ವಿವೇಕಾನಂದರ ವಿಚಾರಧಾರೆಗಳಿಂದ ಸಮೃದ್ಧ ರಾಷ್ಟ್ರ ನಿರ್ಮಾಣ : ಆನಂದ್ ಬಿ ಅಡಿಗ

ದೇಶ ಕಟ್ಟುವಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಆದರ್ಶ ವ್ಯಕ್ತಿ ಸ್ವಾಮೀ ವಿವೇಕಾನಂದರು. ಅವರ ವಿಚಾರಧಾರೆಗಳನ್ನು ಯುವಜನತೆ ಅಳವಡಿಸಿಕೊಳ್ಳುವುದರೊಂದಿಗೆ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ. ಅಡಿಗ ಹೇಳಿದರು.

ಅವರು ಇಂದು ನಗರದ ಪೂರ್ಣಪ್ರಜ್ಞಾ ಕಾಲೇಜಿನ ಪ್ರಜ್ಞಾ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ, ಪೂರ್ಣಪ್ರಜ್ಞಾ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಪೂರ್ಣಪ್ರಜ್ಞಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಉಡುಪಿ ಇವರ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಶಕ್ತಿ ಭವಿಷ್ಯದ ಸಮೃದ್ಧಿಯ ಸಂಕೇತ. ಈ ಸಂಪತ್ತನ್ನು ಸನ್ಮಾರ್ಗದಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಈ ಮೂಲಕ ಯುವ ಜನರನ್ನು ದೇಶದ ಆಸ್ತಿಯನ್ನಾಗಿಸಬೇಕು. ಸ್ವಾರ್ಥ ಮನೋಭಾವನೆ ಬಿಟ್ಟು ನಿಸ್ವಾರ್ಥದಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಯುವ ಜನತೆಗೆ ಮಾರ್ಗದರ್ಶನ ನೀಡಿ, ಅವರ ಮನಸ್ಸನ್ನು ಅರಿತು ಸಮಾನ ಅವಕಾಶ ನೀಡಿದ್ದಲ್ಲಿ ದೇಶದ ಅಭಿವೃದ್ದಿ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಸುದೇವ ತಿಲಕ್ ಸ್ವಾಮೀ ವಿವೇಕಾನಂದರ ಕುರಿತು ಮಾತನಾಡಿ, ಚಂಚಲ ಸ್ವಭಾವ ಹೊಂದಿರುವ ಮನುಷ್ಯನು ತನ್ನ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಂಡಾಗ ಇಡೀ ಜಗತ್ತನ್ನು ಗೆಲ್ಲಬಹುದು ಎಂದರು.

ಈ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಭಾಗವಹಿಸಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ಣಪ್ರಜ್ಞಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಡಾ.ಭರತ್ ವಿ ವಹಿಸಿದ್ದರು.

ನೆಹರು ಯುವ ಕೇಂದ್ರದ ಅಕೌಂಟ್ಸ್ ಮತ್ತು ಪ್ರೋಗ್ರಾಮ್ಸ್ ಸೂಪರ್‌ವೈಸರ್ ಸುಸೈಮನಿ, ಕಾರ್ಯಕ್ರಮ ಸಂಯೋಜಕಿ ಶ್ರೀರಕ್ಷಾ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಮುರುಳಿ ಸ್ವಾಗತಿಸಿದರೆ, ವಿದ್ಯಾರ್ಥಿನಿ ಪ್ರೀತಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply