ಗುರುವಿನಂತೆ ಶಿಷ್ಯ-ಪರಿಶಿಷ್ಟರ ಬಡಾವಣೆಗೆ ಶ್ರೀ ವಿಶ್ವಪ್ರಸನ್ನ ತೀರ್ಥರ ಭೇಟಿ

ಅಸೃಶ್ಯತೆಯನ್ನು ನಿವಾರಿಸಿ ದಲಿತರನ್ನು ಸುದೃಢಗೊಳಿಸುವ ನಿಮಿತ್ತ ಹಲವಾರು ದಲಿತ ಕಾಲೊನಿಗಳಿಗೆ ಭೇಟಿ ನೀಡಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೊಸ ಸಂಚಲನ ಮೂಡಿಸಿದ್ದರು.

ಇದೀಗ ಅವರ ಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥರೂ ಗುರುವಿನ ಹಾದಿಯಲ್ಲಿ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ. ಭಾನುವಾರ ಉಡುಪಿಯ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿ ಪರಿಶಿಷ್ಟರ ಬಡಾವಣೆಗೆ ಮೊದಲ ಭೇಟಿ ನೀಡಿ ಹಿಂದೂ ಸಮಾಜದ ಸಂಘಟನೆಗೆ ತಾವೂ ಸಿದ್ಧರು ಎಂಬುದನ್ನು ನಿರೂಪಿಸಿದ್ದಾರೆ.ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಮುಂದಿಟ್ಟುಕೊಂಡು ಭಾರತದಲ್ಲಿ ಮತ್ತೊಮ್ಮೆ ಹಿಂದೂ ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಈ ಆಶಯದಿಂದ ಸುಮಾರು 120 ಮನೆಗಳನ್ನು ಹೊಂದಿರುವ ಈ ಬಡಾವಣೆಗೆ ಭೇಟಿ ನೀಡಿ 400ರಷ್ಟು ದಲಿತ ಬಂಧುಗಳಲ್ಲಿ ವಿಶ್ವಾಸ ತುಂಬಿದರು.

ಶ್ರೀಗಳ ಆಗಮನದ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯ ವಿಜಯ ಕೊಡವೂರು ಮತ್ತು ಶ್ರೀಗಳ ಆಪ್ತರಾಗಿರುವ ವಾಸುದೇವ ಭಟ್ ಪೆರಂಪಳ್ಳಿ ಎರಡು ದಿನಗಳ ಮೊದಲೇ ಕಾಲೊನಿಗೆ ಬಂದು ಮಾಹಿತಿ ನೀಡಿದ್ದರು. ಅದರಂತೆ ಸಂತೋಷದಿಂದ ನಿವಾಸಿಗಳು ಕಾಲೊನಿಯ ರಸ್ತೆಗಳಲ್ಲಿ ತಳಿರು ತೋರಣ ರಂಗೋಲಿ ಹಾಕಿ ಸಿಂಗಾರ ಮಾಡಿದ್ದು, ಸಾಮೂಹಿಕ ಭಜನೆಯೊಂದಿಗೆ ಶ್ರೀಗಳನ್ನು ಸ್ವಾಗತಿಸಿದರು.ಶ್ರೀಗಳು ಅಲ್ಲಿನ ಮೂರು ಮನೆಗಳಿಗೆ ಭೇಟಿ ನೀಡಿ ರಾಮದೀಪಗಳನ್ನು ಬೆಳಗಿಸಿ ಮನೆಯವರೊಂದಿಗೆ ಕುಶಲೋಪರಿ ನಡೆಸಿದ ಬಳಿಕ ಶ್ರೀರಾಮ ಜಯರಾಮ ಜಯ ಜಯರಾಮ ಮಂತ್ರದೀಕ್ಷೆ ಕೊಟ್ಡು ನಿತ್ಯ ಶುದ್ಧ ಮನಸ್ಸಿನಿಂದ ಈ ಮಂತ್ರ ಜಪಿಸುವಂತೆ ತಿಳಿಸಿದರು.

ಶ್ರೀ ಮಠದ ವತಿಯಿಂದ ಎಲ್ಲ ಮನೆಗಳಿಗೆ ದೀಪ ಒದಗಿಸಿ ರಾಮ ದೀಪವನ್ನು ಬೆಳಗಿಸಲಾಯಿತು .ನಂತರ ಬಡಾವಣೆಯಲ್ಲಿನ ಶ್ರೀ ಮೂಕಾಂಬಿಕಾ ಭಜನಾ ಮಂದಿರಕ್ಕೆ ಬಂದು ಶ್ರೀ ದೇವಿಯ ಮುಂಭಾಗದಲ್ಲಿ ದೀಪ ಹಚ್ಚಿ ಮಂಗಳಾರತಿ ಬೆಳಗಿದರು.‌ಬಡಾವಣೆಯ ಸಮಸ್ತ ನಿವಾಸಿಗಳಿಗೆ ಸಂದೇಶ ನೀಡಿದ ಶ್ರೀಗಳು ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಮಸ್ತ ಹಿಂದೂ ಸಮಾಜದ ಸಹಕಾರ ಸಹಭಾಗಿತ್ವ ಪಡೆಯಲು ಎಲ್ಲ ಹಿಂದೂ ಬಂಧುಗಳನ್ನು ಭೇಟಿಯಾಗುತ್ತಿದ್ದೇವೆ ಅದರಂತೆ ಇಲ್ಲಿಗೆ ಆಗಮಿಸಿದ್ದೇವೆ.

ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆದು ಇಡೀ ದೇಶಕ್ಕೆ ರಾಮನ ಕೃಪೆಯಾಗಿ ಶಾಂತಿ ಸುಭಿಕ್ಷೆ ಸಮೃದ್ಧಿ ನೆಲೆಸಲು ನಾವೆಲ್ಲ ದಿನವೂ ಮನೆಮನೆಗಳಲ್ಲಿ ರಾಮನಿಗಾಗಿ ದೀಪ ಬೆಳಗಿ ರಾಮಂತ್ರಜಪ, ರಾಮನ ಭಜನೆ ಹಾಡಬೇಕು. ಎಲ್ಲರಿಗೂ ರಾಮ ಮಂತ್ರ ಬೋಧಿಸಿದರು. ಸುಬ್ರಹ್ಮಣ್ಯ ಷಷ್ಠೀಯಾದ್ದರಿಂದ ಶ್ರೀ ಮಠದ ಅಧೀನದಲ್ಲಿರುವ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಲಾಡು ಪ್ರಸಾದವನ್ನು ಶ್ರೀಗಳು ಎಲ್ಲರಿಗೂ ನೀಡಿ ಆಶೀರ್ವದಿಸಿದರು.ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಬೃಂದಾವನಸ್ಥರಾಗಿ ಒಂದು ವರ್ಷದೊಳಗೆ ಮಠದ ಎಲ್ಲ ಜವಾಬ್ದಾರಿಗಳಿಗೆ ಹೆಗಲು ಕೊಟ್ಟ ಶ್ರೀವಿಶ್ವಪ್ರಸನ್ನತೀರ್ಥರ, ಗುರುಗಳು ನಿರ್ವಹಿಸಿದ್ದ ಸಾಮಾಜಿಕ ಕಾರ್ಯಗಳನ್ನೂ ಮುನ್ನಡೆಸುವ ಸಂಕಲ್ಪ ಮಾಡಿರುವುದು ಅತ್ಯಂತ ಶ್ಲಾಘನೀಯ~ವಿಜಯ ಕೊಡವೂರು ಹೇಳಿದರು.

​ ಸಂದರ್ಭದಲ್ಲಿ ವಾಸುದೇವ ಭಟ್ ಪೆರಂಪಳ್ಳಿ, ಜೀವನ್ ಪಾಳೆಕಟ್ಟೆ, ವಿಷ್ಣುಮೂರ್ತಿ ಪಡುಬಿದ್ರೆ ಮೊದಲಾದ ವರು ಉಪಸ್ಥಿತರಿದ್ದರು    ​

 
 
 
 
 
 
 
 
 
 
 

Leave a Reply