ಕರಸೇವಕ ಶ್ರೀಕಾಂತ್‌ ಪೂಜಾರಿಗೆ ಷರತ್ತುಬದ್ಧ ಜಾಮೀನು

31 ವರ್ಷದ ಬಳಿಕ ರಾಮಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ದೇಶವ್ಯಾಪಿ ಸುದ್ದಿಯಾಗಿದ್ದ ಶ್ರೀಕಾಂತ್‌ ಪೂಜಾರಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಶ್ರೀಕಾಂತ್‌ ಪೂಜಾರಿ ಪರ ವಕೀಲರು ಪ್ರತಿಕ್ರಿಯಿಸಿ, ನಮಗೆ ಜಾಮೀನು ಸಿಗಬಹುದು ಎಂಬ ವಿಶ್ವಾಸವಿತ್ತು. ಇಂದು ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಯಾವ್ಯಾವ ಷರತ್ತು ವಿಧಿಸಿದ್ದಾರೆ ಎಂಬುದಕ್ಕೆ ಆದೇಶದ ಪ್ರತಿ ಇನ್ನೂ ನಮ್ಮ ಕೈ ಸೇರಿಲ್ಲ. ನಾಳೆ ಶ್ರೀಕಾಂತ್‌ ಪೂಜಾರಿ ಅವರ ಬಿಡುಗಡೆಯಾಗಲಿದೆ ಎಂದು ಹೇಳಿದರು. 

ಡಿಸೆಂಬರ್29 ರಂದು ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಶ್ರೀಕಾಂತ್‌ ಪೂಜಾರಿ ಬಂಧನವನ್ನು ಖಂಡಿಸಿ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತ್ತು.

ಅಯೋಧ್ಯೆ ಕರಸೇವೆಗೂ ಮುನ್ನ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿತ್ತು. ಒಂದು ಮಳಿಗೆಗೆ ಬೆಂಕಿ ಹಚ್ಚಿದ್ದ ಆರೋಪ ಸಂಬಂಧ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಮರುಜೀವ ನೀಡಿದ್ದರು.

ಘಟನೆ ನಡೆದ 31 ವರ್ಷಗಳ ಬಳಿಕ, 52 ವರ್ಷದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿತ್ತು.

 
 
 
 
 
 
 
 
 
 
 

Leave a Reply