ಹರಿದ್ವಾರದ ಮಧ್ವಾಶ್ರಮದಲ್ಲಿ ಪೇಜಾವರ ಶ್ರೀಗಳಿಗೆ ಉಮಾಭಾರತಿ ಗುರುಪೂಜೆ

ಗುರುಪೂರ್ಣಿಮೆ ವಿಶೇಷ

ಶನಿವಾರ ಗುರುಪೂರ್ಣಿಮೆಯ ಪರ್ವದಿನ. ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರಲ್ಲಿ ಮಂತ್ರದೀಕ್ಷೆ ಪಡೆದ ರಾಷ್ಟ್ರದ ಪ್ರಖರ ಹಿಂದೂ ಧ್ವನಿ , ಕೇಂದ್ರದ ಮಾಜಿ ಮಂತ್ರಿ ಉಮಾಭಾರತಿ ಯವರು ಹರಿದ್ವಾರದಲ್ಲಿರುವ ಶ್ರೀ ಪೇಜಾವರ ಮಠದ ಶಾಖೆ ಶ್ರೀ ಮಧ್ವಾಶ್ರಮದಲ್ಲಿ ಗುರು ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಭಕ್ತಿ ನಮನ ಸಲ್ಲಿಸಿದರು.

ಬಳಿಕ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಫಲ ಪುಷ್ಪ ಸಹಿತ ಗುರುಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿತ್ರಕೂಟಾಶ್ರಮದ ಶ್ರೀ ರಾಮಕಿಶನ್ ಜೀ ಮಹಾರಾಜ್ ಅವರಿಗೂ ಗುರುನಮನ ಅರ್ಪಿಸಿದ ಉಮಾಭಾರತಿ ಅಲ್ಲಿನ ಹತ್ತಾರು ಸಾಧು ಸಂತರಿಗೂ ವಿಶೇಷ ಉಡುಗೊರೆ ನೀಡಿ ಗೌರವ ಸಲ್ಲಿಸಿದರು .ಉಮಾಭಾರತಿಯವರ ಸಂಕಲ್ಪದಂತೆ ಆಶ್ರಮದಲ್ಲಿ ಎರಡುದಿನಗಳ ಹಿಂದೆ ವಿದ್ವಾನ್ ಶಶಾಂಕ ಭಟ್ಟರ ನೇತೃತ್ವದಲ್ಲಿ ವಿಷ್ಣುಸಹಸ್ರನಾಮ ಯಾಗ ಸಂಪನ್ನಗೊಂಡಿತ್ತು. ಗುರುಪೂರ್ಣಿಮೆಯ ಅಂಗವಾಗಿ ಆಶ್ರಮದಲ್ಲಿರುವ ಜಗದ್ಗುರು ಮಧ್ವಾಚಾರ್ಯರ ಶಿಲಾಪ್ರತಿಮೆಗೆ ವಿಶೇಷ ಅಭಿಷೇಕ ಪೂಜೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನೆರವೇರಿತು. ಆಶ್ರಮದ ವ್ಯವಸ್ಥಾಪಕ ಮನೋಜ್ ಕಾರ್ಯಕ್ರಮ ಸಂಯೋಜಿಸಿದರು.

ಶ್ರೀ ವಿಶ್ವೇಶತೀರ್ಥರು ಇದ್ದಷ್ಟೂ ಕಾಲ ಪ್ರತೀ ವರ್ಷ ಆಷಾಢ ಪೂರ್ಣಿಮೆಯಂದು ಅವರಿದ್ದಲ್ಲಿಗೆ ಬಂದು ಅಥವಾ ದೆಹಲಿಗೆ ಆಮಂತ್ರಿಸಿ ವಿಶೇಷ ಕಾರ್ಯಕ್ರಮ ನೆರವೇರಿಸಿ ಉಮಾಭಾರತಿಯವರು ಗುರು ಭಕ್ತಿ ನಮನ ಸಲ್ಲಿಸುತ್ತಿದ್ದರು.

ದೇಶದಲ್ಲಿ ದಲಿತ ಸಮುದಾಯದ ಅಗ್ರ ಪಂಕ್ತಿಯ ನಾಯಕಿಯಾಗಿ ಗುರುತಿಸಲ್ಪಟ್ಟ, ಹಿಂದೂ ವಿಚಾರಧಾರೆಗಳಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡವರು ಉಮಾಭಾರತಿ. ಅಯೋಧ್ಯಾ ರಾಮಜನ್ಮಭೂಮಿ ಆಂದೋಲನದಲ್ಲಿ ಪಾತ್ರ ಮಹತ್ವದ್ದು. ದೇಶಾದ್ಯಂತ ಸಂಚರಿಸಿ ತಮ್ಮ‌ ಪ್ರಖರ ಮಾತುಗಳಿಂದ ಹಿಂದೂ ಜಾಗೃತಿಯ ಕರ್ತವ್ಯ ನಿರ್ವಹಿಸಿದ ಉಮಾ ಅವರು 1992 ನವೆಂಬರ್ 17 ರಂದು ದಶಕದಲ್ಲಿ ನರ್ಮದಾ ನದಿಯ ಉಗಮಸ್ಥಳ ಮಧ್ಯಪ್ರದೇಶದ ಅಮರಕಂಟಕ್ ನಲ್ಲಿ ಶ್ರೀ ವಿಶ್ವೇಶತೀರ್ಥರಿಂದ ಮಂತ್ರದೀಕ್ಷೆ ಪಡೆದು ಸಾಧ್ವಿ ಶ್ರೀ ಉಮಾಭಾರತಿ ಯಾದರು.‌ ಆ ಕಾಲಕ್ಕೆ ಇಡೀ ದೇಶದಲ್ಲಿ ಈ ಘಟನೆ ಸಂಚಲನ ಮೂಡಿಸಿತ್ತು .

ಹುಬ್ಬಳ್ಳಿ ಈದ್ಗಾ ಮೈದಾನ ಪ್ರಕರಣ ಹೋರಾಟದಲ್ಲೂ ಅತ್ಯಂತ ಸಕ್ರಿಯವಾಗಿ ಭಾಗವಹಿಸಿ ಆ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಮಧ್ಯಪ್ರದೇಶದ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿ ಅಚ್ಚರಿ ಮೂಡಿಸಿದ್ದರು.

 
 
 
 
 
 
 
 
 
 
 

Leave a Reply