ನಡುರಾತ್ರಿ ವನದಲ್ಲಿ ದೇವಿಯ ಒಡ್ಡೋಲಗ.. ಬೆಚ್ಚಿಬಿದ್ದ ಬಾಲಕ. ~ಪಿ.ಲಾತವ್ಯ.ಆಚಾರ್ಯ

1890 ರ ದಶಕದ ಘಟನೆ.
ಉಡುಪಿಯ ಬಂಟಕಲ್ ಸಮೀಪದ ಪಂಜಿಮಾರು ಎಂಬ ಗ್ರಾಮದಲ್ಲಿ ಶ್ರೀಸೋದೆವಾದಿರಾಜ ಮಠದ ಶಾಖಾ ಮಠವಿದೆ.ಊರ ಮಂದಿ ಈ ಮಠವನ್ನು ಪಂಜಿಮಾರು ಮಠವೆಂದೇ ಕರೆಯುತ್ತಿದ್ದರು.
ಅವಧೂತರು,ದೈವಾಂಶಸಂಭೂತರು ಎಂದು ಪ್ರಸಿದ್ದರಾಗಿದ್ದ ಶ್ರೀ ವೃಂದಾವನ ಆಚಾರ್ಯರ ಕಾಲದ ಈ ಮಠವು ರಸ್ತೆಯಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದ್ದು ತೆಂಗು,
ಅಡಿಕೆತೋಟ ಕೃಷಿಭೂಮಿ ಹಾಗೂ ಪುಟ್ಟ ವನಸಿರಿಯ ನಡುವೆ ಇದೆ.

1890 ರದಶಕದಲ್ಲಿ ಶ್ರೀ ಸೋದೆ ಮಠದ ಅಂದಿನ ಯತಿಗಳಾದ ಶ್ರೀವಿಶ್ವಾಧೀಶತೀರ್ಥರು ಪ್ರಸಿದ್ದ ಪಂಡಿತರು ಮಹಾ ವಾಗ್ಮಿಗಳು ಎಂದು ಹೆಸರಾಗಿದ್ದರು.ಚೆನ್ನೈಯಲ್ಲಿ ಜರಗಿದ ಸರ್ವಧರ್ಮ ಸಮ್ಮೇಳನದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸರ್ವೋಚ್ಚ ಮಹಿಳೆಯಾದ ವಿಕ್ಟೋರಿಯಾ ರಾಣಿಯು ವಿಶ್ವಾಧೀಶರ ಪಾಂಡಿತ್ಯಕ್ಕೆ ನಿಬ್ಬೆರಗಾಗಿದ್ದರು.ಅದೇ ಸಂದರ್ಭದಲ್ಲಿ ಶ್ರೀಪಾದರ ಅಪ್ರತಿಮ ಪ್ರತಿಭೆ,
ಜ್ಞಾನಭಂಡಾರವನ್ನು ಕಂಡು ಚಿನ್ನದ ಸರಿಗೆಯಿಂದ ಶ್ರೀಪಾದರ ಕುರಿತಾಗಿ ಅಭಿನಂದನೆಯ ಅಕ್ಷರಗಳನ್ನು ಬರೆದು ಸಮ್ಮಾನ ಪತ್ರ ನೀಡಿ ಶ್ರೀಪಾದರನ್ನು ಗೌರವಿಸಿದ್ದರು.

ವಿಶ್ವಾಧೀಶರ ಪೂರ್ವಜರು ಲಕ್ಷ್ಮೀದೇವಿಯ ಮಹಾನ್ ಉಪಾಸಕರಾಗಿದ್ದರು.
ಮಹಾಯಾಗಗಳ ಪೂರ್ಣಾಹುತಿಯ ಸಂದರ್ಭದಲ್ಲಿ ಸಾಕ್ಷಾತ್ ದೇವಿಯೇ ಬಂದು ಇವರ ಪೂರ್ವಜರು ಅರ್ಪಿಸುತ್ತಿದ್ದ ಹವಿಸ್ಸನ್ನು ಸ್ವೀಕರಿಸುತ್ತಿದ್ದಳು ಎಂದು ಪೂರ್ವಜರ ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.

ಹೀಗಾಗಿ ಶ್ರೀಪಾದರು ಏಕಪಾಠಿ.ಯಾವುದೇ ಕ್ಲಿಷ್ಟ ವಿಷಯವಿರಲಿ,ಗ್ರಂಥಗಳಿರಲಿ ಒಂದು ಭಾರೀ ಓದಿದರೆ ಪೂರ್ಣ ಕಂಠಪಾಠವಾಗುತ್ತಿತ್ತು.
ಅಂತಹ ಸಿದ್ದಿ,ಧೀಶಕ್ತಿ ಶ್ರೀಪಾದರಿಗೆ ಒಲಿದಿತ್ತು. ಸರಸ್ವತೀ ದೇವಿಯು ಸಂಪೂರ್ಣ ಹರಸಿದ್ದಳು.

ಉಡುಪಿಗೆ ಶ್ರೀಪಾದರು ಬಂದಾಗ ಹೆಚ್ಚಾಗಿ ಪಂಜಿಮಾರು ಮಠದಲ್ಲಿ ಅವರ ವಾಸ್ತವ್ಯ.ಹಸಿರಿನಿಂದ ಆವೃತವಾಗಿ ಪುಟ್ಟವನದಂತೆ ಕಂಗೊಳಿಸುತ್ತಿದ್ದ ಅಲ್ಲಿನ ವಾತಾವರಣ ಶ್ರೀಪಾದರಿಗೆ ತುಂಬಾ ಇಷ್ಟ.ವಿಶೇಷ ಆಕರ್ಷಣೆಯೂ ಕೂಡಾ.
ಪೂಜೆ,ಪಾಠ,ಪ್ರವಚನ ಎಲ್ಲವೂ ಇಲ್ಲೇ ಸಾಗುತ್ತಿತ್ತು.

ಶ್ರೀವಿಶ್ವಾಧೀಶತೀರ್ಥರಿಗೆ ಅವರ ಪೂರ್ವಾಶ್ರಮದ ಸಹೋದರರಾದ ಶ್ರೀವೆಂಕಟ್ರಮಣ ಆಚಾರ್ಯರ ಮೇಲೆ ವಿಶೇಷ ಅಭಿಮಾನ.
ಶ್ರೀವೆಂಕಟ್ರಮಣ ಆಚಾರ್ಯರಿಗೂ ಶ್ರೀಪಾದರ ಮೇಲೆ ಅಪಾರ ಗೌರವ.
ಜೊತೆಯಾಗಿಯೇ ಇಬ್ಬರ ಅಧ್ಯಯನವೂ ನಡೆಯುತ್ತಿತ್ತು.ಯಾವಾಗಲೂ ಜೊತೆಯಾಗೇ ಇರುತ್ತಿದ್ದರು.ಪ್ರತಿದಿನ ಅವರಿಬ್ಬರೂ ರಾತ್ರಿ ಬಹಳ ಹೊತ್ತಿನವರೆಗೆ ಅಧ್ಯಯನ ನಡೆಸಿದ ನಂತರ ದೇವರ
ಗುಡಿಯ ಮುಂಭಾಗದ ಚಾವಡಿಯ ಮೇಲ್ಭಾಗದಲ್ಲಿ ಶ್ರೀಪಾದರು ಮಲಗುತ್ತಿದ್ದರು.ಚಾವಡಿಯ ಕೆಳಭಾಗದಲ್ಲಿ ಸಹೋದರ ಶ್ರೀವೆಂಕಟ್ರಮಣ ಆಚಾರ್ಯ ಹಾಗೂ ಅವರ ಮಗ ಮಲಗುತ್ತಿದ್ದರು.

ಆ ದಿನ ಆಶ್ವಯುಜ ಶುಕ್ಲ ಪೂರ್ಣಿಮಾ.ಕೋಜಾಗರೀ ಲಕ್ಷ್ಮೀಪೂಜೆಯ ದಿನ.
ಅಂದು ನಡುರಾತ್ರಿಯಲ್ಲಿ ಯತಿಗಳು ಶ್ರೀಲಕ್ಷ್ಮೀನಾರಾಯಣ ದೇವರಿಗೆ ಪೂಜೆ ಸಲ್ಲಿಸಿ ಆಗಷ್ಟೇ ಮಲಗಲು ತೆರಳಿದ್ದರು.

ಅಂದುನಡುರಾತ್ರಿ. ಸುಮಾರು ಒಂದೂವರೆ ಗಂಟೆಯ ಸಮಯ. ಆಚಾರ್ಯರ ಮಗ ಶೌಚಕ್ಕಾಗಿ ಎದ್ದು ಮಠದ ಹೆಬ್ಬಾಗಿಲಿನಿಂದ ನೂರಡಿ ಹೊರಭಾಗದಲ್ಲಿದ್ದ ಪಾಡಿಯತ್ತ ತೆರಳಿದ್ದ.
ಆ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು.

ಮಠದ ಬಾಗಿಲನ್ನು ದಾಟಿ ಒಂದೈವತ್ತು ಅಡಿ ಮುಂದೆ ಬಂದಾಗ ಪುಟ್ಟವನದ ನಡುವಿನ ದೃಶ್ಯ ಆತನ ಮನಸೆಳೆಯಿತು.ಅಲ್ಲಿ
ಹತ್ತೈವತ್ತು ಮರಗಿಡಗಳ ನಡುವೆ ನೂರಾರು ದೀಪಗಳು ಜಗಮಗಿಸುತ್ತಿದ್ದವು.ದೀಪಗಳ ನಡುವೆ ಬಗೆಬಗೆಯ ಪುಷ್ಪಗಳಿಂದ ಹೆಣೆದ ಪುಟ್ಟ ಉಯ್ಯಾಲೆಯಲ್ಲಿ ಚತುರ್ಭುಜಗಳನ್ನು ಧರಿಸಿ ಮಿನುಗುವ ಜರತಾರಿ ಸೀರೆಯಲ್ಲಿ ಮುತ್ತು,ರತ್ನ ವಜ್ರ,ವೈಢೂರ್ಯ,ಆಭರಣ,ಹಾರಗಳಿಂದ ಅಲಂಕೃತಗೊಂಡ ಮಹಾಲಕ್ಷ್ಮಿಯು ಅಸಂಖ್ಯ ಭಕ್ತರ ನಡುವೆ ಕುಳಿತಿರುವ ದೃಶ್ಯವನ್ನು ಆಚಾರ್ಯರ ಸುಪುತ್ರ ಕಂಡು ತಬ್ಬಿಬ್ಬಾದ.ನಡುರಾತ್ರಿಯ ಸಮಯ.ಜೊತೆಗೆ ನಿದ್ದೆಯ ಮಂಪರು..ಆತನಿಗೆ ಎಲ್ಲಿದ್ದೇನೆ..ಏನಾಗುತ್ತಿದೆ ಒಂದೂ ಅರಿವಾಗಲಿಲ್ಲ.
ನಾಟಕವೋ ಅಥವಾ ಯಕ್ಷಗಾನವೋ ಏನಿರಬಹುದು ತಲೆಕೆರೆದುಕೊಳ್ಳಲಾರಂಭಿಸಿದ.ದೇವಿಯ ಸುತ್ತಲೂ ಕುಳಿತಿದ್ದ ಭಕ್ತರು ಶುದ್ಧ ಕಂಠದಿಂದ ಮಧುರವಾಗಿ ದೇವಿಯನ್ನು ಸ್ತುತಿಸುತ್ತಿದ್ದರು.ಕೆಲ ಕ್ಷಣದಲ್ಲಿ ಪೂಜೆ ಆರಂಭ ವಾಯಿತು.ಬಹುದೂರದ ತನಕ ಪರಿಮಳ ಬೀರುವ ಬಣ್ಣಬಣ್ಣದ ಹೂಗಳಿಂದ ದೇವಿಯ ಪಾದಕಮಲಗಳಿಗೆ ಅರ್ಚನೆ ಸಲ್ಲುತ್ತಿತ್ತು.
ನೆರೆದಿದ್ದ ಭಕ್ತಸ್ತೋಮ ಸಂತೋಷದಿಂದ ಉದ್ಘೋಷ ಹಾಕುತ್ತಾ ಆನಂದಬಾಷ್ಪ ಸುರಿಸುತ್ತಿದ್ದರು.ಪೂಜೆ ಜರಗುತ್ತಿದ್ದ ಸ್ಥಳದ ಪಕ್ಕದಲ್ಲೇ ಬೃಹತ್ ವೃಕ್ಷವೊಂದರ ಎಡೆಯಲ್ಲಿ ಬಾಲಕ ಎಲ್ಲವನ್ನೂ ವೀಕ್ಷಿಸುತ್ತಿದ್ದ.ವಿವಿಧ ರೀತಿಯ ಆರತಿಗಳನ್ನು ಸಲ್ಲಿಸಿದ ನಂತರ ಪೂಜೆಯು ಮುಕ್ತಾಯವಾಯಿತು.
ಪೂಜೆ ಮುಗಿಯುತ್ತಿದ್ದಂತೆ ದೇವಿಯ ಮುಂಭಾಗದಲ್ಲಿ ದೊಡ್ಡದೊಡ್ಡ ಪಾತ್ರೆಗಳಲ್ಲಿ ನೈವೇದ್ಯಗಳನ್ನು ಇರಿಸಲಾಗಿತ್ತು.ಇವೆಲ್ಲವನ್ನೂ ನೆರೆದಿದ್ದ ಭಕ್ತರಿಗೆ ವಿತರಿಸುವ ಕಾರ್ಯ ಆರಂಭವಾಯಿತು.ಸೇರಿದ್ದ ಪ್ರತಿಯೊಬ್ಬ ಭಕ್ತನಿಗೂ ನೈವೇದ್ಯದ ಪ್ರಸಾದವನ್ನು ಬೊಗಸೆ ತುಂಬಾ ನೀಡಲಾಗುತ್ತಿತ್ತು.ಪ್ರಸಾದ ವಿತರಿಸುತ್ತಿದ್ದ ವ್ಯಕ್ತಿಯೊಬ್ಬ ಮರದ ಎಡೆಯಲ್ಲಿ ನಿಂತಿದ್ದ ಆಚಾರ್ಯರ ಮಗನನ್ನು ಕಂಡು ತಕ್ಷಣ ಆತನ ಬಳಿಗೆ ಹೋಗಿ ಪ್ರಸಾದ ನೀಡಿದ.ಪ್ರಸಾದ ಸ್ವೀಕರಿಸಿದ ಆಚಾರ್ಯರ ಮಗ ಮಠದೊಳಗೆ ಓಡುತ್ತಾ ಬಂದು ತಂದೆಯನ್ನು ಎಬ್ಬಿಸಿ ನಡೆದ ಘಟನೆಯನ್ನು ತಿಳಿಸಿದ.ಮಗನ ಕೈಯಲ್ಲಿ ಅತ್ಯಂತ ಪರಿಮಳ ಬೀರುತ್ತಿದ್ದ ಪ್ರಸಾದದ ಸುವಾಸನೆಗೆ ಶ್ರೀಪಾದರು ಯೆಚ್ಚೆತ್ತರು. ಆಶ್ಚರ್ಯಚಕಿತರಾದರು. ಅ ಕ್ಷಣವೇ ಶ್ರೀಪಾದರು ಸಹೋದರ ವೆಂಕಟ್ರಮಣ ಆಚಾರ್ಯರ ಸುಪುತ್ರನ ಜೊತೆ ದೇವಿಯ ಪೂಜೆ ಜರಗುತ್ತಿದ್ದ ಸ್ಥಳಕ್ಕೆ ಧಾವಿಸಿದರು.ಆದರೆ ಪುಟ್ಟ ವನದಲ್ಲಿ ಹುಣ್ಣಿಮೆಯ ಬೆಳದಿಂಗಳು ಹೊರತು ಬೇರೇನೂ ಇರಲಿಲ್ಲ.
ದೇವಿ,ಪೂಜೆ,ಭಕ್ತರು ಪ್ರಸಾದ ಎಲ್ಲವೂ ಅದೃಶ್ಯವಾಗಿತ್ತು.ಆಚಾರ್ಯರ ಸುಪುತ್ರ ನಡುರಾತ್ರಿಯ ಈ ಘಟನೆಯಿಂದ ಬೆಚ್ಚಿಬಿದ್ದ. ಕೆಲಕ್ಷಣ ಕೈ ಕಾಲು ಇಡೀ ದೇಹವೇ ತಣ್ಣಗಾದಂತೆ ಬಾಸವಾಯಿತು.ಆತ ಸ್ಥಂಭೀಭೂತನಾದ. ನಾಲಗೆಯೇ ಹೊರಳಲಿಲ್ಲ.ಒಂದು ಕ್ಷಣದ ಮೊದಲು ನೋಡಿದ ಅಪೂರ್ವ ದೃಶ್ಯಾವಳಿಗಳು ಎಲ್ಲವೂ ಮಾಯವಾಗಿತ್ತು.

ನಡೆದ ಘಟನೆ ಎಲ್ಲವನ್ನೂ ಆಚಾರ್ಯರ ಮಗ ಒಂದೊಂದಾಗಿ ವಿವರಿಸಿದ.
ಶ್ರೀಪಾದರ ದಿವ್ಯದೃಷ್ಟಿಗೆ ಎಲ್ಲವೂ ಗೋಚರವಾಯಿತು. ಪೂರ್ವಜರ ದೇವಿ ಉಪಾಸನೆ ಸ್ಮರಣೆಗೆ ಬಂದಿತು.ದೇವಿಯು ಉಯ್ಯಾಲೆ ತೂಗುತ್ತಿದ್ದ ಸ್ಥಳದಲ್ಲೇ ಮರುದಿನದ ಪೂಜೆಯು ಜರಗಿತು.ಲಕ್ಷ್ಮೀ ದೇವಿ ಪ್ರೀತ್ಯರ್ಥ ಅನೇಕ ಹೋಮ ಹವನಾಧಿಗಳು ಜರಗಿದವು.
ಮುಂದೆ ಕೆಲವರ್ಷಗಳಲ್ಲೇ ಶ್ರೀವೆಂಕಟ್ರಮಣ ಆಚಾರ್ಯರ ಸುಪುತ್ರ
ಶ್ರೀವಿಶ್ವೇ0ದ್ರತೀರ್ಥರೆಂದು ಶ್ರೀವಿಶ್ವಾಧೀಶರಿಂದ ಅಭಿಷಿಕ್ತರಾಗಿ ಶ್ರೀಸೋದೆ ವಾದಿರಾಜ ಮಠದ 34ನೇ ಪೀಠಾಧಿಪತಿಯಾಗಿ ನೇಮಿತರಾದರು.ವೈದಿಕ ವಾಂಗ್ಮಯದಲ್ಲಿ,ವೇದಾಂತ ಶಾಸ್ತ್ರದಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಾಧನೆ ನಡೆಸಿ ಉಡುಪಿ ಸಮೀಪದ ಇನ್ನಂಜೆಯಲ್ಲಿ ಬಹುದೊಡ್ಡ ವಿದ್ಯಾ ಸಂಸ್ಥೆಯನ್ನೂ ಕೂಡಾ ಪ್ರಾರಂಭಿಸಿದರು.ಮೂರು ಭಾರೀ ಶ್ರೀಕೃಷ್ಣಪೂಜಾ ಕೈಂಕರ್ಯವನ್ನು ನೆರವೇರಿಸಿದ ಶ್ರೀಪಾದರು ಸ್ವಭಾನು ಸಂ!ರದ ಆಶ್ವೀಜ ಶುದ್ಧ ನವಮಿ 1943ನೇ ಇಸವಿಯಂದು ಹರಿಪಾದ ಸೇರಿದರು.

ಆತ್ಮೀಯರೇ,
ಭಾವೀಸಮೀರ ಶ್ರೀ ವಾದಿರಾಜಗುರುಸಾರ್ವಭೌಮರ ಆರಾಧನೆಯ ಪರ್ವಕಾಲ.
ಶ್ರೀಸೋದೆವಾದಿರಾಜ ಮಠದ ಕೀರ್ತಿಶೇಷ ಶ್ರೀವಿಶ್ವೋತ್ತಮತೀರ್ಥರು ನಮ್ಮ ತಂದೆ ಶ್ರೀವಿಠಲಾಚಾರ್ಯರಲ್ಲಿ ಹಾಗೂ ಕೆಲ ಆಪ್ತರಲ್ಲಿ ಹೇಳಿದ ಈಕಥೆಯನ್ನು ಯಥಾವತ್ತಾಗಿ ಈ ಶುಭಸಂದರ್ಭದಲ್ಲಿ ನಿಮ್ಮ ಮುಂದಿರಿಸಿದ್ದೇನೆ.
ಶ್ರೀವಾದಿರಾಜಗುರುಸಾರ್ವಭೌಮರ ಹಾಗೂ ಶ್ರೀಭೂತರಾಜರ ವಿಶೇಷ ಅನುಗ್ರಹ ಸರ್ವರಿಗೂ ಕರುಣವಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ.

ಆತ್ಮೀಯರೇ,
ಈ ಪರಂಪರೆಯ ಪರಮಪೂಜ್ಯ ಶ್ರೀವಿಶ್ವಾಧೀಶತೀರ್ಥ ಶ್ರೀಪಾದರು,
ಪರಮಪೂಜ್ಯ ಶ್ರೀವಿಶ್ವೇ0ದ್ರತೀರ್ಥ ಶ್ರೀಪಾದರು, ಪರಮಪೂಜ್ಯ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರು ಈ ಮೂರೂ ಯತಿಗಳು ಪೂರ್ವಾಶ್ರಮದಲ್ಲಿ
ನಮ್ಮ ವಂಶಜರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ.

I ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್ |
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್ I
I ವಿಶ್ವಾಧೀಶಯತಿಂ ವಂದೇ ರಾಜಾದಿಭಿಃ ಸುಮಾನಿತಮ್
ಜಾತಂ ವೃಂದಾವನಾಚಾರ್ಯೈಃ
ಹನುಮತ್ಸಕ್ತಮಾನಸಮ್ I
I ವಿಶ್ವಾಧೀಶಕರಾಬ್ಜೋತ್ಥಂ
ನಿರ್ಮಿತಾನೇಕಸತ್ಕೃತಿಮ್
ಶ್ರೀವಿಶ್ವೇಂದ್ರಗುರುಂ ವಂದೇ
ಭವರೋಗನಿವಾರಕಮ್ I
I ಕೋಲವ್ಯಾಸ ಹಯಗ್ರೀವ ಪದಕಂಜ ಮಧುವ್ರತಂ ವಿಶ್ವೋತ್ತಮ ಯೋಗೀಂದ್ರಂ ವಂದೇsಹಂ ವಾದಿರಾಟ್ ಪ್ರಿಯಂ I
I ಕೃಷ್ಣಾಲಂಕಾರಸಂಸಕ್ತಂ ಸರ್ವಸಜ್ಜನಪೋಷಕಮ್!ಲಕ್ಷ್ಮೀವರಗುರುಂ ವಂದೇ ವಿಶ್ವೋತ್ತಮಕರೋದ್ಭವಮ್ I

 
 
 
 
 
 
 
 
 
 
 

Leave a Reply