Janardhan Kodavoor/ Team KaravaliXpress
29.6 C
Udupi
Sunday, February 5, 2023
Sathyanatha Stores Brahmavara

ತಲಕಾವೇರಿ ಭೂಕುಸಿತ: ಪ್ರಧಾನ ಅರ್ಚಕರ ಮೃತ ದೇಹ ಪತ್ತೆ.

ತಲಕಾವೇರಿ: ಮಹಾ ಮಳೆಯಿಂದಾಗಿ ಭೂಕುಸಿತಕ್ಕೆ ಒಳಗಾದ ತಲಕಾವೇರಿಯ ಗಜಗಿರಿ ಬೆಟ್ಟದ ಅಡಿಯಲ್ಲಿ ಭೂ ಸಮಾಧಿಯಾಗಿರುವವರ ಪೈಕಿ ತಲಕಾವೇರಿಯ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣಾಚಾರ್ ಅವರ ಮೃತದೇಹವನ್ನು ಪತ್ತೆಹಚ್ಚವಲ್ಲಿ ಕಾರ್ಯಾಚರಣಾ ತಂಡ ಯಶಸ್ವಿಯಾಗಿದೆ.
ಮಳೆ ಹಾಗೂ ದಟ್ಟ ಮಂಜಿನ ನಡುವೆಯೂ ಕಳೆದ ಮೂರು ದಿನಗಳಿಂದ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಪೊಲೀಸ್, ಅರಣ್ಯ, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶೋಧ ಕಾರ್ಯ ಮುಂದುವರಿಸಿದ್ದು,ಕಳೆದ ಎರಡು ದಿನಗಳ ಹಿಂದೆ ನಾರಾಯಣ ಆಚಾರ್ ಅವರ ಸೋದರ ಆನಂದ ತೀರ್ಥ ಸ್ವಾಮೀಜಿ ಅವರ ಮೃತದೇಹ ಪತ್ತೆಯಾಗಿತ್ತು.


ಸೋಮವಾರ ನಡೆದ ಕಾರ್ಯಾಚರಣೆ ಸಂದರ್ಭ ಒಂದಷ್ಟು ಬಟ್ಟೆ, ಪಾತ್ರೆಗಳು ಪತ್ತೆಯಾಗಿದ್ದರೆ, ಮಂಗಳವಾರ ಬೆಳಗ್ಗೆ ಒಂದು ಡಸ್ಟರ್ ಹಾಗೂ ಒಂದು ಮಾರುತಿ ಓಮ್ನಿ ಕಾರು, ಬೈಕ್ , ನಾರಾಯಣಾಚಾರ್ ಅವರ ಸಾಕು ನಾಯಿಯ ಮೃತದೇಹ ಹಾಗೂ ಪೂಜಾ ಸಾಮಾಗ್ರಿಗಳು ಪತ್ತೆಯಾಗಿದ್ದವು.
ಪ್ರತಿಕೂಲ ಹವಾಮಾನದ ನಡುವೆಯೂ ನಡೆದ ಶೋಧ ಕಾರ್ಯದ ಹಿನ್ನೆಲೆಯಲ್ಲಿ ನಾರಾಯಣಾಚಾರ್ ಅವರ ಮನೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಕಾಯಾಚರಣೆ ತಂಡದ ಸದಸ್ಯರ ಹರಸಾಹಸದಿಂದ ಮೃತದೇಹವನ್ನು ಮೇಲಕ್ಕೆ ತರಬೇಕಾಯಿತು.


ಆ.5ರ ರಾತ್ರಿ ನಡೆದ ಭೂ ಕುಸಿತದ ಸಂದರ್ಭ ತಲಕಾವೇರಿಯ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣ ಆಚಾರ್, ಅವರ ಪತ್ನಿ ಶಾಂತಾ ಆಚಾರ್, ಸೋದರ ಆನಂದತೀರ್ಥ ಸ್ವಾಮೀಜಿ, ತಲಕಾವೇರಿಯಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾಸರಗೋಡು ಜಿಲ್ಲೆಯ ಅಡೂರಿನ ನಿವಾಸಿ ಶ್ರೀನಿವಾಸ ಪಡ್ಡಿಲ್ಲಾಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಳ್ಳಿಗೆ ನಿವಾಸಿ ರವಿಕಿರಣ್ ರಾವ್ ಸೇರಿದಂತೆ ಐದು ಮಂದಿ ಭೂ ಸಮಾಧಿಯಾಗಿದ್ದರು.


ಇದೀಗ ಇಬ್ಬರ ಮೃತದೇಹ ಪತ್ತೆಯಾದಂತಾಗಿದ್ದು, ಉಳಿದ ಮೂವರ ಮೃತದೇಹಗಳಿಗಾಗಿ ಶೋಧ ಮುಂದುವರಿದಿದೆ. ಮಂಗಳವಾರ ನಡೆದ ಕಾರ್ಯಾಚರಣೆ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕ ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ್‍ಸಿಂಹ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡಿದರು.ನಾರಾಯಣಾಚಾರ್ ಅವರ ಪುತ್ರಿಯರಾದ ಶಾರದಾ ಹಾಗೂ ನಮಿತಾ ಅವರುಗಳೂ ಸ್ಥಳದಲ್ಲಿದ್ದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!