ವಿಶ್ವದ ದೈತ್ಯ ಕಂಪೆನಿಗಳಲ್ಲಿ ಭಾರತ ಮೂಲದವರು ಉನ್ನತೆ ಹುದ್ದೆಯಲ್ಲಿದ್ದರೂ ಸ್ವದೇಶದಲ್ಲಿ ದೈತ್ಯ ಕಂಪೆನಿಗಳನ್ನು ಹುಟ್ಟುಹಾಕುವಲ್ಲಿ ವಿಫಲ~ ರಾಜನಾಥ ಸಿಂಗ್ ಬೇಸರ

ಉಡುಪಿ: ಗೂಗಲ್‌, ಮೈಕ್ರೋಸಾಫ್ಟ್‌, ಅಡೊಬಿ, ಐಬಿಎಂನಂತಹ ವಿಶ್ವದ ದೈತ್ಯ ಕಂಪೆನಿಗಳಲ್ಲಿ ಭಾರತ ಮೂಲದವರು ಉನ್ನತೆ ಹುದ್ದೆಯಲ್ಲಿದ್ದರೂ ಸ್ವದೇಶದಲ್ಲಿ ದೈತ್ಯ ಕಂಪೆನಿಗಳನ್ನು ಹುಟ್ಟುಹಾಕುವಲ್ಲಿ ವಿಫಲವಾಗಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಬೇಸರ ಹೊರಹಾಕಿದರು.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಶುಕ್ರವಾರ ನಡೆದ ಮಾಹೆ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವಕ್ಕೆ ಭಾರತದ ಶಕ್ತಿ ಪರಿಚಯಿಸಿರುವ ಯುವಶಕ್ತಿಯು ದೇಶದಲ್ಲಿ ಹೊಸ ಕಂಪನಿಗಳನ್ನು ಸ್ಥಾಪಿಸಿ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕು ಎಂದರು.

ದಶಕಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. 2014ರ ಹಿಂದೆ 400 ರಿಂದ 500 ಸ್ಟಾರ್ಟ್‌ಅಪ್‌ಗಳು ಮಾತ್ರ ಇದ್ದವು. ಪ್ರಸ್ತುತ 70 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಆರಂಭವಾಗಿವೆ. 100ಕ್ಕೂ ಹೆಚ್ಚು ಯುನಿಕಾರ್ನ್‌ ಸಂಸ್ಥೆಗಳು ಜನ್ಮತಾಳಿವೆ ಎಂದರು.

ಕೃಷಿ, ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ. ಮುಂದಿನ 5 ವರ್ಷಗಳಲ್ಲಿ ಭಾರತ ವಿಶ್ವದ ಪ್ರಬಲ ಮೂರು ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ಜಾಗತಿಕ ಸಂಸ್ಥೆಯಾಗಿರುವ ಮೊರ್ಗನ್ ಸ್ಟ್ಯಾನ್ಲಿ ಅಭಿಪ್ರಾಯಪಟ್ಟಿದೆ ಎಂದು ಹೇಳಿದರು. ಯುವ ಜನತೆ ಸದಾ ಹೊಸತನದ ಬಗ್ಗೆ ಚಿಂತಿಸಬೇಕು, ತಂತ್ರಜ್ಞಾನ ಕ್ಷೇತ್ರದಲ್ಲಿ ಆವಿಷ್ಕಾರಕ್ಕೆ ಒತ್ತು ನೀಡಬೇಕು. ಸ್ಟಾರ್ಟ್‌ಅಪ್‌ಗಳ ಸ್ಥಾಪನೆಗೆ ಮುಂದಾಗಬೇಕು, ಸವಾಲುಗಳನ್ನು ಸ್ವೀಕರಿಸಿ ಧೈರ್ಯದಿಂದ ಮುನ್ನುಗಿದ್ದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಡಾ.ಟಿಎಂಎ ಪೈಗಳ ದೂರದೃಷ್ಟಿತ್ವದ ಫಲವಾಗಿ ಮಣಿಪಾಲ ಸಮೂಹ ಸಂಸ್ಥೆಗಳು ಜಾಗತಿಕ ಮಟ್ಟಕ್ಕೆ ಬೆಳೆದಿವೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಜತೆಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿವೆ. ಸತ್ಯ ನಾದೆಲ್ಲ ಅವರಂತಹ ದೈತ್ಯ ಪ್ರತಿಭೆಯನ್ನು ನೀಡಿರುವ ಮಣಿಪಾಲ ಸಂಸ್ಥೆಯಿಂದ ಭವಿಷ್ಯದಲ್ಲಿ ಮತ್ತಷ್ಟು ಪ್ರತಿಭೆಗಳು ಹೊರಬರುವ ವಿಶ್ವಾಸವಿದೆ ಎಂದರು.

ದೇಶೀಯ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಭಾರತದ ವಿಶ್ವವಿದ್ಯಾಲಯಗಳು ವಿಶ್ವದ ಮುಂಚೂಣಿ ವಿವಿಗಳ ಸಾಲಿನಲ್ಲಿ ನಿಲ್ಲಲಿವೆ ಎಂದರು. ಶಿಕ್ಷಣದಲ್ಲಿ ಜ್ಞಾನದ ಜತೆಗೆ ಸಂಸ್ಕಾರಯುತ ಶಿಕ್ಷಣ ಹಾಗೂ ವಿವೇಕ ಸಿಗಬೇಕು. ಜ್ಞಾನ ಹಾಗೂ ವಿವೇಕ ದೇಶದ ಅಭಿವೃದ್ದಿಗೆ ಪೂರಕವಾಗಿ ಬಳಕೆಯಾಗಬೇಕು. ಶಿಕ್ಷಣ ಮನುಷ್ಯನನ್ನು ಸದಾ ಜಾಗೃತವಾಗಿರಿಸುತ್ತದೆ. ಜ್ಞಾನದ ಹಿಂದೆ ಘನತೆ, ಗೌರವ, ಆದರಗಳು ತಾನಾಗೇ ಬರುತ್ತವೆ. ಶಿಕ್ಷಣ ಅತ್ಯಂತ ಪ್ರಬಲ ಅಸ್ತ್ರವಾಗಿದ್ದು ಇಡೀ ಜಗತ್ತನ್ನು ಗೆಲ್ಲಬಹುದು ಎಂದರು.

ಜಗತ್ತು ಬದಲಾವಣೆಯ ಪಥದಲ್ಲಿ ಸಾಗುತ್ತಿದ್ದು ‘ಜ್ಞಾನ’ ಸಂಪತ್ತು ದೇಶದ ಪ್ರಗತಿ ನಿರ್ಧರಿಸುತ್ತಿದೆ. ವಿಶ್ವದಲ್ಲೇ ಬಹುದೊಡ್ಡ ಯುವ ಸಂಪತ್ತು ಹೊಂದಿರುವ ಭಾರತ ಯುವಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾಚೀನ ಕಾಲದಲ್ಲಿ ಭಾರತ ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿಗೆ ನಂಬರ್‌ ಒನ್ ದೇಶವಾಗಿತ್ತು. ಆದರೆ, ಕೆಲವರ ಗುಲಾಮಿತನದ ಮನಸ್ಥಿತಿಯಿಂದಾಗಿ ಪ್ರಾಚೀನ ಭಾರತದ ಸಮೃದ್ಧ ಇತಿಹಾಸವನ್ನು ಮರೆಮಾಚ ಲಾಯಿತು.

ಜಗತ್ತಿಗೆ ಶೂನ್ಯವನ್ನು ಪರಿಚಯಿಸಿದವರು, ಗಣಿತ, ತತ್ವಜ್ಞಾನ ಬೋಧಿಸಿದವರು ಭಾರತೀಯರು. ಆರ್ಯಭಟ, ಬ್ರಹ್ಮಗುಪ್ತ, ಚರಕ, ಸುಶ್ರುತ, ನಾಗಾರ್ಜುನ ಅವರಂಥಹ ಮಹಾನ್‌ ಜ್ಞಾನಿಗಳು ಈ ನೆಲದಲ್ಲಿ ಹುಟ್ಟಿದವರು ಎಂಬ ಹೆಮ್ಮೆ ಇದೆ ಎಂದರು.

 
 
 
 
 
 
 
 
 
 
 

Leave a Reply