ಬೆಂಗಳೂರಿನಲ್ಲಿ ಅಗ್ನಿ ಅವಘಡ; 20ಕ್ಕೂ ಹೆಚ್ಚು ಬಸ್‌ಗಳು ಸಂಪೂರ್ಣ ಭಸ್ಮ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಗ್ನಿ ಅವಘಡವೊಂದು ಸಂಭವಿಸಿದ ಪರಿಣಾಮ 20ಕ್ಕೂ ಹೆಚ್ಚು ಬಸ್‌ಗಳು ಸಂಪೂರ್ಣ ಭಸ್ಮವಾದ ಘಟನೆ ವೀರಭದ್ರ ನಗರದಲ್ಲಿ ನಡೆದಿದೆ.

ನಿಂತಿದ್ದ ಬಸ್‌ಗಳಿಗೆ ಹಠಾತ್ ಬೆಂಕಿ ತಗುಲಿದ್ದು, ಘಟನಾ ಸ್ಥಳಕ್ಕೆ ಎರಡು ಅಗ್ನಿ ಶಾಮಕ ವಾಹನಗಳು ದೌಡಾಯಿಸಿವೆ. 2015ರಲ್ಲಿ ಅಗ್ನಿ ಅವಘಡ ಸಂಭವಿಸಿದ ಜಾಗದಲ್ಲೇ ಈ ಘಟನೆ ನಡೆದಿದೆ. ಬೆಂಕಿ ನಿಯಂತ್ರಣಕ್ಕೆ ಬಾರದ ಪರಿಣಾಮ ಬಸ್ ಟೈರ್‌ಗಳು ಹಾಗೂ ಡೀಸೆಲ್ ಟ್ಯಾಂಕ್‌ಗಳು ಸ್ಫೋಟಗೊಂಡಿವೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಎಸ್‌ವಿ ಕೋಚ್ ವರ್ಕ್ಸ್ ಗ್ಯಾರೇಜ್ ಅಲ್ಲಿ ಬೆಂಕಿ ತಗುಲಿದೆ. ಸದ್ಯಕ್ಕೆ 20ಕ್ಕೂ ಹೆಚ್ಚು ಬಸ್‌ಗಳು ಸುಟ್ಟು ಕರಕಲಾಗಿದ್ದು, ಯಾರೂ ಬೆಂಕಿಯಲ್ಲಿ ಸಿಲುಕಿಲ್ಲ. ಬಸ್‌ಗಳನ್ನು ರಿಪೇರಿ ಮಾಡುವ ಜಾಗದಲ್ಲಿ ಈ ಅನಾಹುತ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಗ್ಯಾರೇಜ್ ಸುಪರ್ ವೈಸರ್ ಮಾಹಿತಿ ನೀಡಿದ್ದಾರೆ.

ಈ ಹಿಂದೆ 2015ರಲ್ಲಿ ಕಾವೇರಿ ಗಲಾಟೆ ಸಂದರ್ಭದಲ್ಲಿ ಇದೇ ಜಾಗದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. 2015ರಲ್ಲಿ ತಮಿಳುನಾಡಿನ ಬಸ್‌ಗಳೆಂದು 25 ಬಸ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಲಾಗಿತ್ತು. ಯುವತಿಯೊಬ್ಬಳು ಬಸ್‌ಗಳಿಗೆ ಬೆಂಕಿ ಹಚ್ಚಿದ್ದು, ಬಳಿಕ ಆಕೆಯನ್ನು ಬಂಧಿಸಲಾಗಿತ್ತು. 

Leave a Reply