ಮಂಗಳೂರಿನಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ನಾಲ್ಕು ಮಂದಿ ಬಲಿ

ಮಂಗಳೂರು: ನಗರದಲ್ಲಿ ಕೊರೊನಾ ಉಲ್ಬಣವಾಗುತ್ತಿರುವ ಮಧ್ಯೆಯೇ ಬ್ಲ್ಯಾಕ್‌ ಫಂಗಸ್‌ ಸೋಂಕು ಹೆಚ್ಚಾಗಿದೆ.ಕೋವಿಡ್‌ ಸೋಂಕಿತರಾಗಿ ಗುಣಮುಖರಾದ ಮಧುಮೇಹ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಮಡಿಕೇರಿ ಹಾಗೂ ದಾವಣಗೆರೆಯ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಬ್ಲಾಕ್‌ ಫಂಗಸ್‌ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇದರ ಜತೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇದೇ ಕಾರಣದಿಂದ ಆಪರೇಶನ್‌ ಕೂಡ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಈ ಸೋಂಕು ರಾಜ್ಯದ 100ಕ್ಕೂ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿದ್ದು, ನಾನಾ ಕಡೆಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿರುವುದು ಆತಂಕಕಾರಿಯಾಗಿದೆ. ಬೆಂಗಳೂರಿನಲ್ಲಿ ಇಬ್ಬರು, ಬಾಗಲಕೋಟೆ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಒಬ್ಬರಂತೆ ಬ್ಲ್ಯಾಕ್‌ ಫಂಗಸ್‌ ರೋಗಿಗಳು ಮೃತರಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಮೃತಪಟ್ಟ ಎಲ್ಲರೂ ಕೋವಿಡ್‌ ಸೋಂಕಿತರಾಗಿ ಗುಣಮುಖರಾದವರು. ಕೆಲವರಲ್ಲಿ ಇನ್ನೂ ಸೋಂಕಿನ ಲಕ್ಷಣಗಳು ಉಳಿದಿವೆ ಎನ್ನಲಾಗಿದೆ.

ದೇಹದ ರೋಗ ನಿರೋಧಕ ಶಕ್ತಿ ವಿಪರೀತ ಸ್ಟಿರಾಯ್ಡ್‌ ಬಳಕೆಯಿಂದಾಗಿ ಕುಸಿದು ಅತಿ ಸೂಕ್ಷ್ಮ ಶಿಲೀಂಧ್ರಗಳ ದಾಳಿಗೆ ಕಂಗೆಡುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಮೊದಲು ಮೂಗು, ಶ್ವಾಸಕೋಶ, ಕಣ್ಣು ಮತ್ತು ಬಳಿಕ ಮೆದುಳಿಗೆ ಫಂಗಸ್‌ ದಾಳಿ ನಡೆಸುತ್ತದೆ ಎನ್ನಲಾಗಿದೆ.

 
 
 
 
 
 
 
 
 
 
 

Leave a Reply