ತಾಯಿಯ ಸಂಸ್ಕಾರವೇ ಮಹಾಪುರುಷರನ್ನು ರೂಪಿಸುತ್ತದೆ -ಪ್ರಕಾಶ್ ಮಲ್ಪೆ

ಶಿರ್ವ:- ಹೊರಗಿನ ಕಣ್ಣಿಗೆ ಭಗವಂತನ ದರ್ಶನ ಆಗುವುದಿಲ್ಲ. ಭಕ್ತಿಯಿಂದ ಕರೆದಾಗ, ಅಂತರAಗದ ಕಣ್ಣನ್ನು ತೆರೆಸಿದಾಗ ಮಾತ್ರ ಭಗವಂತನನ್ನು ಕಾಣಬಹುದು. ದೇಶದ ಇತಿಹಾಸದ ಪುಟಗಳಲ್ಲಿ ಶಬರಿ, ದೌಪದಿ, ತಪಸ್ವಿಗಳು ದಾಸರು ಶರಣರು ದೇವರನ್ನು ಕಂಡ ನಿದರ್ಶನಗಳಿವೆ. ಭಾರತದಲ್ಲಿ ಯಾರೂ ನಾಸ್ತಿಕರಿಲ್ಲ. ನಾಸ್ತಿಕರಂತೆ ನಟನೆ ಮಾಡುವವರು ಮಾತ್ರ ಇದ್ದಾರೆ. ಶಿವಾಜಿ, ಸ್ವಾಮಿವಿವೇಕಾನಂದ ಮೊದಲಾದ ಮಹಾಪುರುಷರ ಸಾಧನೆಗಳ ಹಿಂದೆ ತಾಯಿಯ ಸಂಸ್ಕಾರಯುಕ್ತ ಮಾರ್ಗದರ್ಶನದ ಶಕ್ತಿ ಇದೆ. ಮನೆಯ ವಾತವರಣ, ತಾಯಿಯ ಸಂಸ್ಕಾರವೇ ಭವಿಷ್ಯದ ಮಹಾಪುರುಷರನ್ನು ರೂಪಿಸುತ್ತದೆ ಎಂದು ಸಂವೇದನಾ ಫೌಂಡೇಶನ್(ರಿ) ಉಡುಪಿ ಇದರ ಸಂಚಾಲಕ, ಸಾಮಾಜಿ ಚಿಂತಕ ಪ್ರಕಾಶ್ ಮಲ್ಪೆ ನುಡಿದರು.

   ಅವರು ಶಿರ್ವ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ವತಿಯಿಂದ ಜರುಗುತ್ತಿರುವ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಸಾವಿರಾರು ವರ್ಷಗಳಿಂದ ವಿವಿಧ ಆಕ್ರಮಣ, ದಾಳಿಗೆ ತುತ್ತಾಗಿದ್ದರೂ ಇಂದಿಗೂ ಭಾರತ ಭಾರತವಾಗಿಯೇ ಉಳಿದಿರುವುದು ಮಾತೃಶಕ್ತಿಯ ಅಂತಸತ್ವದ ಬಲದಿಂದ ಎಂದರು. ಎಲ್ಲಾ ಅಪಸವ್ಯಗಳನ್ನು ಮೀರಿ ಒಟ್ಟಾದಾಗ ಮಾತ್ರ ಸಾಮರಸ್ಯದ ಅಂತಶಕ್ತಿ ಜಾಗೃತವಾಗಿ ಭಾರತ ಪುನ: ಜಗದ್ಗುರುವಾಗಲಿದೆ ಎಂದರು.

  ಶಿರ್ವ ಪೋಲಿಸ್ ಠಾಣಾಧಿಕಾರಿ ರಾಘವೇಂದ್ರರವರು ವಿವಿಧ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ, ಶಿರ್ವದಲ್ಲಿ ಓರ್ವ ಪೊಲಿಸ್ ಸಬ್‌ಇನ್ಸ್ಪೆಕ್ಟರ್‌ರವರ ನೇತೃತ್ವದಲ್ಲಿ ಪ್ರಾರಂಭಗೊoಡ ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತೀ ವರ್ಷವೂ ಠಾಣಾಧಿಕಾರಿಗಳನ್ನು ಅಹ್ವಾನಿಸಿ ಗೌರವ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಾವು ಮಕ್ಕಳಾಗಿದ್ದಾಗ ಇದ್ದ ಭಾವನೆ, ಸಾಮರಸ್ಯ ಪುನ: ಜಾಗೃತವಾಗಿ, ಕೌಟುಂಬಿಕ ಹಾಗೂ ಸಾಮಾಜಿಕ ಸ್ವಾರ್ಥಪರತೆ, ವೈಷಮ್ಯ ದೂರವಾಗಿ ಶಾಂತಿ ಸುವ್ಯವಸ್ಥೆ ನೆಲೆಗೊಳಿಸುವಲ್ಲಿ ಗಣೇಶೋತ್ಸವಗಳು ವೇದಿಕೆಯಾಗಲಿ ಎಂದು ಹಾರೈಸಿದರು.

  ಎಲ್ಲೂರು ಸೀಮೆಯ ಆಗಮ ಪಂಡಿತ ವೇದಮೂರ್ತಿ ಕೇಂಜ ಶ್ರೀಧರ ತಂತ್ರಿಗಳು ಆಶೀರ್ವಚನ ನೀಡಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಠಲ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್ಲು ಸ್ವಾಗತಿಸಿದರು. ಸತ್ಯನಾಥ ಕಾಮತ್ ಪ್ರಾರ್ಥಿಸಿದರು. ಕಾರ್ಯದರ್ಶಿ ಗಿರಿಧರ್ ಪ್ರಭು ವರದಿ ಓದಿದರು. ಮಹಿಳಾ ಮಂಡಲದ ಕಾರ್ಯದರ್ಶಿ ಸ್ಫೂರ್ತಿ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ನಿರೂಪಿಸಿದರು. ನರಸಿಂಹ ಭಟ್ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply