ಶಿಕ್ಷಣವು ಕೇವಲ ಅಂಕ ಪಡೆಯುವುದಕ್ಕೆ ಸೀಮಿತವಾಗಿರ ಬಾರದು ~ ಡಾ.ಆಶೋಕ್ ಕಾಮತ್‌

ಚೈಲ್ಡ್ಲೈನ್ 1098, ಉಡುಪಿ ಇವರ ವತಿಯಿಂದ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ಲೈನ್ ಸೇ ದೋಸ್ತಿ ಸಪ್ತಾಹದ ಪ್ರಯುಕ್ತ ಮಕ್ಕಳಿಗೆ “ಕೋವಿಡ್-19 ಹಾಗೂ ಆನ್‌ಲೈನ್ ತರಗತಿಯ ನಂತರ ಮರಳಿ ಶಾಲೆಗೆ ಹೊಂದಿಕೊಳ್ಳಲು ಆಗುತ್ತಿರುವ ಸಮಸ್ಯೆಯ ಕುರಿತು ಚರ್ಚಾ ಸ್ಪರ್ಧೆ  ಮತ್ತು ಮಾಹಿತಿ ಕಾರ್ಯಕ್ರಮನ್ನು ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಮಲ್ಪೆ ಇಲ್ಲಿ ಹಮ್ಮಿಕೊಳ್ಳಲಾಯಿತು. 
 ಚೈಲ್ಡ್ಲೈನ್ 1098 ಉಡುಪಿಯ ಸಹ ನಿರ್ದೇಶಕರಾದ ಶ್ರೀಯುತ ಗುರುರಾಜ್ ಭಟ್‌ರವರು ನೆರೆದಿರುವ ಸರ್ವರನ್ನು  ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಫ್‌ಲೈನ್ ಹಾಗೂ ಆನ್‌ಲೈನ್ ತರಗತಿಗಳ ಅನುಕೂಲ ಮತ್ತು ಅನಾನುಕೂಲಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸಲುವಾಗಿ ಚರ್ಚಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. 
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಯಟ್ ಉಪಪ್ರಾಂಶುಪಾಲರಾದ ಶ್ರೀಯುತ ಡಾ.ಆಶೋಕ್ ಕಾಮತ್‌ರವರು ಆಫ್‌ಲೈನ್-ಆನ್‌ಲೈನ್ ತರಗತಿಗಳ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಮಾಹಿತಿ ನೀಡಿವುದರ ಜೊತೆಗೆ ಶಿಕ್ಷಣವು ಕೇವಲ ಅಂಕ ಪಡೆಯುವುದಕ್ಕೆ ಸೀಮಿತವಾಗಿರದೇ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ದಾರಿ ಮಾಡಿ ಕೊಡಬೇಕು ಹಾಗೂ ಮಕ್ಕಳು ತಾವು ಸ್ವ ಇಚ್ಛೆಯಿಂದ ಕಲಿತು ಸಮಾಜಕ್ಕೆ  ಪ್ರೇರಣೆಯಾಗಬೇಕು ಎಂದು ತಿಳಿಸಿದರು. 
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಯುತ ಮಹೇಶ್‌ ಕುಮಾರ್‌ರವರು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ಇಂತಹ ಕಾರ್ಯಕ್ರಮದ ಮೂಲಕ ಪ್ರೇರಪಣೆಯನ್ನು ನೀಡಬೇಕೆಂದು ತಿಳಿಸಿದರು. 
ಶಾಲಾಭಿವೃದ್ಧಿ ಸದಸ್ಯ ವೀರಣ್ಣ ಕುರುವತ್ತಿ ಗೌಡ್ರ ,  ಸಿದ್ದನಗೌಡ ಪಾಟೀಲರ ಲಾವಣಿ ಹಾಡನ್ನು ಹಾಡಿ ಮಕ್ಕಳನ್ನು ರಂಜಿಸಿದರು. ನಂತರ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕಿಟ್‌ಗಳನ್ನು ನೀಡಲಾಯಿತು.  
ಈ ಕಾರ್ಯಕ್ರಮದಲ್ಲಿ ಶಾಲಾ ಹಳೆವಿದ್ಯಾರ್ಥಿ ಸಂಘದ  ಅಧ್ಯಕ್ಷರಾದ ಶ್ರೀಯುತ ಗೋಪಾಲ್ ಸಿ ಬಂಗೇರ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯವರಾದ ಶ್ರೀಯುತ ಸುರೇಶ್ ಕರ್ಕೆರ, ಶಾಲಾ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಹಾಗೂ ಚೈಲ್ಡ್ಲೈನ್ 1098 ಉಡುಪಿ ಸಿಬ್ಬಂದಿಗಳು ಉಪಸ್ಥಿತರಿದ್ದರು. 
ಈ  ಕಾರ್ಯಕ್ರಮವನ್ನು ಕುಮಾರಿ ತ್ರಿವೇಣಿಯವರು ನಿರೂಪಿಸಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀಮತಿ ಸಂಧ್ಯಾರವರು ವಂದಿಸಿದರು.
 
 
 
 
 
 
 
 
 
 
 

Leave a Reply