ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕುಯಿಲಾಡಿ ಕರೆ

2024ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಸಜ್ಜುಗೊಳಿಸುವ ಪ್ರಕ್ರಿಯೆ ದೇಶದಾದ್ಯಂತ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಪಕ್ಷ ನೀಡಿರುವ ಪ್ರಮುಖ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ಮೂಲಕ ಮಗದೊಮ್ಮೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಅತ್ಯಂತ ಹೆಚ್ಚಿನ ಅಂತರದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸಿಕೊಡುವ ಮಹತ್ಕಾರ್ಯ ಆಗಬೇಕಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಅಭಿವೃದ್ಧಿಯ ಚಿಂತನೆ ಇಲ್ಲದ ವಿಪಕ್ಷಗಳು ಕೇಂದ್ರದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರಲೇಬಾರದೆಂಬ ಒಂದೇ ಅಜೆಂಡಾವನ್ನು ಇಟ್ಟುಕೊಂಡು ಹತಾಶೆಯ ಹೋರಾಟವನ್ನು ನಡೆಸುತ್ತಿವೆ. ಪ್ರತಿಪಕ್ಷಗಳ ಈ ನಡೆಯನ್ನು ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ, ತಮ್ಮ ಬೂತ್, ಶಕ್ತಿಕೇಂದ್ರ, ಮಹಾ ಶಕ್ತಿಕೇಂದ್ರ, ಮಂಡಲ ಮತ್ತು ಜಿಲ್ಲಾ ಮಟ್ಟದಲ್ಲಿ ಯಾವ ರೀತಿಯ ಸಂಘಟನಾತ್ಮಕ ಕ್ರಮಗಳನ್ನು ಕೈಗೊಂಡು ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಬಹುದು ಎಂಬ ಬಗ್ಗೆ ಚಿಂತನೆ ನಡೆಸಿ ಕಾರ್ಯಪ್ರವೃತ್ತರಾಗುವ ಮೂಲಕ ಮಗದೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಆಡಳಿತದ ಚುಕ್ಕಾಣಿ ಹಿಡಿಯಲು ಅಳಿಲು ಸೇವೆ ಸಲ್ಲಿಸಬೇಕು ಎಂದು ಅವರು ಕರೆ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯನ್ನು ಅತ್ಯಂತ ನಾಜೂಕಾಗಿ ನಿರ್ವಹಿಸುವ ಮೂಲಕ ಮೀಸಲಾತಿಯಡಿ ಪಕ್ಷದ ಬೆಂಬಲಿತ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಆ.14ರಂದು ದೇಶ ವಿಭಜನೆಯಾದ ಕ್ಷಣವನ್ನು ಸ್ಮರಿಸಿಕೊಂಡು ಅದಕ್ಕಾಗಿ ಪ್ರಾಣತೆತ್ತವರನ್ನು ನೆನೆದು ಎಲ್ಲ ಮಂಡಲಗಳಲ್ಲಿ ದೇಶ ವಿಭಜನಾ ಕರಾಳ ದಿನವನ್ನು ಆಚರಿಸುವ ಜೊತೆಗೆ ಸಾಮಾಜಿಕ ಜಾಲತಾಣ ವಿಭಾಗ ಸಕ್ರಿಯಗೊಳಿಸುವ ಶಂಖನಾದ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಾತನಾಡಿ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನದ ಸಹಿತ ಸಾಮಾಜಿಕ ಜಾಲತಾಣ ಸಕ್ರಿಯಗೊಳಿಸುವ ಶಂಕನಾದ ಅಭಿಯಾನ, ವ್ಯಾಪಾರಿಗಳ/ಪ್ರಬುದ್ಧರ ಸಮ್ಮೇಳನ, ಹಿರಿಯ ಕಾರ್ಯಕರ್ತರ ಸಭೆ, ವೃತ್ತಿಪರರ ಸಮಾವೇಶ, ಮೋರ್ಚಾಗಳ ಸಂಯುಕ್ತ ಸಭೆ, ಕೀ ವೋಟರ್ಸ್ ಸಂಪರ್ಕ ಅಭಿಯಾನ, ಕಾರ್ಯಕರ್ತರ ಅನೌಪಚಾರಿಕ ಸಭೆ ಮತ್ತು ಮನೆ ಮನೆ ಬೇಟಿ ಮೂಲಕ ಕೇಂದ್ರ ಸರಕಾರದ ಸಾಧನೆಗಳ ಕರಪತ್ರ ವಿತರಣೆ ಇತ್ಯಾದಿ ಪ್ರಮುಖ ಕಾರ್ಯ ಚಟುವಟಿಕೆಗಳನ್ನು ಆದ್ಯತೆ ಮೇರೆಗೆ ಕಾರ್ಯಗತಗೊಳಿಸುವ ಮೂಲಕ ಮಗದೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಭರ್ಜರಿ ಗೆಲುವಿಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಪಕ್ಷ ನೀಡುವ ಎಲ್ಲ ಚಟುವಟಿಕೆಗಳನ್ನು ಅತ್ಯಂತ ಸಮರ್ಪಕವಾಗಿ ಕಾರ್ಯಗತಗೊಳಿಸುವ ಹೆಗ್ಗಳಿಕೆಯ ಜೊತೆಗೆ ಕಳೆದ ಚುನಾವಣೆಯಲ್ಲಿ ಪ್ರತಿಶತ ನೂರರ ಸಾಧನೆಗೈದ ದಾಖಲೆ ಉಡುಪಿ ಜಿಲ್ಲೆಗಿದೆ.

ದೊಡ್ಡ ಯೋಜನೆ ಹಾಕಿಕೊಂಡಾಗ ಒಂದೊಂದೇ ಹೆಜ್ಜೆ ಮೂಲಕ ಗುರಿ ತಲುಪಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಮುಖಂಡರು ಮತ್ತು ಸಮಸ್ತ ಕಾರ್ಯಕರ್ತರ ಶ್ರಮ ಅಭಿನಂದನೀಯ. ಇದೇ ಹುಮ್ಮಸ್ಸಿನಿಂದ ಲೋಕಸಭೆ ಸಹಿತ ಎಲ್ಲ ಚುನಾವಣೆಗಳನ್ನು ಸಂಘಟನಾ ಸಾಮರ್ಥ್ಯದಿಂದ ಎದುರಿಸಿ, ಸಂಘಟಿತ ಪ್ರಯತ್ನದ ಮೂಲಕ ಗೆಲುವು ಸಾಧಿಸಲು ಎಲ್ಲರೂ ಸಜ್ಜಾಗೋಣ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಶಾಸಕರಾದ ಯಶ್ಪಾಲ್ ಎ. ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್ ಸಹಿತ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಯೋಜಕರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply