ಫ್ಲೋರಿಡದಲ್ಲಿ ಮಕರ ಸಂಕ್ರಾಂತಿ ಸಂಭ್ರಮ

“ಸಂಘೇ ಶಕ್ತಿಃ ಕಲೌಯುಗೇ” ಎಂಬ ಸುಭಾಷಿತದಿಂದ ಕಲಿಯುಗದಲ್ಲಿ, ಅಂದರೆ ವರ್ತಮಾನ ಕಾಲದಲ್ಲಿ, ಜನ ಸಂಘಟನೆಯು ಒಂದು ಶಕ್ತಿ ಎಂದು ತಿಳಿಯುತ್ತದೆ. ಸಮಾನ ಹಿತಾಸಕ್ತಿಯ ಜನರನ್ನು ಒಂದುಗೂಡಿಸಿ ಪೂರ್ವ ನಿರ್ಧಾರಿತ ಉದ್ದೇಶ, ಧ್ಯೇಯಗಳತ್ತ ಕಾರ್ಯೋನ್ಮುಖರಾಗುವುದು ಸಂಘಟನೆ.

ಸಹೃದಯ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ನಾಡು, ನುಡಿ, ಕಲೆ, ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿಗಳಿಗೆ ಆದ್ಯ ಗೌರವ, ಪ್ರಾಶಸ್ತ್ಯವನ್ನು ಕೊಟ್ಟು ಅವುಗಳ ಸೌರಭವನ್ನು ಅಮೇರಿಕಾದ ಟ್ಯಾಂಪದಲ್ಲಿ ಪಸರಿಸಿ ಕನ್ನಡ ಮಾತೆ ಭುವನೇಶ್ವರಿಯ ಅನನ್ಯ ಸೇವೆ ನಡೆಸುತ್ತಿರುವ ಸಂಘವೇ ‘ಶ್ರೀಗಂಧ ಕನ್ನಡ ಕೂಟ’.

ಈ ಕೂಟವು ಮಕರ ಸಂಕ್ರಾಂತಿ ಹಬ್ಬದ ಆಚರಣೆಯನ್ನು ಫೆಬ್ರವರಿ 4, 2023 ರಂದು ಸಂಜೆ ಟ್ಯಾಂಪದ “ಹಿಂದು ಟೆಂಪಲ್ ಆಫ್ ಫ್ಲೋರಿಡ” ದೇವಸ್ಥಾನದ ಸಭಾಲಯದಲ್ಲಿ ಅದ್ದೂರಿಯಾಗಿ ನಡೆಸಿತು. ಸುಮಾರು 400ರಷ್ಟು ಕನ್ನಡಿಗರು ಈ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

 

ಪ್ರಾರಂಭದಲ್ಲಿ ಈ ಕೂಟದ ಕನ್ನಡ ಶಾಲೆಯ ವಿದ್ಯಾರ್ಥಿಗಳು ವೃಂದಗಾನದಲ್ಲಿ ಪ್ರಾರ್ಥನೆ ನಡೆಸಿ ಪ್ರಶಂಸೆ ಪಡೆದರು. ಅದರ ನಂತರ ಹಿರಿಯರಾದ ಶ್ರೀಮತಿ ಚಂದ್ರಕಾಂತರವರು ಇಂಪಾಗಿ ಕನ್ನಡದ ಕುಲದೇವಿಯನ್ನು ಸ್ತುತಿಸಿದರು. ‘ಸುಗ್ಗಿ ಕಾಲ ಹಿಗ್ಗಿ ಬಂದಿತು’ ಎಂಬ ಹಾಡಿಗೆ ನಡೆಸಿದ ಸಂಕ್ರಾಂತಿ ಜನಪದ ನೃತ್ಯವು ಎಲ್ಲರ ಮನ ಸೆಳೆಯಿತು.

‘ಕಾಣದಂತೆ ಮಾಯವಾದನು’ ಎಂಬ ಹಾಡಿಗೆ ನೃತ್ಯ ಮಾಡಿದ ಪುಟಾಣಿಗಳು ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಅದರ ನಂತರ ಹಿರಿಯ-ಕಿರಿಯ ಮಕ್ಕಳು ಸೇರಿ ಹಾಡಿದ ‘ಅಮ್ಮ ನಿನ್ನ ಎದೆಯಾಳದಲ್ಲಿ’ ಎಂಬ ಭಾವಗೀತೆಯು ಆಲಿಸಲು ಹಿತದಾಯಕವೆನಿಸಿತು.

ಪ್ರಸ್ತುತ ಸಮಿತಿಯನ್ನು ಪರಿಚಯಿಸಿದ ನಂತರ ನಡೆದ ವಿವಿಧ ಮಾದರಿಯ ಜನಪದ ನೃತ್ಯವು ಎಲ್ಲರ ಮನ ಮುಟ್ಟಿತು. ಹಿರಿಯರಾದ ಶ್ರೀ ರಾಮ್ ಶಿವಶಂಕರ್‌ರವರು 1920ರಲ್ಲಿ ಬರೆಯಲಾಯಿತೆನ್ನಲಾದ ಜನಪದ ಗೀತೆಯನ್ನು ಹಾಡಿ ಸಮಾರಂಭಕ್ಕೆ ಜೀವಕಳೆ ನೀಡಿದರು.

ಶ್ರೀಕೃಷ್ಣ-ಗೋಪಿಕೆಯರ ನೃತ್ಯಾಭಿನಯವು  ರಂಜನೆ ಯನ್ನು ನೀಡಿತು. ಅಧ್ಯಾಪಕಿ ಮತ್ತು ಮಕ್ಕಳ ‘ತರಲೆ ಕ್ಲಾಸು’ ಎಂಬ ತಿಳಿಹಾಸ್ಯದ ಪ್ರಹಸನವು ಸಭಿಕರೆಲ್ಲರ ಶ್ಲಾಘನೆಗೆ ಒಳಗಾಯಿತು. ನಂತರ ಬಾಲಿಕೆಯರು ಜನಪದ ಶೈಲಿಯ ನೃತ್ಯವನ್ನು ಪ್ರದರ್ಶಿಸಿ ಆಹ್ಲಾದಕರ ಅನುಭವ ನೀಡಿದರು.

 

‘ಆಧುನಿಕ ರಾಮಾಯಣ’ ಎಂಬ ಹಾಸ್ಯಮಯ ನಾಟಕವನ್ನು ಮಾಡಿದ ನುರಿತ ಕಲಾವಿದರು ವಿಶೇಷವಾದ ಹಾಸ್ಯ ಚಟಾಕಿಗಳು ಮತ್ತು ನರ್ತನ ಶೈಲಿಗಳಿಂದ ಸಭೆಯಲ್ಲಿ ನಗೆಬುಗ್ಗೆಗಳನ್ನು ಏಳಿಸಿದರು. ಹದಿಹರೆಯದ ಹುಡುಗಿಯರು ನಯನಾನಂದಕರವಾದ ಸುಗ್ಗಿಯ ನೃತ್ಯದಿಂದ ರಾರಾಜಿಸಿದರು.

ಆ ಬಳಿಕ ಸ್ಥಳೀಯ ಗಾಯಕರಿಂದ ‘ಸಂಗೀತ ಸಂಜೆ’ ಕಾರ್ಯಕ್ರಮ ನಡೆಯಿತು. ಒಂದರ ನಂತರ ಒಂದರಂತೆ ಶ್ರವಣಾನಂದಕರ ನಿನಾದದೊಂದಿಗೆ ಮೂಡಿಬಂದ ಭಾವಗೀತೆ ಮತ್ತು ಚಲನಚಿತ್ರಗೀತೆಗಳು ವೀಕ್ಷಕರಿಂದ ಭರ್ಜರಿ ಕರತಾಡನ ಗಿಟ್ಟಿಸಿಕೊಂಡವು. ಮಂದಸ್ಮಿತ ವನಿತೆಯರು ನಯನಾಕರ್ಷಕ ಉಡುಪು ಧರಿಸಿ ಪ್ರದರ್ಶಿಸಿದ ನಾನಾ ತರಹದ ಶೈಲಿಯ ನೃತ್ಯವು ಸಭಿಕರನ್ನು ರಂಜಿಸಿತು.

 

ಅಂತಿಮವಾಗಿ ಅದ್ಭುತ ವೇಷಾಲಂಕಾರವುಳ್ಳ ಪಂಜುರ್ಲಿ ದೈವದ ಸಭಾಪ್ರವೇಶವು ಸಭೆಯ ಅಂತ್ಯದಿಂದ ಮೊದಲ್ಗೊಂಡು ಮಧ್ಯಭಾಗದಲ್ಲಿ ಪ್ರೇಕ್ಷಕರ ಸನಿಹ ಉದ್ದಗಲಕ್ಕೆ ದೀರ್ಘವಾಗಿ ಸಾಗಿತು. ವೇಷಧಾರಿಯಾದ ಶ್ರೀ ರಾಘವೇಂದ್ರ ಮಯ್ಯರವರು ಪಂಜುರ್ಲಿ ದೈವದ ವಿಶಿಷ್ಟ ವೇಷಭೂಷಣ, ಸ್ವರಭಾರ ಮತ್ತು ನೃತ್ಯಾಭಿನಯ ಪ್ರದರ್ಶನದಿಂದ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು.

 

ಶ್ರೀ ಹರ್ಷಿತ್ ಗೌಡರವರು ಕ್ರೀಡಾ ಪ್ರಶಸ್ತಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸುಗಮವಾಗಿ ನಿರ್ವಹಿಸಿದರು. ನಂತರ ಶ್ರೀ ದಿನೇಶ್‍ರವರಿಂದ ಧನ್ಯವಾದ ಸಮರ್ಪಣೆಯು ಉತ್ತಮವಾಗಿ ನಡೆಯಿತು. ಸಂಕ್ರಾಂತಿ ಕಾರ್ಯ ಕ್ರಮದ ಪ್ರಧಾನ ನಿರೂಪಣೆಯನ್ನು ಮಾಡಿದ ಶ್ರೀ ವಿಶ್ವೇಶ್ವರ ಭಟ್‍ರವರು ಸುಲಲಿತವಾದ ಮಾತುಗಾರಿಕೆಯಿಂದ ಸಭಾ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಈ ಕಾರ್ಯಕ್ರಮವನ್ನು ನಿಯೋಜಿಸಿ ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದ ಸಮಿತಿಯ ರಶ್ಮಿ, ಮಾನಸ, ಸುಪ್ರಿಯ, ಗಂಗಾಧರ ಹಾಗೂ ಗೋವಿಂದರವರ ಕೊಡುಗೆ ಪ್ರಶಂಸನೀಯ.

 

ಒಟ್ಟಿನಲ್ಲಿ ಶ್ರೀಗಂಧ ಕನ್ನಡ ಕೂಟದವರು ತಮ್ಮ ಸುಶ್ರಾವ್ಯ ಗಾಯನ, ಕರ್ಣರಂಜಿತ ಹಿನ್ನೆಲೆ ಧ್ವನಿಸುರುಳಿ, ಮನೋಜ್ಞ ಅಭಿನಯ, ಸಂಪ್ರದಾಯಬದ್ಧ ನೃತ್ಯ, ಹಾಸ್ಯಭರಿತ ಸಂಭಾಷಣೆ ಮತ್ತು ಆಕರ್ಷಕ ಪೋಷಾಕುಗಳ ಮೂಲಕ ಸಂಪೂರ್ಣ ರಸಾನುಭವವನ್ನು ನೀಡಿ ನೆರೆದ ಕನ್ನಡ ಕಲಾರಸಿಕರ ಮನವನ್ನು ಗೆದ್ದರು. ಈ ಕಾರ್ಯ ಕ್ರಮವು ಕನ್ನಡ ಕೂಟದ ಸಾಮರ್ಥ್ಯ, ಅನುಭವ, ಪ್ರತಿಭೆ ಮತ್ತು ಶ್ರೇಷ್ಠಮಟ್ಟದ ನಿರ್ವಹಣೆಗೆ ಹಿಡಿದ ಕನ್ನಡಿಯಾಗಿದೆ.

ಅಸಾಧಾರಣ ಪ್ರದರ್ಶನವನ್ನು ಹೊರಹೊಮ್ಮಿಸುತ್ತ ಮೇಲೆದ್ದು ಬಂದ ವಿವಿಧ ನಮೂನೆಯ ಕಾರ್ಯಕ್ರಮಗಳು ಈ ಕೂಟದ ಉತ್ಕರ್ಷದ ಪ್ರತೀಕ. ಈ ಕಾರ್ಯಕ್ರಮವು ಟ್ಯಾಂಪದ ಕನ್ನಡಾಭಿಮಾನಿ ವೀಕ್ಷಕರ ನೆನಪಿನಲ್ಲಿ ಬಹುಕಾಲ ಉಳಿಯಬಹುದಾದ ಒಂದು ಅವಿಸ್ಮರಣೀಯ ಕಾರ್ಯಕ್ರಮ ಎನ್ನುವುದು ಖಂಡಿತ.

ವರದಿ~ಅರುಣ್ ರಾವ್ ಆರೂರು, ಟ್ಯಾಂಪ-ಫ್ಲೋರಿಡ, ಯು.ಎಸ್.ಎ.

 
 
 
 
 
 
 
 
 
 
 

Leave a Reply