ಮಾರ್ಚ್ 20,21 ರಂದು ಎಂ.ಜಿ.ಎಂ ಕೃಷಿ ಸಮ್ಮಿಲನ 

ಉಡುಪಿ: ಎಂ.ಜಿ.ಎಂ ಕಾಲೇಜಿನ ಮಾನವಿಕ ಹಾಗೂ ಭಾಷಾ ವಿಭಾಗಗಳು, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಮತ್ತು ಐ.ಕ್ಯು.ಎ.ಸಿ ಮಾರ್ಚ್ 20 ಮತ್ತು 21ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಎರಡು ದಿನಗಳ ಎಂ.ಜಿ.ಎಂ ಕೃಷಿ ಸಮ್ಮಿಲನ, ಸ್ಥಳೀಯ ಕೃಷಿ ಬದುಕು ಮತ್ತು ಉತ್ಪನ್ನಗಳ ಅವಲೋಕನ ಎಂಬ ವಿಶೇಷ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದೆ. 

ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಕೃಷಿಯ ಕುರಿತು ಆಸಕ್ತಿ ಹೆಚ್ಚಿಸುವ ಸಲುವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಉಡುಪಿ ಜಿಲ್ಲೆಯ ಕೃಷಿಕರಿಂದ ಕೃಷಿ ಉತ್ಪನ್ನಗಳ ಪ್ರದರ್ಶನ, ಮಾರಾಟ ಮತ್ತು ವಿವಿಧ ವಿಷಯಗಳ ಕುರಿತು ತಜ್ಞರಿಂದ, ಸಾಧಕ ಕೃಷಿಕರಿಂದ ಮಾಹಿತಿ ಮಾಲಿಕೆಯೂ ನಡೆಯಲಿದೆ. 

ಬೆಳೆಯುವವರಿಂದಲೇ ನೇರವಾಗಿ ಗ್ರಾಹಕರಿಗೆ ಹಣ್ಣು, ತರಕಾರಿ, ಸಸಿ, ಬೀಜ ಹಾಗೂ ಮಣ್ಣಿನ ಮಡಿಕೆ, ಬುಟ್ಟಿ ಮತ್ತಿತರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೊಳ್ಳುವ ಅವಕಾಶವು ಇರಲಿದೆ. ಕೈತೋಟ, ತಾರಸಿ ಕೃಷಿ, ಕಸಿ ಕಟ್ಟುವಿಕೆ ಮತ್ತು ಅಂಗಾಂಶ ಕೃಷಿಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಕಲಾವಿದ, ಕೃಷಿ ಪ್ರೇಮಿ ಪುರುಷೋತ್ತಮ ಅಡ್ವೆ ನೇತೃತ್ವದಲ್ಲಿ ಕಾಡುತ್ಪತ್ತಿಗಳ ಪರಿಚಯ ಹಾಗೂ ಮೌಲ್ಯವರ್ಧನೆಯ ಕುರಿತು ವಿವಿಧ ಪ್ರಯೋಗಗಳಿಗೆ ಚಾಲನೆ ದೊರೆಯಲಿದೆ. 

 

ಮಾರ್ಚ್ 20ರ ಬೆಳಿಗ್ಗೆ 10 ಗಂಟೆಗೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ. ಎಂ.ಜಿ.ಎಂ ಕೃಷಿ ಸಮ್ಮಿಲನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ವಿಜ್ಙಾನಿ ಹಾಗೂ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ, ಪ್ರಗತಿ ಪರ ಕೃಷಿಕ ನಟರಾಜ್ ಹೆಗ್ಡೆ, ರಾಷ್ಟ್ರೀಯ ಸಾಧನಾಶೀಲ ಕೃಷಿಕ ಪ್ರಶಸ್ತಿ ಪುರಸ್ಕೃತ ಕುದಿ ಶ್ರೀನಿವಾಸ ಭಟ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎ. ಮಾಲತಿ ದೇವಿ, ಐ.ಕ್ಯು.ಎ.ಸಿ ಸಂಯೋಜಕ ಅರುಣ್ ಕುಮಾರ್ ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ, ಅಧ್ಯಕ್ಷತೆ ವಹಿಸಲಿದ್ದಾರೆ.

 

ಅನಂತರದ ಮಾತಿನ ಮಾಲಿಕೆಯಲ್ಲಿ ಬೆಳಿಗ್ಗೆ 11.30ಕ್ಕೆ ಮಂಗಳೂರಿನ ಪಶು ವೈದ್ಯ ಡಾ. ಮನೋಹರ ಉಪಾಧ್ಯ “ಅಂಗಳದಾಚೆಯೂ ಆರೋಗ್ಯ”, ಮಧ್ಯಾಹ್ನ 12.15ಕ್ಕೆ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ “ಸಮಗ್ರ ಕೃಷಿ ಪದ್ದತಿಯಿಂದ ಅಧಿಕ ಆದಾಯ”, ಮಧ್ಯಾಹ್ನ 2 ಗಂಟೆಗೆ ಶಂಕರಪುರದ ಪ್ರಯೋಗಶೀಲ ಕೃಷಿಕ ಜೋಸೆಫ್ ಲೋಬೋ “ತಾರಸಿ ಕೃಷಿಯಲ್ಲಿ ವಿನೂತನ ಪ್ರಯೋಗ”, ಮಧ್ಯಾಹ್ನ 3ಕ್ಕೆ ನಿಟ್ಟೂರು ಹೈಸ್ಕೂಲಿನ ನಿವೃತ್ತ ಮುಖ್ಯೋಪಧ್ಯಾಯ ಮುರಳಿ ಕಡೆಕಾರ್ “ಹಡಿಲು ಭೂಮಿಯಲ್ಲಿ ಭತ್ತದ ಕೃಷಿ”, ಸಾಮುದಾಯಿಕ ಸಹಭಾಗಿತ್ವದ ಕುರಿತು ಮಾತನಾಡಲಿದ್ದಾರೆ. 

 

ಮಾರ್ಚ್ 21ರ ಬೆಳಿಗ್ಗೆ 10 ಗಂಟೆಗೆ ಆಯುರ್ವೇದ ವೈದ್ಯ ಡಾ. ಶ್ರೀಧರ ಬಾಯರಿ ಔಷಧಿ “ಸಸ್ಯಗಳಿಂದ ಆರೋಗ್ಯ ರಕ್ಷಣೆ”, ಬೆಳಿಗ್ಗೆ 10.45ಕ್ಕೆ ಅಜೆಕಾರಿನ ಪ್ರಗತಿಪರ ಕೃಷಿಕ ನಾರಾಯಣ ನಾಯ್ಕ “ನಿಂಬೆ ಕೃಷಿ- ಸವಾಲು ಮತ್ತು ಸಾಧನೆ”, ಬೆಳಿಗ್ಗೆ 11.30ಕ್ಕೆ ಕಲಾವಿದ ಮತ್ತು ಕೃಷಿ ಪ್ರೇಮಿ ಪುರುಷೋತ್ತಮ ಅಡ್ವೆ “ಸಾಂಪ್ರದಾಯಿಕ ಕೃಷಿ ಪದ್ದತಿಯ ದಾಖಲೀಕರಣ”, ಮಧ್ಯಾಹ್ನ 12.30ಕ್ಕೆ ಪೇತ್ರಿ ಅನ್ನಪೂರ್ಣ ನರ್ಸರಿಯ ಪ್ರಸಾದ್ ಭಟ್ “ಅಂಗಾಶ ಕೃಷಿಯ ಅವಶ್ಯಕತೆ ಮತ್ತು ನಿರ್ವಹಣೆ” ಕುರಿತು ಮಾತನಾಡಲಿದ್ದಾರೆ.

 

 

 
 
 
 
 
 
 
 
 
 
 

Leave a Reply