ಪುತ್ತಿಲರಿಗೆ ಪಾರ್ಲಿಮೆಂಟ್ ಗೆ ಅವಕಾಶ!

ಈ ಸಲದ ವಿಧಾನಸಭಾ ಚುನಾವಣೆ ಅನೇಕ ಬದಲಾವಣೆಗಳಿಗೆ ಮತ್ತು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಪುತ್ತೂರು ಕ್ಷೇತ್ರವೂ ಒಂದು. ಅತಿ ಕುತೂಹಲ ಕೆರಳಿಸಿದ್ದ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯ ಧೋರಣೆಗಳ ವಿರುದ್ಧ ಸೆಟೆದು ನಿಂತು ಪಕ್ಷೇತರನಾಗಿ ಸ್ಪರ್ಧಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತರೂ ಈಗ ರಾಜ್ಯಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಸೋಲಿನಲ್ಲೂ ಗೆಲುವು ಕಂಡಿದ್ದಾರೆ.

ಚುನಾವಣೆ ಸಮಯದಲ್ಲಿ ಪುತ್ತೂರಿಗಷ್ಟೇ ಸೀಮಿತವಾಗಿದ್ದ ಅರುಣ್ ಕುಮಾರ್ ಅಭಿಮಾನಿ ಬಳಗ ಈಗ ಇಡೀ ಜಿಲ್ಲೆಗೆ ಹಬ್ಬಿದ್ದು ಮುಂದಿನ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಸಂಸದ ಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಅವರೇ ಆಯ್ಕೆಯಾಗಲಿ ಎಂಬ ಕೂಗು ಜೋರಾಗಿದೆ. ಪುತ್ತಿಲ ಪರ ವಾದ, ವಾಟ್ಸಪ್ ಗ್ರೂಪ್‌ಗಳು ರಚನೆಯಾಗುತ್ತಿದ್ದು ಕೆಲವೇ ಗಂಟೆಗಳಲ್ಲಿ 20 ಸಾವಿರಕ್ಕೂ ಅಧಿಕ ಜನರು ವಾಟ್ಸಪ್ ಗ್ರೂಪ್‌ಗಳಲ್ಲಿ ಸೇರಿಕೊಂಡು ಅಭಿಯಾನ ಆರಂಭಿಸಿದ್ದಾರೆ.

ಟಿಕೆಟ್‌ ನೀಡಿದ್ದರೆ ಪುತ್ತಿಲ ಗೆಲ್ಲುವುದು ಖಾತರಿಯಾಗಿತ್ತು. ಆದರೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕುತಂತ್ರದಿಂದ ಟಿಕೆಟ್‌ ತಪ್ಪಿಸಲಾಗಿದೆ ಎಂಉ ಆಕ್ರೋಶ ಇನ್ನೂ ಕಾರ್ಯಕರ್ತರಲ್ಲಿ ಮಡುಗಟ್ಟಿದೆ. ಹೀಗಾಗಿ ಈ ಸಲ ಪುತ್ತಿಲಗೆ ಲೋಕಸಭೆ ಚುನಾವಣೆಯ ಟಿಕೆಟ್‌ ನೀಡಿ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂಬ ಆಗ್ರಹ ವ್ಯಾಪಕವಾಗುತ್ತಿದೆ. ಪುತ್ತೂರಿಗೆ ಪುತ್ತಿಲ ಎಂದು ಇದ್ದ ಘೋಷಣೆ ಈಗ ಹತ್ತೂರಿಗೆ ಪುತ್ತಿಲ ಎಂದು ಬದಲಾಗಿದೆ. ಅರ್ಥಾತ್‌ ಪುತ್ತಿಲ ಲೋಕಸಭೆ ಅಭ್ಯರ್ಥಿಯಾಗಬೇಕೆನ್ನುವುದು ಇದರ ತಾತ್ಪರ್ಯ. ಅಂತಿಮವಾಗಿ ತಪ್ಪು ನಿರ್ಧಾರದಿಂದ ಬಿಜೆಪಿ ಒಂದು ಸ್ಥಾನವನ್ನು ಕಳೆದುಕೊಂಡದ್ದು ಮಾತ್ರವಲ್ಲದೆ ರಾಜ್ಯಾಧ್ಯಕ್ಷರು ತನ್ನ ಕಾಲ ಮೇಲೆ ತಾನೇ ಕಲ್ಲು ಎಳೆದು ಹಾಕಿಕೊಂಡರು ಎಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಸ್ವಜನ ಪಕ್ಷಪಾತ ಮಾಡಿದರೆ ಏನಾಗುತ್ತದೆ ಎಂಬ ಪಾಠವನ್ನು ಬಿಜೆಪಿಗೆ ಮತದಾರರೇ ಕಲಿಸಿದ್ದಾರೆ.

ಪಕ್ಷೇತರನಾಗಿ ನಿಂತು 62,458 ಮತ ಪಡೆದು ಅರುಣ್ ಪುತ್ತಿಲ ಇತಿಹಾಸ ಬರೆದಿದ್ದು, ಹಿಂದುತ್ವದ ಭದ್ರಕೋಟೆಯಲ್ಲಿ ಪುತ್ತಿಲ ಭರ್ಜರಿ ಸೆಣಸಾಟ ನಡೆಸಿದ್ದರು. ಪಕ್ಷೇತರನಾಗಿ ಸ್ಪರ್ಧಿಸಿ ಪುತ್ತಿಲ ವಿರೋಚಿತ ಸೋಲು ಕಂಡರೂ ಬಿಜೆಪಿ ಭದ್ರಕೋಟೆಯಲ್ಲಿ ಕೊನೆಗೂ ಪುತ್ತಿಲ ಪರ ಅಲೆ ಸಾಬೀತಾಗಿದೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ತವರಲ್ಲೇ ತೊಡೆ ತಟ್ಟಿದ್ದ ಪುತ್ತಿಲ ಹೊಸ ದಾಖಲೆ ಬರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ಪಡೆದ ಅತಿ ಹೆಚ್ಚಿನ ಮತದ ದಾಖಲೆ ಪುತ್ತಿಲರದ್ದಾಗಿದ್ದು, ಕಾಂಗ್ರೆಸ್ ವಿರುದ್ಧ ಕೇವಲ 4 ಸಾವಿರದಷ್ಟು ಮತದ ಅಂತರದ ಸೋಲು ಕಂಡಿದ್ದಾರೆ. ಬಿಜೆಪಿ ಬಾವುಟದ ವಿರುದ್ಧ ಭಗವಾಧ್ವಜದಡಿ ಸೆಣಸಾಡಿ ಪುತ್ತಿಲ ಗೆದ್ದಿದ್ದಾರೆ. ಮಾತ್ರವಲ್ಲ ಬಿಜೆಪಿಯನ್ನು ಮಕಾಡೆ ಮಲಗಿಸಿ‌ ಕಾಂಗ್ರೆಸ್‌ಗೂ ಭಯ ಹುಟ್ಟಿಸಿದ್ದಾರೆ.

ಇನ್ನು ಅರುಣ್ ಕುಮಾರ್ ಪುತ್ತಿಲ ಅವರನ್ನು ಸಂಸತ್ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಪುತ್ತಿಲ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದಾರೆ‌‌. ಸಾಮಾಜಿಕ ಜಾಲತಾಣಗಳಲ್ಲಿ ಪುತ್ತಿಲ ಪರವಾದ ಬರಹಗಳನ್ನು ಬರೆದು ರಾಜ್ಯ ನಾಯಕರ ಗಮನ ಸೆಳೆಯುತ್ತಿದ್ದಾರೆ.

ಖ್ಯಾತ ಚಿಂತಕರಾದ ಆದರ್ಶ ಗೋಖಲೆ ಮತ್ತು ಅಕ್ಷಯ ಗೋಖಲೆ ಪುತ್ತಿಲ ಪರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು,ಪತ್ರದ ಸಾರಾಂಶ ಈ ಕರ್ನಾಟಕ ವಿಧಾನಸಭೆಯ ಚುನಾವಣಾ ಫಲಿತಾಂಶವು ಹೊರಬಿದ್ದಿದ್ದು ಈ ಪ್ರಮಾಣದ ಸೋಲನ್ನು ತಾವು ಪೂರ್ವದಲ್ಲಿಯೇ ನಿರೀಕ್ಷಿಸಿದ್ದಿರಬಹುದು. ದೇವ ದುರ್ಲಭ ನಿಸ್ವಾರ್ಥ ಕಾರ್ಯಕರ್ತರ ನೋವನ್ನು ಆಲಿಸುವ ತಾಳ್ಮೆಯೇ ಇಲ್ಲದ ತಥಾಕಥಿತ ರಾಜ್ಯ ನಾಯಕರ ಅಧಿಕಾರದ ದರ್ಪ ಹಾಗೂ ಅಹಂಕಾರದ ಮಾತುಗಳಿಗೆ ಫಲಿತಾಂಶ ಕೈಗನ್ನಡಿಯಂತಿದೆ.
ನೀವು ಮತ್ತು ಯೋಗಿ ಆದಿತ್ಯನಾಥರು ಕೊನೆಯ ಕ್ಷಣದಲ್ಲಿ ಭೇಟಿಯಿತ್ತು, ಕೈಮುಗಿದು ರೋಡ್ ಶೋ ನಡೆಸದೇ ಇದ್ದಿದ್ದರೆ, ಬಜರಂಗಬಲಿಯ ಜೈಕಾರ ಮೊಳಗದೇ ಇದ್ದಿದ್ದರೆ ಗೆಲುವು ಮೂವತ್ತೈದು ಕ್ಷೇತ್ರಗಳಿಗಷ್ಟೇ ಮೀಸಲಾಗುತ್ತಿತ್ತೇನೋ? ಏನೇ ಇರಲಿ, ಪರಮವೈಭವ ಭಾರತದ ಕನಸು ಕಾಣುವ ಕಾರ್ಯಕರ್ತರ ಮನದ ಭಾವನೆಗಳನ್ನು ಗೌರವಿಸದಿದ್ದರೆ, ಪಕ್ಷದಷ್ಟೇ ವ್ಯಕ್ತಿಯೂ ಮುಖ್ಯವಾಗುವನೆಂಬುದು ನಿಮ್ಮ ಅರಿವಿಗೆ ಬರದೇ ಹೋದರೆ ಪರಿಸ್ಥಿತಿ ವ್ಯತಿರಿಕ್ತವಾಗುವುದರಲ್ಲಿ ಅನುಮಾನವಿಲ್ಲ. ರಸ್ತೆ ಮಧ್ಯದಲ್ಲಿ ಹೆಣವಾಗಲು ಕಾರ್ಯಕರ್ತರು ಬೇಕು, ಮತೀಯ ಸಂಘಟನೆಗಳ ವಿರುದ್ಧ ಹೋರಾಟಗಳನ್ನು ಸಂಘಟಿಸಲು ಕಾರ್ಯಕರ್ತರು ಬೇಕು, ಧ್ವಜ ಏರಿಸಲು-ಕುರ್ಚಿ ಜೋಡಿಸಲು ಕಾರ್ಯಕರ್ತರು ಬೇಕು. ಆದರೆ ಅಭ್ಯರ್ಥಿಗಳ ಆಯ್ಕೆಯ ಸಂದರ್ಭ ಬಂದಾಗ ಕಾರ್ಯಕರ್ತರ ಕಣ್ಣಿಗೆ ಬಟ್ಟೆ ಕಟ್ಟಿ ಸ್ನೇಹಿತಾಸಕ್ತಿಯ ಸಾಧನೆಗಾಗಿ ತಮ್ಮ ವೈಯಕ್ತಿಕ
ಅಭಿಪ್ರಾಯವನ್ನೇ ಸಾರ್ವತ್ರಿಕವೆಂದು ಬಿಂಬಿಸುವ ನಾಯಕರಿಗೆ ಬುದ್ಧಿ ಹೇಳುವ ಕಾರ್ಯವನ್ನು ತಾವು ಮಾಡದೇ ಇದರ ಪರಿಣಾಮ ಏನಾಗುವುದು ಎಂಬುದಕ್ಕೆ ಕರ್ನಾಟಕಕ್ಕಿಂತ ಬೇರೆ ಉದಾಹರಣೆ ಬೇಕೇ? ಕಾರ್ಯಕರ್ತನನ್ನೇ ದೇವರೆಂದು ಭಾವಿಸುವ ತಮಗೆ ‘ಪುತ್ತೂರಿಗೆ ಪುತ್ತಿಲ’ ಅಭಿಯಾನ ಖಂಡಿತವಾಗಿಯೂ ಗಮನಕ್ಕೆ ಬಂದಿರುತ್ತದೆ. ವೋಟ್ ಪಡೆಯಲು ನೋಟು, ಬಿರಿಯಾನಿ ನೀಡದೆ ಕೇವಲ ಹಿಂದುತ್ವ ಮತ್ತು ಅಭಿವೃದ್ಧಿಯ ಕನಸಿನೊಂದಿಗೆ ಪುತ್ತೂರಿನಲ್ಲಿ ಕಣಕ್ಕಿಳಿದಿದ್ದ ಅರುಣ್‌ ಕುಮಾರ ಪುತ್ತಿಲರನ್ನು ತಾವು ಅಥವಾ ತಥಾಕಥಿತ ನಾಯಕರು ಕಡೆಗಣಿಸಿದ್ದು ಸೂಕ್ತವೆಂದು ನಿಮಗೆ ಅನಿಸುವುದೇ?
ಕಾಂಗ್ರೆಸ್‌ನ ಅಭ್ಯರ್ಥಿಯೇ ಗೆಲ್ಲಬೇಕೆಂದು ಯೋಚಿಸಿ, ಅದಕ್ಕೆ ತಕ್ಕಂತೆ ಕಾರ್ಯ ಯೋಜಿಸಿ ಪಕ್ಷಕ್ಕೆ ಮೋಸ ಮಾಡಲು ನಿರ್ಧರಿಸಿದ ‘ನಿರ್ಣಯ ಪ್ರಮುಖ’ರ ದೃಷ್ಟಿಯಲ್ಲಿ ಪುತ್ರಿಲರನ್ನು ಬೆಂಬಲಿಸುವವರು ದೇಶ ದ್ರೋಹಿಗಳಾಗಿ ಬದಲಾದುದು ಬೇಸರದ ಸಂಗತಿ. ಅರುಣಕುಮಾರ್‌ ಪುತ್ತಿಲರನ್ನು ಬೆಂಬಲಿಸಿದ ಕಾರಣಕ್ಕಾಗಿ ನಾವು ದೇಶದ್ರೋಹಿಗಳಾಗಿದ್ದೇವೆ, ಚಿಂತೆಯಿಲ್ಲ. ಸಂಘ ವಿರೋಧಿಗಳೆಂಬ ಹಣೆಪಟ್ಟಿಯನ್ನೂ ಹಚ್ಚಲಾಗಿದೆ, ಚಿಂತೆಯಿಲ್ಲ. ನಿಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಜೀವನವನ್ನೇ ಹಾಳು ಮಾಡುತ್ತೇವೆ. ಎಂದು ಬೆದರಿಸಿದರು, ಚಿಂತೆಯಿಲ್ಲ.
ಪುತ್ತೂರಿನ ಫಲಿತಾಂಶ ಎಲ್ಲದಕ್ಕೂ ಉತ್ತರ ನೀಡಿದೆ. ಅರುಣ್‌ ಕುಮಾರ ಪುತ್ತಿಲರು ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸೋತರೂ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ತನ್ನ ಹನುಮಶಕ್ತಿಯನ್ನು ತೋರಿದ್ದಾರೆ. ಜಾತಿ ಮತ್ತು ವಶೀಲಿಬಾಜಿಗಳಿಗೆ ತಾವು ಕಿವಿಗೊಡುವವರಲ್ಲವೆಂಬ ನಮ್ಮ ನಂಬಿಕೆ ಸುಳ್ಳಾಗದಿರಲಿ. ಸಮಸ್ತ ಪುತ್ತಿಲ ಅಭಿಮಾನಿಗಳ ಪರವಾಗಿ ತಮ್ಮಲ್ಲಿ ನಮ್ಮದೊಂದು ವಿನಂತಿಯಿದೆ.
ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರ ನಡೆಸಿ ನಿಮ್ಮ ಗೆಲುವಿಗಾಗಿ ಶ್ರಮವಹಿಸಿದ ಅರುಣ್‌ ಕುಮಾರ ಪುತ್ತಿಲರನ್ನು 2024ರ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ / ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆದಷ್ಟು ಶೀಘ್ರದಲ್ಲಿ ಘೋಷಿಸಬೇಕೆಂಬುದು ನಮ್ಮ ಅಪೇಕ್ಷೆ. ಸದಾಕಾಲ ಕಾರ್ಯಕರ್ತರ ಪರವಾಗಿ ನಿಲ್ಲುವ, ಹಿಂದುಗಳಿಗೆ ಶಕ್ತಿ ತುಂಬುವ ಪುತ್ತಿಲರು ನಿಮ್ಮೊಂದಿಗೆ ಕಾರ್ಯನಿರ್ವಹಿಸಿ ಕರಾವಳಿ ಕರ್ನಾಟಕ ಮತ್ತು ಕೇಂದ್ರ ಸರಕಾರದ ನಡುವ ಕೊಂಡಿ ಯಾಗಬೇಕೆಂಬುದು
ನಮ್ಮ ಕನಸುಎಂದು ಪತ್ರ ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪುತ್ತಿಲ ಪರವಾದ ಪೋಸ್ಟ್, ಸ್ಟೇಟಸ್, ವಿಡಿಯೋಗಳು ಇಡೀ ಕರಾವಳಿಯಾದ್ಯಾಂತ ಸದ್ದುಮಾಡಿವೆ. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ನಳಿನ್ ಹಠಾವೋ, ಬಿಜೆಪಿ ಬಚಾವೋ ಎಂಬ ಒತ್ತಾಯವನ್ನೂ ಕಾರ್ಯಕರ್ತರು ಮಾಡಿದ್ದಾರೆ.

 
 
 
 
 
 
 
 
 
 
 

Leave a Reply