ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ ಯುವಕ 8 ದಿನಗಳ ಬಳಿಕ ಪತ್ತೆ!

ಅಮಾಸೆಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಂಬಟ್ಟು ನಿವಾಸಿ ವಿವೇಕಾನಂದ ಕಾಡಿಗೆ ತೆರಳಿ ಒಂದು ವಾರಗಳ ಬಳಿಕ ಮತ್ತೆ ಮನೆಗೆ ಮರಳಿದ್ದು, ಪಂಜುರ್ಲಿ ದೈವವೇ ತನ್ನ ಮಗನನ್ನು ವಾಪಾಸ್ ಮನೆಗೆ ಕಳುಹಿಸಿಕೊಟ್ಟಿದೆ ಎಂದು ಮನೆಯವರು ನಂಬಿದ್ದಾರೆ.

28 ವರ್ಷದ ವಿವೇಕಾನಂದ ಎಂಬವರು ಉರುವಲು ತರಲು ಸೆಪ್ಟೆಂಬರ್ 16 ರಂದು ಮಧ್ಯಾಹ್ನ ಕಾಡಿಗೆ ಹೋಗಿದ್ದರು. ಹಿಂದಿರುಗಿ ಬರಲು ದಾರಿ ತಪ್ಪಿದ ವಿವೇಕಾನಂದ ತಮ್ಮ ಮನೆಯಿಂದ ನಾಲ್ಕು ಕಿಮೀ ದೂರದಲ್ಲಿರುವ ದಟ್ಟವಾದ ಕಾಡಿನೊಳಗೆ ಕಣ್ಮರೆಯಾಗಿದ್ದರು. ಅವರ ಜೊತೆಯಲ್ಲಿ ಎರಡು ಸಾಕು ನಾಯಿಗಳು ಕೂಡ ತೆರಳಿದ್ದವು. ವಿವೇಕಾನಂದ ಸಂಜೆಯಾದರೂ ಮನೆಗೆ ಹಿಂತಿರುಗದಿದ್ದಾಗ, ಕುಟುಂಬಸ್ಥರು ಕಳವಳಗೊಂಡಿದ್ದರು. ವಿವೇಕಾನಂದರ ಬಗ್ಗೆ ನೆರೆಹೊರೆಯವರಲ್ಲಿ ವಿಚಾರಿಸಿದರೂ, ಪ್ರಯೋಜನವಾಗಲಿಲ್ಲ. ಬಳಿಕ ಗ್ರಾಮಸ್ಥರು ಒಟ್ಟುಗೂಡಿ ತಡರಾತ್ರಿಯವರೆಗೂ ವಿವೇಕಾನಂದ ಅವರನ್ನು ಹುಡುಕಾಡಿದರು. ಆದರೆ ವಿವೇಕಾನಂದ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮರುದಿನ ಸೆ.17ರಂದು ಅಮಾಸೆಬೈಲು ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ಬಳಿಕ ಪೊಲೀಸರು, ಅರಣ್ಯ ಇಲಾಖೆ ಜಂಟಿಯಾಗಿ ಮತ್ತು ಸುಮಾರು 100 ಗ್ರಾಮಸ್ಥರು ಜೊತೆಗೂಡಿ ಹುಡುಕಾಡಿದ್ದಾರೆ.

ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 22 ರವರೆಗೆ ಪ್ರತಿದಿನ ನೂರಕ್ಕೂ ಹೆಚ್ಚು ಜನ ಹುಡುಕಾಡಿದರೂ ವಿವೇಕಾನಂದ ಸಿಗಲಿಲ್ಲ. ಕೊನೆಗೂ ವಿವೇಕಾನಂದ ಸಿಗದೆ ಇದ್ದಾಗ, ಅಧಿಕಾರಿಗಳು ಹುಡುಕಾಟ ಕೈಬಿಟ್ಟಿದ್ದಾರೆ. ಕೊನೆಗೆ ಸೆ.24 ರಂದು ಎಂಟನೇ ದಿನ ವಿವೇಕಾನಂದ ಹೇಗೊ ಮನೆ ದಾರಿ ಕಂಡುಕೊಂಡು ನಿವಾಸದತ್ತ ಬರುತ್ತಿದ್ದರು. ಇದನ್ನು ಕಂಡ ಕುಟುಂಬಸ್ಥರು ಹರ್ಷಗೊಂಡಿದ್ದಾರೆ. ಎಂಟು ದಿನಗಳ ಕಾಲ ವಿವೇಕಾನಂದ ಊಟ ಮತ್ತು ನೀರು ಇಲ್ಲದೇ ತೀವ್ರವಾಗಿ ಬಳಲಿದ್ದರು. ಕಾಡಿಗೆ ತೆರಳುವಾಗ ಅವರ ಜತೆಗೇ ಹೋಗಿದ್ದ ಅವರ ಸಾಕುನಾಯಿ ಅನುಕ್ಷಣವೂ ಅವರ ಜತೆಗೇ ಇದ್ದು ಕಾವಲಾಗಿದ್ದು, 8 ದಿನಗಳ ಬಳಿಕ ಅವರ ಜತೆಗೇ ಮರಳಿತ್ತು.

 
 
 
 
 
 
 
 
 
 
 

Leave a Reply