ಮಲಬಾರ್ ವಿಶ್ವರಂಗ ಪುರಸ್ಕಾರ 2024 ಕ್ಕೆ ಭಾಜನರಾದ ಶೃಂಗೇರಿಯ ರಮೇಶ್ ಬೇಗಾರ್

ಶೃಂಗೇರಿಯ ಮಣ್ಣಲ್ಲಿ ರಂಗದ ರಂಗನ್ನು ಹರಡಿ ರಂಗು ರಂಗಿನ ರಂಗವಲ್ಲಿ ಬರೆದ ರಂಗ ಕಲಾವಿದ ತನ್ನದೇ ಆದ ಕಲಾ ಲೋಕವೊಂದನ್ನು ಸೃಷ್ಟಿಗೈದು ಸಾಧನೆಯ ಶಿಖರದ ಶೃಂಗಕ್ಕೇರಿ ನಿಂತ ಮಲೆನಾಡಿನ ಮಾಣಿಕ್ಯ – ಶೃಂಗೇರಿ ಶಾರದೆಯ ಕರ ಕಮಲ ಸಂಜಾತ ಶ್ರೀ ರಮೇಶ್ ಬೇಗಾರ್.

ಮಲೆನಾಡ ಸುಂದರ ತಾಣ ಶಾರದೆಯ ನೆಲೆಯೂರು ಶೃಂಗೇರಿ ಹಾಗೂ ಆಗುಂಬೆಯ ನಡುವಲ್ಲಿರುವ ಒಂದು ಪುಟ್ಟ ಹಳ್ಳಿ ನಡು ಬೇಗಾರು. ಅಲ್ಲೊಂದು ಯಕ್ಷಗಾನ, ನಾಟಕ, ಸಂಗೀತ, ವಾದ್ಯಗಳ ಕಲರವ ತುಂಬಿಕೊಂಡ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ಕಲಾವಿದ ಕುಟುಂಬ. ಆ ಮನೆತನದ ಯಜಮಾನ ಒಳ್ಳೆಯ ಸಂಗೀತಗಾರ ಲಕ್ಷ್ಮೀ ವೆಂಕಟರಮಣ ಭಟ್ ಮತ್ತು ದಾಕ್ಷಾಯಿಣಿ ದಂಪತಿಗಳ ಕುವರ ಕಲಾರತ್ನ ರಮೇಶ್ ಬೇಗಾರ್. 

ತನ್ನ ಎಳೆಯ ಪ್ರಾಯದಲ್ಲಿಯೇ ಕನಸುಗಳ ಕಾಮನಬಿಲ್ಲನ್ನು ಮೈಮನದಲ್ಲಿ ತುಂಬಿಕೊಂಡವರು ಇವರು. ಹುಟ್ಟೂರ ಸೊಬಗನ್ನು ಆನಂದಿಸುತ್ತ ಸುತ್ತಲಿನ ನಾಡು ನುಡಿ ಕಥೆ, ಕಲೆ ಸಂಸ್ಕೃತಿಗಳ ಮೇಲೆ ಅತೀವ ಪ್ರೀತಿ ಇಟ್ಟುಕೊಂಡು ಅದೆಲ್ಲವನ್ನು ಅನುಭವಕ್ಕೆ ತೆಗೆದುಕೊಂಡು ಜೀವನವನ್ನು ಬರಡು ಭೂಮಿಯನ್ನಾಗಿಸದೆ ಪ್ರತಿಕ್ಷಣಗಳನ್ನು ಅನುಭವಿಸುತ್ತಾ ರಂಗು ತುಂಬಿದ ರಂಗಭೂಮಿಯನ್ನಾಗಿಸಬೇಕೆಂಬ ಹಂಬಲ ಹೊತ್ತು ಜೀವನದುದ್ದಕ್ಕೂ ಕ್ರಿಯಾಶೀಲ ಚಟುವಟಿಕೆಗಳತ್ತ ಮುಖ ಮಾಡಿ ನಿಂತವರು ..ರಮೇಶ್. ತನ್ನ ಬಾಲ್ಯದ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಮೀಪದ ಬಿದಿರಗೋಡು ಎಂಬ ಗ್ರಾಮದಲ್ಲಿ ಮುಗಿಸಿ ಪ್ರೌಢ ವಿದ್ಯಾಭ್ಯಾಸ ಆಗುಂಬೆಯಲ್ಲಿ, ಪದವಿಯನ್ನು ಶಾರದೆಯ ನೆಲೆಯೂರು ಶೃಂಗೇರಿಯಲ್ಲಿ ಪಡೆದು ನಂತರ ಮೈಸೂರಲ್ಲಿ ಪತ್ರಿಕೋದ್ಯಮದ ಡಿಗ್ರಿಯನ್ನೂ ಸಂಪಾದಿಸಿದರು. ಇನ್ನುಳಿದ ಪ್ರವೃತ್ತಿಯ ಹೆಚ್ಚಿನ ವಿದ್ಯೆಗಳನ್ನೆಲ್ಲಾ ನೋಡಿ ಕೇಳಿ ಕಲಿತದ್ದು… ಏಕಲವ್ಯನಂತೆ, ಭಗೀರಥನಂತೆ. 

ಸಾಧಿಸುವುದು ಸಾಗರದಷ್ಟಿದೆ ಆದರೆ ಸಾಧಿಸುವ ಛಲವೂ ಆಗಸದಷ್ಟಿದೆ ಎಂದು ನಂಬಿ ಕಾರ್ಯಪ್ರವೃತ್ತರಾದವರು ಬೇಗಾರ್…

ನಾಟಕರಂಗದಲ್ಲಿ ಉಮೇಶ್ ಕಾಸರವಳ್ಳಿ ಹಾಗೂ ಶಿಕ್ಷಕ ವೆಂಕಟರಮಣ ಐತಾಳ್ ರನ್ನು ರಂಗ ಗುರುಗಳಾಗಿ ಸ್ವೀಕರಿಸಿದವರು ಇವರು. ಚಿಕ್ಕಪ್ಪ ರಾಧಾಕೃಷ್ಣ ರಂಗ ಪಯಣಕ್ಕೆ ಸ್ಪೂರ್ತಿಯಾದರು. ಪ್ರಥಮ ಡಿಗ್ರಿ ಓದುತ್ತಿದ್ದಾಗ ಕಮ್ಮರಡಿಯಲ್ಲಿ *ಕ್ರಾಂತಿ – ರಾಜಕೀಯ* ಎಂಬ ಕೃತಿಯನ್ನು ಬರೆದು ನಿರ್ದೇಶನ ಮಾಡಿ ಎಲ್ಲರಿಂದ ಪಡೆದ ಮೆಚ್ಚುಗೆ ಮುಂದಿನ ರಂಗಪಯಣದ ಹಲವು ಪ್ರಥಮಗಳಿಗೆ ನಾಂದಿಯಾಗಿತ್ತು. 

ಹವ್ಯಾಸಗಳ ಯಾದಿಯಲ್ಲಿ ನಾಟಕ ಮತ್ತು ದಾರವಾಹಿಗಳ ನಿರ್ದೇಶನ ಇವರ ಜೀವನದ ಅಚ್ಚುಮೆಚ್ಚಿನ ಅಂಗವಾಗಿತ್ತು. ಎಲ್ಲದರಲ್ಲೂ ಹೊಸತನವನ್ನು ಕಾಣುವ ಬಯಕೆ ಸದಾ ಹಸಿರಾಗಿರುತ್ತಿತ್ತು – ಅವರೂರಿನ ಸೌಂದರ್ಯ ತಾಣದಂತೆ. ಪ್ರಾರಂಭದ ದಿನಗಳಲ್ಲಿ ಯುವಜನ ಮೇಳ ಸೇವಾ ಇಲಾಖೆಯ ಸ್ಪರ್ಧಾ ನಾಟಕಗಳನ್ನು ನಿರ್ದೇಶಿಸಿ ಸತತ ಮೂರು ಬಾರಿ ರಾಜ್ಯಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡವರು ಬೇಗಾರ್. 1986ರಲ್ಲಿ ಮೇಣದಬತ್ತಿಯ ದೀಪದ ಬೆಳಕಲ್ಲಿ ಕರ್ಣ ಭಾರ ಬೆಳಕು ಕಂಡರೆ 2007ರಿಂದ ಸತತ ಮೂರು ವರ್ಷ “ರಂಗ ಪುನರುತ್ಥಾನ, ಕರ್ಣ, ಸಂಗೊಳ್ಳಿ ರಾಯಣ್ಣ ಮುಂತಾದ ಪೌರಾಣಿಕ ನಾಟಕಗಳು ಅರಳಿಕೊಂಡವು. ಇವರ ಪ್ರತಿಯೊಂದು ಯೋಚನೆ ಯೋಜನೆಗಳಲ್ಲಿ ಒಂದಷ್ಟು ವೈಶಿಷ್ಟ್ಯತೆಗಳು ಕಂಡುಬರುತ್ತವೆ. ಸ್ಥಳೀಯ ಶ್ರೇಷ್ಠ ಸಾಹಿತಿಗಳ ಸಣ್ಣ ಕೃತಿಗಳು ಉದಾಹರಣೆಗೆ ಗುಪ್ತ ಧನ, ಪ್ರಶ್ನೆ ಇತ್ಯಾದಿಗಳನ್ನು ನಾಟಕ ರೂಪಕ್ಕೆ ಅನುವಾದಿಸಿ ನಿರ್ದೇಶಿಸಿ ಎಲ್ಲರಿಂದ ಮುಖ್ಯವಾಗಿ ಬರೆದ ಸಾಹಿತಿಗಳಿಂದಲೇ ಸೈ ಎನಿಸಿಕೊಂಡವರು ಇವರು. ಬೇಗಾರರ ನಾಟಕಗಳ ನಿರ್ದೇಶನ ಯಾವುದೇ ಒಂದು ವಯೋಮಿತಿ ಅಥವಾ ಪಂಗಡದ ಕಲಾವಿದರಿಗೆ ಮಾತ್ರ ಸೀಮಿತವಾಗಿರದೆ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲಾ ವಯೋಮಾನದ ಕಲಾವಿದರಿಗೂ ನಾಟಕ ನಿರ್ದೇಶಿಸಿದ ಕೀರ್ತಿ ಇವರದು. ಈ ವರೆಗೆ ಸುಮಾರು 35 ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದು 680 ಸಂಚಿಕೆಗಳನ್ನೊಳಗೊಂಡ ಆರು ಧಾರವಾಹಿಗಳ ಸಂಚಯ ಇವರ ಕಲಾ ಪ್ರತಿಭೆಗೆ ಹಿಡಿದ ಕೈಗನ್ನಡಿ.

ಭೂತಗಳು, ಪರಿವರ್ತನೆ, ಕಾರಣ, ಸಿಡಿದವಳು, ಮಲೆನಾಡ ಮೇಲೆ ಮುಗಿಲ ಬಾಲೆ, ಇವರ ನಿರ್ದೇಶನದ ನಾಟಕಗಳು. ವೈಶಂಪಾಯನ ತೀರ, ಜಲಪಾತ ದಂತಹ ಬೆಳ್ಳಿತೆರೆಯ ಚಿತ್ರಗಳು ಇವರ ಕೀರ್ತಿ ಶಿಖರದ ಮೆಟ್ಟಿಲುಗಳು. ಇನ್ನು ಮಲೆನಾಡು ಪ್ರಾಂತ್ಯದಲ್ಲಿ ಪಂಚದಶ ವರ್ಷಗಳ ಹಿಂದೆ ಬಳಕೆಯಲ್ಲಿದ್ದ ನಿರ್ಧಿಷ್ಟ ಸಂಪ್ರದಾಯದ ರಂಗಗೀತೆಗಳನ್ನು ಅದರ ಕೊನೆಯ ಕೊಂಡಿಯಾಗಿದ್ದ ಪ್ರಸಿದ್ಧ ಗಾಯಕ ಗರ್ತಿಕೆರೆ ರಾಘಣ್ಣ ಇವರಿಂದಲೇ ಹೇಳಿಸಿ ದಾಖಲೀಕರಿಸಿದ ವಿಶೇಷ ಸಾಧನೆ ರಮೇಶ್ ರವರದ್ದು. ತನ್ನ ಕಾರ್ಯಕ್ಷೇತ್ರದಲ್ಲಿ ತಾನೊಬ್ಬನೇ ಬೆಳೆಯದೆ ಜೊತೆಗೆ ಒಂದಷ್ಟು ಜನರನ್ನು ಕಲಾ ಲೋಕಕ್ಕೆ ಪರಿಚಯಿಸಿದವರು ಬೇಗಾರ್.

ಈ ಎಲ್ಲ ಸಾಧನೆಗಳಿಗೆ ಒದಗಿ ಬಂದ ಪ್ರಶಸ್ತಿ ಪುರಸ್ಕಾರಗಳು ಲೆಕ್ಕವಿಲ್ಲದಷ್ಟು.  

ಅದರಲ್ಲಿ ಕೆಲವು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 1998 ಸಿಜಿಕೆ ರಂಗ ಪ್ರಶಸ್ತಿ , ಆರ್ಯಭಟ, ಕಲಾ ಸುಮ, ಕಲಾಶ್ರೀ, ಕತಾರ್ ದೇಶದ ವಸಂತೋತ್ಸವ ಪ್ರಶಸ್ತಿ ಇತ್ಯಾದಿ ಇತ್ಯಾದಿ ಪಟ್ಟಿ ಬಹಳ ಉದ್ದವಿದೆ.

ಇನ್ನು ಯಕ್ಷಗಾನ ಕ್ಷೇತ್ರದಲ್ಲಿ ಇವರಿಟ್ಟ ಹೆಜ್ಜೆ ಅದು ತ್ರಿವಿಕ್ರಮ ಹೆಜ್ಜೆ. ಯಕ್ಷಗಾನ ಕಲೆ ಕಲಾವಿದರ ಜೀವನ ಚರಿತ್ರೆಯ ದಾಖಲೀಕರಣ ಮುಂದಿನ ತಲೆಮಾರಿಗೆ ಇವರು ಕೂಡಿಟ್ಟ ಬಲು ದೊಡ್ಡ ಆಸ್ತಿ. 

ಯಕ್ಷಗಾನ ಪ್ರಸಂಗಗಳಿಗೆ ರಾಗ ಸಂಯೋಜನೆ, ಸ್ಟತಃ ಭಾಗವತಿಕೆ, ಪ್ರಾತ್ಯಕ್ಷಿಕೆ, ವಿಡಿಯೋ ಸಂಪುಟ ಕಿರುತೆರೆಯ ಧಾರವಾಹಿಗಳು ಯಕ್ಷಗಾನ ತಾಳ ಮದ್ದಲೆ ಇತ್ಯಾದಿ ಇವರ ಸೃಜನಶೀಲತೆಗೆ ಸಾಕ್ಷಿಗಳು,

ಕೃಷ್ಣ ಪಾರಿಜಾತ, ಸಾಲ್ವ ಶೃಂಗಾರ, ಉತ್ತರನ ಪೌರುಷ ಹೀಗೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಯಕ್ಷ ಲೋಕದ ದಿಗ್ಗಜರು ಮುಖ್ಯಪಾತ್ರಗಳನ್ನು ನಿರ್ವಹಿಸಿದಂತಹ ದಾಖಲೀಕರಣದ ಮೈಲುದ್ದದ ಪಟ್ಟಿಯೇ ಇದೆ. ಚಿತ್ರಲೇಖ ಇವರ ಕೈಯಿಂದಲೇ ರಚನೆ ಗೊಂಡ ಪ್ರಸಂಗ.

ಕಾಳಿಂಗ ನಾವುಡರ ಪರಮಾಭಿಮಾನಿ ಶ್ರೀ ರಮೇಶ್ ಬೇಗಾರ್. ಅವರ ಒಡನಾಟದ ಸವಿ ನೆನಪು ಗಾಢವಾಗಿ ಇವರನ್ನು ಅಪ್ಪಿಕೊಂಡಿದ್ದರ ಸಲುವಾಗಿ ಅವರ ಹೆಸರಿನಲ್ಲಿ ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತ ಸದಾ ತನ್ನ ನೆನಪಿನಂಗಳದಲ್ಲಿ ಅವರನ್ನು ಪೂಜಿಸುತ್ತಿದ್ದರು. ಸಾಂಸ್ಕೃತಿಕ ಪ್ರತಿಷ್ಠಾನದ ಸ್ಥಾಪನೆ, ಕರಾವಳಿ ಕೋಗಿಲೆ, ಧ್ವನಿ ಚಿತ್ರ, ಪದ್ಯ ನಮನ, ಕಾಳಿಂಗ ಸ್ಮರಣ ವರ್ಷಾನುರಣ ಅಲ್ಲದೆ ಕಾಳಿಂಗ ನಾವಡ ಯುವ ರಂಗ ಸಮ್ಮಾನ ಪುರಸ್ಕಾರ, ಕಂಚಿನ ಕಂಠದ ಸ್ವರಮಾಧುರ್ಯದ ದಾಖಲೀಕರಣ ಜೊತೆಗೆ ತಮ್ಮ ಮಡದಿ ಮಕ್ಕಳ ಹೆಸರಿನಲ್ಲೂ ನಾವುಡರ ಮೇಲಿನ ಅಭಿಮಾನದ ಸುಧೆಯನ್ನು ಹರಿಸಿದ್ದಾರೆ.

ರಮೇಶ್ ಬೇಗಾರ ಒಬ್ಬ ಒಳ್ಳೆಯ ಬರಹಗಾರ, ಪತ್ರಕರ್ತ…ಸಹ್ಯಾದ್ರಿ ವಾರ್ತೆ ಶೃಂಗೇರಿ ಪತ್ರಿಕೆ, ತುಂಗಾ ವಾರ್ತೆ ಮುಂತಾದ ಪತ್ರಿಕೆಗಳು ನಿಯತಕಾಲಿಕಗಳೂ ಇವರ ಬರಹದ ಮಾಧುರ್ಯವನ್ನು ಆಸ್ಟಾದಿಸಿವೆ.

ಬಾಳಲ್ಲಿ ಭಾಗ್ಯ ತಂದ ಪತ್ನಿ ಭಾಗ್ಯಶ್ರೀ, ಕಲಾರತ್ನ ಮಗಳು ನಾಗಶ್ರೀ, ಬೇಗಾರರ ಸ್ಪೂರ್ತಿಯ ಮೂರ್ತಿ ಸ್ಕಂದ ಶಂಕರ- ಈ ಪುಟ್ಟ ಸಂಸಾರ ಬೇಗಾರರ ಪಾಲಿಗೆ ಆನಂದ ಸಾಗರ.

ಹೀಗೆ ಶತಮಾನದ ಸಾಧನೆಗಳನ್ನು ದಶಮಾನದಲ್ಲೆ ಪೂರೈಸುವ ಉತ್ಸಾಹಿ, ವಿರಾಮವನ್ನೇ ಅರಿಯದ ಪಾದರಸದಂತೆ ಓಡಾಡುತ್ತ ಎಲ್ಲ ರೊಡನೆ ಬೆರೆತು ಬಾಳುವ ಕಲಾರಾಧಕ ಶ್ರೀ ರಮೇಶ್ ಬೇಗಾರ್ ರವರಿಗೆ ಈ ಬಾರಿಯ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಟಾನ (ರಿ.) ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಜಂಟಿಯಾಗಿ ಕೊಡಮಾಡುತ್ತಿರುವ ಮಲಬಾರ್ ವಿಶ್ವ ರಂಗ ಪುರಸ್ಕಾರ – 2024 ನ್ನು ಮಾರ್ಚ್ 26 ರಂದು ವಿಶ್ವರಂಗ ದಿನಾಚರಣೆಯ ಅಂಗವಾಗಿ ಪ್ರಧಾನ ಮಾಡಲಿದೆ.

 ✍🏻 ~ರಾಜೇಶ್ ಭಟ್ ಪಣಿಯಾಡಿ

ಸಂಚಾಲಕರು – ಮಲಬಾರ್ ಈಶ್ವರ ರಂಗ ಪುರಸ್ಕಾರ – 2024

 
 
 
 
 
 
 
 
 
 
 

Leave a Reply