ಆ. 15ರಂದು ಯಕ್ಷಗಾನ `ಅಮೃತ’ ರಸಧಾರೆ

ಉಡುಪಿ: ಪ್ರತೀ ವರ್ಷ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಕಲಾರಾಧನೆ, ಕಲಾಪೋಷಣೆ ಮತ್ತು ಕಲಾಮನ್ನಣೆ ಮೂಲಕ ವೈಶಿಷ್ಟ್ಯಪೂರ್ಣವಾಗಿ ಕಳೆದ 31 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷ 32ನೇ ವರ್ಷದ ಕಾರ್ಯಕ್ರಮವನ್ನು ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬೆಳಿಗ್ಗೆ 8.30ರಿಂದ ರಾತ್ರಿ 10.30ರ ವರೆಗೆ 14 ಗಂಟೆ ಕಾಲ ಯಕ್ಷಗಾನ ಅಮೃತ ರಸಧಾರೆ ಕಾರ್ಯಕ್ರಮವನ್ನು ಸ್ವರಾಮೃತ, ಪರಂಪರಾಮೃತ, ಗೀತಾಮೃತ, ವಾಗರ್ಥಾಮೃತ, ಭರತ- ಯಕ್ಷ- ನೃತ್ಯಾಮೃತ ಹಾಗೂ ಕಥಾಮೃತ ಮೂಲಕ ಆಚರಿಸಲಾಗುವುದು ಎಂದು ಕಾರ್ಯಕ್ರಮ ಸಂಘಟಕ, ಕಲಾಪೋಷಕ ಸುಧಾಕರ ಆಚಾರ್ಯ ತಿಳಿಸಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸ್ವಾತಂತ್ರ್ಯ ಯೋಧ ಕೀರ್ತಿಶೇಷ ಹರಿದಾಸ ಮಲ್ಪೆ ಶಂಕರನಾರಾಯಣ ಸಾಮಗ ವೇದಿಕೆಯಲ್ಲಿ ನಡೆಯುವ ದಿನಪೂರ್ತಿ ನಡೆಯುವ ಸ್ವಾತಂತ್ರ್ಯೋತ್ಸವ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಕ್ಕೆ ಆ. 15ರ ಬೆಳಿಗ್ಗೆ 9 ಗಂಟೆಗೆ ಆಗಸ್ಟ್ 15ರಂದೇ ಜನಿಸಿದ ಶತಾಯುಷಿ ಮೂಡುಬಿದಿರೆ ಮಿಜಾರುಗುತ್ತು ಆನಂದ ಆಳ್ವ (105) ಹಾಗೂ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪೂರ್ವಾಶ್ರಮದ ತಂದೆ 102ರ ಹರೆಯದ ಕಿನ್ನಿಗೋಳಿ ಪಕ್ಷಿಕೆರೆ ಅಂಗಡಿಮಾರು ಕೃಷ್ಣ ಭಟ್ ಅವರಿಗೆ ಶತಾಭಿವಂದನ ಕಾರ್ಯಕ್ರಮ ಮೂಲಕ ಚಾಲನೆ ನೀಡಲಾಗುವುದು.

9ರಿಂದ 11ರ ವರೆಗೆ ಯುವ ಮಹಿಳಾ ಭಾಗವತರಿಂದ ಯಕ್ಷಗಾನ `ಸ್ವರಾಮೃತ’ ನಡೆಯಲಿದ್ದು ಭವ್ಯಶ್ರೀ, ಕಾವ್ಯಶ್ರೀ, ಅಮೃ, ಚಿಂತನ ಮತ್ತು ಶ್ರೀರಕ್ಷಾ ಭಾಗವತರಾಗಿ ಸಹಕರಿಸುವರು.

11ರಿಂದ 11.30ರ ವರೆಗೆ ಯಕ್ಷಗಾನ `ಪರಂಪರಾಮೃತ’ ಕಾರ್ಯಕ್ರಮದಲ್ಲಿ ಉಡುಪಿ ವಿಂದ್ಯಾ ಆಚಾರ್ಯ ಅವರಿಂದ ತೆಂಕುತಿಟ್ಟಿನ ಪರಂಪರೆಯ ಹನುಮಂತನ ಒಡ್ಡೋಲಗ ನಡೆಯಲಿದೆ.

11.30ರಿಂದ ಅಪರಾಹ್ನ 1.30ರ ವರೆಗೆ ಹಿರಿ- ಕಿರಿಯ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ, ಸುರೇಶ ಶೆಟ್ಟಿ ಶಂಕರನಾರಾಯಣ ಮತ್ತು ರವಿಚಂದ್ರ ಕನ್ನಡಿಕಟ್ಟೆ ಅವರಿಂದ ಯಕ್ಷಗಾನ `ಗೀತಾಮೃತ’ ಆಯೋಜಿಸಲಾಗಿದೆ.

ಅಪರಾಹ್ನ 1.30ರಿಂದ ನಡೆಯುವ ಯಕ್ಷಗಾನ `ವಾಗರ್ಥಾಮೃತ’ ಕಾರ್ಯಕ್ರಮದಲ್ಲಿ ಸುಧಾಕರ ಆಚಾರ್ಯರ ಕಲಾರಾಧನೆಯ 32ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ `ಅಮೃತಸಿದ್ಧಿ’ ಪ್ರಸ್ತುತಗೊಳ್ಳಲಿದ್ದು, ನಿರಂತರ 23 ವರ್ಷದಿಂದ ನಮ್ಮೊಂದಿಗೆ ಭಾಗವತರಾಗಿ ಸಹಕರಿಸುತ್ತಿರುವ ಎಂ. ದಿನೇಶ ಅಮ್ಮಣ್ಣಾಯ, ಡಾ. ಪ್ರಖ್ಯಾತ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ಕೃಷ್ಣಪ್ರಸಾದ್ ಉಳಿತ್ತಾಯ, ಲವಕುಮಾರ್ ಐಲ ಮತ್ತು ರಾಜೇಂದ್ರ ಕೃಷ್ಣ ಹಿಮ್ಮೇಳದಲ್ಲಿ ಹಾಗೂ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್, ಡಾ. ವಾದಿರಾಜ ಕಲ್ಲೂರಾಯ, ಸುಜಯೀಂದ್ರ ಹಂದೆ ಮತ್ತು ಹರಿರಾಜ ಶೆಟ್ಟಿಗಾರ್ ಅರ್ಥಧಾರಿಗಳಾಗಿ ಸಹಕರಿಸುವರು.

ಸಂಜೆ 5ರಿಂದ 5.30ರ ವರೆಗೆ ನಡೆಯುವ `ಭರತ- ಯಕ್ಷ- ನೃತ್ಯಾಮೃತ’ ಕಾರ್ಯಕ್ರಮದಲ್ಲಿ ಡಾ. ಮಂಜರಿ ಚಂದ್ರ ಪುಷ್ಪರಾಜ್, ಮೇದಿನಿ ಯಾಸ್ಕ ಆಚಾರ್ಯ, ರಕ್ಷಿತ್ ಪಡ್ರೆ, ದಿವಾಕರ ಕಾಣಿಯೂರು, ಭಾಗವತ ಪಟ್ಲ ಸತೀಶ ಶೆಟ್ಟಿ, ಮಲ್ಪೆ ಹರ್ಷ ಸಾಮಗ ಬೆಂಗಳೂರು, ಗುರುಪ್ರಸಾದ್ ಬೊಳಿಂಜಡ್ಕ ಮತ್ತು ಕೌಶಿಕ್ ರಾವ್ ಪುತ್ತಿಗೆ ಸಹಕರಿಸುವರು.

ಸಂಜೆ 5.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸುವರು. ಜ್ಯೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ ಮತ್ತು ಕಟೀಲು ದೇವಳ ಅರ್ಚಕ ಸದಾನಂದ ಆಸ್ರಣ್ಣ ಆಶೀರ್ವಚನ ನೀಡುವರು. ಸಚಿವರಾದ ಎಸ್. ಅಂಗಾರ ಮತ್ತು ವಿ. ಸುನಿಲ್ ಕುಮಾರ್ ಹಾಗೂ ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್ ಗೌರವ ಉಪಸ್ಥಿತಿಯಲ್ಲಿ ಬಹುಮೇಳಗಳ ಯಜಮಾನರಾದ ಪಳ್ಳಿ ಕಿಶನ್ ಹೆಗ್ಗೆ ಅಧ್ಯಕ್ಷತೆ ವಹಿಸುವರು. ಡಾ. ಎಚ್. ಎಸ್. ಬಲ್ಲಾಳ್, ಡಾ| ಜಿ. ಶಂಕರ್, ಡಾ. ಎಂ. ಮೋಹನ ಆಳ್ವ, ಟಿ. ಶ್ಯಾಂ ಭಟ್, ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆನಂದ ಸಿ. ಕುಂದರ್, ಪುರುಷೋತ್ತಮ ಶೆಟ್ಟಿ, ಗುರ್ಮೆ ಸುರೇಶ ಶೆಟ್ಟಿ, ಶ್ರೀಪತಿ ಭಟ್ ಮೂಡುಬಿದಿರೆ, ಪ್ರೊ. ಎಂ. ಎಲ್. ಸಾಮಗ, ಡಾ. ವೈ. ಸನತ್ ಹೆಗ್ಡೆ, ಕೆ. ಉದಯಕುಮಾರ್ ಶೆಟ್ಟಿ, ಮನೋಹರ ಶೆಟ್ಟಿ, ಜಯರಾಜ ಹೆಗ್ಡೆ, ಪ್ರದೀಪ ಕುಮಾರ್ ಕಲ್ಕೂರ, ಇಂದ್ರಾಳಿ ಜಯಕರ ಶೆಟ್ಟಿ, ಗೋವಿಂದ ಬಾಬು ಪೂಜಾರಿ, ಪೂರ್ಣಿಮಾ ಯತೀಶ ರೈ ಅಭ್ಯಾಗತರಾಗಿ ಆಗಮಿಸುವರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಭಾಗವತ ಪಟ್ಲ ಸತೀಶ ಶೆಟ್ಟಿ ಶುಭಾಶಂಸನೆಗೈಯುವರು.

ಈ ಸಂದರ್ಭದಲ್ಲಿ ಕೊರಗ ಸಮುದಾಯದ ಮೊದಲ ಪದವೀಧರೆ ಡಾ| ಸಬಿತಾ, ಖ್ಯಾತ ನಾದಸ್ವರ ವಾದಕ ನಾಗೇಶ ಬಪ್ಪನಾಡು, 75ರ ಹರೆಯದಲ್ಲಿ ಪಿಎಚ್.ಡಿ ಪದವಿ ಪಡೆದ ಡಾ| ಉಷಾ ಚಡಗ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಕಲಾಪೋಷಕ ಜೋಕಿಂ ಕೊರೆಯ ನಿಡ್ಡೋಡಿ ಹಾಗೂ ಪತ್ರಕರ್ತ ಜಾನ್ ಡಿ’ಸೋಜ ಕುಂದಾಪುರ ಅವರನ್ನು ಸನ್ಮಾನಿಸಲಾಗುವುದು.

ಸಂಜೆ 6.45ರಿಂದ ನಡೆಯುವ ಯಕ್ಷಗಾನ ಕಥಾಮೃತ ಕಾರ್ಯಕ್ರಮದಲ್ಲಿ ತೆಂಕು- ಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ `ಭಾರತರತ್ನ’ ಪ್ರಚಂಡ ಜೋಡಾಟ ನಡೆಯಲಿದೆ ಎಂದು ಸುಧಾಕರ ಆಚಾರ್ಯ ವಿವರಿಸಿದರು.

ಸ್ವಾತಂತ್ರ್ಯೋತ್ಸವವನ್ನು ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ಯಕ್ಷಗಾನ ಕಲಾರಾಧನೆಯ ಮೂಲಕ ಆಚರಿಸಿಕೊಂಡು ಬರುತ್ತಿರುವ ಸುಧಾಕರ ಆಚಾರ್ಯ, 1990ರ ಆ. 14ರಂದು ರಾತ್ರಿ ನಿಟ್ಟೂರು ಹೈಸ್ಕೂಲಿನಲಿ ಯಕ್ಷಗಾನ ತಾಳಮದ್ದಳೆ ಆರಂಭಿಸಿದರು. 5ನೇ ವರ್ಷದ ಕಾರ್ಯಕ್ರಮದಲ್ಲಿ ನಿರಂತರ 12 ತಾಸು ಯಕ್ಷಗಾನ, 26ನೇ ವರ್ಷದಲ್ಲಿ 26 ಮಂದಿ ಕಲಾವಿದರಿಗೆ ಗೌರವ, 2016ರಲ್ಲಿ ಇತಿಹಾಸದ ಮರುಸೃಷ್ಟಿ-1947 ಸ್ವರಾಜ್ಯ ವಿಜಯ ಹಾಗೂ 2017ರಲ್ಲಿ ಹೈದರಾಬಾದ್ ವಿಜಯ ತಾಳಮದ್ದಳೆ ಕಾರ್ಯಕ್ರಮವನ್ನು ಕೃಷ್ಣಮಠದಲ್ಲಿ ಆಯೋಜಿಸಿದ್ದು, ಸ್ವಾತಂತ್ರ್ಯ ಸಂಬಂಧಿ ಜಿಲ್ಲೆಯ 14 ಮಂದಿ ಗಣ್ಯರನ್ನು ಸನ್ಮಾನಿಸಿದ್ದರು. ಅವರಲ್ಲಿ ಶತಾಯುಷಿ ಸಹೋದರರಾದ ಪರಿಶಿಷ್ಟ ಜಾತಿಯ ಕರ್ಜೆ ಪುಟ್ಟ ನಾಯ್ಕ (106) ಮತ್ತು ಮಳ್ಪು ನಾಯ್ಕ (101) ಅವರನ್ನು ಗೌರವಿಸಿರುವುದು ಉಲ್ಲೇಖನೀಯ.

29ನೇ ವರ್ಷಾಚರಣೆ ಪ್ರಯುಕ್ತ ಪಂಚದೀಪ ಪ್ರಜ್ವಲನ, ಕೋವಿಡ್ ಹಿನ್ನೆಲೆಯಲ್ಲಿ 31ನೇ ವರ್ಷದ ಕಾರ್ಯಕ್ರಮವನ್ನು ಜಾಲತಾಣದ ಮೂಲಕ ಸರಳವಾಗಿ ಆಚರಿಸಲಾಗಿತ್ತು. ಮೂರು ದಶಕಗಳ ಈ ಸುದೀರ್ಘ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಕಲಾವಿದರು, ಕಲಾಪೋಷಕರು, ಅಭಿಮಾನಿಗಳಿಗೆ ಅಭಿವಂದನೆ ಸಲ್ಲಿಸುವುದಾಗಿ ಸುಧಾಕರ ಆಚಾರ್ಯ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಭುವನಪ್ರಸಾದ ಹೆಗ್ಡೆ ಮಣಿಪಾಲ, ಎಂ.ಎಸ್. ವಿಷ್ಣು ಭಟ್, ಕೆ. ಸತೀಶ ಹೆಗ್ಡೆ ಇದ್ದರು.

 
 
 
 
 
 
 
 
 
 
 

Leave a Reply