ಭ್ರೂಣ ಲಿಂಗ ಪತ್ತೆ ಮಾಡುವ ತಂತ್ರದ ದುರ್ಬಳಕೆ ಮತ್ತು ತಡೆ ಕಾಯ್ದೆ ಸಮರ್ಪಕವಾಗಿ ಅನುಷ್ಠಗೊಳ್ಳಬೇಕು – ಡಾ. ಪ್ರತಾಪ್ ಕುಮಾರ್

ಉಡುಪಿ : ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಸರಕಾರ ಹೆರಿಗೆಗೂ ಮುನ್ನ ಭ್ರೂಣ ಲಿಂಗ ಪತ್ತೆ ಮಾಡುವ ತಂತ್ರದ ದುರ್ಬಳಕೆ ಮತ್ತು ತಡೆ ಕಾಯ್ದೆಯನ್ನು ಜಾರಿಗೆ ತಂದಿದೆ. ಇದರ ಸಮರ್ಪಕ ಅನುಷ್ಠಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಸೂತಿ ತಜ್ಞ ಹಾಗೂ ಜಿಲ್ಲಾ ಪಿ.ಸಿ & ಎಎಂಪಿ, ಪಿಎನ್‌ಡಿಟಿ ಸಲಹೆ ಸಮಿತಿಯ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಹೇಳಿದರು. 

ಇಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಸಲಹ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಲ್ಟ್ರಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ತೆರೆಯುವ ಮುನ್ನ ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಾನೂನ್ವಯ ಕಡ್ಡಾಯವಾಗಿದೆ ಎಂದರು.

ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡುವ ಬಗ್ಗೆ ದೂರುಗಳು ಬಂದಲ್ಲಿ ಅಂತಹವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನುನಿನ ಕ್ರಮ ಕೈಗೊಳ್ಳಬೇಕು ಎಂದ ಅವರು ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರು ಕಾಯ್ದೆಯ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಮರಾವ್ ಕೆ ಮಾತನಾಡಿ, ಕೆಲವು ಆಸ್ಪತ್ರೆಗಳಲ್ಲಿ ಉಪಯೋಗಿಸದೆ ಇರುವ ಸ್ಕ್ಯಾನಿಂಗ್ ಯಂತ್ರಗಳನ್ನು ಈಗಾಗಲೇ ಜಪ್ತು ಮಾಡಲಾಗಿದೆ. ಅವುಗಳನ್ನು ಸರಕಾರದ ಮಾರ್ಗಸೂಚಿ ಅನ್ವಯ ವಿಲೇವಾರಿ ಮಾಡಬೇಕು ಎಂದರು.

18 ವರ್ಷ ಒಳಗಿನವರು ಸ್ಕ್ಯಾನಿಂಗ್ ಮಾಡಲು ಬಂದಂತಹ ಸಂದರ್ಭದಲ್ಲಿ ತೀರಸ್ಕರಿಸದೆ ಸ್ಕ್ಯಾನಿಂಗ್ ಮಾಡಬೇಕು. ಆ ಬಗ್ಗೆ ಸೂಕ್ತ ಪ್ರಾಧಿಕಾರಕ್ಕೆ ಮಾಹಿತಿಗಳನ್ನು ತಪ್ಪದೇ ನೀಡಬೇಕು ಎಂದ ಅವರು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಬರುವ ಶೀತ, ಕೆಮ್ಮ, ಜ್ವರದಂತಹ ರೋಗಿಗಳ ಮಾಹಿತಿಗಳನ್ನು ಸಹ ನೀಡಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಮಾತನಾಡಿ, ನೋಂದಾಯಿತ ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿ ಅಪರಾಧ ದೃಢಪಟ್ಟಲ್ಲಿ ಪ್ರಥಮ ಅಪರಾಧಕ್ಕೆ ರಾಜ್ಯ ವೈದ್ಯಕೀಯ ಮಂಡಳಿ ವತಿಯಿಂದ ವೈದ್ಯಕೀಯ ವೃತ್ತಿ ಮಾಡದಂತೆ ಅವರ ಹೆಸರನ್ನು 5 ವರ್ಷಗಳ ಕಾಲಕ್ಕೆ ತೆಗೆದು ಹಾಕಲಾಗುವುದು ಎಂದರು.

ಮಕ್ಕಳ ತಜ್ಞ ಡಾ.ಕಿರಣ್ ಹೆಬ್ಬಾರ್, ಮೆಡಿಕಲ್ ಜೆನಿಕಿಕ್ಸ್ ಸದಸ್ಯ ಡಾ. ಗಿರೀಶ್ ಕೆ. ಎಮ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಹಾಗೂ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಸೆರೆಗಾರ್, ಸಮಾಜ ಸೇವಕರುಗಳಾದ ಸರಿತಾ ಸಂತೋಷ್, ಗಣೇಶ್ ಪೈ, ಮತ್ತಿತರ ವೈಧ್ಯಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply