ಜಾಮಿಯಾ ಮಸೀದಿ ಉಡುಪಿಯಲ್ಲಿ ಜುಮಾ ಖುತ್ಬಾ

ಉಡುಪಿ: ಜಾಮಿಯಾ ಮಸೀದಿಯಲ್ಲಿ ಅ.15 ರಂದು ನಡೆದ ಜುಮಾ ಖುತ್ಬಾ (ಪ್ರವಚನ) ದಲ್ಲಿ ಅಲ್ ಇಬಾದಾಹ್ ಇಂಡಿಯನ್ ಸ್ಕೂಲ್ ನ ಸಂಸ್ಥಾಪಕ ಮೌಲಾನಾ ಅಬ್ದುಲ್ ಲತೀಫ್ ಮದನಿಯು ಯುವಜನತೆ ಡ್ರಗ್ಸ್ ಅಡಿಕ್ಟ್ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. 

ಪ್ರವಾದಿ ಕಾಲದಿಂದಲೂ ಇಸ್ಲಾಮ್ ನಲ್ಲಿ ನಶೆಯ ವಿರುದ್ಧ ಎಚ್ಚರಿಕೆಯ ಸಂದೇಶಗಳನ್ನು ಕಾಣಬಹುದು.ನಶೆಯ ಹಲವಾರು ಆಯಾಮಗಳಿದ್ದು ಇಂದು ಅದು ಮಾರ್ಪಡಿಸಿದ ರೀತಿಯಲ್ಲಿ ಆಕರ್ಷಕ ಹೆಸರಿನೊಂದಿಗೆ ಯುವಜನತೆಯನ್ನು ದಾರಿಗೆಡಿಸಿದೆ. ಮನ ಮಸ್ತಿಷ್ಕದ ಸ್ವಾಧೀನವನ್ನು ಪಲ್ಲಟಗೊಳಿಸುವ , ನೈತಿಕ ಮೌಲ್ಯಗಳ ಮೇರೆ ಮೀರುವ, ನೈಸರ್ಗಿಕತೆಯಿಂದ ಅನೈಸರ್ಗಿಕತೆಗೆ ದೂಡುವ ಸೇವನೆಗಳನ್ನು ಇಸ್ಲಾಮ್ ನಿರ್ಭಂಧಿಸಿದೆ.ಸಮಸ್ಯೆಗಳನ್ನು ಎದುರಿಸಲಾಗದೆ ಸಮಸ್ಯೆಗಳಿಂದ ಪಾರಾಗುವ ನೆಪದಿಂದ ಮನ ಮಸ್ತಿಷ್ಕವನ್ನು ಪ್ರಚೋದಿಸುವ ಸೇವನೆಗಳಿಗೆ ಯುವಜನತೆ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ.

ನಾಗರೀಕತೆಯ ಉತ್ತುಂಗದ ಈ ಕಾಲದಲ್ಲಿ ಅದೊಂದು ಸಾಮಾನ್ಯವೆಂಬಂತೆ ಬಿಂಬಿಸಲಾಗಿದೆ. ಕಾರ್ಪೋರೇಟ್ ದಂಧೆಯಾಗಿರುವ ನಶೆಯ ವ್ಯಾಪಾರ ಇಂದು ರಾಜಾರೋಷವಾಗಿ ಕಾನೂನು ವ್ತಾಪ್ತಿಯ ಒಳಗೂ ಹೊರಗೂ ತನ್ನ ಕಬಂಧ ಬಾಹುವನ್ನು ಚಾಚಿದೆ. ಇದರಿಂದ ಕೇವಲ ಯುವಜನತೆ ಮಾತ್ರವಲ್ಲ ವಯೊವೃದ್ಧರಾದಿಯಾಗಿ ಬಲಿಯಾಗಿರುವುದು ಖೇದಕರ. ಗೀಳು ಅಥವಾ ಚಟಕ್ಕೊಳಗಾಗುವುದನ್ನು ಅಡಿಕ್ಟ್ ಅನ್ನಲಾಗುತ್ತದೆ. ಅದು ಸೇವನೆಯ ಮೂಲಕವೂ, ಅಭ್ಯಾಸ ಮೂಲಕವೂ ಜನರನ್ನು ಬಲಿತೆಗೆದುಕೊಳ್ಳುತ್ತದೆ.

ಇದರಿಂದ ಹೊರಬರಲಾರದೇ ಚಡಪಡಿಸುವ ಬಲಿಪಶುಗಳ ಪುನರ್ವಸತಿ ಖಂಡಿತ ಸಾಧ್ಯವಿದೆ. ಕೇವಲ ಭಾಷಣದಿಂದಲ್ಲ ಮೈದಾನಕ್ಕಿಳಿದು ಕೆಲಸ ಮಾಡಬೇಕಿದೆ. ಸರಕಾರದೊಂದಿಗೆ ಕೈಜೋಡಿಸಬೇಕಾಗಿದೆ. ಅದಕ್ಕಾಗಿ ಸಾಮಾಜಿಕ ಸೇವಾ ಸಂಘಟನೆಗಳು, ಮಸೀದಿ ಜಮಾಅತ್ ಗಳು, ಯುವ ವೇದಿಕೆಗಳು ಕಟಿಬದ್ಧರಾಗಬೇಕೆಂದು ಕರೆ ನೀಡಿದರು. 

 
 
 
 
 
 
 
 
 
 
 

Leave a Reply