ಹೆತ್ತಮಾತೆಯೊಂದಿಗೆ ಪುಣ್ಯಕ್ಷೇತ್ರಗಳ ಸಂದರ್ಶನದಿಂದ ಮಾತೃಪ್ರೇಮವನ್ನು ಸಾರಿದ ದಕ್ಷಿಣಾಮೂರ್ತಿ ಕೃಷ್ಣಕುಮಾರ

ಹೆತ್ತಮಾತೆಯೊಂದಿಗೆ ನಮ್ಮ ದೇಶದ ಪುಣ್ಯಕ್ಷೇತ್ರಗಳ ಸಂದರ್ಶನದಿಂದ ಮಾತೃಪ್ರೇಮವನ್ನು ಸಾರಿದ ಮೈಸೂರಿನ ದಕ್ಷಿಣಾಮೂರ್ತಿ ಕೃಷ್ಣಕುಮಾರ ಅವರು ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ತನ್ನ ಹೆಸರಿನಲ್ಲೇ ಇರುವ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ದೇವರ ಪ್ರಸಾದವನ್ನು ಪಡೆದುಕೊಂಡಿದ್ದಾರೆ. ತಂದೆ ಕೊಡಿಸಿದ ಸ್ಕೂಟರ್ ಮೂಲಕ 58000 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ಪ್ರಯಾಣಮಾಡಿ ಅಸಾಮಾನ್ಯ ಸಾಧಕರಾಗಿದ್ದಾರೆ. ಇಂದಿನ ಜನರು ತನ್ನ ಹೆತ್ತವರನ್ನು ಆಶ್ರಮಕ್ಕೆ ಸೇರಿಸುವ ಪರಿಪಾಠದಿಂದ ಹಿಂದೆ ಸರಿಯಬೇಕು. ತಂದೆ ತಾಯಿಯರ ಸೇವೆಯನ್ನು ಮಾಡುವ ಮೂಲಕ ಕಿರಿಯರಿಗೆ ದಾರಿದೀಪವಾಗುವ ಸದ್ಭುದ್ಧಿ ಎಲ್ಲರಲ್ಲೂ ಮೂಡಿಬರಲಿ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.

ಎಡನೀರು ಮಠದಲ್ಲಿ ತನ್ನ ದ್ವಿತೀಯ ಚಾತುರ್ಮಾಸ್ಯ ವ್ರತದ 48ನೇ ದಿನ ಸೋಮವಾರ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಮೈಸೂರಿನ ಆಧುನಿಕ ಶ್ರವಣಕುಮಾರ ಡಿ.ಕೃಷ್ಣಕುಮಾರ್ ಮತ್ತು ಅವರ ತಾಯಿ ಚೂಡಾರತ್ನ ಅವರನ್ನು ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು. ತನ್ನ ತಾಯಿಗೆ ಭಾರತ ದರ್ಶನ ಮಾಡಿಸಿದ ಮೈಸೂರಿನ ಕೃಷ್ಣಕುಮಾರ್ ಅವರು ಜಿಲ್ಲೆಯ ನಾನಾ ಕ್ಷೇತ್ರಗಳಿಗೆ ಸಂದರ್ಶಿಸಿ ಎಡನೀರು ಶ್ರೀಗಳ ಅನುಗ್ರಹ ಪಡೆದರು. ಮೈಸೂರಿನಿಂದ 2018 ಜನವರಿ 14ರಂದು ತಾಯಿ ಮತ್ತು ಮಗ ಯಾತ್ರೆ ಆರಂಭಿಸಿದ್ದರು. ನೇಪಾಳ, ಭೂತಾನ್, ಮಯನ್ಮಾರ್ ದೇಶವನ್ನೂ ಅವರು ಸುತ್ತಿದ್ದಾರೆ. ಪ್ರಸಿದ್ಧ ಯಕ್ಷಗಾನ ಕಲಾವಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಪರಿಚಯಿಸಿ ಮಾತನಾಡಿದರು.

 
 
 
 
 
 
 
 
 
 
 

Leave a Reply