ಆಚಾರ್ಯ ಮಧ್ವರ ನಿಖರ ವಿಚಾರ ತಿಳಿಸಲು ಸಲಹೆ

ಉಡುಪಿ: ದ್ವೈತ ಮತ ಸಂಸ್ಥಾಪಕ ಆಚಾರ್ಯ ಮಧ್ವರ ನಿಖರ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವಂತೆ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಸಲಹೆ ನೀಡಿದರು.

ತುಳು ಶಿವಳ್ಳಿ ಮಾಧ್ವ ಮಹಾಮಂಡಲ (ತುಶಿಮಾಮ) ಆಶ್ರಯದಲ್ಲಿ ಲೋಕಗುರು ಮಧ್ವಾಚಾರ್ಯರ ತತ್ವ, ಸಂದೇಶ ಹಾಗೂ ಜೀವನಗಾಥೆ ತಿಳಿಸುವ ಮಧ್ವಯಾನ- ಗಾನ ನಮನ ಕಾರ್ಯಕ್ರಮವನ್ನು ಮಂಗಳವಾರ ಕೃಷ್ಣಮಠದ ಮಧ್ವ ಮಂಟಪದಲ್ಲಿ ಉದ್ಘಾಟಿಸಿದರು.

ಆಚಾರ್ಯ ಮಧ್ವರ ಸಮಕಾಲೀನರಾದ ನಾರಾಯಣ ಪಂಡಿತಾಚಾರ್ಯರು ಮಧ್ವಾಚಾರ್ಯರ ಬಗ್ಗೆ ದಾಖಲಿಸಿದ ಮಧ್ವವಿಜಯ ಅಧಿಕೃತ ದಾಖಲೆ. ಅದರ ಆಧಾರದಲ್ಲಿಯೇ ಆಚಾರ್ಯ ಮಧ್ವರ ವಿಚಾರ ತಿಳಿಸಬೇಕು. ಆಚಾರ್ಯರನ್ನು ಸರಿಯಾಗಿ ಅರ್ಥೈಸಿಕೊಳ್ಳದವರು ಅವರ ತತ್ವ ಮತ್ತು ವಿಚಾರಗಳ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಿದ್ದಾರೆ ಎಂದು ಶ್ರೀಪಾದರು ವಿಷಾದಿಸಿದರು.
ಅಭ್ಯಾಗತರಾಗಿದ್ದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಾಜಕ ಕ್ಷೇತ್ರದಲ್ಲಿ ಮಧ್ವ ಮೂರ್ತಿ ಸ್ಥಾಪನೆಗೆ ಯತ್ನ, ನಾಡಗೀತೆಯಲ್ಲಿ ಮಧ್ವರ ಹೆಸರು ಸೇರಿಸುವ ಪ್ರಯತ್ನದ ಬಗ್ಗೆ ವಿವರಿಸಿದರು.
ಪತ್ರಕರ್ತ ಕಿರಣ್ ಮಂಜನಬೈಲು, ಮಂಗಳೂರು ವಿ.ವಿ.ಯಲ್ಲಿ ಮಧ್ವ ಅಧ್ಯಯನ ಪೀಠ ಸ್ಥಾಪನೆಗೆ ಆಗ್ರಹಿಸಿದರು.
ಉಡುಪಿ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ಪರ್ಕಳ, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚೈತನ್ಯ ಎಂ. ಜಿ., ಮಾಜಿ ಅಧ್ಯಕ್ಷ ರಂಜನ್ ಕಲ್ಕೂರ, ತುಶಿಮಾಮ ಗೌರವಾಧ್ಯಕ್ಷ ಅರವಿಂದ ಆಚಾರ್ಯ, ವಿದ್ವಾಂಸ ಡಾ| ಗೋಪಾಲಾಚಾರ್ ಶುಭ ಹಾರೈಸಿದರು.
ತುಶಿಮಾಮ ಅಧ್ಯಕ್ಷ ರವಿಪ್ರಕಾಶ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಜಯರಾಮ ಆಚಾರ್ಯ ನಿರೂಪಿಸಿದರು. ಕೋಶಾಧಿಕಾರಿ ರವೀಂದ್ರ ಆಚಾರ್ ವಂದಿಸಿದರು.
ಬಳಿಕ ವಿದುಷಿ ಉಷಾ ಹೆಬ್ಬಾರ್ ಮತ್ತು ಬಳಗದವರಿಂದ ಮಧ್ವ ಗಾಯನ ಹಾಗೂ ಡಾ| ಗೋಪಾಲಾಚಾರ್ ಅವರಿಂದ ಮಧ್ವ ತತ್ವ ಉಪನ್ಯಾಸ ನಡೆಯಿತು

 
 
 
 
 
 
 
 
 
 
 

Leave a Reply