ಸಾತ್ವಿಕ್ ಪದ್ಮನಾಭ ಭಟ್ ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ

ಉಡುಪಿ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ ಪದ್ಮನಾಭ ಭಟ್, ವಿಜ್ಞಾನ ವಿಭಾಗದಲ್ಲಿ 595 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಎರಡನೇ ರ್ಯಾಂಕ್ ಮತ್ತು ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.  ಕೊಡವೂರು ಶಾನುಭಾಗ್ ನಗರದ ನಿವಾಸಿಯಾಗಿರುವ ಸಾತ್ವಿಕ್, ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿ ತಲಾ 100, ಇಂಗ್ಲಿಷ್, ಹಿಂದಿಯಲ್ಲಿ 98 ಮತ್ತು ಭೌತಶಾಸ್ತ್ರದಲ್ಲಿ 99 ಅಂಕಗಳನ್ನು ಪಡೆದಿದ್ದಾರೆ.

ಇವರ ತಂದೆ ಶಶಿ ಕುಮಾರ್ ಮಲ್ಪೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದು, ತಾಯಿ ತ್ರಿವೇಣಿ  ಮಲ್ಪೆ ಅಂಚೆ ಕಚೇರಿಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿದ್ದಾರೆ. ಇವರ ಅಕ್ಕ ಶರಣ್ಯ ಎಂಎಸ್ಸಿ ಮುಗಿಸಿ ಬ್ಯಾಂಕಿಂಗ್ ಪರೀಕ್ಷೆ ಬರೆಯುತ್ತಿದ್ದಾರೆ. ಮಲ್ಪೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢಶಿಕ್ಷಣ ಮಾಡಿರುವ ಸಾತ್ವಿಕ್, ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು.

ರಸಪ್ರಶ್ನೆ, ಭಾಷಣ, ಯಕ್ಷಗಾನದಲ್ಲಿ ಆಸಕ್ತಿ ಹೊಂದಿರುವ ಸಾತ್ವಿಕ್, ಸಂಗೀತದಲ್ಲಿ ಜ್ಯೂನಿಯರ್ ಆಗಿದ್ದಾರೆ. ‘ತುಂಬಾ ಖುಷಿಯಾಗಿದೆ. ನಾನು ನಿರೀಕ್ಷಿಸಿದಕ್ಕಿಂತ ಹೆಚ್ಚು ಅಂಕ ಸಿಕ್ಕಿದೆ. ಇದಕ್ಕೆ ನನ್ನ ತಂದೆತಾಯಿ ಮತ್ತು ಅಕ್ಕ ಮತ್ತು ಕಾಲೇಜಿನವರ ಪ್ರೋತ್ಸಾಹವೇ ಕಾರಣ. ಕೋವಿಡ್ ಸಮಯದಲ್ಲಿ ಆನ್‌ಲೈನ್ ತರಗತಿಯಲ್ಲೂ ಉಪನ್ಯಾಸಕರು ನಮಗೆ ಅರ್ಥ ಆಗುವ ರೀತಿಯಲ್ಲಿ ಹೇಳಿಕೊಟ್ಟಿದ್ದರು.

ಪಾಠ ಒಳ್ಳೆಯ ರೀತಿಯಲ್ಲಿ ಕೇಳುತ್ತಿದ್ದೇ. ಅಂದಿನ ಪಾಠ ಅಂದೇ ಓದುತ್ತಿದ್ದೆ. ಕೋಚಿಂಗ್ ತರಗತಿಗೂ ಹೋಗುತ್ತಿದ್ದೆ. ಸಿಇಟಿಯಲ್ಲಿ ಒಳ್ಳೆಯ ರ್ಯಾಂಕ್ ಪಡೆದು ಒಳ್ಳೆಯ ಇಂಜಿನಿಯರ್ ಕಾಲೇಜಿಗೆ ಹೋಗಬೇಕೆಂದಿದ್ದೇನೆ. ಮುಂದೆ ಕಂಪ್ಯೂಟರ್ ಇಂಜಿನಿಯರ್ ಆಗುವ ಆಸೆ ನನ್ನದು’ ಎಂದು ಸಾತ್ವಿಕ್ ತಿಳಿಸಿದ್ದಾರೆ.

‘ಮಗನ ಸಾಧನೆ ನೋಡಿ ತುಂಬಾ ಸಂತೋಷ ಆಗಿದೆ. ಅವರ ನಿರೀಕ್ಷಿಸಿದಷ್ಟೆ ಅಂಕಗಳನ್ನು ಪಡೆದಿದ್ದಾನೆ. ಅದಕ್ಕೆ ಬೇಕಾದ ತಯಾರಿ ಕೂಡ ಒಳ್ಳೆಯ ರೀತಿ ಮಾಡುತ್ತಿದ್ದನು. ಯಾವುದೇ ಸಂಶಯ ಇದ್ದರೂ ಉಪನ್ಯಾಸಕರಲ್ಲಿ ಕೇಳುತ್ತಿದ್ದನು. ಯೂಟ್ಯೂಬ್‌ನಲ್ಲಿಲ್ಲೂ ನೋಡುತ್ತಿದ್ದನು. ಅವನ ಅಕ್ಕ ಅವನಿಗೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹ ನೀಡಿದ್ದಳು. 

ಅವಳ ನೋಟ್ಸ್ ಕೂಡ ಅವನಿಗೆ ತುಂಬಾ ಸಹಾಯವಾಗಿತ್ತು. ಎಸೆಸೆಲ್ಸಿಯಲ್ಲಿ ಕೆಲವರು ಹೇಳುತ್ತಿದ್ದ ಕೋವಿಡ್‌ನಿಂದ ಹೆಚ್ಚಿನವರಿಗೆ ಪೂರ್ಣ ಅಂಕ ಕೊಟ್ಟಿದ್ದಾರೆ ಎಂದು. ಅದಕ್ಕೆ ನಾನು ಮಗನಿಗೆ ಹೇಳಿದ್ದೆ, ನೀನು ಪಿಯುಸಿಯಲ್ಲಿ ರ್ಯಾಂಕ್ ಗಳಿಸುವ ಮೂಲಕ ಆ ಮಾತು ಸುಳ್ಳು ಎಂದು ತೋರಿಸಬೇಕು. ಅದೇ ರೀತಿ ತುಂಬಾ ಶ್ರಮ ಪಟ್ಟು ರಾಜ್ಯಕ್ಕೆ ಟಾಪರ್ ಆಗಿ ಬಂದಿದ್ದಾನೆ’ ಎಂದು ಪೋಷಕರು ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply