ಪಣಂಬೂರು: ಶುಚಿತ್ವ ಕೊರತೆ; ಬೀಚ್‌ ಅಕ್ಕ-ಪಕ್ಕದ ಅಂಗಡಿಗಳಿಗೆ ಜಿಲ್ಲಾಧಿಕಾರಿ ದಿಢೀರ್ ದಾಳಿ

ಕರಾವಳಿಗೆ ಯಾರೇ ಪ್ರವಾಸ ಬಂದರೂ, ಪಣಂಬೂರು ಬೀಚ್ ಹೋಗದೇ ಮರಳುವುದಿಲ್ಲ. ಯಾಕಂದ್ರೆ, ಮಂಗಳೂರಿನ ಪ್ರಸಿದ್ಧ ಬೀಚ್ ಗಳಲ್ಲೊಂದು ಪಣಂಬೂರು. ಆದರೆ ಅಲ್ಲಿನ ಅವ್ಯವಸ್ಥೆ ಯಾರಿಗೂ ಹೇಳತೀರದು.

ಭಾನುವಾರ ಹೊಸ ವರ್ಷದ ನೆಪದಲ್ಲಿ ಪಣಂಬೂರು ಬೀಚ್ ಕ್ಲೀನಿಂಗ್ ಕಾರ್ಯಕ್ರಮಕ್ಕೆ ಬಂದಿದ್ದ ಜಿಲ್ಲಾಧಿಕಾರಿ ರವಿಕುಮಾರ್, ಅಲ್ಲಿನ ಅವ್ಯವಸ್ಥೆಯನ್ನು ನೋಡಿ ದಂಗಾಗಿದ್ದಾರೆ. ಅಷ್ಟೇ ಅಲ್ಲ, ಅಲ್ಲಿ ವರ್ಷಾನುಗಟ್ಟಲೆ ಅನಧಿಕೃತವಾಗಿ ಠಿಕಾಣಿ ಹೂಡಿದ್ದ ಫಾಸ್ಟ್ ಫುಡ್ ಸೆಂಟರ್ ಗಳನ್ನು ಮುಚ್ಚಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಮಂಗಳೂರಿನ ಪತ್ರಕರ್ತರ ಸಂಘ, ಕ್ರೆಡೈ ಮಂಗಳೂರು, ಶಕ್ತಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಮುದ್ರ ತೀರದಲ್ಲಿ ಹಮ್ಮಿಕೊಂಡಿದ್ದ ಬೀಚ್ ಕ್ಲೀನಿಂಗ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮುಖ್ಯ ಅತಿಥಿಯಾಗಿದ್ದರು. ಆದರೆ, ಪತ್ರಕರ್ತರು ಮತ್ತು ಅಲ್ಲಿದ್ದವರು ನಿರೀಕ್ಷೆ ಮಾಡಿರದ ರೀತಿ ಜಿಲ್ಲಾಧಿಕಾರಿ ಗರಂ ಆಗಿದ್ದಾರೆ. ಭಾನುವಾರ ಆಗಿದ್ದರಿಂದ ಪಣಂಬೂರು ಬೀಚ್ ನಲ್ಲಿ ಸಾವಿರಾರು ಮಂದಿ ಬೆಳಗ್ಗಿನಿಂದಲೇ ಸೇರಿದ್ದರು. ಶಾಲಾ ಮಕ್ಕಳು, ದೂರದಿಂದ ಬಂದಿದ್ದ ಪ್ರವಾಸಿಗರೆಲ್ಲ ಸೇರಿದ್ದರು. ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಭರಪೂರ ವಹಿವಾಟು ಕೂಡ ನಡೆದಿತ್ತು.

ಇದೇ ವೇಳೆ, ಅಲ್ಲಿದ್ದ ಫಾಸ್ಟ್ ಫುಡ್ ಸೆಂಟರ್ ಒಂದಕ್ಕೆ ಹೊಕ್ಕ ಜಿಲ್ಲಾಧಿಕಾರಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದಾಗ ಸ್ವತಃ ಶಾಕ್ ಆಗಿದ್ದಾರೆ. ಫಾಸ್ಟ್ ಫುಡ್ ಒಳಗಡೆ ಬಳಸುತ್ತಿದ್ದ ನೀರು ಗಬ್ಬು ನಾರುತ್ತಿತ್ತು. ಬ್ಯಾರೆಲ್ ನಲ್ಲಿ ತುಂಬಿಟ್ಟಿದ್ದ ನೀರು ಕಪ್ಪಾಗಿದ್ದರೆ, ಗೋಬಿ ಮಂಚೂರಿ ಕಾಯಿಸಲು ಬಳಸುತ್ತಿದ್ದ ಎಣ್ಣೆಯೂ ಜಿಡ್ಡು ಗಟ್ಟಿ ಟಾರೆಣ್ಣೆಯಂತಾಗಿತ್ತು. ಗೋಬಿಯನ್ನು ತೆಗೆದು ನೋಡಿದರೆ, ಹುಳಗಳು ಹರಿದಾಡುತ್ತಿದ್ದವು. ವ್ಯಾಪಾರಿಗಳನ್ನು ಏನ್ರೀ ಇದು.. ನಿಮಗೆ ಯಾರ್ರೀ ಲೈಸನ್ಸ್ ಕೊಟ್ಟಿದ್ದು.. ಲೈಸನ್ಸ್ ಕೊಡ್ರೀ ಎಂದು ಜಿಲ್ಲಾಧಿಕಾರಿ ಕೇಳಿದಾಗ, ನಾವು ಇಪ್ಪತ್ತು ವರ್ಷ ಆಯ್ತು.. ಯಾವುದೇ ಲೈಸನ್ಸ್ ಮಾಡಿಕೊಂಡಿಲ್ಲ. ಯಾರು ಕೂಡ ನಮ್ಮನ್ನು ಲೈಸನ್ಸ್ ಕೇಳಲು ಬಂದಿಲ್ಲ ಎಂದು ಉತ್ತರಿಸಿದರು. ಜೊತೆಗಿದ್ದ ಕೆಲವರು ಜಿಲ್ಲಾಧಿಕಾರಿಗೆ ಸಮಜಾಯಿಷಿ ನೀಡಲು ಹೋದರಾದರೂ, ಅಧಿಕಾರಿ ಯಾವುದಕ್ಕೂ ಕ್ಯಾರ್ ಮಾಡಲಿಲ್ಲ.

ಪರಿಶೀಲನೆ ನಡೆಸಿದಾಗ, ಮುಂಬೈನ ಉದ್ಯಮಿಯೊಬ್ಬ ಪಣಂಬೂರು ಬೀಚ್ ನಲ್ಲಿ ನಾಲ್ಕು ಫಾಸ್ಟ್ ಫುಡ್ ಅಂಗಡಿ ಹೊಂದಿದ್ದಾನೆ. ಯಾವುದಕ್ಕೂ ಲೈಸನ್ಸ್ ಹೊಂದಿರಲಿಲ್ಲ. ನಾವು ಎನ್ಎಂಪಿಟಿ ಜೊತೆಗೆ ಅಗ್ರೀಮೆಂಟ್ ಮಾಡಿಕೊಂಡಿದ್ದೇವೆ ಎಂದು ಅಲ್ಲಿ ಶಾಪ್ ನೋಡ್ಕೊಂಡಿದ್ದ ವ್ಯಕ್ತಿ ಜಿಲ್ಲಾಧಿಕಾರಿಯಲ್ಲಿ ವಾದಕ್ಕೆ ನಿಂತಿದ್ದಾನೆ. ಏನು ಎಗ್ರೀಮೆಂಟ್ ಮಾಡ್ಕೊಂಡಿದ್ದೀಯಪ್ಪಾ, ಇಲ್ಲಿ ಕೊಡು ಎಂದಾಗ, ಆತನಲ್ಲಿ ಅಗ್ರೀಮೆಂಟ್ ಕಾಪಿಯೂ ಇರಲಿಲ್ಲ. ಕೂಡಲೇ ಹೊಟೇಲ್ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಅಲ್ಲದೆ, ಪಕ್ಕದ ಪಣಂಬೂರು ಬೀಚ್ ಎಂಟ್ರಿಯಾಗುವಲ್ಲಿ ಬಲಬದಿಗೆ ಇದ್ದ ಫಾಸ್ಟ್ ಫುಡ್ ಒಂದನ್ನು ಸ್ಥಳೀಯ ವ್ಯಕ್ತಿಯೊಬ್ಬರು ನಡೆಸುತ್ತಿದ್ದರು. ಆತನ ಬಳಿ ಜಿಲ್ಲಾಧಿಕಾರಿ ಲೈಸನ್ಸ್ ಇದೆಯಾ ಎಂದು ಕೇಳಿದಾಗ, ನಾವು ನಲ್ವತ್ತು ವರ್ಷದಿಂದ ಇದ್ದೇವೆ. ಯಾರು ಕೂಡ ಲೈಸನ್ಸ್ ಕೇಳ್ಕೊಂಡು ಬಂದಿಲ್ಲ ಎಂದು ಉಡಾಫೆ ಮಾತನಾಡಿದರು.

ಹಾಗಾದರೆ, ನೀವು 40 ವರ್ಷದಿಂದ ಸರಕಾರಿ ಜಾಗವನ್ನು ಕಬಳಿಸಿ ವ್ಯಾಪಾರ ಮಾಡಿಕೊಂಡಿದ್ದೀರಿ.. ಇದಕ್ಕೆ ಎಷ್ಟು ಫೈನ್ ಹಾಕಬೇಕಾಗುತ್ತೆ ಗೊತ್ತಾ ಎಂದು ಜಿಲ್ಲಾಧಿಕಾರಿ ಕೇಳಿದಾಗ, ವ್ಯಾಪಾರಿ ಪೆಚ್ಚಾಗಿದ್ದ. ಪಣಂಬೂರಿನಲ್ಲಿ ಯಾರೊಬ್ಬರ ಬಳಿಯೂ ಲೈಸನ್ಸ್ ಇರಲಿಲ್ಲ. ಅಷ್ಟೇ ಅಲ್ಲದೆ, ಕೊಳೆತ ಕ್ಯಾಬೇಜ್ ಬಳಸಿ ಗೋಬಿ ಮಂಚೂರಿ ಮಾಡುತ್ತಿದ್ದರು. ಅದಕ್ಕೆ ಎಸೆನ್ಸ್ ಇನ್ನಿತರ ಕೆಮಿಕಲ್ ಬಳಸಿ ಗೋಬಿ ಮಾಡುತ್ತಿದ್ದುದನ್ನು ನೋಡಿದ ಜಿಲ್ಲಾಧಿಕಾರಿ ಫುಲ್ ಗರಂ ಆಗಿದ್ದಾರೆ. ಆನಂತರ, ಪ್ರತೀ ಅಂಗಡಿಯಿಂದಲೂ ಗೋಬಿ ಇನ್ನಿತರ ತಿಂಡಿಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲಿದ್ದ ಎಲ್ಲ ಗೋಬಿ ಮಂಚೂರಿಯನ್ನು ಸ್ಥಳದಲ್ಲೇ ಚರಂಡಿಗೆ ಸುರಿಯಲು ಸೂಚಿಸಿದ್ದಾರೆ. ಆಹಾರ ನಿರೀಕ್ಷಕರಿಗೆ ಫೋನ್ ಕರೆ ಮಾಡಿ, ನೀವ್ಯಾಕ್ರೀ ಇರೋದು. ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಏನೇನಿದೆ ಅಂತ ನೋಡೋಕೆ ಆಗಲ್ವೇನ್ರಿ ಎಂದು ಜೋರು ಮಾಡಿದ್ದಾರೆ. ಬೀಚ್ ಬಳಿ ಹಾಕಿದ್ದ 8ರಿಂದ 10 ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ.

ಪಣಂಬೂರು ಬೀಚ್ ಬಳಿಯಲ್ಲೇ ಸರಕಾರದ ವತಿಯಿಂದ ಸುಲಭ್ ಶೌಚಾಲಯ ಇದೆ. ಅದನ್ನು ಸ್ಥಳೀಯವಾಗಿ ನಿರ್ವಹಣೆ ಮಾಡಲು ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ, ನಿರ್ವಹಣೆ ಮಾಡುತ್ತಿದ್ದ ಸಿಬಂದಿ ಅದೇ ಶೌಚಾಲಯದ ಒಂದು ಬದಿಯಲ್ಲಿ ತಮ್ಮ ಊಟ, ವಸತಿಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಹೊರಗಿನಿಂದ ವಿಐಪಿ ಟಾಯ್ಲೆಟ್ ಎಂದು ಹೆಸರು ಹಾಕಿ, ನಾಲ್ಕು ಟಾಯ್ಲೆಟ್ ಮುಚ್ಚಲಾಗಿತ್ತು. ಮಹಿಳೆಯರು, ಮಕ್ಕಳು ಟಾಯ್ಲೆಟ್ ಹೊರಗೆ ಸೇರಿದ್ದನ್ನು ನೋಡಿದ ಜಿಲ್ಲಾಧಿಕಾರಿ, ಅಲ್ಲಿಗೆ ತೆರಳಿದ್ದರು. ಅಲ್ಲಿ ವಿಐಪಿ ಟಾಯ್ಲೆಟ್ ಎಂದು ಹೆಸರು ಹಾಕಿದ್ದನ್ನು ನೋಡಿ ಒಳಹೋದಾಗ ಶಾಕ್ ಆಗುವ ಸರದಿ. ಒಳಗೆ ಚಾಪೆ ದಿಂಬು ಇಡಲಾಗಿತ್ತು. ಕೆಲವರು ಮಲಗಿಕೊಂಡಿದ್ದರೆ, ಮತ್ತೊಂದ್ಕಡೆ ಅಡುಗೆ ಮಾಡುವುದಕ್ಕೆ ಸ್ಟೌವ್, ಪಾತ್ರೆಗಳನ್ನು ಇಡಲಾಗಿತ್ತು.

ಸೇರಿದ್ದ ಮಹಿಳೆಯರಲ್ಲಿ ಅರ್ಧ ಗಂಟೆ ಟೈಮ್ ಕೊಡಿ, ಎಲ್ಲವನ್ನೂ ಮಾಡಿಸುತ್ತೇನೆ ಎಂದ ಜಿಲ್ಲಾಧಿಕಾರಿ ಶೌಚಾಲಯದಲ್ಲಿಯೇ ಕಟ್ಟಡವನ್ನು ವಸತಿ ಮಾಡಿಕೊಂಡಿದ್ದನ್ನು ತೆರವು ಮಾಡಿಸಿದರು. ಅಲ್ಲಿದ್ದ ಎಲ್ಲರನ್ನೂ ಹೊರಗೆ ಕಳಿಸಿದ್ದಲ್ಲದೆ, ಚಾಪೆ ದಿಂಬುಗಳನ್ನು ಹೊರಕ್ಕೆ ಸಾಗಿಸಲು ಸೂಚಿಸಿ ಹೊರಗೆ ಬಿಸಿಲಲ್ಲಿ ಕಾದಿದ್ದ ಜನರನ್ನು ಅಲ್ಲಿನ ನಾಲ್ಕು ಟಾಯ್ಲೆಟ್ ಗಳಿಗೆ ಕಳುಹಿಸಿದರು. ವಿಐಪಿ ಟಾಯ್ಲೆಟ್ ಎಂದು ಹಾಕಿದ್ದ ಬೋರ್ಡನ್ನು ಕಿತ್ತೆಸೆದರು. ಸಾಮಾನ್ಯ ಜನರನ್ನು ದೂರ ಇಡುವುದಕ್ಕಾಗಿ ವಿಐಪಿ ಟಾಯ್ಲೆಟ್ ಎಂದು ಬೋರ್ಡ್ ಹಾಕಿದ್ದನ್ನು ಪ್ರಶ್ನಿಸಿ, ಅಲ್ಲಿದ್ದ ಸಿಬಂದಿಯನ್ನು ರೈಟ್ ಲೆಫ್ಟ್ ಮಾಡಿದ್ದಲ್ಲದೆ, ಬೀಚ್ ಉಸ್ತುವಾರಿ ವಹಿಸಿಕೊಂಡಿದ್ದವರನ್ನೂ ಜೋರು ಮಾಡಿದರು. ಯಾವುದೇ ವ್ಯಾಪಾರ ಮಾಡುವುದಿದ್ದರೂ, ಪಾಲಿಕೆಯಿಂದ ಟ್ರೇಡ್ ಲೈಸನ್ಸ್ ಪಡೆಯಬೇಕಾಗುತ್ತದೆ. ಆದರೆ, ಪಣಂಬೂರಿನಲ್ಲಿ ವ್ಯಾಪಾರ ಮಾಡುತ್ತಿದ್ದವರಲ್ಲಿ ಅದ್ಯಾವುದೂ ಇರಲಿಲ್ಲ. ಅಲ್ಲದೆ, ದಿನವೂ ಸಾವಿರಾರು ಜನರು ಸೇರುವ ಜಾಗದಲ್ಲಿ ಅತ್ಯಂತ ಕಳಪೆ ರೀತಿಯಲ್ಲಿ ಆಹಾರ ತಯಾರಿಸಿ ಕೊಡುತ್ತಿದ್ದರು. ಜಿಲ್ಲಾಧಿಕಾರಿ ಭಾನುವಾರದ ಮಟ್ಟಿಗೆ ಎಲ್ಲವನ್ನೂ ಬಂದ್ ಮಾಡಿಸಿದ್ದಾರೆ.

 
 
 
 
 
 
 
 
 
 
 

Leave a Reply