ಫೆ.20 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉಡುಪಿ ಜಿಲ್ಲೆಗೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು ಫೆ.20ರಂದು ಉಡುಪಿ ಜಿಲ್ಲೆಗೆ ಬೇಟಿ ನೀಡಲಿದ್ದು, ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿಯಲ್ಲಿ ಬೆಳಿಗ್ಗೆ 10.00ಕ್ಕೆ ನಡೆಯುವ ಜಿಲ್ಲಾ ಮಟ್ಟದ ಬೂತ್ ಸಮಿತಿ ಸಮಾವೇಶದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 2.00ಕ್ಕೆ ಬೈಂದೂರಿನಲ್ಲಿ ನಡೆಯುವ ಬೃಹತ್ ವಾಹನ ಜಾಥಾದಲ್ಲಿ ಪಾಲ್ಗೊಂಡು, 2.30ಕ್ಕೆ ಮುಳ್ಳಿಕಟ್ಟೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯತಂಡ ಮತ್ತು ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣಾ ಪೂರ್ವಸಿದ್ಧತೆ ಹಾಗೂ ಗಂಭೀರತೆಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಜೆ.ಪಿ. ನಡ್ಡಾರವರ ಪ್ರಥಮ ಬೇಟಿ ಬಹಳ ಮಹತ್ವವನ್ನು ಪಡೆದಿದೆ.

ಬೂತ್ ಸಮಿತಿ ಸಮಾವೇಶದಲ್ಲಿ ವಿಧಾನಸಭಾ ಕ್ಷೇತ್ರವಾರು ಹಾಗೂ ಗ್ರಾಮ ಪಂಚಾಯತ್ ಮತ್ತು ಬೂತ್ ಶಹ ಬೂತ್ ಸಮಿತಿಯ ಎಲ್ಲ 12 ಮಂದಿಗೆ ಸೂಕ್ತ ಅಸನದ ವ್ಯವಸ್ಥೆಯನ್ನು ಮಾಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲ 6 ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂಘಟಿತರಾಗಿ ಶಕ್ತಿಕೇಂದ್ರ ಮತ್ತು ಬೂತ್ ಸಮಿತಿಗಳ ವ್ಯವಸ್ಥಿತ ಸಭೆಗಳನ್ನು ನಡೆಸಿ, ಜಿಲ್ಲೆಯ ಎಲ್ಲಾ 1,111 ಬೂತ್ ಸಮಿತಿಗಳ ತಂಡ ಪೂರ್ಣ ಪ್ರಮಾಣದಲ್ಲಿ ಸಮಾವೇಶದಲ್ಲಿ ಭಾಗವಹಿಸುವಂತೆ ನಿಗಾ ವಹಿಸಿ ಎರಡೂ ಕಾರ್ಯಕ್ರಮಗಳ ಯಶಸ್ಸಿಗೆ ಬದ್ಧತೆಯಿಂದ ಶ್ರಮಿಸಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರ ಉಡುಪಿ ಜಿಲ್ಲಾ ಬೇಟಿ ಹೊಸ ಸಂಚಲನ ಸೃಷ್ಠಿಸಿ, ದೊಡ್ಡ ಸಂಘಟನಾ ಶಕ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ವ್ಯವಸ್ಥಿತ ಬೂತ್ ಸಂಪರ್ಕದ ಮೂಲಕ ನಿಗದಿತ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಮಾವೇಶ, ವಾಹನ ಜಾಥಾ ಹಾಗೂ ಸಾರ್ವಜನಿಕ ಸಭೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು. ಸಂಘಟಿತ ಪ್ರಯತ್ನದ ಮೂಲಕ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಲು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಸುಮಾರು 15,000 ಮಂದಿ ಅಪೇಕ್ಷಿತರ ಜಿಲ್ಲಾ ಬೂತ್ ಸಮಿತಿ ಸಮಾವೇಶದಲ್ಲಿ ಜಿಲ್ಲೆಯ ಪ್ರತಿಯೊಂದು ಬೂತ್ ಸಮಿತಿಗಳ ತಲಾ 12 ಮಂದಿ ಪ್ರಮುಖರು ಕಡ್ಡಾಯವಾಗಿ ಉಪಸ್ಥಿತರಿರಬೇಕು. ಈ ಬಗ್ಗೆ ಮಂಡಲ ಮಟ್ಟದಲ್ಲಿ ಫೆ.16ರಂದು ಕಾಪು ಮತ್ತು ಕಾರ್ಕಳ ಹಾಗೂ ಫೆ.17ರಂದು ಬೈಂದೂರು, ಕುಂದಾಪುರ, ಉಡುಪಿ ನಗರ ಮತ್ತು ಉಡುಪಿ ಗ್ರಾಮಾಂತರ ಮಂಡಲಗಳ ಪೂರ್ಣ ಪ್ರಮಾಣದ ಪೂರ್ವಸಿದ್ಧತಾ ಸಭೆಗಳನ್ನು ನಡೆಸಬೇಕು. ಪ್ರತೀ ವಿಧಾನಸಭಾ ಕ್ಷೇತ್ರದ 2 ಮಂದಿ ಬೂತ್ ಅಧ್ಯಕ್ಷರ ಆಸನದ ಸಂಖ್ಯೆಯ ಅದೃಷ್ಟ ಚೀಟಿ ಎತ್ತುವ ಮೂಲಕ ದೀಪ ಪ್ರಜ್ವಲನ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುವುದು ಎಂದರು.

ಫೆ.26ರಂದು ಬೆಳಿಗ್ಗೆ 11.00 ಗಂಟೆಗೆ ನಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ 1,111 ಬೂತ್ ಗಳಲ್ಲಿ ಕಡ್ಡಾಯವಾಗಿ ವೀಕ್ಷಿಸಿ, ವಿವರ ಮತ್ತು ಫೋಟೋವನ್ನು ನಿಗದಿತ ಲಿಂಕ್ ಮೂಲಕ ಅಪ್ಲೋಡ್ ಮಾಡಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ರವರು ಮಾತನಾಡಿ ಕೇಂದ್ರ ಗೃಹ ಸಚಿವ ಅಮಿತ್ ಷಾ ರವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಈಗಾಗಲೇ ಪಕ್ಷದ ಪ್ರಮುಖರ ಸಭೆ ಅತ್ಯಂತ ಪರಿಣಾಮಕಾರಿಯಾಗಿ ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು 5 ಅಭಿಯಾನಗಳನ್ನು ನೀಡಿದ್ದು; ವಿಜಯ ಸಂಕಲ್ಪ ಯಾತ್ರೆ, ಮೋರ್ಚಾ ಸಮಾವೇಶಗಳು, ಫಲಾನುಭವಿಗಳ ಸಮಾವೇಶ, ಪ್ರಗತಿರಥ ವಾಹನ (ಎಲ್ಇಡಿ ವೀಡಿಯೋ), ಪ್ರಣಾಳಿಕೆ ಸಲಹಾ ಅಭಿಯಾನಗಳನ್ನು ಆಯಾ ಸಂಚಾಲಕರ ತಂಡದ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಅತ್ಯಂತ ಯೋಜನಾಬದ್ಧವಾಗಿ ನಡೆಸಬೇಕು. ವಿಜಯ ಸಂಕಲ್ಪ ಅಭಿಯಾನದಲ್ಲಿ ಬಾಕಿ ಇರುವ ಮನೆಗಳನ್ನು ಸಂಪರ್ಕಿಸುವ ಜೊತೆಗೆ ಮಿಸ್ ಕಾಲ್ ಅಭಿಯಾನದ ಮೂಲಕ ಬಿಜೆಪಿ ಸದಸ್ಯತನಕ್ಕೆ ಹೆಚ್ಚಿನ ವೇಗ ನೀಡಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಚುನಾವಣಾ ಉಸ್ತುವಾರಿಗಳು ಮತ್ತು ಮುಂದಿನ 5 ಅಭಿಯಾನಗಳ ಸಂಚಾಲಕರ ತಂಡವನ್ನು ಘೋಷಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್ ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಮತ್ತು ಸಂಚಾಲಕರು, ಮಂಡಲಗಳ ಮೋರ್ಚಾ ಮತ್ತು ಪ್ರಕೋಷ್ಠಗಳ ಸಂಚಾಲಕರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ಮನೋಹರ್ ಎಸ್. ಕಲ್ಮಾಡಿ ವಂದಿಸಿದರು.

 
 
 
 
 
 
 
 
 
 
 

Leave a Reply