ಛಾಯಾಗ್ರಾಹಕನ ಛಾಯಾ ಕಂಗಳಿಗೆ ಸೆರೆ ಸಿಕ್ಕ ಯಕ್ಷ ಕೃಷ್ಣ-ರಾಧೆ  

ಅಖಿಲಪ್ರದ ಶ್ರೀಕೃಷ್ಣ ಭಗವಂತ ಜಗತ್ ವ್ಯಾಪಿ.. ಸುಖಕ್ಕೂ ಕೃಷ್ಣ… ದುಃಖಕ್ಕೂ ಕೃಷ್ಣ.. ನಲಿವಿನಲ್ಲೂ ಅವನ ನೆನಪು.. ನೋವಿನಲ್ಲೂ ಅವನ ಸ್ಮರಣೆ. ಕೃಷ್ಣ ಎಂಬ ನಾಮವೇ ತೀರದ ಆಕರ್ಷಣೆ. ಅಲ್ಲಿ ವಯಸ್ಸಿನ‌ ಹಂಗಿಲ್ಲ, ಹೆಣ್ಣು ಗಂಡೆಂಬ ತಾರತಮ್ಯವಿಲ್ಲ. ಎಲ್ಲರಿಗೂ ಎಲ್ಲ ರೀತಿಯಲ್ಲೂ ಎಲ್ಲ ಸಮಯದಲ್ಲೂ ಎಲ್ಲೆಡೆಯೂ ಸಲ್ಲುವವನು‌ ಕೃಷ್ಣ.  

ಅವತಾರ ಆರಂಭದಿಂದ ಅಂತ್ಯದವರೆಗೂ ಅವನ ಲೀಲಾ ವಿನೋದಗಳು ವರ್ಣಿಸದಸದಳ. ಅವನ ವಿಶೇಷ ರೂಪ ಲಾವಣ್ಯಗಳು ಕಲಾರಾಧಕರಿಗೆ, ಲೀಲಾ ವಿನೋದಗಳು ಆಸ್ತಿಕರಿಗೆ, ಚಾಣಾಕ್ಷತೆ ರಾಜಕೀಯ ಮುತ್ಸದ್ದಿಗಳಿಗೆ ಆಕರ್ಷಣೆಯ ಕೇಂದ್ರವಾದರೆ ಸಾಮಾನ್ಯ ಜನರಿಗೆ ಅವನು ದೇವತಾಸ್ವರೂಪಿ, ಭಕ್ತವತ್ಸಲ, ಆಪದ್ಭಾಂದವ,‌ ಅನಾಥರಕ್ಷಕ. ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ನೋಡಿ ನಾವು ಸಂಭ್ರಮಿಸುವುದು ಒಂದೆಡೆಯಾದರೆ, ನಾವೇ ಅವನ ವೇಷ ಧರಿಸಿ ಖುಷಿ ಪಡುವುದು ಇನ್ನೊಂದು ವಿಧಾನ.  ಅದಕ್ಕೊಂದು ವೇದಿಕೆ ಯಕ್ಷಗಾನ‌ ಕಲೆ. ಮಾತು, ಹಾಡುಗಾರಿಕೆ, ಅಭಿನಯ, ವಿಷಯ ಜ್ಞಾನ, ಭಾಷೆಯ ಮೇಲಿನ‌ ಹಿಡಿತ, ಕುಣಿತ ಇವೆಲ್ಲವುಗಳ ಸಂಗಮ ಯಕ್ಷಗಾನ‌ ಕಲೆ. ಕರಾವಳಿ ಜನ ಇಷ್ಟ ಪಡುವ, ಪ್ರೀತಿಸುವ, ಆರಾಧಿಸುವ, ಗೌರವಿಸುವ, ಹೆಮ್ಮೆ ಪಡುವ ಈ ಕಲೆಯಲ್ಲಿ ವೇಷಧಾರಿಯ ಪಾತ್ರ ವಿಶಿಷ್ಟ. ಇಂತಹ ವೇಷಧಾರಿಯ ವೇಷ ಭೂಷಣವನ್ನು  ವೇದಿಕೆಯಲ್ಲಿ‌  ಮಾತ್ರ ನೋಡಿ ಇಷ್ಟ ಪಡುವ ದಿನಗಳು ಈ ಕೋವಿಡ್ 19 ರಿಂದಾಗಿ ಕಷ್ಟ ಸಾಧ್ಯ.  ಇಂತಹ ಸಂದರ್ಭದಲ್ಲಿ ಈ ಅಪರೂಪದ ದೃಶ್ಯಗಳನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದು ದಾಖಲೀಕರಿಸುವ ಆ ಮೂಲಕ ಎಲ್ಲ ಕಲಾಭಿ ಮಾನಿಗಳಿಗೆ ತಲುಪಿಸುವ ಕೆಲಸ ಮಾಡುವವರು ನಮ್ಮ ಛಾಯಾಗ್ರಾಹಕರು. ಅಪರೂಪದ ಚಿತ್ರಗಳನ್ನು ತೆಗೆದು ನಮ್ಮ ಮೊಬೈಲ್ ಮೂಲಕ ಮನೆ ಮನೆ‌ಗೆ  ತಲುಪಿಸುವ ಛಾಯಾಗ್ರಾಹಕರ ಚಾಣಾಕ್ಷತೆ ಮೆಚ್ಚುವಂತದ್ದು. ಅದರಲ್ಲೂ ಮನ ಸೆಳೆವ ರೂಪ, ಮನ ಗೆಲ್ಲುವ ಲಾವಣ್ಯ, ಮನ ಮುಟ್ಟುವ ಅಭಿನಯದಿಂದ ಎಲ್ಲರ ಮನಗೆಲ್ಲುವ ಜೋಡಿ ಇದ್ದರಂತೂ ಛಾಯಾಗ್ರಾಹಕರ ಮನದ ಸಂತಸಕ್ಕೆ ಪಾರವೇ ಇಲ್ಲ. 

ಮನಕ್ಕೆ ಆಹ್ಲಾದ ನೀಡುವ ಪ್ರಕೃತಿಯ ಮಡಿಲಲ್ಲಿ ಸೌಂದರ್ಯದಿಂದ ನಳನಳಿಸುತ್ತಾ ವಿಶೇಷ ಲಾವಣ್ಯದಿಂದ  ಕೃಷ್ಣ ರಾಧೆ ಜೋಡಿಯ ವಿಶೇಷ ಛಾಯಾಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನೆಮಾತಾಗಿವೆ.  ಕೃಷ್ಣನಾಗಿ ಕುಮಾರಿ ಅರ್ಪಿತಾ ಶೆಟ್ಟಿ  ಮುಗ್ಧ ಭಾವ ಹೊತ್ತು  ಚೆಂದದ ಮುದ್ದು ಮುಖದ ಹಾವ ಭಾವದಿಂದ ಛಾಯಾಚಿತ್ರಕ್ಕೆ ವಿಶಿಷ್ಟ ಮೆರುಗು ನೀಡಿದ್ದು ವಿಶೇಷ. 
ಅಂತೆಯೇ ರಾಧೆಯಾಗಿ ತನ್ನ ಯಕ್ಷಗಾನದ ಅನುಭವದಿಂದ ಬಳುವಳಿಯಾಗಿ ಬಂದ ವಿಶೇಷ ಹುಡುಗಿ ಕುಮಾರಿ ಬಿಂದಿಯಾ ಶೆಟ್ಟಿ ಎಲ್ಲರ ಹೃದಯ ಕದ್ದದ್ದು ಸುಳ್ಳಲ್ಲ. ಇವರಿಬ್ಬರ ಮುಖದ ಭಾವನೆಗಳನ್ನು ಭಾವನಾತ್ಮಕವಾಗಿ ಸೆರೆಹಿಡಿದು ಕಲಾಸಕ್ತರ ಮನ ಗೆದ್ದ ಛಾಯಾಗ್ರಾಹಕ ವಿನಯ್ ವಿಕ್ಕಿ ಆರ್ ಪೂಜಾರಿ ಮುಂಡ್ಕೂರು ಇವರ ಛಾಯಾ ಪ್ರತಿಭೆ ಅನನ್ಯ. ಸತತ ಮೂರು~ನಾಲ್ಕು  ಗಂಟೆಗಳ ಕಾಲ ನಡೆಸಿದ ಈ  ವಿಶೇಷ ಛಾಯಾಗ್ರಹಣಕ್ಕೆ ವಿಶೇಷ  ಫಲ ದೊರೆತಿದ್ದು ಕಲಾಸಕ್ತರಿಗೆ ಛಾಯಾಪ್ರಿಯರಿಗೆ ,ಕೃಷ್ಣ ಭಕ್ತರಿಗೆ, ಯಕ್ಷಗಾನ ಪ್ರೇಮಿಗಳಿಗೆ ಬಲು ಸಂತಸ ತಂದದ್ದು ಸುಳ್ಳಲ್ಲ.  ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ ಮನೆಯೊಳಗೇ ಇದ್ದು ನಾವೂ ಕಲಾವಿದರನ್ನು ಪ್ರೋತ್ಸಾಹಿಸೋಣ‌. ಕಲೆಯನ್ನು ಆಸ್ವಾದಿಸೋಣ. ಛಾಯಾಗ್ರಹಣವನ್ನು ಛಾಯಾಗ್ರಾಹಕರನ್ನು ಬೆಳೆಸೋಣ.‌

 

 
 
 
 
 
 
 
 
 
 
 

Leave a Reply