ಹುಣ್ಣಿಮೆಯಿರುಳು~ ರಚನೆ:ರಾರಾ.(ಡಾ.ರಾಘವೇಂದ್ರ ರಾವ್)

ಇರುಳಿನ ಒಡಲೊಳು ಮಾಳಿಗೆ ಮೇಗಡೆ
ಸುಳಿಯುವ ಗಾಳಿಗೆ
ಕುಸುಮದ ಪರಿಮಳ ಬಲವಂತೆ/
ಹರೆಯದ ಚೆದುರೆಯ ನಾಚಿದ ಕೆನ್ನೆಯ
ಮೋಹಕ ಮೋರೆಗೆ
ಚಂದಿರ ಕಾಂತಿಯ ತರುವಂತೆ //

ಸರಸಿಯ ನಡುವಲಿ ಬಳುಕುವ ಅಲೆಯಲಿ
ನಲಿಯುವ ಅಂಚೆಗೆ
ಇನಿಯನ ತಬ್ಬಿದ ನೆನಪಂತೆ /
ಸನಿಹದೊಳಿದ್ದರೂ ಅಗಲಿದ ತೆರದಲಿ
ಮಿಥುನದ ಕೋಕಿಗೆ
ವಿರಹದ ಬೆಂಕಿಯು ಸುಡುವಂತೆ //

ಎದೆಯಲಿ ಅರಳಿದ ಬಯಕೆಯ ತೇರಿನ
ಕುಮುದದ ಪ್ರೀತಿಗೆ
ತಿಂಗಳನೂರಿನ ಕನಸಂತೆ /
ನಿದ್ದೆಯ ಕಂಪಲಿ ಮೌನದಿ ಮೆರೆಯುವ
ಹಸಿರಿನ ಭುವಿಗೆ
ಬೆಳ್ಳನೆ ಬೆಳಕಿನ ಚೆಲುವಂತೆ //

ಕೊರಳನು ಬಳಸುವ ಕಾಂತೆಯು ಇರದಿರೆ
ಬಳಲಿದ ವಿರಹಿಗೆ
ಮಿಲನದ ಬಯಕೆಯು ಉಳಿವಂತೆ /
ನೀಲಿಯ ಕಡಲಲಿ ಏರುತ ಇಳಿಯುವ
ಬಿಳುಪಿನ ತೆರೆಗೆ
ತೀರವ ಸೇರುವ ಮನಸಂತೆ //

 
 
 
 
 
 
 
 
 
 
 

Leave a Reply