ನಾಗರಿಕ ಅರಿವಿಗೆ ಅಮೃತ ಮಹೋತ್ಸವ ಬಳಕೆಯಾಗಲಿ

ಉಡುಪಿ : “ಸಂವಿಧಾನ, ಪ್ರಜಾಪ್ರಭುತ್ವ, ನಾಗರೀಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಸಾಧ್ಯವಾದಷ್ಟು ವ್ಯಾಜ್ಯಗಳನ್ನು ಕೋರ್ಟಿನಿಂದ ಹೊರಗೆ ಬಗೆಹರಿಸುವ ಬಗ್ಗೆ ಗಮನಹರಿಸಬೇಕಾಗಿದೆ.

ಗಾಂಧೀಜಿಯವರು ಕಲಿಸಿದ ಶಾಂತಿಯುತ ಹೋರಾಟದ ಮಹತ್ವವನ್ನು ಮನವರಿಕೆ ಮಾಡಬೇಕಾಗಿದೆ. ಇದು ರಾಜಕೀಯೇತರ ಸಂಘಟನೆಗಳ ಮೂಲಕ ಅಮೃತ ಮಹೋತ್ಸವದ ನೆಪದಲ್ಲಿ ನಡೆಯಬೇಕಾಗಿದೆ” ಎಂದು ಮಾನವ ಹಕ್ಕು ಸಂರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರವೀಂದ್ರನಾಥ ಶ್ಯಾನುಭಾಗರು ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಹಾಗೂ ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ ಇವರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ 75 ಅರಿವು ಕಾರ್ಯಕ್ರಮಗಳ ಅನುಷ್ಠಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅವರು 75 ಕಾರ್ಯಕ್ರಮಗಳ ಅನುಷ್ಠಾನದ ವಿವರಗಳನ್ನು ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು. ವೈಕುಂಠ ಬಾಳಿಗ ಕಾಲೇಜಿನ ಪ್ರಾಂಶುಪಾಲೆ ಡಾ. ನಿರ್ಮಲ ಕುಮಾರಿ ಸ್ವಾಗತಿಸಿದರು. ಉಪನ್ಯಾಸಕ ಡಾ. ರಘುನಾಥ ವಂದಿಸಿದರೆ, ಡಾ. ದುಗ್ಗಪ್ಪ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply