ಜನಪದ ಸರಣಿ ಕಲಾ ಕಾರ್ಯಾಗಾರದ ಎಂಟನೇ ಆವೃತ್ತಿ ಉದ್ಘಾಟನೆ

ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಉಡುಪಿಯ ಸ್ಟುಡಿಯೋ ನೆರಳು ಹಾಗೂ ಎಬಿಸಿಡಿ ಡಿಸೈನ್ ಫಂಡಮೆ೦ಟಲ್ಸ್ ಸಹಯೋಗದಲ್ಲಿ ಆಯೋಜಿಸಿದ ಜನಪದ ಸರಣಿ ಕಲಾ ಕಾರ್ಯಾಗಾರದ ಎಂಟನೇ ಆವೃತ್ತಿಯು ೨ನೇ ನವೆಂಬರ್ ಗುರುವಾರದಂದು ಸ್ಟುಡಿಯೋ ನೆರಳು ಆರ್ಕಿಟೆಕ್ಟ್ ಸಂಪ್ರೀತ್ ರಾವ್‌ರವರಿಂದ ಬಡಗುಪೇಟೆಯ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು. 
ಉದ್ಘಾಟನೆಯ ನಂತರ ಮಾತನಾಡುತ್ತ “ ಭಾರತೀಯ ಕಲಾ ಪ್ರಕಾರಗಳೆಲ್ಲ ಬಹಳ ಶಿಷ್ಟತೆಯಿಂದ ಕೂಡಿದುದು. ಇವುಗಳ ಹಿಂದಿರುವ ಜ್ಞಾನವನ್ನು ಈ ತೆರನಾದ ಕಾರ್ಯಾಗಾರಗಳ ಮುಖೇನ ಉಡುಪಿಯ ಪರಿಸರದಲ್ಲಿ ನಡೆಸಿ ಕೊಡುತ್ತಿರುವ ಭಾವನಾ ಪೌಂಡೇಶನ್‌ನ ಕಾರ್ಯ ಶ್ಲಾಘನೀಯ “ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕರಾದ ಡಾ. ನಿರಂಜನ್ ಯು.ಸಿ ಯವರು “ಶಾಲಾ ಮಕ್ಕಳಿಗೆ ದೇಸೀಯ ಕಲಾಪ್ರಕಾರಗಳನ್ನು ಕಲಿಯಲು ಇದೊಂದು ಉತ್ತಮ ಅವಕಾಶ. ನಾನೂ ಕೂಡ ಈ ಹಿಂದಿನ ಸರಣಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಕಲಾ ಪರಂಪರೆಯ ಹಿಂದಿರುವ ಜ್ಞಾನವನ್ನು ಅರಿತುಕೊಂಡೆ.
 ಇವೆಲ್ಲ ಒಂದಕ್ಕಿ೦ತ ಒಂದು ಭಿನ್ನವಾದುದು, ಇವನ್ನೆಲ್ಲ ಅರಿತುಕೊಳ್ಳುವ ಸಲುವಾಗಿ ಕಲಾಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸುತ್ತ ಸದುಪಯೋಗ ಮಾಡಿಕೊಳ್ಳಬೇಕು” ಎಂದರು. ಭಾವನಾ ಪ್ರತಿಷ್ಠಾನದನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್‌ರವರು ಉಪಸ್ಥಿತರಿದ್ದರು.
ಈ ಎಂಟನೆಯ ಸರಣಿ ಕಲಾ ಕಾರ್ಯಾಗಾರದಲ್ಲಿ ಮಹಾರಾಷ್ಟದ ವಾರ್ಲಿ ಕಲೆಯಲ್ಲಿನ ವಿಶಿಷ್ಟ ಶೈಲಿಗಳಾದ ನಯಾಧಾನ್ ಹಾಗೂ ಚೌಕ್ ಚಿತ್ರಗಳನ್ನು ಕಲಿಸಿಕೊಡಲು ಬಂದಿರುವ ವಾರ್ಲಿ ಬುಡಕಟ್ಟು ಕಲಾವಿದೆಯರಾದ ಮೀನಾಕ್ಷಿ ವಾಸುದೇವ್ ವಾಯೆಡಾ ಹಾಗೂ ನಳಿನಿ ರಾಮಚಂದ್ರ ಕಲ್ಲಂಗಡರವರು ಈ ಕಲೆಯ ವೈಶಿಷ್ಟವನ್ನು ತಿಳಿಸಿದರು.
 ಕಾರ್ಯಾಗಾರಗಳು ೨ರಿಂದ ೫ನೇ ನವೆಂಬರ್ ತನಕ ಬೆಳಿಗ್ಗೆ ೯:೩೦ರಿಂದ ಸ೦ಜೆ ೫ರ ತನಕ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ(೯೮೪೫೬೫೦೫೪೪)ಯವರನ್ನು ಸಂಪರ್ಕಿಸಬಹುದು.
 
 
 
 
 
 
 
 
 
 
 

Leave a Reply