ಮತದಾನ ಜಾಗೃತಿ ಕಾರ್ಯಕ್ರಮ: ಸಂಭ್ರಮಿಸಿದ ಜನತೆ

ಮೇ 10 ರಂದು ನಡೆಯುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸುವಂತೆ ಚುನಾವಣಾ ಆಯೋಗ ನೀಡಿರುವ ಸಲಹೆಯು ಮಲ್ಪೆ ಬೀಚ್ ನಲ್ಲಿ ಅಕ್ಷರಶಃ ಅನಾವರಣಗೊಂಡಿತು.

ಭಾನುವಾರ ಸಂಜೆ ಉಡುಪಿ ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಮಲ್ಪೆ ಬೀಚ್ ನಲ್ಲಿ ಮತದಾನ ಜಾಗೃತಿ ಕುರಿತು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಹಾಡುಗಳಿಗೆ ಹಾಗೂ ನೃತ್ಯಕ್ಕೆ ನೃತ್ಯಗಾರರ ಜೊತೆ ಪ್ರೇಕ್ಷಕರೂ ಹೆಜ್ಜೆಹಾಕಿ ಸಂಭ್ರಮಿಸಿದರು.

ಎಂ ಐ ಟಿ ವಿದ್ಯಾರ್ಥಿಗಳು ಗಳು ವಂದೇ ಮಾತರಂ, ಮೈ ಭಾರತ್ ಹೂಂ ಹಾಗೂ ಮತದಾನ ಜಾಗೃತಿ ಕುರಿತು ಕಿರು ನಾಟಕ ಪ್ರದರ್ಶಿಸಿದರು.

ಉಡುಪಿ ಬನ್ನಂಜೆಯ ಹಾಸ್ಟೆಲ್ ನ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಉಡುಪಿ ತಾಲ್ಲೂಕು ಪಂಚಾಯತ್ ಸಿಬ್ಬಂದಿಗಳು ನೃತ್ಯ ಪ್ರದರ್ಶಿಸಿದರು.

ಮತದಾನ ಜಾಗೃತಿ ಕುರಿತು ಯಕ್ಷಗಾನ ಕಾರ್ಯಕ್ರಮ ಹಾಗೂ ಅಗ್ನಿ ಸಾಹಸ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಉಡುಪಿ. ನಗರ ಸಭೆಯ ಪೌರಾಯುಕ್ತ ರಮೇಶ್ ನಾಯಕ್, ಡಯಟ್ ಪ್ರಾಂಶುಪಾಲ ಗೋವಿಂದ ಮಡಿವಾಳ, ಎಂ. ಐ. ಟಿ. ಕಾಲೇಜಿನ ಪ್ರೊ. ಬಾಲಕೃಷ್ಣ ಮದ್ದೋಡಿ, ಮತ್ತಿತರರು ಉಪಸ್ಥಿತರಿದ್ದರು.

ಭಾನುವಾರ ಸಂಜೆ ಬೀಚ್ ನಲ್ಲಿ ಸೇರಿದ್ದ 30000 ಕ್ಕೂ ಅಧಿಕ ಮಂದಿ ಕಾರ್ಯಕ್ರಮ ವೀಕ್ಷಿಸಿದರು.

ಕಾರ್ಯಕ್ರಮದ ಪ್ರಯುಕ್ತ ಬೀಚ್ ನ ಉದ್ದಕ್ಕೂ ಮತದಾನ ಜಾಗೃತಿ ಫಲಕಗಳನ್ನು ಅಳವಡಿಸಲಾಗಿತ್ತು, ನನ್ನ ಮತ ನನ್ನ ಹೆಮ್ಮೆ ಸಾರುವ ಸೆಲ್ಫಿ ಪಾಯಿಂಟ್ ನಲ್ಲಿ ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ನೈತಿಕ ಮತದಾನ ಮಾಡುವ ಕುರಿತು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಯಿತು.

 
 
 
 
 
 
 
 
 
 
 

Leave a Reply