ಮಹತೋಭಾರ ಶ್ರೀ ವಿಶ್ವೇಶ್ವರ ದೇವಳ, ಎಲ್ಲೂರು ಆಂಜನೇಯ – ಭಾಗೀರಥಿ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ

ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನವು ಪುರಾಣ,ಇತಿಹಾಸ ಹಾಗೂ ಸಾಂದ್ರವಾದ ಜಾನಪದ ಹಿನ್ನೆಲೆಯೊಂದಿಗೆ ಪ್ರಸಿದ್ದವಾದ ದೇವಾಲಯ. ಪೂರ್ವದ,ನಡವಳಿಕೆ , ಸಂಪ್ರದಾಯಗಳನ್ನು ಯಥಾಸಾಂಗವಾಗಿ ನಡೆಸಿಕೊಂಡು ಬರುವ ಜಿಲ್ಲೆಯ ಕೆಲವೇ ಸೀಮೆ ದೇವಳಗಳಲ್ಲಿ ಎಲ್ಲೂರು ಸರ್ವಮಾನ್ಯ ದೇವಳ. ಹಲವು ವಿಶೇಷಗಳಿಂದ ಖ್ಯಾತಿವೆತ್ತ ದೇವಾಯತನವೂ ಹೌದು. ಮೂಲಸ್ಥಾನ ವಿಶ್ವೇಶ್ವರ ದೇವರು, ಉಪಸ್ಥಾನವಾಗಿ ಮಹಾಗಣಪತಿ ಮತ್ತು ಅನ್ನಪೂರ್ಣೇಶ್ವರಿ. ಪ್ರಧಾನ ಪರಿವಾರವಾಗಿ ಆಂಜನೇಯ ಹಾಗೂ ಭಾಗೀರಥಿ ಸನ್ನಿಧಿಗಳಿವೆ.

ವಿಶೇಷ ಶಕ್ತಿಗಳಾಗಿ ಬ್ರಹ್ಮರು,ನಾಗ ದೇವರು ಹಾಗೂ ವೀರಭದ್ರ ,ನಂದಿಕೇಶ್ವರ ಸಂಕಲ್ಪಗಳು ಸಾನ್ನಿಧ್ಯವಹಿಸಿವೆ.ಚಾವುಂಡಿ ಹಾಗೂ ಗುಳಿಗ ದೈವಗಳು ಪರಿವಾರಗಳಾಗಿ ಕ್ಷೇತ್ರಕ್ಕೆ ಜಾನಪದ ಹಿನ್ನೆಲೆಯನ್ನು ಒದಗಿನಿರ್ಮಾಣವಾಗಿದೆ‌. ಆಂಜನೇಯ ಹಾಗೂ ಭಾಗೀರಥಿ ಗುಡಿಗಳನ್ನು ನವೀಕರಿಸಲಾಗಿದ್ದು ಎ.3 ಹಾಗೂ ಎ.4 ರಂದು‌ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ನೆರವೇರಲಿದೆ.

 

ಆಂಜನೇಯ 

         ಅಂಜನೇಯ ಶಿಲಾ ಪ್ರತಿಮೆಯು ವಿಜಯನಗರ‌ ಕಾಲದ ಶಿಲ್ಪ ಶೈಲಿಯಲ್ಲಿ ನಿರ್ಮಾಣವಾದ ಉಬ್ಬುಶಿಲ್ಪ ಮಾದರಿಯ ರಚನೆ.ಜೀರ್ಣಗೊಂಡು ಪಾಳುಬಿದ್ದ ಯಾವುದೋ ಒಂದು ಕೋಟೆಯಲ್ಲಿ ಪೂಜೆಗೊಳ್ಳುತ್ತಿದ್ದ ಈ ಟಆಂಜನೇಯ ಪ್ರತಿಮೆ ಎಲ್ಲೂರಿನ ಹಳೆ ಕೆರೆಗೆ ಯಾರೋ ಅಸ್ತಿಕರು ತಂದಿರಿಸಿದರು.ಮುಂದೆ ಕ್ರಮೇಣ ದೇವಾಲಯಕ್ಕೆ ಬರುವ ಭಕ್ತರ ಗಮನಸೆಳೆದು ಆಂಜನೇಯ ದರ್ಶನವೂ ಎಲ್ಲೂರು ದೇವರ ದರ್ಶನದಲ್ಲಿ ಅವಿಭಾಜ್ಯ ಅಂಗವಾಯಿತು.

ಮುಂದೆ ಗುಡಿ ನಿರ್ಮಾಣವಾಯಿತು,ಪೂಜೆಗೆ ಪ್ರತ್ಯೇಕ ವ್ಯವಸ್ಥೆಯಾಯಿತು.ಪ್ರಸ್ತುತ ಎಲ್ಲೂರು ದೇವರ ಪರಿವಾರ ಸನ್ನಿಧಾನವಾಗಿ ಸ್ವೀಕಾರಗೊಂಡು ಜೀರ್ಣೋದ್ಧಾರ ನೆರವೇರಿದೆ.

    ಚತುರ್ವರ್ಗ ಕ್ರಮದ ಲುಪಾ ರೀತಿಯ ರಚನೆ.ಲುಪಾ ಶಿಖರ ಹೊಂದಿದ ನಿರ್ಮಿತಿ ಎಂದೂ ಹೇಳಲಾಗುತ್ತದೆ.ಪಾದಬಂಧ ಅಧಿಷ್ಠಾನ ,ಭಿತ್ತಿ ಸ್ತಂಭ ಯುಕ್ತವಾದ ಸರಳ ಭಿತ್ತಿ,ಹೀಗೆ ನವ ನಿರ್ಮಾಣ ಕಾರ್ಯ ನಡೆದಿದೆ.

 

ಭಾಗೀರಥಿ – ಗಂಗೆ

   ಒಂದು ಕಾಲಕ್ಕೆ ಹನ್ನೆರಡು ವರ್ಷಕ್ಕೊಮ್ಮೆ ಎಲ್ಲೂರಿನ ಒಳಗಿನ‌ ಕೆರೆಗೆ ಕಾಶಿಯಿಂದ ಭಾಗೀರಥಿ – ಗಂಗೆ ಅಂತರ್ವಾಹಿನಿಯಾಗಿ ಹರಿದು ಬರುತ್ತಿತ್ತು ಎಂಬುದು ಆಪ್ತವಾಕ್ಯ.ಹೇಗೆ ಬರುತ್ತಿತ್ತು ಎಂಬ ಬಗ್ಗೆಯೂ ವಿವರ ನೀಡುತ್ತಿದ್ದ ಹಿರಿಯರು ನಿರ್ದಿಷ್ಟ ದಿನದಲ್ಲಿ ಒಳಗಿನ ಬಾವಿಗೆ ಮೊದಲು ತುಳಸಿ ಮುಂತಾದುವುಗಳೊಂದಗೆ ಭಾಗೀರಥಿ ಅಂದರೆ ಗಂಗೆ ಬರುತ್ತಿತ್ತಂತೆ .ಬಳಿಕ ಕೆರೆಗೆ ಬರುತ್ತಿತ್ತು.ಒಳಗಿನಕೆರೆಗೆ “ಬಾಗೀರಥಿ ಕೆರೆ” ಎಂದೇ ಹೆಸರು.ಈ ಕ್ರಮದಲ್ಲಿ ಭಾಗೀರಥಿ ಬರುತ್ತಿದ್ದ ನೆನಪಿಗಾಗಿ ಕೆರೆಯಲ್ಲಿ ಭಾಗೀರಥಿ‌‌ ಮೂರ್ತಿ ಪ್ರತಿಷ್ಠಾಪಿಸಲಾಯಿತು.ಇದೀಗ ನೂತನ ಗುಡಿ ನಿರ್ಮಾಣವಾಗಿದೆ.

     ಷಡ್ವರ್ಗ ಗುಡಿಯ ಅಂಗಗಳನ್ನು ಹೊಂದಿರುವ ರಚನೆಯು ಏಕತಲ ಅಲ್ಪವಿಮಾನ ವಿಧಾನದ ನಿರ್ಮಾಣವಾಗಿದೆ.ಪ್ರತಿಬಂಧ ಅಧಿಷ್ಠಾನ,ಭಿತ್ತಿ ಸ್ತಂಭ,ಘನ ದ್ವಾರ ಸಹಿತವಾದ ಸುಂದರ ಭಿತ್ತಿ.ಗ್ರೀವ, ಶಿಖರ ಅಥವಾ ಸ್ತೂಪಿಯು ಸ್ಪಷ್ಟವಾಗಿ ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ‌.

    • ಕೆ.ಎಲ್.ಕುಂಡಂತಾಯ

   

 
 
 
 
 
 
 
 
 
 
 

Leave a Reply