ಕಕ್ಕುಂಜೆಯ ಯುವ ಪ್ರತಿಭೆ ಕೆ. ಸಂಪ್ರೀತ್… ವಿಶಿಷ್ಟ ಹವ್ಯಾಸಗಳಲ್ಲಿ ಫುಲ್ ಖುಷಿ…

ಕೃಷ್ಣಾಷ್ಟಮಿ ಬಂತೆಂದರೆ ಕೃಷ್ಣನೂರು ಉಡುಪಿಯಲ್ಲಿ ಸಂಭ್ರಮವೋ ಸಂಭ್ರಮ. ಶ್ರೀ ಕೃಷ್ಣನ ಭಕ್ತರ ಮನೆಯಲ್ಲಿ ಭಗವಂತನಿಗೆ ಪ್ರಿಯವಾದ ಉಂಡೆ ಚಕ್ಕುಲಿಯ ತಯಾರಿ ಒಂದೆಡೆಯಾದರೆ, ಪುಟ್ಟ ಪುಟ್ಟ ಮಕ್ಕಳ ಅಮ್ಮಂದಿರು ಮುದ್ದುಕೃಷ್ಣ ಮುದ್ದು ರಾಧೆಯರೊಂದಿಗೆ ಸ್ಪರ್ಧೆಗೆ ಅಣಿಯಾಗುತ್ತಾ ತಾವು ಕೂಡ ಮಠದ ಹತ್ತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸುವ ತವಕ. ಇನ್ನು ಕೆಲವರಿಗೆ ರಾಜಾಂಗಣದಲ್ಲಿ ಆಯೋಜಿಸಿರುವ ವಿವಿಧ ಸಾಂಸ್ಕೃತಿಕ ಸಮ್ಮಿಲನದತ್ತ ಆಸಕ್ತಿ.

ಅದರಲ್ಲೂ ಶ್ರೀ ಕೃಷ್ಣ ಲೀಲೋತ್ಸವದಂದು ರಜತಪೀಠ ಪುರ ಉಡುಪಿಯ ಕೃಷ್ಣ ಮಠ ಹಾಗೂ ರಥಬೀದಿಯ ವೈಭವ ವರ್ಣನಾತೀತ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ರಥ ಬೀದಿ ಕಳೆಗಟ್ಟುವುದು ವಿವಿಧ ವೇಷ ಧಾರಿಗಳಿಂದ ಹಾಗೂ ಅವರ ಕುಣಿತದಿಂದ. ಸಾವಿರಾರು ಜನರು ಈ ಕೃಷ್ಣ ಲೀಲೋತ್ಸವವನ್ನು ಕಣ್ಮನ ತುಂಬಿ ಕೊಂಡು ಕೃತಾರ್ಥರಾಗುತ್ತಾರೆ. ಅಲ್ಲದೆ ಇದೀಗ ವೇಷ ಹಾಕುವುದು ಕೇವಲ ಮನೋರಂಜನೆಗೆ ಅಥವಾ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಇಲ್ಲವೇ ಸಂಘಟನೆಯ ಬಲವರ್ಧನೆಗೆ ಮಾತ್ರವಲ್ಲದೆ ಸಮಾಜಮುಖಿ ಸಮಸ್ಯೆಗಳಿಗೆ ತೆರೆದುಕೊಂಡು ಆ ಮೂಲಕ ಅಗತ್ಯವಿದ್ದ ಬಡವರಿಗೆ ಧನ ಸಹಾಯ ಮಾಡಲು ವಿವಿಧ ವೇಷ ಧರಿಸಿ ಸಾರ್ಥಕತೆ ಮೆರೆಯುವುದು ಇಂದಿನ ದಿನಗಳ ವಿಶೇಷತೆ.ಸಮಾಜಕ್ಕೆ ಒಳಿತು ಮಾಡುವ ಒಬ್ಬ ವ್ಯಕ್ತಿಯ ಆದರ್ಶ ಇತರರಿಗೆ ಅದರಲ್ಲೂ ಯುವ ಜನರಿಗೆ ಪ್ರೇರಣೆ ಆದರೆ ಅದುವೇ ಸಾರ್ಥಕತೆ. ರವಿಕಟಪಾಡಿ ಎಂಬ ವಿಶಿಷ್ಟ ಯುವಕ ಪ್ರತಿವರ್ಷ ಹಾಕುತ್ತಿರುವ ವಿಭಿನ್ನ ವೇಷಗಳನ್ನು ಗಮನಿಸಿ ತಾನೂ ಸ್ಫೂರ್ತಿ ಪಡೆದು ತನ್ನ ಕಲಾತ್ಮಕ ಕಲ್ಪನೆಗಳನ್ನು ಸಾಕಾರ ರೂಪಕ್ಕೆ ತಂದು ಪ್ರಿಡೇಟರ್ ವೇಷಧಾರಿಯಾಗಿ ಜನರ ಗಮನ ಸೆಳೆದ ಕಕ್ಕುಂಜೆಯ ಕಿಶೋರ ಪ್ರತಿಭೆ ಕೆ ಸಂಪ್ರೀತ್ ಆಚಾರ್ಯ.

ಕಳೆದ ವರುಷ ಮಾರುಕಟ್ಟೆಯಲ್ಲಿ ಸುಲಭದಲ್ಲಿ ಲಭ್ಯವಾಗುವ ಸಾಧನಗಳನ್ನು ಬಳಸಿ ಜಟಾಯು ಪಕ್ಷಿ ವೇಷ ಧಾರಿಯಾಗಿ ಎಲ್ಲರ ಗಮನ ಸೆಳೆದ ಸಂಪ್ರೀತ್ ಈ ವರ್ಷ ಆಂಗ್ಲ ಚಲನಚಿತ್ರ ಪ್ರಿಡೇಟರ್ ನಿಂದ ಪ್ರೇರಿತನಾಗಿ ಅಗತ್ಯ ವಸ್ತುಗಳನ್ನು ಖರೀದಿಸಿ ತನ್ನ ಕೈಚಳಕದಿಂದ ಕಲ್ಪನೆಯ ಪ್ರಿಡೇಟರ್ ಕಲಾ ಕೃತಿಯನ್ನು ವಿಶಿಷ್ಟವಾಗಿ ನಿರ್ಮಿಸಿಕೊಂಡು ಅದಕ್ಕೆ ಬೇಕಾದ ಪರಿಕರಗಳನ್ನು ಜೋಡಿಸಿಕೊಂಡು ತಾನೇ ವೇಷವನ್ನು ಧರಿಸಿ ಎಲ್ಲರ ಮನೆಗೆದ್ದಿದ್ದಾನೆ.

ಪುಟ್ಟ ಬಾಲಕನಾಗಿದ್ದಾಗಿಂದಾಗಲೂ ಚಿತ್ರಕಲೆ, ಯಕ್ಷಗಾನ ಕ್ರಾಫ್ಟ್ ಗಳಲ್ಲಿ ವಿಶೇಷ ಆಸಕ್ತಿ ಹೊಂದಿದ ಈ ಬಾಲಕನ ಯಕ್ಷಗಾನದ ಮುಖ ವರ್ಣಿಕೆ, ಪರಿಸರದ ದೃಶ್ಯಗಳು ದೇವತೆಗಳ ಚಿತ್ರಗಳು ನೃತ್ಯದ ಭಂಗಿ ,ಯಕ್ಷಗಾನದ ಪಾತ್ರಧಾರಿಗಳು ,ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಕಲಾಕೃತಿಗಳ ರಚನೆ ನೋಡಲಂದ. ಅದರೊಂದಿಗೆ ಪುಟ್ಟ ಪ್ರಾಣಿಗಳಿಗಾಗಿ ತನ್ನ ಮನೆಯಲ್ಲಿ ತಾನೇ ಮಾಡಿದ ಬೆಚ್ಚನೆಯ ಗೂಡು ನೋಡಲು ಆಕರ್ಷಕ.

ಮನೆಯಲ್ಲಿ ತನ್ನ ಯೋಜನೆಯಂತೆ ಎರಡು ಅಂತಸ್ತಿನ ಮಹಡಿಯ ಸಮೇತದ ಪುಟ್ಟ ಮನೆಯ ಸಣ್ಣ ಪ್ರತಿಕೃತಿ, ಇವೆಲ್ಲ ಆತನ ಸೃಜನಶೀಲತೆಗೆ ಉದಾಹರಣೆಗಳು. ಅಲ್ಲದೆ ಹಿಂದಿನ ಕಾಲುಗಳು ಊನವಾದ ಶ್ವಾನಗಳಿಗೆ ಓಡಾಡಲು ಅನುಕೂಲವಾಗುವಂತೆ ಎರಡು ಪುಟ್ಟ ಚಕ್ರಗಳನ್ನು ಜೋಡಿಸಿ ಬೆಲ್ಟ್ ಸಿಕ್ಕಿಸಿ ತಯಾರಿಸಿದ ಕೃತಕ ಬಂಡಿ ಎಲ್ಲರ ಗಮನ ಸೆಳೆದಿದ್ದು ಶ್ವಾನಪ್ರಿಯರಿಗೆ ಸುಮಾರು ಇಂತಹ ಹತ್ತು ಕೃತಕ ಬಂಡಿಗಳನ್ನು ತಾನೇ ತಯಾರಿಸಿ ನೀಡಬೇಕೆಂಬುದು ಇವನ ಕನಸು.

ಸ್ವತಃ ತನ್ನ ಮುಖಕ್ಕೆ ಬಣ್ಣ ಬಳಿಯುವುದರೊಂದಿಗೆ ತನ್ನ ಸಮವಯಸ್ಕರನ್ನು ಕೂಡಿಕೊಂಡು ಅವರ ಮುಖ, ಮೈತುಂಬ ಹುಲಿ ವೇಷವನ್ನು ಬಳಿಯುವುದರಲ್ಲಿ ಈತ ಎಕ್ಸ್ ಪರ್ಟ್. ರಾಕ್ಷಸವೇಷವಿರಲಿ , ದೊಡ್ಡ ಗಾತ್ರದ ಪಕ್ಷಿ ಪ್ರಾಣಿಗಳ ವೇಷವಿರಲಿ, ವಿಶಿಷ್ಟ ರೀತಿಯಲ್ಲಿ ವೇಷ ಹಾಕುವ ತಾಧ್ಯಾತ್ಮತೆಗೆ ಎಲ್ಲರೂ ಶಹಬಾಸ್ ಎನ್ನುವವರೇ. ತನ್ನ ತಂದೆ ಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯರು ನಡೆಸಿಕೊಂಡು ಬರುತ್ತಿರುವ ಹಾಗೂ ನಿತ್ಯ ಪೂಜಿಸುವ ಕಕ್ಕುಂಜೆ ಇಷ್ಟಸಿದ್ಧಿ ವಿನಾಯಕನನ್ನು ಅಲಂಕರಿಸುವುದೆಂದರೆ ಇವನಿಗೆ ಬಲು ಇಷ್ಟ .

ಅಲ್ಲದೆ ತಂದೆಯೊಂದಿಗೆ ನಾಗಮಂಡಲದಲ್ಲಿ ನಾಗಪಾತ್ರಿಯಾಗಿ ಪಾಲ್ಗೊಂಡು ನಾಗದರ್ಶನ ನೀಡುವ ಕರಾವಳಿಯ ಅತಿ ಕಿರಿಯ ನಾಗಪಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಈ ಹುಡುಗನಿಗೆ ಲೌಕಿಕ ಹಾಗೂ ಅಲೌಕಿಕ ವಿಷಯಗಳತ್ತ ಬಲು ಆಸಕ್ತಿ . ತನ್ನೆಲ್ಲ ಇಷ್ಟ ಗಳಿಗೆ ಸ್ಪಂದಿಸುವ, ಸಹಕರಿಸುವ ತಾಯಿ ಸುಮನ ಆಚಾರ್ಯ ರೊಂದಿಗೆ ಕೊರೋನಾ ಸಮಯದ ಬಿಡುವಿನ ವೇಳೆಯಲ್ಲಿ ಚಂದ ಚಂದದ ವಿಧವಿಧ ಆಕೃತಿಯ ಬಾಟಲಿಗಳ ಮೇಲೆ ವಿಧವಿಧ ವಿನ್ಯಾಸದ ಚಿತ್ತಾಕರ್ಷಕ ಚಿತ್ರಕಲೆಯನ್ನು ಮಾಡಿ ಗಮನ ಸೆಳೆದವನು.

ಉಡುಪಿ ಅನಂತೇಶ್ವರ ಶಾಲೆಯಲ್ಲಿ ಪ್ರಾಥಮಿಕ, ನಿಟ್ಟೂರು ಶಾಲೆಯಲ್ಲಿ ಹೈಸ್ಕೂಲ್ ಮುಗಿಸಿ ಇದೀಗ ಕಲ್ಯಾಣ ಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಸಂಗ ಮಾಡುತ್ತಿರುವ ಈ ಬಹುಮುಖ ಪ್ರತಿಭೆಗೆ ಇತರರ ಕಷ್ಟಗಳಿಗೆ ಸ್ಪಂದಿಸುವ ಮನ. ಈ ವರ್ಷ ಪ್ರಿಡೇಟರ್ ವೇಷ ಧರಿಸಿ ತನ್ನ ಪರಿಚಯದ ಎರಡು ಮನೆಗಳನ್ನು ಹಾಗೂ ಛಾಯಾಚಿತ್ರ ತೆಗೆಸಿಕೊಳ್ಳಲು ಸ್ಟುಡಿಯೋಗೆ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ ನಿಟ್ಟೂರು ಶಾಲೆಗೆ ಬಿಟ್ಟರೆ ಬೇರೆಲ್ಲೂ ಹೋಗದ ಸಂಪ್ರೀತ್ ಗೆ ಬರುವ ವರ್ಷ ವಿಶಿಷ್ಟ ವೇಷ ಧರಿಸಿ ಒಂದಷ್ಟು ಹಣ ಸಂಪಾದಿಸಿ ಆರ್ಥಿಕ ವಾಗಿ ಕಷ್ಟದಲ್ಲಿರುವ ಬಡ ಪ್ರತಿಭಾವಂತರಿಗೆ ಅದರಲ್ಲೂ ಶೈಕ್ಷಣಿಕ ಸಾಲ ಮಾಡಿ ಓದಿ ಸರಿಯಾದ ಕೆಲಸ ಸಿಗದೇ ಆಚೆ ಹೆತ್ತವರಿಗು ನೆರವಾಗದೆ ಈಚೆ ತಮ್ಮ ಸಾಲವನ್ನೂ ತೀರಿಸಲಾಗದೆ ಒದ್ದಾಡುತ್ತಿರುವ ಎಷ್ಟೋ ಪ್ರತಿಭಾವಂತರಿಗೆ ಸಹಾಯ ಮಾಡುವ ಆಲೋಚನೆ.

ತಾವಾಯಿತು ತಮ್ಮ ಓದು ಬರಹವಾಯಿತು ಇಲ್ಲವೇ ಮೊಬೈಲ್ ಜಗತ್ತಿನೊಳಗೆ ಹೊಕ್ಕು ಕಳೆದು ಹೋದ  ರಾಯಿತು ಎಂಬುದು ಬಹುತೇಕ ಯುವಕರ ಮನಸ್ಥಿತಿ. ಅದರಿಂದ ಹೊರ ಬಂದು ಸೃಜನಶೀಲ ಹವ್ಯಾಸಗಳತ್ತ ಮನ ಮಾಡಿ ತನ್ನ ಸಮಯವನ್ನು , ತನ್ನ ಶ್ರಮವನ್ನು ಇತರರ ಒಳಿತಿಗೆ ವ್ಯಯಿಸುವಲ್ಲಿ ಸ್ಪಂದಿಸುವ ಇಂತಹ ಯುವಜನತೆಗೆ ಪ್ರೋತ್ಸಾಹ ನೀಡಿ ಅವರ ಆಶಯಗಳು ಈಡೇರಲಿ, ಆ ಮೂಲಕ ಇನ್ನಷ್ಟು ಜನರಿಗೆ ಒಳಿತಾಗಲೆಂದು ನಾವು ನೀವೆಲ್ಲ ಹಾರೈಸೋಣವಲ್ಲವೇ..
ಪೂರ್ಣಿಮಾ ಜನಾರ್ದನ್ ಕೊಡವೂರು

 
 
 
 
 
 
 
 
 
 
 

Leave a Reply