ದೇವ ದೇವತೆಗಳ ಸಮಾಗಮ

ಉಡುಪಿ , ಮೇ 22 : ಹಳೆಯ ಕ್ಯಾಲೆಂಡರ್ ನಲ್ಲಿ ಮಾತ್ರ ನೋಡಲಿಕ್ಕೆ ಸಿಗುತ್ತಿದ್ದ ದೇವ ದೇವತೆಯರ ಕುರಿತಾಗಿ ರಚಿಸಿದ ಆಕ್ರಿಲಿಕ್  ಕಲಾಕೃತಿಗಳ ಪ್ರದರ್ಶನ ” ದೇವತಾ ” ಮೇ 25 ರಿಂದ ಮೇ 28 ರವರೆಗೆ ಕುಂಜಿಬೆಟ್ಟಿನ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜರಗಲಿದೆ.
ಈ ಬಗ್ಗೆ ಮಂಗಳವಾರ ಅದಿತಿ ಗ್ಯಾಲರಿಯಲ್ಲಿ ಜರಗಿದ ಸುದ್ದಿಗೋಷ್ಟಿಯಲ್ಲಿ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ.ಕಿರಣ್ ಆಚಾರ್ಯ ಮಾಹಿತಿ  ನೀಡಿದರು. ಹಿರಿಯ ಕಲಾವಿದರ ಪ್ರೇರಣೆ ಪಡೆದ ಪ್ರವೀಣಾ ಮೋಹನ್ ಅವರು ತಮ್ಮ ಶೈಲಿಯಲ್ಲಿ ಸುಮಾರು 24 ಕ್ಕೂ ಅಧಿಕ ಕಲಾಕೃತಿಗಳನ್ನು ರಚಿಸಿದ್ದಾರೆ. ಮೇ 25 ರಂದು ಸಂಜೆ 5 ಕ್ಕೆ ಮೂಡಬಿದ್ರೆ ಆಳ್ವಾಸ್ ನ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ.
ಉಜ್ವಲ್ ಸಮೂಹದ ಆಡಳಿತ ನಿರ್ದೇಶಕರಾದ  ಅಜೆಯ್ ಪಿ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಮಂಗಳೂರಿನ ಲ್ಯಾಮಿನ್ ಫ್ರೇಮ್ಸ್ ನ ಮಾಲಕರಾದ ನರೇಂದ್ರ ಶೆಣೈ ಸ್ಮರಿಣಿಕೆ ಸ್ಟಿಕ್ಕರ್ ಬಿಡುಗಡೆ ಮಾಡಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದರು. ಕಲಾವಿದೆ  ಪ್ರವೀಣಾ ಮೋಹನ್ ಉಪಸ್ಥಿತರಿದ್ದರು. ಪ್ರದರ್ಶನವು ಮೇ 26 ರಿಂದ ಮೇ 27 ರವರೆಗೆ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ಕಲಾಸಕ್ತರ ವೀಕ್ಷಣೆಗೆ ವ್ಯವಸ್ಥೆ ಗೊಳಿಸಲಾಗಿದೆ.
ಶೇ 50  ರಿಯಾಯಿತಿಯಲ್ಲಿ ಆಸ್ಟ್ರೋ ಪುಸ್ತಕಗಳು ಲಭ್ಯ: ದೇವತಾ ಚಿತ್ರ ಕಲಾ ಪ್ರದರ್ಶನದ ಅಂಗವಾಗಿ ಆಸ್ಟ್ರೊ ಮೋಹನ್ ಅವರ ಎರಡು ಪಿಕ್ಟೊರಿಯಲ್ ಜರ್ನಿ ಟು ಉಡುಪಿ – ಮಣಿಪಾಲ ಹಾಗೂ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಕುರಿತಾಗಿ ಹೊರತಂದ ಪುಸ್ತಕ ಎ ಡೇ ವಿತ್ ದಿ ಸೈನ್ಟ್ ಕೃತಿಗಳು ಶೇ 50  ರಿಯಾಯಿತಿಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

ಕಲಾವಿದೆ ಪ್ರವೀಣಾ ಮೋಹನ್:  ಚಿತ್ರಕಲೆಯಲ್ಲಿ ಚಿರಪರಿಚಿತ ಹೆಸರು. ಬಾಲ್ಯದಿಂದಲೇ ಬಣ್ಣಗಳ ಮೇಲಿದ್ದ ಮೋಹ ಪ್ರಬುದ್ಧ ಕಲಾವಿದೆಯನ್ನಾಗಿಸಿದೆ. ಸಾಂಪ್ರದಾಯಿಕ ಚಿತ್ರಗಳಿಗೆ ಆಧುನಿಕ ಸ್ಪರ್ಶನೀಡುವ ಪ್ರವೀಣಾ ಅವರ ಕಲಾ ಕೈಗಳ ಮೋಡಿಗೆ ಮಾರುಹೋಗದವರೇ ಇಲ್ಲ. ರೇಖಾಚಿತ್ರ , ಜಲವರ್ಣ , ಚಾರ್ಕೋಲ್ , ಫ್ಯಾಬ್ರಿಕ್ , ಪಾಟ್ ಪೇಂಟಿಂಗ್, ಚುಕ್ಕೆ ಚಿತ್ರ ,ಎಕ್ರಲಿಕ್, ಲೋಹ ಉಬ್ಬುಶಿಲ್ಪ ಹೀಗೆ ಹತ್ತು ಹಲವು ಮಾದ್ಯಮದಲ್ಲಿ ಪ್ರವೀಣಾ ಪ್ರವೀಣೆ.

ಕಲಾಕೃತಿ ರಚನೆಗೆ ಸೀಮಿತವಾಗದ ಪ್ರವೀಣಾ ಮೋಹನ್ ಓರ್ವ ಪ್ರಬುದ್ಧ ಭರತನಾಟ್ಯ ಕಲಾವಿದೆ.  ರಾಜ್ಯದ ವಿವಿಧ ಕಲಾ ವೇದಿಕೆಯಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.ವಿವಾಹೋತ್ತರ ಭರತನಾಟ್ಯದಲ್ಲಿ ವಿದುಷಿ ಪದವಿ ಪ್ರಾಪ್ತಿಸಿಕೊಂಡ ಸಾಧಕಿ. ನೃತ್ಯ ಮತ್ತು ಚಿತ್ರಕಲೆಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದುಕೊಡುತ್ತಿರುವ ಕಲಾ ಶಿಕ್ಷಕಿಯೂ ಹೌದು.  ಕೆಲ ಸಮಯ ಕ್ಯಾಮ್ಲಿನ್ ಕಂಪೆನಿಗೆ ಕಲಾ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಕಲಾ ಪ್ರದರ್ಶನವನ್ನು ನಡೆಸಿರುವ ಇವರ ಕಲಾಕೃತಿಗಳು ವಿದೇಶದಲ್ಲಿರುವ ಭಾರತೀಯರ ಮನೆಯಲ್ಲಿ ಆಶ್ರಯ ಪಡೆದಿವೆ. ಉಡುಪಿ ಎಂ ಜಿ ಎಂ ಕಾಲೀಜಿನ ಸ್ವರ್ಣ ಮಹೋತ್ಸವದ ಲಾಂಛನ ನಿರ್ಮಾಣ ಮಾಡಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಕಲಿಕೆಗೆ ವಯೋಮಿತಿ ಇಲ್ಲವೆಂಬ ಮಾತನ್ನು ಎತ್ತಿ ಹಿಡಿದ ಪ್ರವೀಣಾ ಮೋಹನ್ ಪರ್ಷಿಯನ್ ಮತ್ತು ತಂಜಾವೂರು ಕಲಾ ರಚನೆಯ ಸೂಕ್ಷ್ಮಗಳನ್ನು ಕಳಿತು ಈಗಾಗಲೇ ತನ್ನ ವಿದ್ಯಾರ್ಥಿಗಳಿಗೆ ಕಲಾ ತರಬೇತಿ ನೀಡುತ್ತಿದ್ದಾರೆ.
ಇವರ ಕಲಾವಂತಿಕೆಯನ್ನು ಕಂಡ  ಅನೇಕ ಸಂಘ ಸಂಸ್ಥೆಗಳು ವಿಶೇಷ ಪುರಸ್ಕಾರಗಳನ್ನು ನೀಡಿ ಪುರಸ್ಕರಿಸಿವೆ. ಇತ್ತೀಚೆಗೆ ಉಪಾಧ್ಯಾಯ ಸಮ್ಮಾನ್ ಪ್ರಶಸ್ತಿಯೂ ಇವರ ಮಡಿಲು ಸೇರಿದೆ. ಪ್ರವೀಣಾ ಮೋಹನ್ , ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರ ಪತ್ನಿ.
 
 
 
 
 
 
 
 
 
 
 

Leave a Reply