್ಮ ಮಕ್ಕಳಿಗೆ ಮದುವೆ ಮಾಡಿಸಲು ಹಪಹಪಿಸುತ್ತಿರುವುದನ್ನು ಮನಗಂಡು, ಎಲ್ಲ ಬಡವರ ಮಕ್ಕಳಿಗೂ ಅವರಿಷ್ಟದಂತೆ ಸಂತಸ-ಸಂಭ್ರಮದಿಂದ ಖರ್ಚಿಲ್ಲದೇ ಮಾದುವೆ ಮಾಡಿಸಬೇಕೆಂದು ಉದ್ದೇಶಿಸಿ, ಸಾಮೂಹಿಕ ವಿವಾಹ ಕಾರ್ಯಕ್ಕೆ ಚಾಲನೆ ನೀಡಿದರು. ಪ್ರತಿವರ್ಷ ಶ್ರೀ. ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಕಾರ್ಯವನ್ನು ಅತ್ಯಂತ ಸಂಭ್ರಮ, ಸಡಗರದಿಂದ ನೆರವೇರಿಸಲಾಗುತ್ತಿದೆ. ಈವರೇಗೆ ಶ್ರೀ.ಕ್ಷೇತ್ರದ ವತಿಯಿಂದ 12160 ಜೊತೆ ವಿವಾಹಗಳನ್ನು ನಡೆಸಿರುವ ಧನ್ಯತೆ ಪೂಜ್ಯ ಹೆಗ್ಗಡೆಯವರಿಗಿದೆ.

ಹಳೆ ಕಾಲದ ಅಮೂಲ್ಯ ಸ್ವತ್ತುಗಳ ಸಂರಕ್ಷನೆಗಾಗಿ ಮಂಜೂಷಾ ಮ್ಯೂಸಿಯಂ: ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರು ಒಂದು ವಿಶ್ವಕೋಶವಿದ್ದಂತೆ, ಅವರ ಚಿಂತನೆಯ ಲಹರಿಯನ್ನು ಏಣಿಸಲಸಾಧ್ಯ. ಅವರೊಬ್ಬ ವಿಶ್ವಮಾನವರಿದ್ದಂತೆ. ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿಯೊಂದು ವಿಚಾರಗಳ ಬಗ್ಗೆಯೂ ಸಾಕಷ್ಟು ಜ್ಞಾನಸಂಪತ್ತನ್ನು ಗಳಿಸಿಕೊಂಡಿರುವ ಮಣ್ಣಿನ ಮಗ ಅನ್ನಲೆ ಈ ದೇಶದ ಮಾಣಿಕ್ಯ ಎನ್ನಲೆ. ಒಟ್ಟಿನಲ್ಲಿ ಅಪರೂಪದ ಅಪೂರ್ವ ವ್ಯಕ್ತಿತ್ವದ ಸರ್ವಶ್ರೇಷ್ಟ ಮಹಾಪುರುಷ ಮಾತ್ರ ಹೌದು.

ಇಂತಹ ಮಹಾಪುರುಷರಾದ ಪೂಜ್ಯ ಡಾ: ಹೆಗ್ಗಡೆಯವರು ಶ್ರೀ.ಕ್ಷೇತ್ರ ಧರ್ಮಸ್ಥಳದ ಮೂಮಜುನಾಥ ಸನ್ನಿಧಿಯಲ್ಲಿ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿಟ್ಟಿರುವ ಮಂಜೂಷಾ ಮ್ಯೂಜಿಯಂನ್ನು ನಿರ್ಮಿಸಿದ್ದಾರೆ. ಈ ಮಂಜೂಷಾ ಮ್ಯೂಸಿಯಂನಲ್ಲಿ ದೇಶ-ವಿದೇಶಗಳಲ್ಲಿದ್ದ ಹಳೆ ಕಾಲದ ವಿವಿಧ ಸ್ವತ್ತುಗಳು, ನಾಣ್ಯಗಳು, ಪಳೆಯುಳಿಕೆಗಳು ಹೀಗೆ ಇನ್ನೂ ಅನೇಕಾನೇಕ ಅತ್ಯಾಕರ್ಷಕ ಮತ್ತು ಮನೋಜ್ಞ ವಸ್ತುಗಳನ್ನು ಸಂಗ್ರಹಿಸಿಟ್ಟು, ಮುಂದಿನ ತಲೆಮಾರಿಗೆ ಅದನ್ನು ಪರಿಚಯಿಸುವ ಶ್ಲಾಘನೀಯ ಕಾರ್ಯವಾಗುತ್ತಿದೆ.

ಜಬರ್ದಸ್ತು ಕಾರುಗಳಿರುವ ಮಂಜೂಷ ಕಾರು ಮ್ಯೂಸಿಯಂ: ಶ್ರೀ.ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ಪೂಜ್ಯ ಹೆಗ್ಗಡೆಯವರಿಗೆ ಅತೀ ಖುಷಿ ಕೊಡುವ ಒಂದು ಕೇಂದ್ರವಿದೆ. ಅದು ಸಹ ಪೂಜ್ಯ ಡಾ: ವೀರೇಂದ್ರ ಹೆಗ್ಗಡೆಯವರ ಸಾಧನೆಯ ಮತ್ತೊಂದು ಮೈಲಿಗಲ್ಲು. ಅದು ಹಳೆಯ ಕಾರುಗಳನ್ನು ಒಳಗೊಂಡ ಮಂಜೂಷ ಕಾರು ಮ್ಯೂಸಿಯಂ. ಈ ಮ್ಯೂಸಿಯಂನಲ್ಲಿ ನನಗಿರುವ ಮಾಹಿತಿಯ ಪ್ರಕಾರ ಗಾಂಧೀಜಿಯವರು, ಬ್ರಿಟನ್ ರಾಣಿ, ಮೈಸೂರು ಮಹಾರಾಜರು ಹೀಗೆ ಇನ್ನೂ ಅನೇಕ ದಿಗ್ಗಜರುಗಳು, ರಾಷ್ಟ್ರನಾಯಕರು ಬಳಸಿದ ಕಾರುಗಳನ್ನು ಸಂಗ್ರಹಿಸಿಡಲಾಗಿದ್ದು, ಅವೆಲ್ಲವೂಗಳು ಕೂಡಾ ರನ್ನಿಂಗ್ ಕಂಡಿಶನಿನ್ನಲ್ಲಿರುವುದು ಪೂಜ್ಯ ಹೆಗ್ಗಡೆಯವರ ಬಹುದೊಡ್ಡ ಸಾಧನೆ. ಅಲ್ಲಿ ಕಾರುಗಳಷ್ಟೆ ಅಲ್ಲದೇ ಹಳೆಯ ಕಾಲದ ಮೋಟಾರ್ ಸೈಕಲ್ ಗಳು, ಹೀಗೆ ಇನ್ನೂ ಅನೇಕವಿದೆ. ಇವೆಲ್ಲವುಗಳು ಪೂಜ್ಯ ಹೆಗ್ಗಡೆಯವರ ನಾಯಕತ್ವದಿಂದಲೇ ಸಾದ್ಯವಾಯಿತೆನ್ನಿ.

ಕರಾವಳಿ ಗಂಡುಕಲೆ ಯಕ್ಷಗಾನ ಉಳಿವಿಗಾಗಿ ಪಣ: ಕರಾವಳಿಯ ಗಂಡುಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕೆಂದು ಪಣತೊಟ್ಟು ಯಕ್ಷಗಾನ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿದ ಹೆಗ್ಗಳಿಕೆ ಪೂಜ್ಯ ಹೆಗ್ಗಡೆಯವರಿಗೆ ಸಲ್ಲುತ್ತದೆ. ತಮ್ಮ ಮಾನ್ಯ ಹರ್ಷೇಂದ್ರಕುಮಾರ್ ಅವರನ್ನು ಮುಂದಿಟ್ಟುಕೊಂಡು ಈ ಕೇಂದ್ರವನ್ನು ನಡೆಸುತ್ತಿರುವ ಪೂಜ್ಯ ಹೆಗ್ಗಡೆಯವರು ಈ ಕೇಂದ್ರದ ಮೂಲಕ ಸಹಸ್ರಾರು ಜನರನ್ನು ಯಕ್ಷಗಾನ ಕಲಾವಿದರನ್ನಾಗಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದರ ಜೊತೆಯಲ್ಲಿ ಶ್ರೀ.ಕ್ಷೇತ್ರ ಧರ್ಮಸ್ಥಳದ್ದೇ ಆದ ಯಕ್ಷಗಾನ ಮೇಳ ತಮ್ಮ ಅಮೋಘ ಪ್ರದರ್ಶನವನ್ನು ಉಭಯ ಜಿಲ್ಲೆಗಳಲ್ಲಿ ಹಾಗೂ ಉತ್ತರಕನ್ನಡ ಜಿಲ್ಲೆ, ಧಾರವಾಡಗಳಲ್ಲಿ ನೀಡಿ ಗಮನ ಸೆಳೆಯುತ್ತಿದೆ.

ಮಂಗಳ ಕಾರ್ಯಕ್ಕಾಗಿ ಕಲ್ಯಾಣ ಮಂಟಪಗಳು: ಶ್ರೀ.ಕ್ಷೇತ್ರ ಧರ್ಮಸ್ಥಳದ ಹೆಸರಿನಲ್ಲಿ ವಿವಿದೆಡೆಗಳಲ್ಲಿ ಸುಸಜ್ಜಿತ ಕಲ್ಯಾಣ ಮಂಟಪಗಳಿವೆ. ಮುಖ್ಯವಾಗಿ ಧರ್ಮಸ್ಥಳ, ಬೆಳ್ತಂಗಡಿ, ಬಂಟ್ವಾಳ, ಮೂಡಬಿದ್ರೆ ಹೀಗೆ ಇನ್ನೂ ಅನೇಕ ಕಡೆಗಳಲ್ಲಿ ಕಲ್ಯಾಣ ಮಂಟಪಗಳು ಆಯಾಯ ಊರಿಗೆ ಶೋಭೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ನ್ಯಾಯದಾನ ನೀಡುವ ಹೊಯಿಲ್ ಘಟಕ: ಯಾವುದಾದರೂ ತಕರಾರು, ವ್ಯಾಜ್ಯಗಳಿದ್ದಲ್ಲಿ ಶ್ರೀ.ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಅವುಗಳ ವಿಚಾರಣೆ ನಡೆದು, ಸತ್ಯ, ಧರ್ಮಕ್ಕೆ ಅನುಗುಣವಾಗಿ ನ್ಯಾಯ ಕೊಡುವ ವ್ಯವಸ್ಥೆ ಇಲ್ಲಿದೆ. ಇದೊಂದು ಧಾರ್ಮಿಕ ಹಾಗೂ ಶೃದ್ದಾಭಕ್ತಿಗೆ ಅನುಗುಣವಾಗಿ ನಡೆಯುತ್ತಿದ್ದು, ವಿರಸದಲ್ಲಿದ್ದ ಕುಟುಂಬಗಳನ್ನು ಒಂದುಗೂಡಿಸಿ ಸಾಮಾರಸ್ಯವನ್ನು ಮೂಡಿಸಿ, ಲಕ್ಷಾಂತರ ಸಂಸಾರಕ್ಕೆ ಹೊಸಬೆಳಕನ್ನು ಕರುಣಿಸಿದೆ.

ಸಂಕಷ್ಟದಲ್ಲಿದ್ದವರಿಗೆ ಅಭಯದಾನ: ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರ ಬಳಿ ಪ್ರತಿನಿತ್ಯ ತಮ್ಮ ಅಲವತ್ತನ್ನು ತೋಡಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ. ಅವರೆಲ್ಲರ ನೋವನ್ನು ಕೇಳಿ, ಅದಕ್ಕೆ ಸಕಾಲಿಕವಾಗಿ ಸ್ಪಂದಿಸುವುದರ ಮೂಲಕ ಲೋಕದ ಜನತೆಗಾಗಿ ಬದುಕುತ್ತಿರುವ ಪೂಜ್ಯ ಡಾ: ಹೆಗ್ಗಡೆಯವರನ್ನು ನಾವು ಪಡೆದಿರುವುದೆ ನಮ್ಮ ಬಹುದೊಡ್ಡ ಹೆಮ್ಮೆಯಲ್ಲವೆ.

ಅದೇಷ್ಟೊ ಜನರು ಮಕ್ಕಳ ಶಿಕ್ಷಣಕ್ಕಾಗಿ, ಮದುವೆಗಾಗಿ, ಮನೆ ಸಂಕಷ್ಟಕ್ಕಾಗಿ, ಅನಾರೋಗ್ಯ ಪೀಡಿತರಾಗಿ ಪೂಜ್ಯರ ಬಳಿ ನಿವೇಧಿಸಿಕೊಂಡಾಗ ಅಂಥವರಿಗೆ ಸ್ಥಳದಲ್ಲೆ ಆರ್ಥಿಕ ಸಹಾಯ ಮಾಡುವುದರ ಮೂಲಕ ಕಣ್ಣೀರನ್ನು ಒರೆಸುವ ಕಾರ್ಯವನ್ನು ನಿತ್ಯ ಮಾಡುತ್ತಾರೆ ನಮ್ಮ ಹೆಗ್ಗಡೆಯವರು. ಅದಕ್ಕೆ ಹೇಳುವುದು ಪೂಜ್ಯ ಹೆಗ್ಗಡೆಯವರು ಕರುಣಾಮಯಿ ಎಂದು.

ತುಳುನಾಡ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ದೇವರು- ಪೂಜ್ಯ ಹೆಗ್ಗಡೆಯವರು: ದಕ್ಷಿಣ ಕನ್ನಡ-ಉಡುಪಿ ಉಭಯ ಜಿಲ್ಲೆಗಳ ತುಳುನಡ ಸಂಸ್ಕೃತಿಯನ್ನು ಇನ್ನು ಬೆಳೆಸಬೇಕು, ಉಳಿಸಿ, ಸಂರಕ್ಷಿಸುವುದಲ್ಲದೇ, ತುಳುನಾಡ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ತೋರಿಸಬೇಕೆಂದು ಹಟತೊಟ್ಟು ವಿಶ್ವ ತುಳು ಸಮ್ಮೆಳನವನ್ನು ಉಜಿರೆಯಲ್ಲಿ ಅಭೂತಪೂರ್ವವಾಗಿ ನಡೆಸಿಕೊಟ್ಟ ಶ್ರೇಯಸ್ಸು ಪೂಜ್ಯ ಹೆಗ್ಗಡೆಯವರಿಗೆ ಸಲ್ಲಲೆಬೇಕು.

ಇಡೀ ವಿಶ್ವದಲ್ಲಿದ್ದ ತುಳುವರನ್ನು ಉಜಿರೆಯತ್ತ ಕರೆಸಿ, ತುಳುನಾಡ ಸಂಸ್ಕೃತಿಯನ್ನು ಉಳಿಸಲು ಅವರು ಕೈಗೊಂಡ ಈ ಕಾರ್ಯಕ್ರಮ ಇದು ಕಾರ್ಯಕ್ರಮವಲ್ಲ, ಬದಲಾಗಿ ಇದೊಂದು ಮಹತ್ವದ ಶಪಥ ಎಂದರೆ ಅತಿಶಯೋಕ್ತಿ ಎನಿಸದು. ವಿಶ್ವ ತುಳು ಸಮ್ಮೇಳನ ತುಳುವರು ಮರೆಯಲಾರದ ಕಾರ್ಯಕ್ರಮವನ್ನಾಗಿಸಿದ ಪೂಜ್ಯ ಹೆಗ್ಗಡೆಯವರ ವಿಶಾಲಹೃದಯಕ್ಕೆ ಶಿರಬಾಗದಿರಲು ಸಾಧ್ಯವೆ. ತುಳು ಭಾಷೆ ಮಾನ್ಯತೆಗಾಗಿ ಕೇಂದ್ರಕ್ಕೂ ಮನವಿ ಮಾಡುವುದರ ಮೂಲಕ ಪೂಜ್ಯ ಹೆಗ್ಗಡೆಯವರು ತುಳುವರ ಆರಾಧ್ಯದೇವರಾಗಿದ್ದಾರೆ.

ಪರಿಸರ ಸಂರಕ್ಷಣೆಯನ್ನು ಧ್ಯೇಯವಾಗಿಸಿದ ಪೂಜ್ಯ ಹೆಗ್ಗಡೆಯವರು: ಪರಿಸರ ಸಂರಕ್ಷಣೆಯನ್ನು ಪ್ರಮುಖ ಧ್ಯೇಯವಾಗಿಸಿಕೊಂಡವರು ನಮ್ಮ ಹೆಗ್ಗಡೆಯವರು. ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮನೆ ಮನಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜನಜಾಗೃತಿಯನ್ನು ಮೂಡಿಸುವುದರ ಜೊತೆಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವ ಮಹೋನ್ನತ ಪರಂಪರೆಗೆ ಪೂಜ್ಯ ಹೆಗ್ಗಡೆಯವರು ಮುಂದಾಗಿದ್ದಾರೆ.

ಪರಮಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರ ಸಾಧನೆ, ಕಾರ್ಯವೈಖರಿಯನ್ನು ಮಾಜಿ ಪ್ರಧಾನಿಗಳಾದ ದಿ: ಇಂದಿರಾಗಾಂಧಿ, ದಿ:ರಾಜೀವ ಗಾಂದಿ, ಮಾನ್ಯ ಶ್ರೀ.ಎಚ್.ಡಿ.ದೇವೆಗೌಡ, ಮಾಜಿ ರಾಷ್ಟ್ರಪತಿ ದಿ: ಅಬ್ದುಲ್ ಕಲಾಂ ಅವರುಗಳು ಕ್ಷೇತ್ರಕ್ಕೆ ಭೇಟಿ ನೀಡಿ ಹಾಡಿ ಹೊಗಳಿದ್ದಾರೆ. ಕಳೆದ ವರ್ಷ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋಧಿಯವರು ಧರ್ಮಸ್ಥಳಕ್ಕೆ ಆಗಮಿಸಿ, ಪೂಜ್ಯ ಹೆಗ್ಗಡೆಯವರ ಸಾಧನೆಯನ್ನು ಹತ್ತಿರದಿಂದ ತಿಳಿದು, ಉಜಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಹೆಗ್ಗಡೆಯವರನ್ನು ಅಭಿಮಾನದಿಮದ ಗೌರವಿಸಿ, ಸನ್ಮಾನಿಸಿದ್ದಾರೆ. ದೇಶವನ್ನು ಮುನ್ನಡೆಸುವ ಸರದಾರರೆ ಪೂಜ್ಯ ಹೆಗ್ಗಡೆಯವರ ಆದರ್ಶ ಹಾಗೂ ಸಮಾಜಮುಖಿ ಸಾಧನೆಗಳ ಬಗ್ಗೆ ಗೌರವಿಸುತ್ತಾರಾಂದ್ರೆ ಇದಕ್ಕಿಂತ ದೊಡ್ಡ ಸೌಭಾಗ್ಯ ನಮಗೆ ಇನ್ನೇನು ಬೇಕು.

ಶಿಸ್ತು, ಸ್ವಚ್ಚತೆಗೆ ಮೊದಲ ಆಧ್ಯತೆ ನೀಡಿ ಗಮನ ಸೆಳೆದ ನಮ್ಮ ಹೆಗ್ಗಡೆಯವರು: ಶ್ರೀ.ಕ್ಷೇತ್ರ ಧರ್ಮಸ್ಥಳದ ಯಾವುದೇ ಕಾರ್ಯಕ್ರಮಗಳಿರಲೀ ಅಲ್ಲಿ ಶಿಸ್ತು, ಸ್ವಚ್ಚತೆಗೆ ಪ್ರಧಾನ ಆಧ್ಯತೆ ನೀಡಲಾಗುತ್ತದೆ. ಪ್ರತಿಯೊಂದು ಕಾರ್ಯಕ್ರಮಗಳೂ ಸಹ ನಿಗದಿತ ಸಮಯಕ್ಕೆ ಸರಿಯಾಗಿ ನಡೆಯುವುದರ ಮೂಲಕ ಸಮಯಪ್ರಜ್ಞೆಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ. ಸ್ವಚ್ಚತೆಯ ಬಗ್ಗೆ ಇನ್ನು ನಿಖರವಾಗಿ ಹೇಳಬಹುದಾದರೇ ಶ್ರೀ.ಕ್ಷೇತ್ರ ಧರ್ಮಸ್ಥಳದಲ್ಲೆ ನೋಡಿ, ಅಥವಾ ಶ್ರೀ.ಕ್ಷೇತ್ರ ಧರ್ಮಸ್ಥಳದ ಯಾವುದೇ ಸಂಸ್ಥೆ, ಕಾಲೇಜು, ಆಸ್ಪತ್ರೆನೆ ನೋಡಿ ಅಲ್ಲಿ ಸ್ವಚ್ಚತೆಗೆ ಮೊದಲ ಆಧ್ಯತೆ ನೀಡಲಾಗುತ್ತದೆ.

ಅಲ್ಲಿರುವ ಶೌಚಾಲಯಗಳೆ ನಮ್ಮ ಮನೆಗಳಲ್ಲಿರುವ ದೇವರ ಕೋಣೆಗಳಿಗಿಂತಲೂ ಹೆಚ್ಚು ಶುಚಿಯಾಗಿರುತ್ತದೆ ಅಂದರೆ ಸ್ವಚ್ಚತೆಗೆ ಎಷ್ಟು ಗಮನ ಕೊಟ್ಟಿರಬಹುದು ಎಂಬುದನ್ನು ನಾವು ಅಂದಾಜಿಸಿಕೊಳ್ಳಬಹುದು. ಸ್ವಚ್ಚತೆಯ ವಿಚಾರದಲ್ಲೂ ಹಲವಾರು ಪ್ರಶಸ್ತಿಗಳು ಪೂಜ್ಯ ಹೆಗ್ಗಡೆಯವರನ್ನು ಅರಸಿ ಬಂದಿವೆ.

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಬಹುತೇಕ ದೇವಸ್ಥಾನಗಳ ಬ್ರಹ್ಮಕಲೋಶ್ಸವ ಕಾರ್ಯಕ್ರಮಗಳ ಗೌರವಾಧ್ಯಕ್ಷರು-ನಮ್ಮ ಪೂಜ್ಯ ಹೆಗ್ಗಡೆಯವರೆ: ಸಹಜವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿದ್ದರೇ ಅವೆಲ್ಲವುಗಳ ಗೌರವಾಧ್ಯಕ್ಷರು ನಮ್ಮ ಪೂಜ್ಯ ಡಾ: ವೀರೇಂದ್ರ ಹೆಗ್ಗಡೆಯವರೆ ಆಗಿರುತ್ತಾರೆ. ಪೂಜ್ಯ ಡಾ: ಹೆಗ್ಗಡೆಯವರ ಮಾರ್ಗದರ್ಶನ, ಆಶೀರ್ವಾದದಿಂದಲೆ ಉಭಯ ಜಿಲ್ಲೆಗಳ ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳೆಲ್ಲವೂ ಐತಿಹಾಸಿಕವಾಗಿ ನಡೆದಿರುವುದನ್ನು ಯಾರು ಮರೆಯುವಂತಿಲ್ಲ.

ಧರ್ಮ ನಡಾವಳಿಯ ರೂವಾರಿ-ನಮ್ಮ ಹೆಗ್ಗಡೆಯವರು: ಶ್ರೀ.ಕ್ಷೇತ್ರ ಧರ್ಮಸ್ಥಳದಲ್ಲಿ 2005 ನೇ ಸಾಲಿನಲ್ಲಿ ನಡೆದ ಧರ್ಮ ಮಹಾನಡಾವಳಿಯನ್ನು ಹಿಂದೆಂದೂ ಕಂಡರಿಯದಂತೆ ಮತ್ತು ಕೇಳರಿಯದಂತೆ ನಡೆಸಿದ ಮಹಾನ್ ಯೋಗಿ ನಮ್ಮ ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರು. ಆ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ಅಲ್ಲಿ ಸೇವೆ ಮಾಡುತ್ತಿದೆ. ನನ್ನ ಜೀವಮಾನದಲ್ಲಿ ಎಂದೆಂದೂ ಮರೆಯಲಾಗದ ಸ್ಮರಣೀಯ ಕಾರ್ಯಕ್ರವಿದ್ರೆ ಅದು ಶ್ರೀ.ಕ್ಷೇತ್ರ ಧರ್ಮಸ್ಥಳದ ಪೂಜ್ಯ ಹೆಗ್ಗಡೆಯವರ ನೇತೃತ್ವದಲ್ಲಿ ನಡೆದ ಧರ್ಮ ನಡಾವಳಿ ಎಂದು ಎದೆ ತಟ್ಟಿ ಹೇಳಬಯಸುತ್ತೇನೆ. 

ಪ್ರತ್ಯಕ್ಷ -ಪರೋಕ್ಷ ಲಕ್ಷಾಂತರ ಜನರಿಗೆ ಬದುಕು ಕೊಟ್ಟವರು ನಮ್ಮ ಹೆಗ್ಗಡೆಯವರು: ಪೂಜ್ಯ ಹೆಗ್ಗಡೆಯವರು ಶ್ರೀ.ಕ್ಷೇತ್ರ ಧರ್ಮಸ್ಥಳದಲ್ಲಿ ಇರಬಹುದು, ಕ್ಷೇತ್ರದ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಗ್ರಾಮಾಭಿವೃದ್ಧಿ ಯೋಜನೆ ಹೀಗೆ ಇನ್ನೂ ಅನೇಕ ಸೇವಾ ಕಾರ್ಯಕ್ರಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿರುವುದಲ್ಲದೇ, ಇಂತಹ ಯೋಜನೆಗಳಿಂದ ಪ್ರತ್ಯಕ್ಷವಲ್ಲದೇ, ಪರೋಕ್ಷವಾಗಿಯೂ ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಇದು ಪೂಜ್ಯ ಹೆಗ್ಗಡೆಯವರಿಂದ ಮಾತ್ರ ಸಾಧ್ಯವಾಗಿದೆ.

ಅಲೆಯಲಾಗದ ವ್ಯಕ್ತಿತ್ವ ಪೂಜ್ಯ ಹೆಗ್ಗಡೆಯವರದ್ದು: ಈ ಮಾತು ಅಕ್ಷರಶ: ಸತ್ಯ. ಪೂಜ್ಯ ಹೆಗ್ಗಡೆಯವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರ ಮನೆಯಲ್ಲೆ ಮೂರು ವರ್ಷ ಅವರ ಬಳಿ ಸೇವೆ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿತ್ತು. ಹಾಗಾಗಿ ಹತ್ತಿರದಿಂದ ಅವರನ್ನು ಗಮನಿಸುವ ಅವಕಾಶ ನನ್ನದಾಗಿತ್ತು. ಪೂಜ್ಯರದ್ದು ಅಲೆಯಲಾಗದ ವ್ಯಕ್ತಿತ್ವ. ಮುಂಜಾನೆದ್ದು, ಅವರ ಬೀಡಿನ ಮನೆಯಲ್ಲಿದ್ದ ಸಣ್ಣ ನಾಯಿ ಮರಿಯ ಜೊತೆ ಅಲ್ಲೆ ಇರುವ ಗೋಶಾಲೆಗೆ ಭೇಟಿ ನೀಡಿ, ಎಲ್ಲ ಗೋವುಗಳನ್ನು ಸ್ಪರ್ಶಿಸಿ, ಮಾತನಾಡಿಸಿ ಬರುವ ಅವರ ಪ್ರಾಣಿಪ್ರೀತಿಗೆ ಏನು ಹೇಳಬೇಕು. ಪೂಜ್ಯ ಡಾ: ಹೆಗ್ಗಡೆಯವರು ಅತ್ಯುತ್ತಮ ಚಾಲಕರು ಹೌದು.

ಅವರಿಗೆ ವಾಹನ ಚಲಾಯಿಸುವುದಂದ್ರೆ ಪಂಚಪ್ರಾಣ. ಆದರೇನು ಇಂತಹ ಸ್ಥಿತಿಯಲ್ಲಿ ಅವರು ವಾಹನ ಚಲಾಯಿಸುವಂತಿಲ್ಲ. ಆದರೂ ನಾನೊಂದು ದಿನ ಕದ್ದುಮುಚ್ಚಿ ನೋಡಿದ ಪ್ರಕಾರ ದೂರದೂರಿಂದ ಬರುವಾಗ ರಾತ್ರಿ ಹನ್ನೆರಡು ಗಂಟೆಯಾಗಿತ್ತು. ಚಾಲಕರನ್ನು ಬದಿಗೆ ಕುಳ್ಳಿರಿಸಿ, ಸ್ವತ; ಅವರೇ ವಾನ ಚಲಾಯಿಸಿಕೊಂಡು ಬಂದಿದ್ದರು. ಒಟ್ಟಿನಲ್ಲಿ ಹೊಸ ಹೊಸ ವಾಹನಗಳು ಹಾಗೂ ಹಲೆ ವಾಹನಗಳ ಮೇಲೆ ಅವರಿಗೆ ಎಲ್ಲಿಲ್ಲದ ಪ್ರೀತಿಯಿದೆ.

ಅವರೊಬ್ಬ ಪತ್ರಕರ್ತ-ಲೇಖಕರು ಹೌದು: ನಾನ್ಯಾಕೆ ಈ ಮಾತು ಹೇಳಬಯಸುತ್ತೇನೆಂದ್ರೆ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೂತನ ಮಾಸಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಬೇರೆ ಕೆಲಸದ ನಡುವೆಯೂ ಆ ಪತ್ರಿಕೆಯ ಲೇ ಔಟ್ ಮಾಡುವ ಜವಾಬ್ದಾರಿಯನ್ನು ಪೂಜ್ಯರು ನನಗೆ ವಹಿಸಿದ್ದರು. ಎದ್ದು ಬಿದ್ದು ಒಂದು ಹಂತದಲ್ಲಿ ಲೇ ಔಟ್ ಮಾಡಿ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ: ಎಲ್.ಎಚ್.ಮಂಜುನಾಥ ಅವರ ಜೊತೆ ಪೂಜ್ಯರನ್ನು ಭೇಟಿಯಾಗಕು ಹೋಗಿದ್ದೆ.

ಲೇ ಔಟ್ ನೋಡಿ ಖುಷಿ ಪಟ್ಟರಾದರೂ, ಅವರು ಇನ್ನೂ ಅದಕ್ಕೆ ಹೊಸ ಸ್ವರೂಪವನ್ನು ಕೊಟ್ಟರು. ನಾನು ಮಾಡಿದ್ದು ಕೇವಲ 2 ಪರ್ಸೆಂಟ್ ಆದರೆ ಪೂಜ್ಯ ಹೆಗ್ಗಡೆಯವರು ಶೇ: 98 ರಷ್ಟು ಅವರೆ ಲೇ ಔಟವ ಮಾಡಿಕೊಟ್ಟು ಆ ಪತ್ರಿಕೆಗೆ ನಿರಂತರ ಪ್ರಗತಿ ಎಂಬ ಹೆಸರನ್ನು ದಯಪಾಲಿಸಿದರು. ಆ ಪತ್ರಿಕೆಯಲ್ಲಿ ಪೂಜ್ಯ ಹೆಗ್ಗಡೆಯವರಿಮದ ಮಾರ್ಗದರ್ಶನದ ಲೇಖವಿರುತ್ತದೆ. ನಿರಂತರ ಪ್ರಗತಿ 5 ಲಕ್ಷ ಪತ್ರಿಕೆ ಮುದ್ರಣವಾಗುತ್ತಿರುವುದು ಸೋಜಿಗವೆ ಸರಿ. ಅಂತೆಯೆ ಶ್ರೀ.ಕ್ಷೇತ್ರ ಧರ್ಮಸ್ಥಳದ ಬಗ್ಗೆಯೆ ಪ್ರಾರಂಭಿಸಿದ ಮಂಜುವಾಣಿ ಪತ್ರಿಕೆಯ ಗೌರವ ಸಂಪಾದಕರಾಗಿಯೂ ಪೂಜ್ಯರು ಕೆಲಸ ನಿರ್ವಹಿಸುತ್ತಿದ್ದಾರೆ.

ಈನ ಪತ್ರಿಕೆಯೂ ಲಕ್ಷ ಮೀರಿ ಮುದ್ರಣಗೊಳ್ಳುತ್ತಿದೆ. ಇದರ ಹೊರತಾಗಿಯೂ ವಿಜಯ ಕರ್ನಾಟಕ ಪತ್ರಿಕೆ ಹೀಗೆ ಇನ್ನೂ ಅನೇಕ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿ ತನ್ನ ಸೇವೆಯನ್ನು ನೀಡಿ ಪ್ರಿಯ ಓದುಗರ ಮನಸ್ಸು ಗೆದ್ದಿದ್ದಾರೆ.

ಅವರೊಬ್ಬ ಅತ್ಯದ್ಬುತ ಮಾತುಗಾರ: ಪೂಜ್ಯ ಹೆಗ್ಗಡೆಯವರು ಯಾವುದೇ ಕಾರ್ಯಕ್ರಗಳಿಗೆ ಹೋಗಲಿ, ಅವರ ಮಾತನ್ನು ಅಲ್ಲಿ ನೆರೆದಿರುವ ಜನರು ಶಾಂತಚಿತ್ತರಾಗಿ ಕೇಳುತ್ತಾರೆ. ಅವರ ಮಾತಿನಲ್ಲಿ ಅರ್ಥವಿದೆ, ಸಾಮಾಜಿಕ ಕಾಳಜಿಯಿದೆ. ಸಮಾಜವನ್ನು ಪರಿವರ್ತಿಸುವ ಶಕ್ತಿಯಿದೆ. ಪೂಜ್ಯ ಹೆಗ್ಗಡೆಯವರ ಅಣಿಮುತ್ತುಗಳನ್ನು ಕೇಳುವುದೆ ಒಂದು ದೊಡ್ಡ ಅವಕಾಶ ಎಂದೆ ಹೇಳಬಹುದು.

ನುರಿತ ಕೃಷಿಕ-ನಮ್ಮ ಪೂಜ್ಯ ಹೆಗ್ಗಡೆಯವರು: ಪೂಜ್ಯ ಹೆಗ್ಗಡೆಯವರಿಗೆ ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕೆಂದು ಸಮಗ್ರ ಅರಿವಿದೆ. ಕೃಷಿ ಚಟುವಟಿಕೆಯಲ್ಲಿ ಏನೇ ಸಮಸ್ಯೆ ಆದರೂ ತಕ್ಷಣವೆ ನಿವಾರಿಸುವ ಅವರಲ್ಲಿ ಹುದುಗಿರುವ ಕೃಷಿಕನ ಮನಸ್ಸಿನ ಬಗ್ಗೆ ಏನು ಹೇಳಲಿ. ಅದಕ್ಕೆ ಹೇಳುವುದು ಪೂಜ್ಯ ಹೆಗ್ಗಡೆಯವರು ಎಲ್ಲ ಕ್ಷೇತ್ರದಲ್ಲೂ ಪಕ್ಕ ಇಂಟೆಲಿಜಂಟಿದ್ದಾರೆ, ಪರ್ಪೆಕ್ಟ್ ಇದ್ದಾರೆ.

ಮಕ್ಕಳ ಜೊತೆ ಮಕ್ಕಳಂತಿರುವ ಪೂಜ್ಯ ಹೆಗ್ಗಡೆಯವರು: ಮೊಮ್ಮಗಳ ಜೊತೆ ಇರಬಹುದು, ಅವರ ಸಂಬಂಧಿಕರ ಮಕ್ಕಳ ಜೊತೆ ಇರಬಹುದು, ಅಥವಾ ಇನ್ಯಾರೆ ಮಕ್ಕಳಿರಬಹುದು, ಆದ್ರೆ ಮಕ್ಕಳ ಜೊತೆ ಮಕ್ಕಳಂತಿರುವ ಪೂಜ್ಯ ಹೆಗ್ಗಡೆಯವರ ಸರಳತೆ ಮತ್ತು ವಿಶಾಲಹೃದಯ ಮಕ್ಕಳಿಗೂ ಖುಷಿ ಕೊಡುತ್ತದೆ.

ಅತ್ಯುತ್ತಮ ಪೊಟೋಗ್ರಾಪರ್: ಪೂಜ್ಯ ಹೆಗ್ಗಡೆಯವರು ಯಾವುದರಲ್ಲೂ ಕಡಿಮೆಯಿಲ್ಲ. ಅವರೊಬ್ಬ ಅತ್ಯುತ್ತಮ ಪೊಟೋಗ್ರಾಫರ್. ಅವರು ತಮ್ಮ ಕ್ಯಾಮಾರ ಕಣ್ಣಿನಿಂದ ಸೆರೆಹಿಡಿದ ಅಧ್ಬುತ ಪೊಟೊಗಳು ಅವರ ಬೀಡಿನ ಮನೆಯ ಶೋಭೆಯನ್ನು ಹೆಚ್ಚಿಸುತ್ತಿದೆ. ಅವರ ಕ್ಯಾಮಾರದಲ್ಲಿ ಪ್ರಕೃತಿಯ ಅತ್ಯಂತ ರೋಚಕ ವಿಸ್ಮಯಗಳು ಸೆರೆಯಾಗಿವೆ. ಒಂದು ರೀತಿಯಲ್ಲಿ ಹೇಳುವುದಾದರೇ ಅವರೊಬ್ಬ ಪಕ್ಕ ಪ್ರೊಪೆಶನಲ್ ಪೊಟೋಗ್ರಾಪರ್ ಎಂದರೆ ತಪ್ಪಗಲಾರದು.

ಅವರು ನಗುತ್ತಾರೆ, ಇನ್ನೊಬ್ಬರನ್ನು ನಗಿಸುತ್ತರೆ: ಪೂಜ್ಯ ಹೆಗ್ಗಡೆಯವರಿಗೆ ನಾನೊಬ್ಬ ವಿಶ್ವಮಟ್ಟದ ಜನನಾಯಕನೆಂಬ ಅಹಂ ಇಲ್ಲ. ಸಮಯವಿದ್ದಾಗ ತಮಾಶೆ ಮಡುತ್ತಾರೆ. ಇನ್ನೊಬ್ಬರ ಮೂಲಕ ತಮಾಶೆ ಮಾಡಿಸುತ್ತಾರೆ. ನಗುವುದು ಅವರ ಸಹಜ ಗುಣ, ಹಾಗೆಯೆ ನಗಿಸುವುದು ಸಹ ಅವರ ಸಹಜ ಗುಣವಾಗಿದೆ.

ಅದೊಂದು ದಿನ ನಾನು ಹೆದರಿದ್ದೆ-ಆದರೆ ಅವರು ಹೆದರಿಸಿಲ್ಲ: ನಾನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಸಮಯವದು. ಅದೊಂದು ದಿನ ಭಾನುವಾರ. ಕಚೇರಿಗೆ ರಜೆಯಿತ್ತು. ಯೋಜನೆಯ ಬೊಲೆರೊ ವಾಹನವನ್ನು ಚಾಲಕ ಶೇಖರ್ ತೊಳೆಯುತ್ತಿದ್ದರು. ನಾನು ಬೊಲೆರೊ ವಾಹನದೊಳಗಡೆ ಕೂತು ಗಾಡಿ ಸ್ಟಾಟ್ ಮಾಡಿದೆ. ಆದರೆ ಗಾಡಿ ಸ್ಟಾಟಾಗಿದ್ದೆ ತಡ. ಮುಂಭಾಗದಲ್ಲಿದ್ದ ಹೊಂಡದಲ್ಲಿ ಗಾಡಿ ಬಿತ್ತು. ನಾನು ಟೆನ್ಸನ್, ಡ್ರೈವರ್ ಶೇಖರ್ ಟೆನ್ಸನ್.

ಕತ್ತಲಾದಂತೆ ಪೂಜ್ಯರ ಮನೆಗೆ ಹೋದೆ. ನನಗೆ ಅವರದ್ದೆ ವಾಸದ ಮನೆ ಆಶ್ರಯಧಾಮವಾಗಿತ್ತು. ಮುಂಜಾನೆದ್ದು ಪೂಜ್ಯರ ಬಳಿ ಹೋಗಿ ತಲೆಕೆಳಗೆ ಮಾಡಿ ನಿಂತೆ, ಆದ್ರೆ ಅವರು ಬೈಯಲೆ ಇಲ್ಲ. ಜೋರಾಗಿ ನಗುತ್ತಾ ಹೋದರು. ಅಬ್ಬ ಬದುಕಿದೆ ಬಡ ಜೀವವೆಂದು ಉಪಾಹಾರಕ್ಕೆ ಹೋದೆ. ನಾನ್ಯಾಕೆ ಹೇಳಿದೆನೆಂದ್ರೆ, ಬೇರೆ ಯಾರಾದರೂ ನನಗೆ ನಾಲ್ಕು ಬಿಗಿಯುತ್ತಿದ್ದರೂ, ಆದರೆ ಪೂಜ್ಯ ಹೆಗ್ಗಡೆಯವರು ಹಾಗೆ ಮಾಡಲಿಲ್ಲ. ಅದೇ ಅವರ ವ್ಯಕ್ತಿತ್ವ.

ಅಣ್ಣ-ತಮ್ಮಂದಿರರ ಜುಗಲ್ ಬಂಧಿ ನೋಡಬೇಕು ಅಲ್ಲಿ: ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅವರ ಸಹೋದರರ ಹಾಗೂ ಸಹೋದರಿಯ ಮೇಲೆ ಅತೀವವಾದ ಪ್ರೀತಿಯಿದೆ. ಊಟದ ಮನೆಯಲ್ಲಿ ಅವರ ನಗುಮೊಗದ ಮಾತುಗಳು ಸಂಸಾರದ ಬಾಂದವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಅಣ್ಣ ಪೂಜ್ಯ ಹೆಗ್ಗಡೆಯವರು ಹೇಳಿದ ಮಾತನ್ನು ದಾಟದ ಸಹೋದರರ ರೀತಿ-ನೀತಿಗಳು ಪ್ರಶಂಸನೀಯ. ಅಣ್ಣ-ತಮ್ಮಂದಿರರ ಜುಗಲ್ ಬಂಧಿಯನ್ನು ಅವರಲ್ಲಿ ನೋಡಿ ಕಲಿಯಬೇಕು.

ಅದ್ಬುತ ಮೆಮೋರಿ ಪವರ್ ಹೊಂದಿದ ಪವರ್ ಪುಲ್ ದೇವರು: ಇಷ್ಟೊಂದು ಕೆಲಸ ಕಾರ್ಯಗಳ ನಡುವೆಯೂ ಅದ್ಭುತ ನೆನಪಿನ ಶಕ್ತಿಯನ್ನು ಪೂಜ್ಯ ಹೆಗ್ಗಡೆಯವರು ಹೊಂದಿದ್ದಾರೆ. ಒಂದು ಸಲ ಪರಿಚಯವಾದರೇ ಸಾಕು ಅವರ ಹೆಸರೇಳಿ ಕರೆದು ಮಾತನಾಡಿಸುವ ಅವರ ನೆನಪಿನ ಶಕ್ತಿ ಮಾತ್ರ ಅತ್ಯದ್ಬುತ. ಅವರೊಬ್ಬ ಪವಾಡಪುರುಷನೆ ಹೌದು. ಅಪರೂಪಕ್ಕೆ ಅವರ ಮೊಬೈಲಿಗೆ ಕಾಲ್ ಮಾಡಿದರೂ ಹೆಸರು ಕರೆದು ಮಾತನಾಡುವ ಅವರ ಸರಳತೆಯನ್ನು ಹೇಗೆ ಕೊಂಡಾಡಲಿ.

ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಸಾಧನೆಗೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಪ್ರಿಯದರ್ಶಿನಿ, ಪದ್ಮಭೂಷಣ, ಧರ್ಮಭೂಷಣ, ವಾಟಿಕಾ ವರ್ಷದ ಕನ್ನಡಿಗ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಸಂಯಮ ಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ, ಸರ್ ಎಂ ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ದೇವಿ ಅಹಿಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ, ಪದ್ಮವಿಭೂಷಣ ಹೀಗೆ 50 ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಪೂಜ್ಯ ಡಾ: ಹೆಗ್ಗಡೆಯವರು ಭಾಜನರಾಗಿದ್ದಾರೆ.

ಪೂಜ್ಯ ಖಾವಂದರವರ ಮಹೋನ್ನತ ಸಾಧನೆಗೆ ಶ್ರೀ ಚಂದ್ರನಾಥ ಸ್ವಾಮಿ ಭಗವಾನ್ ಬಾಹುಬಲಿ, ಮಂಜುನಾಥ ಸ್ವಾಮಿಯ ಅನುಗ್ರಹ, ಅವರಪ್ಪ ಹಾಗೂ ಅವರಮ್ಮನ ಆಶೀರ್ವಾದ, ಸಹೋದರರ ಹಾಗೂ ಸಹೋದರಿಯ ಮನದಾಳದ ಪ್ರೀತಿ-ಪ್ರೋತ್ಸಾಹ, ಪತಿಗೆ ತಕ್ಕ ಮಡದಿಯಾಗಿ ಆದರ್ಶ ಸಂಸ್ಕೃತಿಯನ್ನು ಮೆರೆಯುತ್ತಿರುವ ಅವರ ಮನದ ಮಡದಿ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಸಕಾಲಿಕ ಸ್ಪಂದನೆ, ಮುದ್ದಿನ ಮಗಳು ಶೃದ್ಧಾ ಅವರ ನಗುಮೊಗದ ಪ್ರೀತಿ, ಕುಟುಂಬಸ್ಥರ, ಬಂಧುಗಳ, ಶ್ರೀ ಕ್ಷೇತ್ರ ಧರ್ಮಸ್ಥಳದ ನಿವಾಸಿಗಳ ಅಭಿಮಾನಪೂರ್ವಕ ಗೌರವಯುತ ನಡವಳಿಕೆಗಳು ಅವರನ್ನು ಇನ್ನೂ ಎತ್ತರಕ್ಕೆ ಏರಿಸಿದೆ, ಏರಿಸುತ್ತಿದೆ.

ಪೂಜ್ಯ ಡಾ: ಡಿ.ವೀರೇಂದ್ರ ಹೆಗ್ಗಡೆಜೀಯವರೆ ನಾನು ನನಗನಿಸಿದ್ದನ್ನು ಅತ್ಯಂತ ಗೌರವದಿಂದ ಬರೆದಿದ್ದೇನೆ. ಬರವಣಿಗೆಯಲ್ಲಿ ಅನೇಕನೇಕ ತಪ್ಪುಗಳು ಇರಬಹುದು. ನಾನೊಬ್ಬ ನಿಮ್ಮ ಸೇವಕ ಎಂದು ತಿಳಿದು ನನ್ನನ್ನು ಹರಸಿ-ಆಶೀರ್ವದಿಸಿ ಎಂದು ಬೇಡಿಕೊಳ್ಳುತ್ತಾ, ಮಗದೊಮ್ಮೆ ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಸಂಗ್ರಹ:ಮಾಳ ಹರ್ಷೇಂದ್ರ ಜೈನ್

 
 
 
 
 
 
 
 
 
 
 

Leave a Reply