ಆಯುರ್ವೇದದ ಮಾನ್ಯತೆ ಹಾಗೂ ಸ್ವೀಕಾರಾರ್ಹತೆ ಹೆಚ್ಚಳವಾಗಿದೆ: ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್

ಉಡುಪಿ: ಭಾರತದ 5 ಸಾವಿರ ವರ್ಷ ಪುರಾತನ ಆಯುರ್ವೇದವನ್ನು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವಪೂರ್ಣ ಹೆಜ್ಜೆಯಿಟ್ಟಿದ್ದು, ಆಯುಷ್ ಇಲಾಖೆಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗಿದೆ.
ವಿದೇಶಿ ವಿದ್ಯಾರ್ಥಿಗಳು ಆಯುರ್ವೇದ ಅಧ್ಯಯನಕ್ಕೆ ಆಸಕ್ತಿ ವಹಿಸುತ್ತಿದ್ದು, ಆಯುರ್ವೇದದ ಮಾನ್ಯತೆ ಹಾಗೂ ಸ್ವೀಕಾರಾರ್ಹತೆ ಹೆಚ್ಚಳವಾಗಿದೆ ಎಂದು ಕೇಂದ್ರ ಆಯುಷ್ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಹೇಳಿದರು.
ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ರತ್ನಶ್ರೀ ಆರೋಗ್ಯ ಧಾಮ ಉದ್ಘಾಟಿಸಿ ಅವರು ಮಾತನಾಡಿ ಆರೋಗ್ಯ ಇಲಾಖೆ ಮತ್ತು ಆಯುಷ್ ಇಲಾಖೆ ಜತೆಯಾಗಿ ಕಾರ್ಯನಿರ್ವಹಿಸುವಂತೆ ಪ್ರಧಾನಿ ಮೋದಿ ಸ್ಪಷ್ಟ ಸೂಚನೆ ನೀಡಿದ್ದಾರೆ.
ಆಯುಷ್ ಇಲಾಖೆ ದೇಶದ ವಿವಿಧ ಭಾಗಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ವೈದ್ಯ ಪದ್ಧತಿ ಬಗ್ಗೆ ಅಧ್ಯಯನ ಕೈಗೊಂಡಿದ್ದು, ಭಾರತೀಯ ವೈದ್ಯ ಪದ್ಧತಿಗೆ ವೈಜ್ಞಾನಿಕ ಚೌಕಟ್ಟು ರೂಪಿಸುತ್ತಿದೆ. ಈ ಮೂಲಕ ಅನೇಕ ರೋಗಗಳಿಂದ ಜನರನ್ನು ಮುಕ್ತಿಗೊಳಿಸಲು ಪಣತೊಟ್ಟಿದೆ ಎಂದರು.
ಪ್ರತಿಯೊಬ್ಬರು ಕೆಲಸದ ಸ್ಥಳದಲ್ಲಿ ದಿನಕ್ಕೊಮ್ಮೆಯಾದರೂ 5 ನಿಮಿಷ ಯೋಗ ಅಥವಾ ಪ್ರಾಣಾಯಾಮ ರೂಢಿ ಮಾಡಿಕೊಳ್ಳಬೇಕು. ಇದರಿಂದ ತನು, ಮನ, ಆತ್ಮ ಸಂತೃಪ್ತಗೊಳ್ಳುತ್ತದೆ ಎಂದು ಸಚಿವರು ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್‌ಡಿಎಂ ಎಜುಕೇಶನಲ್ ಸೊಸೈಟಿ ಅಧ್ಯಕ್ಷ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಈ ಹಿಂದೆ ಆಯುರ್ವೇದ ಔಷಧಿ ಕೊನೆಯ ಆಯ್ಕೆಯಾಗುತ್ತಿತ್ತು. ಆದರೆ ಇಂದು ಕಾಲ ಬದಲಾಗಿದ್ದು, ಆಯುರ್ವೇದ ಮೊದಲ ಆಯ್ಕೆಯಾಗುತ್ತಿದೆ. ಚಿಕಿತ್ಸೆಯೂ ಫಲಕಾರಿಯಾಗುತ್ತಿದೆ.
ಯೋಗ ಮತ್ತು ಆಯುರ್ವೆದಕ್ಕೆ ವಿಶ್ವಮಾನ್ಯತೆ ದೊರೆಯುತ್ತಿದೆ. ಆಯುರ್ವೇದ ವೈದ್ಯರು ರೋಗ ಚಿಕಿತ್ಸಕರು ಮಾತ್ರವಲ್ಲದೆ ರೋಗ ನಿರೋಧಕರಾಗಿದ್ದಾರೆ. ಇದರಿಂದ ಕರೊನಾ, ಕ್ಯಾನ್ಸರ್ ಮೊದಲಾದ ರೋಗಗಳನ್ನು ಗುಣಪಡಿಸಲು ಸಾಧ್ಯವಿದೆ ಎಂದು ಹೇಳಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್, ಉಪಾಧ್ಯಕ್ಷ ಡಿ. ಸುರೇಂದ್ರಕುಮಾರ್, ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply