ವಿಶ್ವವಂದ್ಯನ ವಿಲಸನ ವಿಲೋಕನ~ • ಕೆ.ಎಲ್.ಕುಂಡಂತಾಯ

ಲೌಕಿಕ-ಅಲೌಕಿಕಗಳನ್ನು ಬೆಸೆಯುತ್ತಾ ’ವಿಶ್ವ ಚೈತನ್ಯ’ ವನ್ನು ನಮ್ಮ ಸಂಸ್ಕೃತಿ ಕಲ್ಪಿಸಿದಷ್ಟು ವೈವಿಧ್ಯಮಯವಾಗಿ, ವೈಶಿಷ್ಟ ಪೂರ್ಣವಾಗಿ ಅನ್ಯ ಸಂಸ್ಕೃತಿಗಳು ನಿರ್ವಚಿಸಿರಲಾರವು. ಕೋಟ್ಯಂತರ ದೇವ-ದೇವತೆಗಳನ್ನು ಆರಾಧಿಸುವ ಭಾರತೀಯ ನಂಬಿಕೆ ಮತ್ತು ಅಧ್ಯಾತ್ಮಮೂಲದ ಆದಿಮ ಕಲ್ಪನೆ, ಮುಂದಿನ ವೈದಿಕ ಅನುಸಂಧಾನಗಳೆಲ್ಲ ವರ್ಣರಂಜಿತವಾಗಿ ಅನಾವರಣಗೊಳ್ಳುವುದು ನಮ್ಮ ದೇಶದ ಸಾಂಸ್ಕೃತಿಕ ಭವ್ಯತೆ.ಈ ಭಗವಂತ ಗಣಪತಿ ಆದಿಯೊಳು ಪೂಜೆಗೊಳ್ಳುವ ದೇವರು ಮಾತ್ರ ಬೇರೆ ಎಲ್ಲ ದೇವ-ದೇವತೆಗಳಂತೆ ನಿಗ್ರಹ-ಅನುಗ್ರಹಗಳಿಗೆ ಸೀಮಿತಗೊಳ್ಳದೆ ವಿಶ್ವಂಭರ ಮೂರ್ತಿಯಾಗಿ ಬೆಳೆದು, ವಿಶ್ವವ್ಯಾಪಿ ಮಾನ್ಯತೆ ಪಡೆದದ್ದು ರೋಚಕ. ಈ ವಿಶ್ವವಂದ್ಯನ ವಿಲಸನ ವಿಲೋಕನ-ವಿರಾಡ್ ದರ್ಶನ.

ವಿವಿಧ ರೂಪಗಳಲ್ಲಿ ಜನಮಾನಸವನ್ನು ತುಂಬಿ ಜಾತಿ, ಮತ, ಪಂಥ, ಆಸ್ತಿಕ, ನಾಸ್ತಿಕ ಭೇದವಿಲ್ಲದೆ ಬಹುಮಾನ್ಯನಾದುದು ಮಾತ್ರ ಸತ್ಯ. ಎಲ್ಲರಿಗೂ ವಿಘ್ನ ಬರುವುದು ಸಹಜ ತಾನೆ? ಸಿದ್ಧಿಯಂತಹ ಫಲ ಪ್ರಾಪ್ತಿ, ಜಯ, ಪರಿಪೂರ್ಣತೆ ಮತ್ತು ಬುದ್ಧಿಯಂತಹ ಜ್ಞಾನ, ತಿಳಿವಳಿಕೆ, ಎಚ್ಚರಿಕೆ, ವಿಮರ್ಶೆ ಮುಂತಾದವುಗಳ ಪ್ರಜ್ಞೆಯೊಂದಿಗೆ ಆರಾಧನೆಗೆ ’ಕ್ಷಿಪ್ರ ಪ್ರಸಾದ’ವನ್ನು ಅನುಗ್ರಹಿಸುವ ’ಗಣಪ’ ಕ್ಷಿತಿಯ ಜನತೆಗೆ ಪ್ರಸನ್ನತೆಯನ್ನು, ಪ್ರಶಾಂತ ಮನಃಸ್ಥಿತಿಯನ್ನು ನೀಡುವವವೆಂಬುದು ನಂಬಿಕೆ.

ಮಕ್ಕಳ ಪ್ರೀತಿಯ ಬೆನಕ, ಪ್ರೌಢರ ಆತ್ಮೀಯ ಗಣಪತಿ, ಚಿಂತನೆಗೆ ಸೆಳೆಯುವ ಸಿದ್ಧಿವಿನಾಯಕ, ಸಂಶೋಧಕರ ನಿಲುಮೆಗೆ ನಿಲುಕದ ವಿಶ್ವವ್ಯಾಪಿ ಗಜಾನನ, ತತ್ವಜ್ಞಾನಿಗಳಿಗೆ ನೂರಾರು ನಿರೂಪಣೆಗೆ ವಸ್ತುವಾಗುವ ಈ ಏಕದಂತ ಭಾರತೀಯ ಸಂಸ್ಕೃತಿಯ ಪ್ರತಿನಿಧಿಯಾಗಿ, ರಾಯಭಾರಿಯಾಗಿ ವಿಶ್ವದಾದ್ಯಂತ ಪ್ರಸಿದ್ಧ. ಈ ವಿಕಟನ ವಿಗ್ರಹದಲ್ಲೂ ಬದಲಾವಣೆಯಾಯಿತು. ಗಣನೀಯ ಶ್ರದ್ಧಾಂತರಗಳೂ ಏರ್ಪಟ್ಟವು.

ಒಂದು ನಾಗರಿಕತೆಯ ಸಂಕೇತವಾಗಿ, ಒಬ್ಬ ಗಣವಾಗಿ, ಬ್ರಹ್ಮಣಸ್ಪತಿಯಾಗಿ, ಗಣಾಧ್ಯಕ್ಷನಾಗಿ, ವಿಘ್ನನಿವಾರಕನಾಗಿ, ವಿಶ್ವಂಭರನಾಗಿ, ವಿಘ್ನನಿವಾರಕನಾಗಿ, ವಿಶ್ವಂಭರನಾಗಿ ಈ ವಿನಾಯಕ ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ನಿಲುಮೆಗೂ ನಿಲುಕದ್ದು.

ಬೇಟೆಯಿಂದ ಕೃಷಿಗೆ ಪ್ರಸ್ತುತದ ಅಧ್ಯಾತ್ಮ, ಚಿಂತನಧಾರೆಗಳ ಹರವಿನಲ್ಲಿ ಗಣಪತಿಯ ದಿವ್ಯವೂ ಭವ್ಯವೂ ಆದ ಸ್ವರೂಪಗಳು ದೊರೆಯುತ್ತವೆಯಾದರೂ ಆಳದಲ್ಲಿ ಈ ಭಗವಂತನ ಮೂಲವಿದೆ, ಅದು ಸರಳ ಸುಂದರವಾಗಿದೆ, ಮುಗ್ದ ಕಲ್ಪನೆಯಾಗಿದೆ. ಜನಮಾನಸಕ್ಕೆ ಸಮೀಪವಾಗಿದೆ.

ಬೇಟೆಗಾರರ ಒಡೆಯನೆಂದು ಗುರುತಿಸಲಾಗುವ ಗಣಪತಿ ಮುಂದಿನ ಕೃಷಿ ಸಂಸ್ಕೃತಿಯಲ್ಲೂ ಸ್ಥಾನ ಪಡೆದಿರುವುದು ಅಥವಾ ರೂಪಾಂತರ ಹೊಂದಿ ಸ್ವೀಕರಿಸಲ್ಪಟ್ಟಿರುವುದು ವೈದಿಕ ಪೂರ್ವದಲ್ಲಿದ್ದ ನಂಬಿಕೆ ಎಂಬುದು ಸಂಶೋಧಕರ, ವಿದ್ವಾಂಸರ ಅಭಿಪ್ರಾಯ. ಈ ಆಧಾರದಲ್ಲಿ ಮಾನವ ನಾಗರಿಕನಾಗುತ್ತಾ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಪೂರ್ವದಲ್ಲಿ ಅಲೆಮಾರಿಯಾಗಿದ್ದು ಹೊಟ್ಟೆ ಪಾಡಿಗೆ ಬೇಟೆಯಾಡುತ್ತಿದ್ದ.

ಕೃಷಿ ಮೂಲವಾಗಿ ಒದಗಿಬಂದ ಒಂದೆಡೆ ನೆಲೆಯೂರುವ ಅನಿವಾರ್ಯತೆಯೂ ಪೂರ್ವದ ಬೇಟೆಯನ್ನು ಪ್ರಸ್ತುತ ಕೃಷಿಯಲ್ಲೂ ಉಳಿಸಿಕೊಂಡು ವಿಕಾಸವಾದುದನ್ನು ಗಮನಿಸಬಹುದು. ಇದಕ್ಕೆ ಆನೆಯ ತಲೆಯನ್ನು ಮಾತ್ರ ಸ್ಪಷ್ಟವಾಗಿ ಚಿತ್ರಿಸಿ ಉಳಿದಂತೆ, ಮೈಯನ್ನು ಹಾಗೆಯೇ ಬಿಟ್ಟಂತೆ ರಚಿಸಲಾದ ಪುರಾತನ ಶಿಲಾ ಪ್ರತೀಕಗಳು ಆಧಾರವನ್ನು ಒದಗಿಸುತ್ತವೆ.

ಗೌರಿ – ಗಣೇಶ ಸಂಬಂಧವನ್ನು ಬೇಟೆ-ಕೃಷಿಯ ವಿವರಕ್ಕೆ ಪೂರಕವಾಗಿ ಸ್ವೀಕರಿಸಬಹುದು. ಗೌರಿಯ ಮೈಯ ಮಣ್ಣಿನಿಂದ ಗಣಪತಿ ಹುಟ್ಟಿದ ಕಥೆ ಜನಜನಿತ. ಬಹುಶಃ ಈ ಕಥೆಯ ಬೇಟೆ-ಕೃಷಿಗಳೇ ಪ್ರೇರಣೆ ಇದ್ದಿರಬಹುದೆನಿಸುತ್ತದೆ. ’ಬೆವರು, ಮೈಯ ಮಣ್ಣು’ ಪ್ರಧಾನವಾಗಿ ಗಣಪತಿಯ ಸೃಷ್ಟಿ. ಮೈ ಬೆವರಲು, ಬೆವತು ಮಣ್ಣು ಉಂಟಾಗಲು ಶರೀರ ಶ್ರಮ ಪಟ್ಟಿರಲೇಬೇಕು. ಶ್ರಮಿಕನ ದೇಹ ಮಾತ್ರ ಬೆವತಿರುತ್ತದೆ, ಮೈಯ ಮಣ್ಣಿಗೂ ಕಾರಣವಾಗಿರುತ್ತದೆ. ಶ್ರಮದ ಹಿನ್ನೆಲೆಯಿಂದ ಅಂದರೆ ಪಾರ್ವತಿ ದೇವಿಯ ಮೈಯ ಮಣ್ಣಿನಿಂದ ಗಣಪತಿ ಜನನವೆಂಬುದು ’ಶ್ರಮ ಸಂಸ್ಕೃತಿ’ಯನ್ನು ಸಾಂಕೇತಿಸುವುದಿಲ್ಲವೆ ? ಪ್ರಜನನ ಶಕ್ತಿಯನ್ನು ಹೊಂದಿರುವ ಸ್ತ್ರೀಯೇ ತಾನು ಹೆತ್ತ ಸಂತಾನದ ಪೋಷಣೆಗೆ ಬೇಕಾಗಿಯೇ ಕೃಷಿಯನ್ನು ಸಂಶೋಧಿಸಿದಳೆಂಬ ಅಭಿಪ್ರಾಯವೂ ಇದೆ ತಾನೆ? ಶ್ರಮಿಕರ ಆರಾಧ್ಯ ದೇವತೆಯಲ್ಲವೇ ಗಣಪತಿ ಹೀಗೆಂದು ವ್ಯಾಖ್ಯಾನಿಸಿದರೆ ತಪ್ಪಾಗದು.

ಏಕೆಂದರೆ ಗಣಪತಿ ಸರ್ವಮಾನ್ಯ, ಸರ್ವರಿಂದಲೂ ಪೂಜೆಗೊಳ್ಳುವ ದೇವರು. ಬಹುಶಃ ಅನ್ಯದೇವರಿಗಿಲ್ಲ ಗಜಾನನಗಿರುವಷ್ಟು ಪ್ರಚಾರದ ಹರವು, ಜನಪ್ರಿಯತೆಯ ಪ್ರಭಾವಳಿ. ಬಕೃಷಿ ಉತ್ಪನ್ನಗಳನ್ನು ಸೂರೆಗೊಳ್ಳುವ ಮೂಷಿಕನನ್ನು ವಾಹನ ವಾಗಿರಿಸಿಕೊಂಡು ವಿನಾಯಕನ ಆರಾಧನೆ ಬೆಳೆದ ಧಾನ್ಯಗಳು ಮನೆಯಂಗಳಕ್ಕೆ ಬರುವ ಒಂದು ತಿಂಗಳು ಮೊದಲೇ ಸನ್ನಿಹಿತವಾಗುವುದು ಎಷ್ಟು ಸಕಾಲಿಕ.

ಮಣ್ಣಿನ ಮೂರ್ತಿ, ಕಬ್ಬಿನ ಜಲ್ಲೆಯಂತಹ ಸಕಾಲಿಕ ಲಭ್ಯ ವಸ್ತುಗಳು ಪ್ರಧಾನ ಸಮರ್ಪಣೆ ದ್ರವ್ಯಗಳು, ಗರಿಕೆ ಹುಲ್ಲು, ವಿವಿಧ ತಿಂಡಿಗಳು, ಗಣೇಶ ಚತುರ್ಥಿಯ ಮುನ್ನಾ ದಿನದ ಗೌರಿ ಹಬ್ಬ ಹೀಗೆ ಗಣೇಶನ ಆರಾಧನಾ ವಿಧಾನದ ಸಮಗ್ರ ಅವಲೋಕನದಲ್ಲಿ ಮಣ್ಣಿನ ಸಂಸ್ಕೃತಿಯ ಸೊಗಡಿದೆ.

ಪ್ರಕೃತಿ ಸ್ತ್ರೀ. ಪ್ರಕೃತಿಯೊಂದಿಗೆ ಸಂಬಂಧ ಹೊಂದಿ ಎದ್ದು ಬರುವ ಗಣಪ ಪ್ರಕೃತಿಯಿಂದ ಉದ್ಭವಿಸುವ ಸತ್ಯದ ಪ್ರತೀಕನೂ ಆಗುತ್ತಾನೆ. ಆದುದರಿಂದಲೇ ಶಿಷ್ಟ ಸಂಸ್ಕೃತಿಯ ಹರವಿನಲ್ಲಿ ವಿಜೃಂಭಿಸುವ ಗಣಪತಿಯ ವ್ಯಕ್ತಿತ್ವದ ಮೂಲವು ಜನಪದ ಅಥವಾ ಆದಿಮ ಸಂಸ್ಕೃತಿಯಲ್ಲಿದೆ; ಇದು ಭವ್ಯವಾಗಿದೆ-ದಿವ್ಯತೆ ಹೊಂದಿದೆ, ಆದರೆ ಮುಗ್ಧವಾಗಿದೆ-ವಿಮರ್ಶೆಗೆ ಒಳಗಾಗದ ಸರಳ ಸುಂದರ ಸ್ಥಿತಿಯಲ್ಲಿದೆ. ವೇದ ಪುರಾಣಗಳಲ್ಲಿ ನೂರಾರು ಕಥೆಗಳಿವೆ, ಆರಾಧನಾ ವಿಧಾನಗಳಿವೆ. ಋಷಿ ಮುನಿಗಳ ಭಿನ್ನ ದೃಷ್ಟಿಕೋನಗಳ ವ್ಯಾಖ್ಯಾನವಿದೆ ಗಣೇಶ ಸಂಬಂಧಿಯಾಗಿ. ಗಣಪತಿಗೆ ಪ್ರತ್ಯೇಕ ಪೂಜಾ ವಿಧಾನ, ಹೋಮ ವಿಧಾನಗಳು ಪ್ರಚಲಿತವಿದೆ.

ಗಣಪತಿಯ ಕೆಂಪು ಬಣ್ಣ ಮತ್ತು ಗಜಮುಖಗಳು ಪುರಾಣ ಕಾಲದ ಕಲ್ಪನೆ ಎನ್ನಲಡ್ಡಿಯಿಲ್ಲ. ಸಿದ್ಧಿ, ಬುದ್ಧಿಗಳಿಗೆ ಕಾರಕ, ವಿಘ್ನನಿವಾರಕ, ವಿದ್ಯಾಧಿದೇವತೆ, ಕಲೆಗಳಿಗೆ ಪ್ರೇರಕ ದೇವತೆ, ಆದಿಪೂಜಿತ, ಕ್ಷಿಪ್ರ ಪ್ರಸಾದಗಳೆಲ್ಲ ಗಜಾನನನ ಅನುಗ್ರಹ ವಿಶೇಷಗಳು.

ಜಾನಪದದ ಸರಳ – ಮುಗ್ಧ ಕಲ್ಪನೆಯಿಂದ ವೈದಿಕದ ವೈಭವೋಪೇತ ಚಿಂತನೆಯವರೆಗೆ . ಬೇಟೆ ಸಂಸ್ಕೃತಿಯಿಂದ ತೊಡಗಿ ಆಧುನಿಕ ಜೀವನ – ವಿಧಾನದ ಹರವಿನಲ್ಲಿ ಮಣ್ಣಿನ ಮಗ ಮಹಾಕಾಯ ಮಹಾಗಣಪತಿಯ ಸ್ವೀಕಾರ – ಪೂಜಾ ವಿಧಾನಗಳ
ರೋಚಕ ಇತಿಹಾಸವಿದೆ. ಒಂದು ಸಂಸ್ಕೃತಿಯ ಸಂಕೇತವಾಗಿ, ಒಬ್ಬಗಣವಾಗಿ, ಬ್ರಹ್ಮಣಸ್ಪತಿಯಾಗಿ, ಗಣಾಧ್ಯಕ್ಷನಾಗಿ ಈ ವಿನಾಯಕ ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ಊಹನಾತೀತ. ಆಸ್ತಿಕ-ನಾಸ್ತಿಕ ಭೇದವಿಲ್ಲದೆ ಬಹುಮಾನ್ಯನಾದ
ದೇವರು ಗಣಪತಿ. ಜಾತಿ-ಮತ-ಪಂಥಗಳ ಕಟ್ಟುಪಾಡುಗಳನ್ನು ಮೀರಿ ವಿಶ್ವವ್ಯಾಪಿಯಾಗಿ ತನ್ನ ಆಕರ್ಷಕ ವರ್ಚಸ್ಸಿನ ಮೂಲಕ ವಿಶ್ವವಂದ್ಯನಾದ ದೇವರು ವಿಶ್ವಂಭರ ಮೂರ್ತಿಯಾಗಿ ಬೆಳೆದದ್ದು, ಜನಮಾನಸದಲ್ಲಿ ಸ್ಥಾಯೀ ಸ್ಥಾನವನ್ನು ಪಡೆದದ್ದು
ಮಾತ್ರ ಸತ್ಯ.

• ಕೆ.ಎಲ್.ಕುಂಡಂತಾಯ

 
 
 
 
 
 
 
 
 
 
 

Leave a Reply