ಕಜೆ ರಾಮಚಂದ್ರ ಭಟ್ ರವರಿಗೆ ಪ್ರತಿಷ್ಠಿತ ಮಲಬಾರ್ ವಿಶ್ವ ರಂಗ ಪುರಸ್ಕಾರ 2024

ನಾಟಕ ರಂಗದ ಪ್ರತಿಯೊಂದು ಮಜಲುಗಳಲ್ಲೂ ಹೊಸತನವನ್ನು ಹುಡುಕುತ್ತಾ ರಂಗಕ್ರಿಯೆಗಳಿಗೆ ಹೊಸ ಆಯಾಮಗಳನ್ನು ನೀಡುತ್ತಾ ರಂಗ ಪರ್ವದಲ್ಲಿ ಕ್ರಾಂತಿಯನ್ನೇ ಹಬ್ಬಿಸಿದ ರಂಗ ಗುರು ಬಿ.ವಿ.ಕಾರಂತರು ಹುಟ್ಟಿದ ನೆಲದಲ್ಲೇ ಹುಟ್ಟಿ ಅವರಿಂದ ಪ್ರೇರಕರಾಗಿ ಅವರ ಕೃತಿಗಳನ್ನು ಕೀರ್ತಿಯನ್ನು, ಹೆಸರನ್ನು ಜೀವನಗಾಥೆ ಯನ್ನು ಅಜರಾಮರವಾಗಿಸಲು ಸದಾ ಶ್ರಮಿಸುತ್ತಿರುವ ಮತ್ತು ಕಲಾ ಕುಸುಮಗಳಿಗೆ ವೇದಿಕೆಯನ್ನು ಒದಗಿಸಿ ಪ್ರೊತ್ಸಾಹಿಸುತ್ತ ಬರುತ್ತಿರುವ ಸಾತ್ವಿಕ ಮನಸ್ಸಿನ ಪ್ರಬುದ್ಧ ಸಂಘಟಕ ಕಜೆ ರಾಮಚಂದ್ರ ಭಟ್.

ಬಿಸಿ ರೋಡ್ ಬಂಟ್ವಾಳ ಸಮೀಪದ ಮಂಚಿ ಎಂಬ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಅಲ್ಲೇ ಬೆಳೆದು ಅದೇ ಊರನ್ನ ಜೀವನಪಥ ವನ್ನಾಗಿಸಿ ಕೊಂಡವರು ಇವರು. ಕಜೆ ಅನ್ನುವಂತದ್ದು ಅವರ ಮನೆತನದ ಹೆಸರು.

ಒಂದು ಸುಸಂಸ್ಕೃತ ಕುಟುಂಬದ ಕೃಷಿಕ ಬಿ.ವಿ. ಕಾರಂತರ ಬಾಲ್ಯದ ಆಪ್ತ ಗೆಳೆಯ ಕಲಾರಾಧಕ ಕಜೆ ವೆಂಕಟರಮಣ ಭಟ್ ಇವರ ತಂದೆ. ಶುಭ್ರ ಹೃದಯಿ ತಾಯಿ ಸುಶೀಲ ಭಟ್.

ತನ್ನ ಶಿಕ್ಷಣ ಪಯಣವನ್ನು ತನ್ನೂರು ಮಂಚಿಯಲ್ಲಿ ಪೂರೈಸಿ ಪುತ್ತೂರಿನಲ್ಲಿ ತನ್ನ ಅಜ್ಜನ ಮನೆಯಲ್ಲಿ ಇದ್ದುಕೊಂಡು ಹೈಸ್ಕೂಲು ಹಾಗೂ ಕಾಲೇಜಿನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಮಂಗಳೂರಿಗೆ ಬಂದು ಎಸ್. ಡಿ. ಎಂ. ಕಾಲೇಜಿನಲ್ಲಿ ಎಲ್. ಎಲ್. ಬಿ. ಪದವಿಯನ್ನು ಪಡೆದ ನಂತರ 1987ರಲ್ಲಿ ಮಂಗಳೂರಲ್ಲಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಒಂದೆರಡು ವರ್ಷಗಳ ನಂತರ ಸ್ವಸ್ಥಾನದಲ್ಲೇ ವೃತ್ತಿ ಜೀವನವನ್ನು ಮುಂದು ವರಿಸಿದ್ದರು. 

ಬಾಲ್ಯದ ದಿನಗಳಲ್ಲಿ ಶಾಲಾ ನಾಟಕಗಳಲ್ಲಿ ಅಪರೂಪಕ್ಕೊಮ್ಮೆ ನಟಿಸುತ್ತಿದ್ದ ಇವರು *ತಂದೆಯ ಗೆಳೆಯ ಬಿ ವಿ ಕಾರಂತರ ಸಾಧನೆ ಕ್ರಿಯಾ ಶೀಲತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದರು.* ಕಾರಂತರಿಗೆ ೧೯೯೪ ರಲ್ಲಿ ಹುಟ್ಟೂರ ಸನ್ಮಾನವನ್ನು ಸಲ್ಲಿಸುವಾಗ ಅವರ ಮೇಲಿನ ಅಭಿಮಾನ ಹೆಚ್ಚಾಯಿತು. ಈ ಎಲ್ಲಾ ಕಾರಣದಿಂದ ಹೃದಯದ ಮೂಲೆಯಲ್ಲಿ ನಾಟಕ ಕ್ಷೇತ್ರಕ್ಕೆ ಒಂದಷ್ಟು ಜಾಗ ಹಾಗೂ ಆಸಕ್ತಿ ಮೂಡಿಕೊಂಡಿತ್ತು. ಕಾರಂತರ ಕೀರ್ತಿ ಹೆಸರು ಎಲ್ಲ ಕಡೆ ಕೇಳಿ ಬರುತ್ತಿದ್ದಾಗ ಅವರು ನಮ್ಮೂರಿನವರು ಎಂಬ ಹೆಮ್ಮೆ ಮನದೊಳಗೆ ಮನೆಮಾಡಿತು. ಲೇಖಕಿ ಶ್ರೀಮತಿ ವೈದೇಹಿಯವರು ಕಾರಂತರ ಜೀವನ ಕಥನವನ್ನು ಬರೆಯುವ ಸಲುವಾಗಿ ತನ್ನ ತಂದೆಯ ಸಂದರ್ಶನವನ್ನೂ ಮಾಡಿದ್ದು ನೆನಪಲ್ಲಿ ಉಳಿದಿತ್ತು. ಹೀಗೆ ಈ ಎಲ್ಲ ರೀತಿಯ ಸನ್ನಿವೇಶಗಳು ಕಾರಂತರ ಮೇಲಿನ ಅಭಿಮಾನ ಮುಂದೆ ಅವರ ಕಾಲಾ ನಂತರ ಊರಿನ ಅಭಿಮಾನಿ ಬಳಗದ ಆಶಯಗಳನ್ನೂ ಅರ್ಥೈಸಿಕೊಂಡು ಒಂದು ಮಹತ್ತರ ನಿಲುವು ತೆಗೆದುಕೊಳ್ಳಲು ನಿರ್ಧರಿಸಿದರು. 

ಮುಂದೆ ಭಟ್ಟರು ಕಾರಂತರ ಆಪ್ತ ಬಳಗದ ಸದಸ್ಯರಾದ ಕೆ.ಜಿ ಕೃಷ್ಣಮೂರ್ತಿ ಹಾಗೂ ಜಯರಾಮ ಪಾಟೀಲರ ಅಭಿಮತ ದಂತೆ ಅವರ ಬಾಬು ಕೋಡಿ ಪ್ರತಿಷ್ಠಾನ, ಬೆಂಗಳೂರು ಇದರ ಜೊತೆ ಸೇರಿಕೊಂಡು ಕಾರಂತರಿಗೆ ಶ್ರದ್ಧಾಂಜಲಿ ಪೂರ್ವಕ ನಾಟಕವನ್ನು ಮಂಚಿಯಲ್ಲಿ ಅರ್ಪಿಸಿದರು. ಪ್ರತಿಷ್ಠಾನ ನೀಡಿದ ಪ್ರೇರಣೆಗೆ ಪ್ರತಿಯಾಗಿ 2010ರಲ್ಲಿ ಬಿ.ವಿ. ಕಾರಂತ ರಂಗ ಭೂಮಿಕ ಟ್ರಸ್ಟ್ ನ್ನು ಗೆಳೆಯರೊಂದಿಗೆ ಸೇರಿ ಪ್ರಾರಂಭಿಸಿದರು. ಈ ಟ್ರಸ್ಟ್ ರಾಮಚಂದ್ರ ಭಟ್ಟರನ್ನೇ ಯೋಗ್ಯ ಹಾಗೂ ಸೂಕ್ತ ವ್ಯಕ್ತಿ ಎಂದು ನಿರ್ಧರಿಸಿ ಅಧ್ಯಕ್ಷ ಪೀಠದಲ್ಲಿ ಅವರನ್ನು ಕುಳ್ಳಿರಿಸಿತು. ಅಂದಿನಿಂದ ಇಂದಿನವರೆಗೂ ಬಳಗದ ಜೊತೆ ಪ್ರತಿ ವರ್ಷ ದೇಣಿಗೆ ಸಂಗ್ರಹಿಸಿ *ಮೂರು ದಿನಗಳ ವಿವಿಧ ಭಾಷೆಗಳ ಆಯ್ದ ಶ್ರೇಷ್ಠ ನಾಟಕಗಳನ್ನು ಕರೆಸಿ ನಾಟಕೋತ್ಸವವನ್ನು ನಡೆಸುತ್ತಾ ಬಂದರು.* ಹೀಗೆ ಜನಮಾನಸದಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಅಭಿರುಚಿ ಮೂಡಿಸಿ ಒಂದು ದೊಡ್ಡ ಪ್ರೇಕ್ಷಕ ವರ್ಗವನ್ನೇ ಒಂದು ಗೂಡಿಸಿ ಕಾರಂತರಿಗೆ ಗೌರವಾರ್ಪಣೆ ಗೈಯುವಲ್ಲಿ ಸಫಲರಾದರು. ಸಹೃದಯಿಗಳ ಸಹಕಾರದಿಂದ ನಿರಂತರವಾಗಿ

ವಿವಿಧ ಸಾಂಸ್ಕೃತಿಕ, ಯಕ್ಷಗಾನ, ವಿಚಾರಗೋಷ್ಠಿ, ರಂಗ ಶಿಬಿರಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಎಲ್ಲರ ಗಮನ ಸೆಳೆದರು. ಈ ಕೈಂಕರ್ಯದಲ್ಲಿ ಶ್ರೀ ಮೂರ್ತಿ ದೇರಾಜೆಯಂತಹ ಖ್ಯಾತ ರಂಗಕರ್ಮಿಗಳು ಇವರ ಜೊತೆ ಕೈ ಜೋಡಿಸಿರುವುದು ಸಂತಸದ ವಿಷಯ. ಮೂರ್ತಿ ದೇರಾಜೆಯವರು ಶಾಲಾ ಮಕ್ಕಳಿಗೆ ನಾಟಕ, ರಂಗ ಶಿಬಿರದ ಮೂಲಕ ಸಹಕಾರವನ್ನು ನೀಡುತ್ತಾ ಬಂದಿದ್ದರು. 

ಈ ನಡುವೆ ಶಾಲಾ-ಕಾಲೇಜು ಮಕ್ಕಳ ಯಕ್ಷಗಾನ ಸ್ಪರ್ಧೆ, ನಾಟಕ ಸ್ಪರ್ಧೆಯನ್ನೂ ನಡೆಸಿದ್ದಿದೆ. ಜೊತೆಗೆ ರಂಗ ಕಲಾವಿದರನ್ನು ಶ್ರೇಷ್ಠ ರಂಗ ಸಾಧಕರನ್ನು ಗೌರವಿಸಿ ಸನ್ಮಾನಿಸಿ ಕಲೆ ಮತ್ತು ಕಲಾವಿದರನ್ನು ಪುರಸ್ಕರಿಸುತ್ತಾ ಬಂದಿರುವುದು ಶ್ಲಾಘನೀಯ. 

ಒಟ್ಟಾರೆ ತನ್ನ ಗಂಭೀರ ವ್ಯಕ್ತಿತ್ವ ಹಾಗೂ ಮೃದು ಮಾತಿನ ಸಂಯಮಯುತ ನಡತೆಯಿಂದ ಎಲ್ಲರನ್ನು ಹುರಿದುಂಬಿಸುತ್ತಾ ಮಂಚಿಯನ್ನೊಂದು ಸಾಂಸ್ಕೃತಿಕ ಗ್ರಾಮವನ್ನಾಗಿಸಬೇಕೆಂಬ ಮಹದಾಶೆಯೊಂದಿಗೆ ಸರಕಾರದ ಮೊರೆ ಹೊಕ್ಕು ಒಂದು ಎಕರೆಯಷ್ಟು ಜಾಗ ಪಡೆಯುವಲ್ಲಿ ಯಶಸ್ವಿಯಾದರು. ಈ ನೆಲೆಯಲ್ಲಿ ಈ ನೆಲದಲ್ಲಿ ರಂಗ ಮಂದಿರ, ಪಾರ್ಕ್, ನಾಟಕೋತ್ಸವ, ಶಾಲಾ ಮಕ್ಕಳಿಗಾಗಿ ವಾರಂತ್ಯದ ರಂಗ ಶಿಬಿರ, ವಸ್ತು ಸಂಗ್ರಹಾಲಯ ಹೀಗೆ ಹಲವು ಯೋಜನೆಗಳನ್ನು ಹಾಕಿಕೊಂಡು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಕಾರಂತರ ಹೆಸರನ್ನು ದಿಕ್ ದಿಗಂತಕ್ಕೇರಿಸುವ ನಿಟ್ಟಿನಲ್ಲಿ ಸಂಪೂರ್ಣ ಶ್ರಮ ವಹಿಸುವ ಕನಸು ಕಟ್ಟಿಕೊಂಡಿದ್ದಾರೆ ಶ್ರೀಯುತ ರಾಮಚಂದ್ರ ಭಟ್ಟರು.

ವಕೀಲ ವೃತ್ತಿಯಲ್ಲೂ ನ್ಯಾಯ ದೇವತೆ ಅವರ ಕೈ ಹಿಡಿದು ಸಾಗಿದ್ದಾಳೆ. ಒಂದಷ್ಟು ಸಮಯ ಭಟ್ಟರು ವಕೀಲರ ಸಂಘದ ಅಧ್ಯಕ್ಷರಾಗಿಯೂ ಜನಹಿತ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. 

ಶ್ರೀಯುತ ಭಟ್ಟರ ಮಡದಿ ಗುಣವತಿ ಪತಿಗೆ ನೆರಳಂತೆ ಜೊತೆಯಲ್ಲಿದ್ದು ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬ ಮಗನ ಕೂಡೆ ಸಂತೃಪ್ತ ಜೀವನವನ್ನು ನಡೆಸುತ್ತಾ ಬಂದಿದ್ದಾರೆ.

ಮಚಿ ಎಂಬ ಒಂದು ಸಣ್ಣ ಹಳ್ಳಿಯ ಜನರಲ್ಲಿ ರಂಗಾಭಿರುಚಿಯನ್ನು ಮೂಡಿಸಿ ಒಳ್ಳೆಯ ಸಂಘಟಕ ನೆನಿಸಿಕೊಂಡು ವರ್ಷ 15 ರ ಕದ ತಟ್ಟುತ್ತಿರುವ ಕಾರಂತಾಭಿಮಾನಿಗಳ ರಂಗಭೂಮಿಕ ಟ್ರಸ್ಟ್ ನ ಯಶಸ್ವಿ ಅಧ್ಯಕ್ಷನಾಗಿದ್ದುಕೊಂಡು ಹಲವಾರು ಯೋಚನೆ ಯೋಜನೆಗಳನ್ನು ಕಣ್ಮನದಲ್ಲಿ ತುಂಬಿಕೊಂಡು ಅನುಷ್ಠಾನಗೊಳಿಸುವ ತುಡಿತವನ್ನು ಎದೆಯಲ್ಲಿ ಕಟ್ಟಿಕೊಂಡ ಕಜೆ ರಾಮಚಂದ್ರ ಭಟ್ಟರನ್ನು ರಂಗ ಸಂಘಟಕ ನ ನೆಲೆಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ಜಂಟಿಯಾಗಿ ದಿನಾಂಕ ಮಾರ್ಚ್ 26ರಂದು ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ- 2024ನ್ನು ನೀಡಿ ಗೌರವಿಸಲಿದೆ.

✍️ ರಾಜೇಶ್ ಭಟ್ ಪಣಿಯಾಡಿ

ಸಂಚಾಲಕರು, ಮಲಬಾರ್ ವಿಶ್ವ ರಂಗ ಪುರಸ್ಕಾರ ಸಮಿತಿ

 
 
 
 
 
 
 
 
 
 
 

Leave a Reply