ಶೆಟ್ಟರ್ ಸೋತರೂ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡಿತ್ತು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನಮಾನ ನೀಡಿತ್ತು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 35 ಸಾವಿರ ಮತಗಳಿಂದ ಸೋತರೂ ಅವರನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಜಗದೀಶ್ ಶೆಟ್ಟರ್ ಅವರು ವಾಪಸ್ ಬಿಜೆಪಿಗೆ ಹೋಗಿದ್ದು ನೋಡಿ ದಿಗ್ಭ್ರಮೆ ಉಂಟಾಯಿತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.

 ಇಲ್ಲಿನ ಅಜ್ಜರಕಾಡಿನ ಮಹಾತ್ಮ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆದ 75ನೇ‌‌ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವರು, ಶೆಟ್ಟರ್ ಅವರಿಗಾಗಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದರು. ಶೆಟ್ಟರ್ ಯಾಕೆ ಇಂಥ ನಿರ್ಧಾರ ಕೈಗೊಂಡರು ಅಂತ ಗೊತ್ತಿಲ್ಲ ಎಂದರು. ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷವನ್ನು ಬಿಡಲು ಕಾರಣ, ಯಾಕಾಗಿ ಬಿಟ್ಟರು ಅನ್ನೋದಕ್ಕೆ ಅವರೇ ಉತ್ತರಿಸಬೇಕು. ರಾಜಕಾರಣದಲ್ಲಿ ಈ ರೀತಿ ಆಗಬಾರದು. ಇದು ಬಂದ ಪುಟ್ಟ, ಹೋದ್ಯ ಪುಟ್ಟ ಅನ್ನೋ ಹಾಗೆ ಆಯಿತು ಎಂದರು. 

 ಲಕ್ಷ್ಮಣ್ ಸವದಿ ಪಕ್ಷದಲ್ಲೆ ಉಳಿವರು

ಬೆಳಗಾವಿ ಜಿಲ್ಲೆಯ ಶಾಸಕ ಲಕ್ಷ್ಮಣ್ ಸವದಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ನಮ್ಮ ಪಕ್ಷದಲ್ಲೆ ಮುಂದುವರಿಯುತ್ತಾರೆ ಎಂದು‌‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು. ಸವದಿ ಅವರ ಸ್ವಾಭಿಮಾನಕ್ಕೆ ಬಿಜೆಪಿಯಲ್ಲಿ ಧಕ್ಕೆಯಾಗಿದ್ದಕ್ಕೆ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದರು. 

 ಜನರಿಗೆ ನೆಮ್ಮದಿ ತಂದ ಗ್ಯಾರಂಟಿ ಯೋಜನೆಗಳು

ರಾಜ್ಯದಲ್ಲಿ ಬರಗಾಲ ಆವರಿಸಿದೆ. ಇದರ ನಡುವೆಯೂ ಜನ ಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಇದುವರೆಗೂ 100 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಅಧ್ಯಯನ ಮಾಡಿ, ಮಹಿಳೆಯರ ಸಬಲೀಕರಣದ ಬಗ್ಗೆ ತಿಳಿದು ಕೊಳ್ಳಲಾಗುವುದು ಎಂದರು.

ಸೂಕ್ತ ಅಭ್ಯರ್ಥಿಗಳು ಕಣಕ್ಕೆ

ಮುಂಬರುವ ಲೋಕಸಭಾ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಫೆಬ್ರವರಿ 15ರ ವೇಳೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮತ್ತೊಂದು ಹಂತದ ಚರ್ಚೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

 
 
 
 
 
 
 
 
 
 
 

Leave a Reply