ಶ್ರೀ ಶೀರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 58 ನೇ ಜನ್ಮ ನಕ್ಷತ್ರ

ಉಡುಪಿ: ಶ್ರೀ ಶೀರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 58ನೇ ಜನ್ಮದಿನ ಹಾಗೂ ಜನ್ಮ ನಕ್ಷತ್ರ ಕಾರ್ಯಕ್ರಮವನ್ನು ಉಡುಪಿ ಒಳಕಾಡಿನಲ್ಲಿರುವ 

ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರರ ಮನೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು.ವಿಶೇಷ ಪಾರಾಯಣದೊಂದಿಗೆ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಅಭಿಷೇಕ ಸಹಿತ ಪೂಜೆಯನ್ನು ಸಲ್ಲಿಸಲಾಯಿತು. ಕುಟುಂಬಿಕರು ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಹಾಗೆಯೇ ಕೇಮಾರು ಶ್ರೀ ಸಾಂದೀಪಿನಿ ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿಯವರ ಕೇಮಾರು ಮಠದಲ್ಲಿ ಶ್ರೀಪಾದರ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.ಪೂಜಾ ನಂತರ ಶ್ರೀಪಾದರ ಭಾವ ಚಿತ್ರಕ್ಕೆ ಕೇಮಾರು ಶ್ರೀಪಾದರು ಆರತಿ ಬೆಳಗಿದರು.ತದನಂತರ ನುಡಿನಮನ ಸಲ್ಲಿಸಿದ ಕೇಮಾರು ಶ್ರೀಪಾದರುಶನಲವತ್ತೆಂಟು ವರ್ಷಗಳ ಕಾಲ ಶ್ರೀಕೃಷ್ಣ ಶ್ರೀವಿಠಲ ಮುಖ್ಯಪ್ರಾಣದೇವರಿಗೆ ಪೂಜೆ ಸಲ್ಲಿಸಿ ಮೂರು ಪರ್ಯಾಯವನ್ನು ವೈಭವದಲ್ಲಿ ನೆರವೇರಿಸಿದ ಶಿರೂರು ಶ್ರೀಪಾದರು ಧಾರ್ಮಿಕವಾಗಿ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಬಹುವಿಧದ ಕೊಡುಗೆಗಳನ್ನು ಸಮಾಜಕ್ಕೆ ಸಲ್ಲಿಸಿದವರು. ದೀನದಲಿತರು ಬಡಬಗ್ಗರು ಕಲಾವಿದರ ಬಗ್ಗೆ ಶಿರೂರು ಶ್ರೀಪಾದರಿಗಿದ್ದ ಕಾಳಜಿ ಸ್ಮರಣೀಯ.ಕರೋನಾದ ಈ ಸಂಕಷ್ಟ ಕಾಲದಲ್ಲಿ ಅವರು ಇರುತ್ತಿದ್ದರೆ ತಕ್ಷಣ ಸ್ಪಂದಿಸಿ ಸಹಸ್ರಾರು ಮಂದಿಗೆ ಸಹಾಯದ ಹಸ್ತ ಚಾಚಿ ಉಪಕರಿಸುತ್ತಿದ್ದರು ಎಂದು ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಶಿರೂರು ಶ್ರೀಪಾದರ ಸೇವೆಯನ್ನು ಸ್ಮರಿಸಿದರು. 

ಇದೇ ವೇಳೆ ಉಡುಪಿಯ ಆಚಾರ್ಯಾಸ್ ಏಸ್ ಹಾಗೂ ಶ್ರೀ ಶಿರೂರು ಮಠ ಭಕ್ತ ಸಮಿತಿಯ ಹಾಗೂ ದ್ವಾರಕಾನಾಥ್ ಲಕ್ಷ್ಮೀ ವೆಂಕಟೇಶ ಗ್ರಾಸರಿ ಇವರ ಆಶ್ರಯದಲ್ಲಿ ಉಡುಪಿ ಗಾಂಧಿ ಆಸ್ಪತೆಯ ಕೋರೋನ ವಾರಿಯರ್ಸ್ ಗೆ ಹಾಗೂ ಅಲ್ಲಿನ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ಗಾಂಧಿ ಆಸ್ಪತ್ರೆಯ ಡಾ.ಹರಿಶ್ಚಂದ್ರ, ಡಾ.ವ್ಯಾಸರಾಜ ತಂತ್ರಿಯವರು ಈ ಸಂದರ್ಭದಲ್ಲಿ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಅಪಾರ ಸೇವೆಗಳನ್ನು ನೆನಪಿಸಿಕೊಂಡರು. ಪಿ.ಲಾತವ್ಯ ಆಚಾರ್ಯ, ಸೊಂಡೂರು ಪ್ರಹ್ಲಾದ ಆಚಾರ್ಯ,ಪಿ.ವಾದಿರಾಜ ಆಚಾರ್ಯ,ಪಿ.ಶ್ರೀನಿವಾಸ ಆಚಾರ್ಯ,ಅಕ್ಷೋಭ್ಯ ಆಚಾರ್ಯ,ಅರ್ಜುನ್ ಆಚಾರ್ಯ ಹಾಗೂ ಶಿರೂರು ಶ್ರೀಪಾದರ ಪೂರ್ವಾಶ್ರಮದ ಕುಟುಂಬದ ಅನೇಕರು ಉಪಸ್ಥಿತರಿದ್ದರು.ಲಾಕ್ ಡೌನ್ ನಿಮಿತ್ತ ಸರಳ ರೀತಿಯಲ್ಲಿ ಈ ಕಾರ್ಯಕ್ರಮ ನಡೆದಿತ್ತು.

 
 
 
 
 
 
 
 
 
 
 

Leave a Reply