ಪಂಚಮಸಾಲಿ ಮೀಸಲಾತಿ ಹೋರಾಟ: ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ – ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕುರಿತು ಚರ್ಚಿಸಲು ಡಿಸೆಂಬರ್ 5ರಂದು ಶಾಸಕರ ಸಭೆ ನಡೆಸಬೇಕು ಹಾಗೂ ಈ ಸಭೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನೂ ಆಹ್ವಾನಿಸಬೇಕು ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ತಿಳಿಸಿದ್ದಾರೆ. ಸಭೆ ನಡೆಸುವ ವಿಷಯವನ್ನು ಶನಿವಾರ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಗುರುವಾರ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಂಚಮಸಾಲಿ ಮೀಸಲಾತಿ ಕುರಿತು ನಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ. ಹಾಗಾಗಿ ಅದನ್ನು ಈಡೇರಿಸಲು ನಾವು ಬದ್ದರಾಗಿದ್ದೇವೆ. ಹೋರಾಟ ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಯಾರೂ ಹೋರಾಟದಿಂದ ಹಿಂದೆ ಸರಿಯುವುದು ಬೇಡ, ಸಮಾಜಕ್ಕೆ ನಾನು ನ್ಯಾಯ ಕೊಡಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

 ನಮ್ಮ ಮುಂದಿನ ಪೀಳಿಗೆಯ ಉಜ್ವಲ ಜೀವನಕ್ಕೆ ಮೀಸಲಾತಿ ಅಗತ್ಯ. ಅದಕ್ಕಾಗಿ ಹೋರಾಟ ಅನಿವಾರ್ಯ. ಬೇರೆಯವರಿಗೆ ಮೀಸಲಾತಿ ಕೊಟ್ಟಾಗ ನಾವು ಹೊಟ್ಟೆಕಿಚ್ಚು ಮಾಡಿಲ್ಲ, ಯಾರ ತುತ್ತನ್ನೂ ನಾವು ಕಸಿಯುವುದಿಲ್ಲ. ಬೇರೆಯವರಿಗೆ 4 ತುತ್ತು ಕೊಟ್ಟು ಒಂದು ತುತ್ತು ತಿನ್ನುವವರು ನಾವು. ನಾನು ಹೊರಗಿದ್ದರೂ ಹೋರಾಟ ಮಾಡುತ್ತೇನೆ, ಒಳಗಿದ್ದರೂ ಹೋರಾಟ ಮಾಡುತ್ತೇನೆ. ನಾವು ಪಂಚಮಸಾಲಿ ಸಮಾಜದ ಶಾಸಕರಷ್ಟೇ ಸಭೆ ನಡೆಸುವುದು ಬೇಡ. ನಮ್ಮ ಬೆಂಬಲದಿಂದ ಇನ್ನೂ ಹಲವಾರು ಶಾಸಕರು ಆಯ್ಕೆಯಾಗಿದ್ದಾರೆ. ಹೋರಾಟಕ್ಕೆ ಅವರೆಲ್ಲರ ಬೆಂಬಲ ಪಡೆಯೋಣ ಎಂದು ಹೆಬ್ಬಾಳಕರ್ ತಿಳಿಸಿದರು.

ಬಸವಣ್ಣ ಇರಲಿ, ಅಂಬೇಡ್ಕರ್ ಇರಲಿ, ಕನಕದಾಸರಿರಲಿ, ಏಸುಕ್ರಿಸ್ತ, ಪೈಗಂಬರ ಸೇರಿದಂತೆ ಎಲ್ಲರೂ ಸಮಾನತೆಯ ಸಂದೇಶ ಸಾರಿದ್ದಾರೆ. ನಮಗೂ ಸಮಾನತೆ ಬೇಕು. ಹಾಗಾಗಿ ಹೋರಾಟ ನಿರಂತರವಾಗಿರಲಿ. ಹೋರಾಟ ಮಾಡಿ ಹಕ್ಕು ಪಡೆಯೋಣ. ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಹಿಂದೆ ಹೋರಾಟದಲ್ಲಿ ಭಾಗಿಯಾಗಿದ್ದ ಅನೇಕರು ಈಗ ಬರುತ್ತಿಲ್ಲ ಎಂದು ಜನರು ನನ್ನ ಬಳಿ ಆಕ್ಷೇಪಿಸಿದ್ದಾರೆ. ಆದರೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅಧಿಕಾರದಲ್ಲಿದ್ದರೂ ನಮ್ಮ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹಿಂದಿನಿಂದಲೂ ಅವರು ನಮ್ಮ ಸಮಾಜದ ಜತೆಗಿದ್ದಾರೆ. ಅವರು ನಮಗೆ ನ್ಯಾಯ ಕೊಡಿಸುತ್ತಾರೆ ಎನ್ನುವ ವಿಶ್ವಾಸವಿದೆ. ನಮ್ಮ ಹೋರಾಟವನ್ನು ಮುಂದುವರಿಸೋಣ. ಡಿ.5ರಂದು ಪಂಚಮಸಾಲಿ ಶಾಸಕರ ಸಭೆ ನಡೆಸಿ ಮುಂದಿನ ಹೋರಾಟದ ಕುರಿತು ನಿರ್ಧರಿಸೋಣ. ಈ ಸಭೆಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳೂ ಬರಲಿ ಎಂದರು. 

 ಬಿಜೆಪಿ ಸರಕಾರ ನಮಗೆ ಮಾತು ಕೊಟ್ಟು ಮೋಸ ಮಾಡಿದ್ದರಿಂದ ನಮ್ಮ ಸಮಾಜದ ಅರ್ಧಕ್ಕಿಂತ ಹೆಚ್ಚು ಜನರು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ. ಯಾವುದೇ ಸರಕಾರ ಬಂದರೂ ಬೇಡಿಕೆ ಈಡೇರುವವರೆಗೂ ಹೋರಾಟ ಮಾಡಲಾಗುವುದು. ಲೋಕಸಭಾ ಚುನಾವಣೆ ಮುಗಿದರೆ ನಮ್ಮನ್ನು ಕೇಳುವುದಿಲ್ಲ. ಹಾಗಾಗಿ ಅಷ್ಟರೊಳಗೆ ಮೀಸಲಾತಿ ಕಲ್ಪಿಸುವಂತೆ ಗಡುವು ನೀಡಬೇಕಿದೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಅಧಿಕಾರದಲ್ಲಿದ್ದರೂ ನಮ್ಮ ಜೊತೆ ನಿಂತಿದ್ದಾರೆ. ಅವರ ಸಮಾಜ ನಿಷ್ಠೆಗೆ ನಾವೆಲ್ಲ ಮೆಚ್ಚಲೇ ಬೇಕು. ಅವರು ಒಬ್ಬ ಪ್ರಭಾವಿ ಮಂತ್ರಿ ಎನಿಸಿದ್ದಾರೆ. ಹಾಗಾಗಿ ಸಮಾಜದ ಕೆಲಸದಲ್ಲಿ ನಾವೆಲ್ಲ ಅವರ ಬೆಂಬಲಕ್ಕೆ ನಿಲ್ಲಬೇಕಿದೆ ಎಂದರು.

ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಅಡಿವೇಶ ಇಟಗಿ. ಆರ್.ಕೆ.ಪಾಟೀಲ, ರುದ್ರಗೌಡ ಪಾಟೀಲ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply