ಉಡುಪಿ ಕೊರಂಗ್ರಪಾಡಿ ಮಿಲ್ಲತ್ ಎಜ್ಯುಕೇಶನ್ ಟ್ರಸ್ಟ್ ಪಬ್ಲಿಕ್ ಸ್ಕೂಲ್ ನಲ್ಲಿ ಸರಕಾರದ ಆದೇಶವನ್ನೂ ಮೀರಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ 

ಸರಕಾರದ ನಿಯಮ ಉಲ್ಲಂಘಿಸಿ ಪರೀಕ್ಷೆ ನಡೆಸಿದ ಶಾಲಾ ಮುಖ್ಯಸ್ಥರ ವಿರುದ್ಧ ದೂರು ದಾಖಲು

ಕೋವಿಡ್ ಹಿನ್ನೆಲೆ ರಾಜ್ಯ ಸರಕಾರ ಯಾವುದೇ ಶಾಲೆಗಳನ್ನು ನಡೆಸಬಾರದು, ಮಕ್ಕಳನ್ನು ಕರೆಸಬಾರದು ಎಂದು ಸೂಚಿಸಿದ್ದರೂ ಉಡುಪಿಯ ಖಾಸಗಿ ಶಾಲೆಯೊಂದು 10ನೇ ತರಗತಿ ವಿದ್ಯಾರ್ಥಿಗಳನ್ನು ಕರೆಸಿ, ಅನುಮತಿ ಇಲ್ಲದೆ ಪರೀಕ್ಷೆ ನಡೆಸಿದೆ.

ಇದನ್ನು ತಿಳಿದ ಕೂಡಲೇ ಉಡುಪಿ ತಹಶೀಲ್ದಾರ್ ದಾಳಿ ಮಾಡಿ ಸಂಸ್ಥೆ ಹಾಗೂ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಶುಕ್ರವಾರ ನಡೆದಿದೆ. ನಗರದ ಹೊರವಲಯದ ಕೊರಂಗ್ರಪಾಡಿಯಲ್ಲಿರುವ ಮಿಲ್ಲತ್ ಎಜ್ಯುಕೇಶನ್ ಟ್ರಸ್ಟ್ ಪಬ್ಲಿಕ್ ಸ್ಕೂಲ್ ನಲ್ಲಿ ಸರಕಾರದ ಆದೇಶವನ್ನೂ ಮೀರಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ.

ಇನ್ನು ಖಾಸಗಿ ಶಾಲಾ ಮುಖ್ಯ ಶಿಕ್ಷಕಿ ಡಾ. ಜುನೈದ್ ಸುಲ್ತಾನ್ ಅವರು ರಾಜ್ಯ ಸರಕಾರ ಮತ್ತು ಜಿಲ್ಲಾಧಿಕಾರಿ ಯವರ ಆದೇಶ ಉಲ್ಲಂಘಿಸಿ ಮಕ್ಕಳನ್ನು ಶಾಲೆಗೆ ಕರೆಸಿ, ಮೂರು ಕೊಠಡಿಗಳಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುತ್ತಿತ್ತು. ಇದಲ್ಲದೆ ಕೊಠಡಿ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಒಳಗಡೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದದ್ದು ವಿಪರ್ಯಾಸವೇ ಸರಿ.

ಈ ರೀತಿ ಕದ್ದು ಪರೀಕ್ಷೆ ನಡೆಸುತ್ತಿದ್ದ ಮುಖ್ಯಶಿಕ್ಷಕಿ ಡಾ. ಜುನೈದ್ ಸುಲ್ತಾನ್ ಅವರ ಬಳಿ ಈ ಕುರಿತು ಕೇಳಿದರೆ, ಪೋಷಕರು ಶಾಲೆಯ ಶುಲ್ಕ ಕೊಟ್ಟಿದ್ದಾರೆ, ಹಾಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡುವುದು ನಮ್ಮ ಕೆಲಸ. ಮಕ್ಕಳಿಗೆ ರೋಗನಿರೋಧಕ ಶಕ್ತಿ ಇರುತ್ತದೆ, ಆದ್ದರಿಂದ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹೊರಗಡೆ ಎಲ್ಲ ಜನ ತಿರುಗಾಡುತ್ತಿದ್ದಾರೆ, ಶಾಲೆಗೆ ಮಾತ್ರ ಈ ಎಲ್ಲಾ ನಿಬಂಧನೆ ಯಾಕೆ ಎಂದು ಮೊಂಡು ವಾದ ಮಾಡಿದ್ದಾರೆ.

ಇನ್ನು ಮಕ್ಕಳ ಜೀವದ ಜೊತೆ ಈ ವರ್ತನೆ ತೋರಿದ ಶಿಕ್ಷಕಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಅವರು ಆಡಳಿತ ಮಂಡಳಿ ಹಾಗೂ ಮುಖ್ಯಶಿಕ್ಷಕಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಪರೀಕ್ಷೆಯನ್ನು ಸ್ಥಗಿತಗೊಳಿಸಿ, ಮಕ್ಕಳನ್ನು ಮನೆಗೆ ಕಳುಹಿಸಿದ್ದಾರೆ.

ಕೊರೋನಾ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿರುವ ಕುರಿತು ಈಗಾಗಲೇ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಆಡಳಿತ ಮಂಡಳಿ ವಿರುದ್ಧ ಕಾಪು ಪೊಲೀಸ್ ಠಾಣೆಗೆ ದೂರು ನೀಡಿ, ಪ್ರಕರಣ ದಾಖಲು ಮಾಡಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply