ಮಣಿಪಾಲ್ ಯೂನಿವರ್ಸಲ್ ಪ್ರೆಸ್ ನ ಪ್ರಕಟಣೆಗೆ ಭಾಷಾಂತರ ಗ್ರಂಥ ಪುರಸ್ಕಾರ

ಮಣಿಪಾಲ್ : ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಪ್ರಸಾರಾಂಗ ವಿಭಾಗವಾಗಿರುವ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಪ್ರಕಟಿಸಿರುವ ‘ಚೋಮಸ್ಯ ಢಕ್ಕಾ’ ಸಂಸ್ಕೃತ ಭಾಷಾಂತರ ಕೃತಿಯು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಂಸ್ಕೃತ ಗ್ರಂಥ ಪುರಸ್ಕಾರ-2021 ಕ್ಕೆ ಆಯ್ಕೆಯಾಗಿದೆ.

“ಚೋಮಸ್ಯ ಢಕ್ಕಾ” ಮೂಲತಃ ಕೋಟ ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯ ಸಂಸ್ಕೃತ ಆವೃತ್ತಿಯಾಗಿದ್ದು ಇದನ್ನು ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಕೊಕ್ಕಡ ಅನಂತಪದ್ಮನಾಭ ಶಾಸ್ತ್ರಿ ಭಾಷಾಂತರ ಮಾಡಿದ್ದಾರೆ. ಸಂಸ್ಕೃತ ಲೇಖಕರನ್ನು ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯವು ಆರಂಭಿಸಿರುವ ‘ಗ್ರಂಥ ಪುರಸ್ಕಾರ ಯೋಜನೆ’ಯಲ್ಲಿ ಈ ಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ.

ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಗ್ರಂಥ ಪುರಸ್ಕಾರ ಪ್ರದಾನ ಸಮಾರಂಭವು ಸೆಪ್ಟೆಂಬರ್ 9 ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಜರಗಲಿದೆ.

ಗ್ರಂಥ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ನ ಪ್ರಧಾನ ಸಂಪಾದಕಿ ಪ್ರೊ. ನೀತಾ ಇನಾಂದಾರ್ ಅವರು, ‘ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಈ ಪ್ರಶಸ್ತಿಯು ಸಂಸ್ಕತ ಭಾಷಾಂತರ ಕೃತಿಗೆ ಲಭಿಸಿದೆಯಾದರೂ ಇದನ್ನು ನಮ್ಮ ಪ್ರಸಾರಾಂಗದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಭಾರತೀಯ ಸಾಹಿತ್ಯ ಕೃತಿಗಳ ಭಾಷಾಂತರ ಮಾಲಿಕೆಗೇ ಸಿಕ್ಕಿದ ಸಾಂಕೇತಿಕ ಗೌರವವೆಂದು ಪರಿಭಾವಿಸಿದ್ದೇವೆ. ಈ ಪ್ರಶಸ್ತಿಯಿಂದಾಗಿ ಭಾಷಾಂತರ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸಗಳನ್ನು ಮಾಡಲು ಉತ್ತೇಜನ ದೊರೆತಂತಾಗಿದೆ’ ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply