ಶ್ರೀ ಶ್ರೀ ವಿಬುಧೇಶತೀರ್ಥರು: ಪೂರ್ವಾಶ್ರಮದ ಗುರು ಹಾಗೂ ಶಿಷ್ಯ ಸಂಬoಧ~ಡಾ.ಶ್ರೀಕಾಂತ್ ಸಿದ್ದಾಪುರ

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ದಿನಗಳು. ಶಿಕ್ಷಕರಿಗಾಗಿ ಒಂದು ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ರವೀಂದ್ರನಾಥ ಶ್ಯಾನುಭಾಗರು. ಕಾರ್ಯಾಗಾರದ ನಡುವೆ ರೋಕ್ ಫೆರ್ನಾಂಡೀಸರ ವಿಷಯ ಪ್ರಸ್ತಾಪವಾಯಿತು. ಉಡುಪಿಯಲ್ಲಿ ಇಂಥ ಒಬ್ಬರು ಆದರ್ಶ ಅಧ್ಯಾಪಕರು ಇದ್ದರು ಎಂಬುದು ಎಷ್ಟು ಜನರಿಗೆ ತಿಳಿದಿದೆ? ಅವರ ಪ್ರಶ್ನೆ.
ರೋಕಿ ಫೆರ್ನಾಂಡಿಸರ ಬಗ್ಗೆ ಕೆಲವು ಮಾತುಗಳನ್ನಾಡಿದರು. ರೋಕಿಯವರ ಬಗ್ಗೆ ಒಂದು ಪುಸ್ತಕ ರಚಿಸುವ ಆಸಕ್ತಿಯೂ ಮೂಡಿತು. ಉಡುಪಿ ಶ್ರೀ ಅದಮಾರುಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಶ್ರೀ ಶ್ರೀ ವಿಬುಧೇಶತೀರ್ಥರು. ಒಮ್ಮೆ ಕೌನ್ಸಿಲ್ ಸಭೆಯಲ್ಲಿ ರೋಕ್ ಫೆರ್ನಾಂಡಿಸರ ವಿಚಾರ ಬಂತ೦ತೆ.
ವಿಬುಧೇಶತೀರ್ಥರು ಕೆಲವು ಹೊತ್ತು ರೋಕಿಯವರ ಬಗ್ಗೆ ಸಭೆಯಲ್ಲಿಯೇ ಗುಣಗಾನ ಮಾಡಿದರಂತೆ. ಮರುದಿನ ಶ್ರೀಗಳಿಂದ ನನಗೆ ಬುಲಾವ್. ರೋಕಿ ಫೆರ್ನಾಂಡಿಸ್‌ರು ವಿಬುಧೇಶತೀರ್ಥರ ಪೂರ್ವಾಶ್ರಮದ ಗುರು. ಅವರಿಗೆ ಇಂಗ್ಲೀಷ್ ಭಾಷೆಯನ್ನು ಬೋಧಿಸಿದವರು. ಗುರುಗಳ ಬಗ್ಗೆ ಪುಸ್ತಕ ಬರೆಯುತ್ತಿರುವುದನ್ನು ತಿಳಿದೋ ಏನೋ ಶ್ರೀಗಳು ತನ್ನನ್ನು ಬಂದು ಕಾಣುವಂತೆ ನನಗೆ ಹೇಳಿ ಕಳುಹಿಸಿದರು.
ಆಗ ವಿಬುಧೇಶರು ಎಂದರೆ ನಮಗೆ ಏನೋ ಭಯ. ಅವರು ಎದುರು ಬರುತ್ತಿರುವುದನ್ನು ಗಮನಿಸಿದಾಗ ನಮ್ಮ ದಾರಿ ಬದಲಾಗುತ್ತಿತ್ತು. ಪೂಜ್ಯ ಶ್ರೀಗಳ ಕರೆ.  ಸ್ವಲ್ಪ ಹೆದರಿಕೊಂಡೇ ಅದಮಾರುಮಠಕ್ಕೆ ಹೋದೆ. ಸಾಷ್ಟಾಂಗ ಪ್ರಣಾಮ ಸಲ್ಲಿಸಿದೆ. ರೋಕ್ ಫೆರ್ನಾಂಡೀಸರ ವಿಷಯ ಪ್ರಸ್ತಾಪಿಸಿದೆ. ಈ ವಿಷಯ ಪ್ರಸ್ತಾಪಿಸುತ್ತಲೇ ಸ್ವಾಮೀಜಿಯವರು ಖುಷಿ ಪಟ್ಟರು. ನನ್ನ ನೋಡಿ ಸಂತಸದ ನಗೆ ಬೀರಿದರು.
ನಾನೂ ಸ್ವಲ್ಪ ನಿರಾಳನಾದೆ. ಸ್ವಲ್ಪ ಧೈರ್ಯವೂ ಮೂಡಿತು.  ಗುರುಗಳ ಮೇಲಿನ ಗೌರವದಿಂದ ಗುರುಗಳ ಕುರಿತು ಪುಸ್ತಕ ರಚಿಸುತ್ತಿರುವ ನನ್ನೊಡನೆ ತುಂಬಾ ಆತ್ಮೀಯವಾಗಿ ಮಾತನಾಡಿದರು. ಆಗ ನನಗೆ ಅರ್ಥವಾಯ್ತು ಶ್ರೀಗಳ ಮನಸ್ಸು. ವಜ್ರದಷ್ಟು ಕಠಿನ ಹೂವಿನಷ್ಟು ಕೋಮಲ.
ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಹೆಸರು ರಮೇಶ. ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿ. ಸ್ವಾತಂಟ್ರ್ಯಾ ಹೋರಾಟದ ಹುರುಪು. ರೋಕ್ ಫೆರ್ನಾಂಡಿಸರು ಮುಖ್ಯೋಪಾಧ್ಯಾಯರು. ಅವರು ಕಲಿಸುವ ವಿಷಯ ಇಂಗ್ಲೀಷ್. ಇಂಗ್ಲೀಷ್ ಭಾಷೆಯ ಮೇಲೆ ಅಗಾಧವಾದ ಹಿಡಿತ. ಗುರುಗಳ ಇಂಗ್ಲೀಷ್ ಭಾಷಾ ಪಾಂಡಿತ್ಯ ಶಿಷ್ಯ ರಮೇಶನನ್ನು ಆಕರ್ಷಿಸಿರಬೇಕು. ಮುಂದೆ ಸ್ವಾಮೀಜಿಗಳಾದ ನಂತರವೂ ಇಂಗ್ಲೀಷಿನಲ್ಲಿಯೇ ನಿರರ್ಗಳವಾಗಿ ಶ್ರೀಗಳು ಮಾತನಾಡುತ್ತಿದ್ದರು.
ತನ್ನ ಗುರುಗಳಾದ ರೋಕಿ ಫೆರ್ನಾಂಡಿಸರ ಇಂಗ್ಲೀಷಿಗೆ ಮಾರು ಹೋದ ಶ್ರೀಗಳು ಗುರುಗಳ ಬಗ್ಗೆ ಹೇಳಿದ ಒಂದು ಮಾತು ರೋಕಿಯವರ ಇಂಗ್ಲೀಷ್ ಪಾಂಡಿತ್ಯ ಹಾಗೂ ಅದರ ಬಗ್ಗೆ ಶಿಷ್ಯನಿಗಿರುವ ಗೌರವಕ್ಕೆ ಸಾಕ್ಷಿ.  (His English was superb. The entire Oxford Dictionary was on the tip of his tongue.} ಗುರುಗಳಾದ ರೋಕಿ ಫೆರ್ನಾಂಡಿಸರಿಗೆ ರಮೇಶನ ಬಗ್ಗೆ ವಿಶೇಷ ಪ್ರೀತಿ. ಈ ಪ್ರೀತಿಯಿಂದಲೇ ಇರಬೇಕು ರಮೇಶನನ್ನು ಅಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಒಮ್ಮೆ ಹೀಗೆ ಗಮನಿಸುವಾಗ ಶಿಷ್ಯನ ಬಲಗೈಯ ಆರು ಬೆರಳುಗಳು ಗುರುಗಳ ದೃಷ್ಟಿಗೆ ಬಿದ್ದಿತು.
ಕೂಡಲೇ ಗುರುಗಳು ಹೇಳಿದರಂತೆ. ರಮೇಶ, ಈ ಭಾಗ್ಯ ಎಲ್ಲರಿಗೂ ಬಾರದು. ಮುಂದೊ೦ದು ದಿನ ನೀನು ದೊಡ್ಡ ವ್ಯಕ್ತಿಯಾಗುತ್ತಿ. ಗುರುಗಳ ಈ ಮಾತು ಮುಂದೆ ನಿಜವಾದಾಗ ಅತ್ಯಂತ ಸಂತೋಷ ಪಟ್ಟವರಲ್ಲಿ ಮೊದಲಿಗರು ಗುರುಗಳಾದ ರೋಕ್ ಫೆರ್ನಾಂಡಿಸ್. ತನ್ನ ಶಿಷ್ಯ ರಮೇಶನು ಅದಮಾರು ಮಠದ ಯತಿಯಾದ ಸಂದರ್ಭ.
ಪಲಿಮಾರು ಮಠದ ರಘುಮಾನ್ಯತೀರ್ಥರು ರಮೇಶನ ಯೋಗ್ಯತೆಯನ್ನು ಗುರುಗಳಾದ ರೋಕಿಯವರಿಂದ ಕೇಳಿ ತಿಳಿದಿದ್ದರು. ರೋಕಿ ಫೆರ್ನಾಂಡಿಸರಿಗೆ ಶಿಷ್ಯನ ಬಗ್ಗೆ  ಸಂತೋಷದೊ೦ದಿಗೆ ಅಭಿಮಾನ ಹಾಗೂ ಹೆಮ್ಮೆ. ತನ್ನ ಶಿಷ್ಯನು ಅದಮಾರು ಮಠದ ಯತಿಯಾದ ಸಂದರ್ಭದಲ್ಲಿ ಗುರುಗಳಾದ ರೋಕಿ ಫೆರ್ನಾಂಡಿಸರು ಶ್ರೀಗಳನ್ನು ಬೋರ್ಡ್ ಹೈಸ್ಕೂಲಿಗೆ ಆಹ್ವಾನಿಸಿದರು.
ಅಂದು ಗುರುಗಳಾದ ರೋಕಿಯವರ ನೇತೃತ್ವದಲ್ಲಿ ಅದಮಾರು ಮಠದ ಯತಿಗಳಾದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರಿಗೆ ಬೋರ್ಡ್ ಹೈಸ್ಕೂಲಿನಲ್ಲಿ ಗುರುವಂದನೆ ಹಾಗೂ ಅಭಿನಂದನೆ. ಗುರು ಹಾಗೂ ಶಿಷ್ಯರ ಈ ಆತ್ಮೀಯ ಸಂಬ೦ಧಕ್ಕೆ ಅಂದು ಬೋರ್ಡ್ ಹೈಸ್ಕೂಲು ಸಾಕ್ಷಿಯಾಗಿತ್ತು. ಬೋರ್ಡ್ ಹೈಸ್ಕೂಲಿನಲ್ಲಿ ಓದುತ್ತಿದ್ದ ಅನೇಕರು ಈ ನೆನಪನ್ನು ಕೃತಿ ರಚಿಸುವಾಗ ಹಂಚಿಕೊ೦ಡಿದ್ದರು.
ಶ್ರೀ ಶ್ರೀ ವಿಬುಧೇಶತೀರ್ಥರು ಅಂದು ಬೋರ್ಡ್ ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಗಳನ್ನು ಹಂಚಿದ್ದರ೦ತೆ. ತನ್ನ ಶಿಷ್ಯನನ್ನು ಅಭಿನಂದಿಸಿದ ರೋಕಿಯವರು ಹೇಳಿದ ಒಂದು ಮಾತು ಸ್ಮರಣೀಯ. ಈ ತನಕ ನಾನು ನಿನ್ನ ಗುರು. ಇನ್ನು ಮುಂದೆ ನೀನು ವಿಶ್ವಕ್ಕೇ ಗುರು. ತನ್ನ ಶಿಷ್ಯ ರಮೇಶನು ಅದಮಾರು ಮಠದ ಯತಿಯಾದ ನಂತರವೂ ಅದಮಾರು ಮಠ ಹಾಗೂ ರೋಕಿಯವರ ನಡುವೆ ಆತ್ಮೀಯ ಸಂಬ೦ಧ ಮುಂದುವರಿದಿತ್ತು.
ಆಗಾಗ ಶ್ರೀ ಶ್ರೀ ವಿಬುಧೇಶರನ್ನು ಕಾಣಲು ರೋಕಿಯವರು ಮಠಕ್ಕೆ ಬರುತ್ತಿದ್ದರು. ಪೂರ್ವಾಶ್ರಮದ ಗುರುಗಳಾದ ರೋಕಿ ಯವರನ್ನು ವಿಬುಧೇಶತೀರ್ಥ ಶ್ರೀಪಾದರು ಆಗಾಗ ವಿಚಾರಿಸುತ್ತಿದ್ದರು. ಗುರುಗಳ ಬದುಕಿನಲ್ಲಿ ಕಷ್ಟಗಳು ಎದುರಾದಾಗಲೂ ಬೆಂಬಲಕ್ಕೆ ನಿಂತವರು ಅದಮಾರು ಮಠಾಧೀಶರಾಗಿದ್ದ ಶ್ರೀ ಶ್ರೀ ವಿಬುಧೇಶತೀರ್ಥರು. ರೋಕಿಯವರ ಕುಟುಂಬದವರು ಇದನ್ನು  ಸದಾ ಸ್ಮರಿಸುತ್ತಿದ್ದರು.
 ರೋಕಿಯವರ ಪುತ್ರ ಓಸ್ಕರ್ ಫೆರ್ನಾಂಡೀಸರು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಪ್ರಭಾವಿಗಳಾಗಿದ್ದ ದಿನಗಳು. ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಬಗ್ಗೆ ತಂದೆಯವರ೦ತೆ ಅತ್ಯಂತ ಗೌರವ. ಪೂರ್ಣಪ್ರಜ್ಞ ಕಾಲೇಜಿನಲ್ಲಿ ಯಾವುದೇ ಕಾರ್ಯ ಕ್ರಮವಾಗಲಿ, ಶ್ರೀಗಳು ಓಸ್ಕರ್ ಫೆರ್ನಾಂಡಿಸರನ್ನು ಆಹ್ವಾನಿಸುತ್ತಿದ್ದರು. ಒಮ್ಮೊಮ್ಮೆ ಓಸ್ಕರ್ ತನ್ನ ಗುರುಗಳ ಮಗ ಎಂದು ಹೆಮ್ಮೆಯಿಂದ ಶ್ರೀಗಳು ಸಭೆಯಲ್ಲಿ ಕರತಾಡನಗಳ ನಡುವೆ ಹೇಳುತ್ತಿದ್ದರು.
ವಿಬುಧೇಶತೀರ್ಥರು ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭೆಗೇ ಮನ್ನಣೆ ನೀಡಿದರು. ಶಿಕ್ಷಕರ ಆಯ್ಕೆಯಲ್ಲಿ ಪ್ರತಿಭೆಗೇ ಮೊದಲ ಆದ್ಯತೆ. ಅದು ಯಾವ ಜಾತಿಯವರಲ್ಲಿಯೇ ಇರಲಿ. ಪ್ರತಿಭೆಗೆ ಅವಕಾಶ ಸಿಗಬೇಕು. ಕನ್ನಡಿಗರು ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಎತ್ತರಕ್ಕೇರಿಸ ಬೇಕು. ಈ ಗುರಿ ತಲುಪಲು ಇಂಗ್ಲೀಷ್ ಕಲಿಕೆ ಅತ್ಯಗತ್ಯ. ಇದರೊಂದಿಗೆ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಬೆಳಗಬೇಕು. ಹಾಗಾಗಿ ಇಂಗ್ಲೀಷ್ ಮತ್ತು ವಿಜ್ಙಾನಕ್ಕೆ ಶಿಕ್ಷಣದಲ್ಲಿ ಆದ್ಯತೆ ನೀಡಿದರು. ಗುರುಗಳಾದ ರೋಕಿಯವರ ಪ್ರಭಾವವೇ ಶ್ರೀಗಳ ಈ ಇಂಗ್ಲೀಷ್ ಭಾಷಾ ಪ್ರೇಮಕ್ಕೆ ಕಾರಣವಿರಬಹುದು. ~ • ಡಾ.ಶ್ರೀಕಾಂತ್ ಸಿದ್ದಾಪುರ
 
 
 
 
 
 
 
 
 
 
 

Leave a Reply