2ರಿಂದ-6ರ ತನಕ ಕೋಟ ವಿವೇಕ ವಿದ್ಯಾಸಂಸ್ಥೆ ಅಮೃತಮಹೋತ್ಸವ

ಕೋಟ, ನ.೧೭: ಕೋಟ ವಿದ್ಯಾಸಂಘ ರಿ. ಕೋಟ ಆಡಳಿತಕ್ಕೊಳಪಟ್ಟ ವಿವೇಕ ವಿದ್ಯಾಸಂಘಗಳ ಅಮೃತಮಹೋತ್ಸವ ಕಾರ್ಯಕ್ರಮ ಡಿ.೨ರಿಂದ ೬ರ ತನಕ ವಿದ್ಯಾಸಂಸ್ಥೆಯ ಆವರಣದಲ್ಲಿ ಜರಗಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಅವರು ನ.16ರಂದು ಸಂಸ್ಥೆಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಯುಕ್ತ ಡಿ.೨ರಂದು ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಒ.ಎನ್.ಜಿ.ಸಿ. ಸಂಸ್ಥೆಯ ನಿವೃತ್ತ ಚೀಫ್ ಜನರಲ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ರನಟಿ ವಿನಯಪ್ರಸಾದ್, ಜಿಲ್ಲಾ ಉಸ್ತವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲಾದವರು ಉಪಸ್ಥಿತರಿರುವರು.

ಈ ಸಂದರ್ಭ ಐ.ಸಿ.ಐ.ಸಿ.ಐ. ಪ್ರತಿಷ್ಠಾನ ಕೊಡಮಾಡಿದ ಸೆಮಿನಾರ್ ಹಾಲ್‌ಗಳ ಲೋಕಾರ್ಪಣೆ, ಟೆಕ್ನಾಲಜಿ ಸೆಂಟರ್ ಲೋಕಾರ್ಪಣೆ ನಡೆಯಲಿದೆ ಎಂದರು. ಡಿ.2ರಂದು ಬೆಳಗ್ಗೆ9.30ಕ್ಕೆ ವಿವೇಕ ಹಿಂದಿನ ವಿದ್ಯಾರ್ಥಿಗಳ ಸಮಾಗಮ
ಅಮೃತಮಿಲನ, ಹಿಂದಿನ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ನಡೆಯಲಿದ್ದು, ಉದ್ಯಮಿ ಚೇಂಪಿ ಮಾಧವ ಪೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅಭ್ಯಾಗತರಾಗಿ ರಂಗಭೂಮಿ, ಚಲನಚಿತ್ರ ಕಲಾವಿದೆ ಬಿ. ಜಯಶ್ರೀ, ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇಂಪಿ
ರಮಾನಂದ ಭಟ್ ಉಪಸ್ಥಿತರಿರುವರು. ಡಿ.೪ರಂದು ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಜರಗಲಿದ್ದು, ನಾಡೋಜ
ಡಾ.ಜಿ.ಶಂಕರ್‌ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿರುವರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿಜ್ಞಾನ, ವೈದ್ಯಕೀಯ, ಪಾರಂಪರಿಕ, ಕೃಷಿ, ಕೈಗಾರಿಕೆ ಮೊದಲಾದ ವಿಚಾರದ ಕುರಿತು ವಸ್ತುಪ್ರದರ್ಶನ ಜರಗಲಿದ್ದು ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರುವ ಶಿಕ್ಷಕರಿಗೆ ಒ.ಒ.ಡಿ ಸೌಲಭ್ಯವಿದೆ.

ಪ್ರತಿದಿನ ಜಾದು, ಸಂಗೀತ ರಸಮಂಜರಿ, ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಿದೆ. ಡಿ.5ಮತ್ತು 6ರಂದು ಸಂಸ್ಥೆಯ ಸಹಕಾರದೊಂದಿಗೆ ಕ.ಸಾ.ಪ. ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಆಡಳಿತ ಮಂಡಳಿ ಕಾರ್‍ಯದರ್ಶಿ ರಾಮದೇವ ಐತಾಳ, ಖಜಾಂಚಿ ವೆಲೇರಿಯನ್ ಮೆನೇಜಸ್, ಜತೆ ಕಾರ್‍ಯದರ್ಶಿ ಮಂಜುನಾಥ ಉಪಾಧ್ಯ, ಸದಸ್ಯರಾದ ಭಾಸ್ಕರ ಹಂದೆ, ಸುಬ್ರಹ್ಮಣ್ಯ ಹೇರ್ಳೆ, ಪ್ರಾಂಶುಪಾಲ ಜಗದೀಶ್ ನಾವಡ, ಸಾಂಸ್ಕೃತಿಕ ಸಮಿತಿಯ ನರೇಂದ್ರ ಕುಮಾರ್, ಪ್ರಚಾರ ಸಮಿತಿಯ ಪ್ರಶಾಂತ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 

Leave a Reply