ಅನಗತ್ಯ ಗೊಂದಲಗಳಿಂದ ಹೊರಬರಲು ರಂಗಮಾಧ್ಯಮ ಆಗತ್ಯ: ಕೃಷ್ಣಮೂರ್ತಿ ಆಚಾರ್ಯ

ಉಡುಪಿ: ದೇಶವು ಎದುರಿಸುತ್ತಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು, ಆ ಗೊಂದಲಗಳಿಂದ ಹೊರಬರಲು ರಂಗಮಾಧ್ಯಮ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ ಎಂದು ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಹೇಳಿದರು.

ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಶುಕ್ರವಾರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲೆಗಳು ಜಾತಿ, ಮತ, ಧರ್ಮಗಳನ್ನು ಮಿರಿ ಎಲ್ಲರನ್ನು ಒಗ್ಗೂಡಿಸುತ್ತದೆ. ಮನರಂಜನೆಯಿಂದ ಮನಸ್ಥಿತಿ ಸುಧಾರಣೆಯಾಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ವಿಶ್ಲೇಷಿಸಿದರು.

ನಿರಂತರ ಕಲೆ ಸಾಂಸ್ಕೃತಿಕ ಚಟುವಟಿಕೆ ನಡೆಯುವುದು ಈ ಮಣ್ಣಿನ ವೈಶಿಷ್ಟ್ಯ. ಸುಮನಸಾ ಇಂಥ ವಿಶಿಷ್ಟತೆಯನ್ನು ಹರಡುತ್ತಿರುವ ಸಂಸ್ಥೆ. ಇದು ರಂಗಭೂಮಿಗೆ ಸೀಮಿತವಾಗೇ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾವು ಎಷ್ಟು ಸಮಯ ಬದುಕಿದ್ದೆವು ಎಂಬುದು ಮುಖ್ಯವಲ್ಲ. ಬದುಕಿದ್ದಾಗ ಏನು ಮಾಡಿದ್ದೆವು. ಸಮಾಜಕ್ಕೆ ಏನು ಕೊಡುಗೆ ನೀಡಿದ್ದೆವು ಎಂಬುದು ಮುಖ್ಯ. ಹಾಗಾಗಿ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಈ ರೀತಿಯ ಕೆಲಸಗಳನ್ನು ಸುಮನಸಾ ಮಾಡುತ್ತಾ ಬಂದಿರುವುದರಿಂದಲೇ ಈ ಸಂಸ್ಥೆಗೆ ಒಳ್ಳೆಯ ಹೆಸರಿದೆ ಎಂದು ತಿಳಿಸಿದರು.

ಸುಮನಸಾ ತಂಡದ ಮಾದರಿ ಕಾರ್ಯಕ್ರಮವು ಮುಂದಿನ ಪೀಳಿಗೆಗೂ ಆದರ್ಶ. ಇಲ್ಲಿ ಚಿಕ್ಕ ಚಿಕ್ಕ ಮಕ್ಕಳನ್ನು ತೊಡಗಿಸಿಕೊಂಡಿರುವುದು ಇದಕ್ಕೆ ಸಾಕ್ಷಿ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌ ಮಾತನಾಡಿ, ಬೇರೆ ಬೇರೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಜನರಿಗೆ ಬೇಕಾದ ಕಾರ್ಯಕ್ರಮ ಕೊಡುತ್ತಾ ಬಂದಿದ್ದಾರೆ. ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸಾಮಾಜಿಕ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ರಾಜ್ಯಮಟ್ಟದಲ್ಲಿ ಹೆಸರು ಗಳಿಸಲಿ ಎಂದು ಹಾರೈಸಿದರು.

ಬಿ. ಯಶವಂತ ಭಕ್ತ ಅವರಿಗೆ ರಂಗಸನ್ಮಾನ ನೀಡಿ ಗೌರವಿಸಲಾಯಿತು. ಏಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್, ಕೊಡಂಕೂರು ಫ್ರೆಂಡ್ಸ್ ಅಧ್ಯಕ್ಷ ಯಶವಂತ ಎಸ್. ಪೂಜಾರಿ, ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ಸುರೇಶ್‌ ಕುರ್ಕಾಲ್‌ ಉಪಸ್ಥಿತರಿದ್ದರು.

ಉಪಾಧ್ಯಕ್ಷ ವಿನಯ್ ಕಲ್ಮಾಡಿ ಸ್ವಾಗತಿಸಿದರು. ಪ್ರಜ್ಞಾ ವಂದಿಸಿದರು. ಪ್ರಜ್ಞಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳ ಭಾಷಣದಿಂದ ಹಿಡಿದು, ನಿರೂಪಣೆವರೆಗೆ ಎಲ್ಲವೂ ತುಳು ಭಾಷೆಯಲ್ಲಿಯೇ ನಡೆಯಿತು. ಬಳಿಕ ಸುಮನಸಾ ಕೊಡವೂರು ಸಂಘಟನೆಯ ಕಲಾವಿದರಿಂದ ತುಳು ನಾಟಕ ‘ಕಾಪ’ ಪ್ರದರ್ಶನಗೊಂಡಿತು.

 
 
 
 
 
 
 
 
 
 
 

Leave a Reply